ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್‌ ಅಧಿಕಾರಿಗಳ ವಿರುದ್ಧ ಮಥಾಯಿ ದೂರು

Last Updated 24 ಮೇ 2017, 20:18 IST
ಅಕ್ಷರ ಗಾತ್ರ

ಬೆಂಗಳೂರು: ‘ನನಗೆ ನಾಲ್ವರು ಐಎಎಸ್ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಸಕಾಲ ಯೋಜನೆ ಆಡಳಿತಾಧಿಕಾರಿ ಕೆ. ಮಥಾಯಿ ಲೋಕಾಯುಕ್ತಕ್ಕೆ ಬುಧವಾರ ದೂರು ನೀಡಿದ್ದಾರೆ.

ಸಕಾಲ ಯೋಜನೆ ನಿರ್ದೇಶಕಿ ಜಿ. ಕಲ್ಪನಾ, ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್‌ಕುಮಾರ್‌ ಮತ್ತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಇ.ವಿ. ರಮಣರೆಡ್ಡಿ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.

ದೂರು ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಮಥಾಯಿ, ‘ನಾನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸಹಾಯಕ ಆಯುಕ್ತನಾಗಿದ್ದಾಗ ₹ 2,000 ಕೋಟಿ ಮೊತ್ತದ ಜಾಹೀರಾತು ಹಗರಣ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದ್ದೆ. ಆದರೆ, ಹಿರಿಯ ಅಧಿಕಾರಿಗಳು, ಸೇವೆ ತೃಪ್ತಿ ತಂದಿಲ್ಲ ಎಂದು ಸೇವಾ ಪುಸ್ತಕದಲ್ಲಿ ದಾಖಲಿಸಿದ್ದಾರೆ’ ಎಂದು ಆರೋಪಿಸಿದರು.

‘ಹಗರಣದ ವರದಿಯಲ್ಲಿ ಎಂ. ಲಕ್ಷ್ಮೀನಾರಾಯಣ ಅವರ ಹೆಸರು ಪ್ರಸ್ತಾಪಿಸಿದ್ದರಿಂದ ಈ ಕಿರುಕುಳ ಆರಂಭವಾಯಿತು.  ನಾಲ್ಕು ತಿಂಗಳಲ್ಲಿ ಆರು ಬಾರಿ ವರ್ಗಾವಣೆ ಶಿಕ್ಷೆ ಅನುಭವಿಸಿದ್ದೇನೆ’ ಎಂದು ಅಳಲು ತೋಡಿಕೊಂಡರು.

ಸಕಾಲ ಯೋಜನೆ ಆಡಳಿತಾಧಿಕಾರಿಯಾಗಿ  ನೇಮಕಗೊಂಡ  ನಂತರ ‘ನಿಮ್ಮ ಮೇಲೆ ಕೆಲವು ಹಿರಿಯ ಅಧಿಕಾರಿಗಳಿಗೆ ಸಿಟ್ಟಿದೆ, ಸ್ವಲ್ಪ ದಿನ ಸುಮ್ಮನಿರಿ’ ಎಂದು ಸಲಹೆ ನೀಡಿದ್ದ  ಜಿ. ಕಲ್ಪನಾ ಅವರೂ ಈಗ  ಕಿರುಕುಳ ನೀಡಲು ಆರಂಭಿಸಿದ್ದಾರೆ. ಪ್ರತಿನಿತ್ಯ ನೋಟಿಸ್‌ ನೀಡುತ್ತಿದ್ದಾರೆ’ ಎಂದು ದೂರಿದರು.

‘ಸರ್ಕಾರದಲ್ಲಿ ಪ್ರಭಾವಿಯಾಗಿರುವ ಲಕ್ಷ್ಮೀನಾರಾಯಣ ಅವರ ಮಾತು ಕೇಳಿ ಉಳಿದ ಅಧಿಕಾರಿಗಳು ಈ ಕಿರುಕುಳ ನೀಡುತ್ತಿದ್ದಾರೆ. ವಾಹನ ಸೌಲಭ್ಯ ಕಡಿತಗೊಳಿಸಲಾಗಿದೆ. ಕಾರಣವೇ ಇಲ್ಲದೆ, ತನಿಖೆಯನ್ನೂ ನಡೆಸದೆ ವೇತನ ಹೆಚ್ಚಳ ಮತ್ತು ಬಡ್ತಿ ತಡೆ ಹಿಡಿಯಲಾಗಿದೆ’ ಎಂದು ಆರೋಪಿಸಿದರು.

‘ಈ ಕುರಿತ ಸಮಗ್ರ ವಿವರಗಳನ್ನು ಒಳಗೊಂಡ 101 ಪುಟಗಳ ವರದಿಯನ್ನು ಸರ್ಕಾರಕ್ಕೆ ನೀಡಿದ್ದೇನೆ. ಅದೇ ವರದಿ ಪ್ರತಿಯನ್ನು ಲೋಕಾಯುಕ್ತರಿಗೂ ನೀಡಿದ್ದು, ದೂರಾಗಿ ಪರಿಗಣಿಸುವಂತೆ ಕೋರಿದ್ದೇನೆ’ ಎಂದರು.

ಮುಖ್ಯಮಂತ್ರಿ ಭೇಟಿಗೆ ಅನುಮತಿ ನೀಡುತ್ತಿಲ್ಲ
‘ಐಎಎಸ್‌ ಅಧಿಕಾರಿಗಳ ಕಿರುಕುಳದ ಬಗ್ಗೆ ಮುಖ್ಯಮಂತ್ರಿ ಅವರ ಬಳಿ ಹೇಳಿಕೊಳ್ಳಲು ಮೂರು ಬಾರಿ ಅವಕಾಶ ಕೋರಿದೆ. ಆದರೆ, ಅನುಮತಿ ಸಿಕ್ಕಿಲ್ಲ’ ಎಂದು ಮಥಾಯಿ ಹೇಳಿದರು. ‘ಸಹೋದ್ಯೋಗಿಗಳ ಬಗ್ಗೆ ದೂರು ನೀಡುತ್ತೇನೆ ಎಂಬ ಕಾರಣಕ್ಕೆ ಐಎಎಸ್‌ ಮಾಫಿಯಾ ಅವಕಾಶ ತಪ್ಪಿಸುತ್ತಿದೆ. ಅನುಮತಿ ಸಿಕ್ಕರೆ ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಿಸುತ್ತೇನೆ. ಅವರಿಂದ ನ್ಯಾಯ ದೊರಕುವ ವಿಶ್ವಾಸ ಇದೆ’ ಎಂದರು.

ದೂರು ಪ್ರಾಧಿಕಾರ ರಚನೆ ಆಗಬೇಕು
‘ದೇಶದಲ್ಲಿ ಸಂವಿಧಾನ ಇದ್ದರೂ ಐಎಎಸ್ ಅಧಿಕಾರಿಗಳು ಮಾಡಿದ್ದೇ ಕಾನೂನು ಎಂಬಂತಾ ಗಿದೆ. ಅವರು ನೀಡುವ ಕಿರುಕುಳದ ಬಗ್ಗೆ ಕೇಳುವವರೇ ಇಲ್ಲ. ಹೀಗಾಗಿ ಲೋಕಾಯುಕ್ತರಿಗೆ ದೂರು ನೀಡಿದ್ದೇನೆ’ ಎಂದು ಮಥಾಯಿ ಹೇಳಿದರು. ‘ಸರ್ಕಾರ ದೂರು ಪ್ರಾಧಿಕಾರ ರಚಿಸಬೇಕು.  ಐಎಎಸ್‌ ಅಧಿಕಾರಿಗಳು ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದ್ದಾರೆ. ಹೀಗಾಗಿ ‘ಉತ್ತರದಾಯಿತ್ವ ಆಯೋಗ’ ರಚನೆ ಮಾಡಬೇಕು. ಈ ಬಗ್ಗೆ ಸರ್ಕಾರಕ್ಕೂ ಮನವಿ ಮಾಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT