ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಗ್ ವಿರುದ್ಧ ಶಿವಸೇನಾ ಕಿಡಿ

Last Updated 24 ಮೇ 2017, 20:16 IST
ಅಕ್ಷರ ಗಾತ್ರ

ಮುಂಬೈ: ಕರ್ನಾಟಕದಲ್ಲಿರುವ ಮರಾಠಿ ಭಾಷಿಕರ ನೆರವಿಗೆ ಧಾವಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಿಗೆ ಶಿವಸೇನಾ  ಒತ್ತಾಯಿಸಿದೆ.

‘ಜೈ ಮಹಾರಾಷ್ಟ್ರ’ ಎಂಬ ಘೋಷಣೆ ಕೂಗಿದ ಜನಪ್ರತಿನಿಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವ ರೋಷನ್ ಬೇಗ್ ಅವರು ನೀಡಿದ್ದ  ಹೇಳಿಕೆಯನ್ನು ಶಿವಸೇನಾ ಖಂಡಿಸಿದೆ.

ಘೋಷಣೆ ಕೂಗಿದ ಜನಪ್ರತಿನಿಧಿಗಳು ತಮ್ಮ ಚುನಾಯಿತ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ ಎಂದು ಸಚಿವ ಬೇಗ್ ಅವರು ಕಳೆದ ಶುಕ್ರವಾರ ಹೇಳಿದ್ದರು ಎಂದು ಸೇನಾ ಆರೋಪಿಸಿದೆ.

ಚುನಾಯಿತ ಜನಪ್ರತಿನಿಧಿಗಳು ಕರ್ನಾಟಕ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ಪತ್ತೆ ಹಚ್ಚಲು ಹೊಸ ಕಾನೂನು ಜಾರಿಗೊಳಿಸಲೂ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಬೇಗ್ ಹೇಳಿದ್ದರು ಎಂದು ಆರೋಪಿಸಲಾಗಿದೆ.

‘ಮಹಾರಾಷ್ಟ್ರದ ಸಾಮರ್ಥ್ಯ ಏನೆಂದು ತಿಳಿಸುವ ಬಾಹುಬಲಿ–2 ಚಿತ್ರದ ಟ್ರೈಲರ್‌ ಅನ್ನು  ಕರ್ನಾಟಕ ಸರ್ಕಾರಕ್ಕೆ ತೋರಿಸಿ’ ಎಂದು ತನ್ನ ಮುಖವಾಣಿ ಸಾಮ್ನಾದಲ್ಲಿ ಫಡಣವೀಸ್ ಅವರಿಗೆ ಶಿವಸೇನಾ ಮನವಿ ಮಾಡಿದೆ.  ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ವಾಗ್ದಾಳಿ ಎದುರಿಸುವ ವೇಳೆ ಮುಖ್ಯಮಂತ್ರಿ ಫಡಣವೀಸ್ ಅವರು ಬಾಹುಬಲಿ ಚಿತ್ರವನ್ನು ಉಲ್ಲೇಖಿಸಿದ್ದರು.

‘ನೀವು ಹೆಮ್ಮೆಯ ಮರಾಠಿಗ ಆಗಿದ್ದರೆ, ಕರ್ನಾಟಕಕ್ಕೆ ತೆರಳಿ, ಅಲ್ಲಿ ಮರಾಠಿ ಮಾತನಾಡುವವರಿಗೆ ಸಮಾಧಾನ ಹೇಳಬೇಕು’ ಎಂದು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದೆ.

ಕರ್ನಾಟಕದಲ್ಲಿ ಮರಾಠಿಗರ ಮೇಲೆ ನಿತ್ಯವೂ ದೌರ್ಜನ್ಯ ನಡೆಯುತ್ತಿದೆ. ಆದರೆ ಮಹಾರಾಷ್ಟ್ರ ಸರ್ಕಾರ ಮಾತ್ರ ಮೌನವಾಗಿ ಎಲ್ಲವನ್ನೂ ನೋಡುತ್ತಿದೆ ಎಂದು ಪತ್ರಿಕೆ ಆರೋಪಿಸಿದೆ.

‘ಹಿರಿಯ ಸಚಿವ ಬೇಗ್ ಅವರು ಸಂವಿಧಾನದತ್ತ  ವಾಕ್ ಸ್ವಾತಂತ್ರ್ಯಕ್ಕೆ ಅಪಮಾನ ಮಾಡಿದ್ದಾರೆ. ಇದು ನ್ಯಾಯಾಂಗ ನಿಂದನೆ ಕೂಡಾ. ಸುಪ್ರೀಂ
ಕೋರ್ಟ್‌ಗೂ ಅವರು ಅಪಮಾನ  ಮಾಡಿದ್ದಾರೆ’ ಎಂದು ಸಾಮ್ನಾ ಹೇಳಿದೆ.

ಬೇಗ್‌ ಹೇಳಿದ್ದೇನು...? ‘ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಬೆಂಬಲಿತ ನಗರಪಾಲಿಕೆ ಸದಸ್ಯರು ನಾಡವಿರೋಧಿ ಚಟುವಟಿಕೆ ನಡೆಸಿದರೆ, ಅವರ ಸದಸ್ಯತ್ವ ರದ್ದುಪಡಿಸುವ ಕುರಿತು ಚಿಂತನೆ ನಡೆಸಬೇಕಾಗುತ್ತದೆ’ ಎಂದು ನಗರಾಭಿವೃದ್ಧಿ ಸಚಿವ ಆರ್‌.ರೋಷನ್‌ ಬೇಗ್‌ ಸೋಮವಾರ ಬೆಳಗಾವಿಯಲ್ಲಿ  ಎಚ್ಚರಿಕೆ ನೀಡಿದ್ದರು.

‘ಪಾಲಿಕೆಯಲ್ಲಿ ಕರ್ನಾಟಕ ವಿರೋಧಿ ಘೋಷಣೆ ಕೂಗಿದರೆ ಅಂಥವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು’ ಎಂದು ಸುದ್ದಿಗಾರರಿಗೆ ತಿಳಿಸಿದ್ದರು.

ಸಿದ್ದರಾಮಯ್ಯಗೆ ಪತ್ರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಹಾರಾಷ್ಟ್ರ ಕಂದಾಯ ಸಚಿವ ಚಂದ್ರಕಾಂತ್ ಪಾಟೀಲ್ ಅವರು ಪತ್ರ ಬರೆದಿದ್ದಾರೆ. ರೋಷನ್ ಬೇಗ್ ಅವರ ಹೇಳಿಕೆ ಅಸಾಂವಿಧಾನಿಕ ಎಂದಿರುವ ಅವರು, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಸಚಿವರಿಂದ ಇಂತಹ ಕಾನೂನುಬಾಹಿರ ವರ್ತನೆಗಳು ಕಂಡುಬಂದಲ್ಲಿ, ಸಂತ್ರಸ್ತ ಜನರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ಕಾನೂನು ಕ್ರಮಕ್ಕೆ ಮಹಾರಾಷ್ಟ್ರ ಸರ್ಕಾರ ಮುಂದಾಗಲಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ಶಿವಸೇನೆಯ ವಿರುದ್ಧ ಆಕ್ರೋಶ
ವಿಜಯಪುರ/ಹುಬ್ಬಳ್ಳಿ:
ಕೊಲ್ಲಾಪುರ ಹಾಗೂ ಗಡಹಿಂಗ್ಲಜನಲ್ಲಿ ಶಿವಸೇನೆಯ ಕಾರ್ಯಕರ್ತರು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ತಡೆದು, ಅದರ ಮೇಲೆ ಮಹಾರಾಷ್ಟ್ರ ಪರ ಘೋಷಣೆ ಬರೆದಿದ್ದನ್ನು ಖಂಡಿಸಿ ವಿಜಯಪುರ, ಮಹಾಲಿಂಗಪುರ ಹಾಗೂ ಹುಬ್ಬಳ್ಳಿಯಲ್ಲಿ ಬುಧವಾರ ಪ್ರತಿಭಟನೆ ವ್ಯಕ್ತವಾಗಿದೆ.

ವಿಜಯಪುರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಮಹಾರಾಷ್ಟ್ರದ ಬಸ್‌ಗಳನ್ನು ತಡೆದ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು, ಅವುಗಳ ಮೇಲೆ ‘ಜೈ ಕನ್ನಡ’ ಎಂದು ಬರೆದರು.

ಪ್ರತಿಕೃತಿ ದಹನ: ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ನವ ನಿರ್ಮಾಣ ವೇದಿಕೆ ಕಾರ್ಯಕರ್ತರು, ಮಹಾರಾಷ್ಟ್ರ ಪರವಾಗಿ ಹೇಳಿಕೆ ನೀಡಿದ, ಬೆಳಗಾವಿ ನಗರಪಾಲಿಕೆ ಸದಸ್ಯೆ ಸರಿತಾ ಪಾಟೀಲ ಅವರ ಪ್ರತಿಕೃತಿ ದಹಿಸಿ, ಕೆಲಕಾಲ ರಸ್ತೆ ತಡೆ ನಡೆಸಿದರು.

ಹುಬ್ಬಳ್ಳಿಯಲ್ಲೂ ಪ್ರತಿಧ್ವನಿ: ನಗರದ ಗೋಕುಲ ರಸ್ತೆಯ ಬಸ್‌ ನಿಲ್ದಾಣದಲ್ಲಿ ನಿಂತಿದ್ದ ಮಹಾರಾಷ್ಟ್ರದ ಬಸ್ಸೊಂದಕ್ಕೆ ಕರ್ನಾಟಕ ಸಂಗ್ರಾಮ ಸೇನೆ ಕಾರ್ಯಕರ್ತರು ಘೋಷಣೆ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT