ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷಡ್ಯಂತ್ರಕ್ಕೆ ಮೇಟಿ ಬಲಿ

Last Updated 24 ಮೇ 2017, 20:23 IST
ಅಕ್ಷರ ಗಾತ್ರ

ಬೆಂಗಳೂರು: ಲೈಂಗಿಕ ಹಗರಣದ ಸುಳಿಯಲ್ಲಿ ಸಿಲುಕಿದ್ದ ಕಾಂಗ್ರೆಸ್‌ ಶಾಸಕ ಎಚ್‌.ವೈ.ಮೇಟಿ ಅವರನ್ನು ದೋಷಮುಕ್ತಗೊಳಿಸಿರುವ ಸಿಐಡಿ, ತಮ್ಮ ಜಿಲ್ಲೆಯ ರಾಜಕೀಯ ವೈರಿಗಳು ರೂಪಿಸಿದ ಷಡ್ಯಂತ್ರಕ್ಕೆ ಅವರು ಬಲಿಯಾಗಿದ್ದಾರೆ ಎಂದು ಗೃಹ ಇಲಾಖೆಗೆ ವರದಿ ಸಲ್ಲಿಸಿದೆ.

‘ಮೇ 17ರಂದು 8 ಪುಟಗಳ ವರದಿ ಕೊಟ್ಟಿದ್ದೇವೆ. ಈಗ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಸೇರಿದೆ. ಮೇಟಿ ವಿರುದ್ಧ ನಡೆದ ಪಿತೂರಿಯಲ್ಲಿ ಬಿಜೆಪಿ ಮುಖಂಡ ಮುರುಗೇಶ್ ನಿರಾಣಿ ಪಾತ್ರ ಹೆಚ್ಚಿದೆ. ಅವರ ಜೊತೆ ಸ್ಥಳೀಯ ಬಿಜೆಪಿ ಮುಖಂಡರಾದ ಅಶೋಕ್ ಲಾಗಲೋಟಿ, ಸಿದ್ದಲಿಂಗ ಅಬಲಗಟ್ಟಿ, ಮಾರುತಿ ಮಿರಾಜ್‌ಕರ್ ಹಾಗೂ ಮೇಟಿ ಅವರ ಹಿಂದಿನ ಅಂಗರಕ್ಷಕ ಸುಭಾಷ್‌ ಕೈಜೋಡಿಸಿದ್ದಾರೆ ಎಂಬುದನ್ನು ವರದಿಯಲ್ಲಿ ಹೇಳಿದ್ದೇವೆ’ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದರು.

ತಂದೆ–ಮಗಳ ಸಂಬಂಧ: ‘ಮೇಟಿ ಅವರು ವಿಜಯಲಕ್ಷ್ಮಿ ಸರೂರ ಎಂಬ ಮಹಿಳೆ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ದೃಶ್ಯವೆಂದು ಕೆಲ ಮಾಧ್ಯಮಗಳು 2016ರ ಫೆ.14ರಿಂದ ನಿರಂತರವಾಗಿ ವಿಡಿಯೊ ತುಣುಕೊಂದನ್ನು ಪ್ರಸಾರ ಮಾಡಿದವು. ಅದರ ಸತ್ಯಾಸತ್ಯತೆ ತಿಳಿಯಲು ತನಿಖೆ ಪ್ರಾರಂಭಿಸಿದೆವು. ಆದರೆ, ತಾವು ಪ್ರಸಾರ ಮಾಡಿದ ವಿಡಿಯೊ ಹಾಗೂ ಸುದ್ದಿ ವಿವರ ನೀಡದೆ ಮಾಧ್ಯಮಗಳು ತನಿಖೆಗೆ ಅಸಹಕಾರ ನೀಡಿದವು’ ಎಂದು ಸಿಐಡಿ ವರದಿಯಲ್ಲಿ ಹೇಳಿದೆ.

‘ಮೇಟಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಇದುವರೆಗೂ ಯಾವ ಮಹಿಳೆಯೂ ದೂರು ಕೊಟ್ಟಿಲ್ಲ. ವಿಜಯಲಕ್ಷ್ಮಿ ಕೂಡ, ‘ಮೇಟಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿಲ್ಲ. ನಮ್ಮದು ತಂದೆ–ಮಗಳ ಸಂಬಂಧ’ ಎಂದು ಹೇಳಿಕೆ ಕೊಟ್ಟಿದ್ದಾರೆ. ಅಲ್ಲದೆ, ‘ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು ಎಡಿಟೆಡ್ ವಿಡಿಯೊ’ ಎಂದು ಎಫ್‌ಎಸ್‌ಎಲ್‌ ತಜ್ಞರೂ ಅಭಿಪ್ರಾಯಪಟ್ಟಿದ್ದಾರೆ. ಅಸಲಿ ವಿಡಿಯೊ ಸಿಗದ ಕಾರಣ ಸಮರ್ಪಕ ನಿಟ್ಟಿನಲ್ಲಿ ತನಿಖೆ
ನಡೆಸಲು ಆಗಲಿಲ್ಲ’ ಎಂದು ವರದಿಯಲ್ಲಿದೆ.

ಮೇಟಿ ಸಂತ್ರಸ್ತರು: ‘ಲೈಂಗಿಕ ಹಗರಣದ ಸಿ.ಡಿ ನಕಲಿಯೋ ಅಸಲಿಯೋ ಎಂಬ ಬಗ್ಗೆ  ವಿಚಾರಣೆ ನಡೆಸುವಂತೆ ಸರ್ಕಾರ ಸೂಚಿಸಿತ್ತು. ಹೀಗಾಗಿ, ಅಷ್ಟಕ್ಕೇ ಸೀಮಿತವಾಗಿ ವಿಚಾರಣೆ ಮಾಡಿದ್ದೇವೆ. ‘ಅದು ಅಸಲಿ ಸಿ.ಡಿಯಲ್ಲ. ಇಡೀ ಪ್ರಕರಣದಲ್ಲಿ ಮೇಟಿಯೇ ನಿಜವಾದ ಸಂತ್ರಸ್ತರು’ ಎಂದು ವರದಿಯಲ್ಲಿ ಹೇಳಿದ್ದೇವೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಸುಭಾಷ್ ಹಾಗೂ ಇತರರು ವಿಜಯಲಕ್ಷ್ಮಿ ಅವರಿಗೆ ಜೀವ ಬೆದರಿಕೆ ಹಾಕಿದ್ದ ಸಂಬಂಧ ಬಾಗಲಕೋಟೆಯ ನವನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆ ಅಂತಿಮ ಹಂತದಲ್ಲಿದೆ. ಮೇಟಿ ವಿರುದ್ಧ ನಡೆದ ಪಿತೂರಿಯ ಹಿಂದಿನ ಸಂಪೂರ್ಣ ರಹಸ್ಯ ಆ ಪ್ರಕರಣದಲ್ಲಿ ಹೊರಬೀಳಲಿದೆ’ ಎಂದು ಅಧಿಕಾರಿಗಳು ಹೇಳಿದರು.

ನಿರಾಣಿಯಿಂದ ಬ್ಲ್ಯಾಕ್‌ಮೇಲ್?: ಮೇಟಿ ಅವರು ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಹಾಗೂ ಮುರುಗೇಶ ನಿರಾಣಿ, ಬೀಳಗಿ ಕ್ಷೇತ್ರದಲ್ಲಿ ರಾಜಕಾರಣ ಮಾಡುತ್ತಾರೆ. ಈ ಎರಡೂ ಕ್ಷೇತ್ರಗಳು ಅಕ್ಕಪಕ್ಕದಲ್ಲೇ ಇದ್ದು, ಕಾಂಗ್ರೆಸ್–ಬಿಜೆಪಿ ಪಕ್ಷಗಳು ಸಾಂಪ್ರದಾಯಿಕ ಎದುರಾಳಿಗಳಾಗಿವೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ ಜಿ.ಟಿ.ಪಾಟೀಲ ವಿರುದ್ಧ ನಿರಾಣಿ ಪರಾಭವ ಹೊಂದಿದ್ದರು. ಈ ಸೋಲಿಗೆ ಮುಂದಿನ ಚುನಾವಣೆಯಲ್ಲಿ ತಿರುಗೇಟು ನೀಡುವ ಸಿದ್ಧತೆಯಲ್ಲಿದ್ದ ಬಿಜೆಪಿ ಮುಖಂಡರು, ಮೇಟಿ ವಿರುದ್ಧ ಲೈಂಗಿಕ ಹಗರಣದ ಸಿ.ಡಿ ಬಿಡುಗಡೆ ಮಾಡಲು ಸಹಕರಿಸಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದರು.   

‘ಮೊದಲು ಕಾಂಗ್ರೆಸ್‌ ಪಕ್ಷದಲ್ಲಿದ್ದ ಅಶೋಕ್‌ ಲಾಗಲೋಟಿ, ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಟಿಕೆಟ್ ನೀಡದ ಕಾರಣಕ್ಕೆ ಮೇಟಿ ವಿರುದ್ಧ ಕುಪಿತಗೊಂಡು ಬಿಜೆಪಿ ಸೇರಿದ್ದರು. ಇದೇ ದ್ವೇಷದಿಂದ ಅವರೇ ಮೇಟಿ ವಿರುದ್ಧ ಸಿ.ಡಿ ತಯಾರಿಸಿದ್ದರು. ಸುಲಭವಾಗಿ ಹಣ ಸಂಪಾದಿಸಲು ಸುಭಾಷ್, ಅಶೋಕ್, ಮಾರುತಿ ಹಾಗೂ ಸಿದ್ದಲಿಂಗ ಕೃತ್ಯಕ್ಕೆ ಕೈಜೋಡಿಸಿರುವುದು ಸ್ಪಷ್ಟವಾಗಿದೆ’ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದರು.

‘ನಂತರ ಮೇಟಿ ವಿರುದ್ಧ ಸಿ.ಡಿ ಸಿದ್ಧಪಡಿಸಿರುವ ವಿಷಯವನ್ನು ಆ ಐದೂ ಮಂದಿ ನಿರಾಣಿಗೆ ತಿಳಿಸಿದ್ದರು. ಈ ಸಿ.ಡಿಯನ್ನೇ ಇಟ್ಟುಕೊಂಡು ಮೇಟಿ ಅವರಿಗೆ ಬ್ಲಾಕ್‌ಮೇಲ್ ಮಾಡಿರುವ ನಿರಾಣಿ, ತಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಕೆಲ ಕೆಲಸಗಳನ್ನೂ ಮಾಡಿಸಿಕೊಂಡಿದ್ದರು. ಅಲ್ಲದೆ, ಉಳಿದ ಐದು ಮಂದಿಗೆ ತಲಾ ₹ 2 ಕೋಟಿ ನೀಡುವಂತೆ ಬೇಡಿಕೆಯನ್ನೂ ಇಟ್ಟಿದ್ದರು.’

‘ಮೇಟಿ ಹಣ ಕೊಡಲು ನಿರಾಕರಿಸಿದಾಗ ಈ ಐವರು ಎಡಿಟೆಡ್ ಸಿ.ಡಿಯನ್ನು ಮಾಧ್ಯಮಗಳಿಗೆ ಕೊಟ್ಟು ಪ್ರಸಾರ ಮಾಡಿಸಿದ್ದರು.  ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆಯಾಗಬೇಕಿದೆ’ ಎಂದು ಸಿಐಡಿ ವರದಿಯಲ್ಲಿ ಹೇಳಿದೆ.

ಸಿಐಡಿ ಮೇಲೆ  ಪ್ರಭಾವ ಬೀರಿಲ್ಲ-ಮೇಟಿ
(ಬಾಗಲಕೋಟೆ):
‘ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಸಿಐಡಿ ನನ್ನನ್ನು ದೋಷಮುಕ್ತಗೊಳಿಸಿದೆ. ಈ ವಿಚಾರ ವೈಯಕ್ತಿಕವಾಗಿ ಸಂತಸ ಹಾಗೂ ನೆಮ್ಮದಿ ನೀಡಿದೆ’ ಎಂದು ಶಾಸಕ ಎಚ್.ವೈ.ಮೇಟಿ ಪ್ರತಿಕ್ರಿಯಿಸಿದರು.

‘ನಾನಾಗಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಲಿ ಸಿಐಡಿ ಅಧಿಕಾರಿಗಳ ಮೇಲೆ ಯಾವುದೇ ಪ್ರಭಾವ ಬೀರಿಲ್ಲ’ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

‘ನನ್ನ ವಿರುದ್ಧ ಯಾವುದೇ ದೂರು ದಾಖಲು ಆಗಿರಲಿಲ್ಲ. ಪ್ರಕರಣದಲ್ಲಿ ಯಾವುದೇ ಹುರುಳಿಲ್ಲದಿದ್ದರೂ ವೃಥಾ ಆರೋಪ ಬಂದಿದ್ದು ಬಹಳಷ್ಟು ನೋವು ತಂದಿದೆ’ ಎಂದರು.

ಸಂಭ್ರಮಾಚರಣೆ: ಮೇಟಿ ಬೆಂಬಲಿಗರು  ಈ ಸುದ್ದಿ ತಿಳಿದು ನವನಗರದಲ್ಲಿರುವ ಶಾಸಕರ ಗೃಹ ಕಚೇರಿಗೆ ಬಂದು ಮೇಟಿ ಅವರಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು.

ಬ್ಲ್ಯಾಕ್‌ಮೇಲ್‌ ಸತ್ಯಕ್ಕೆ ದೂರವಾದ ಸಂಗತಿ-ನಿರಾಣಿ: ‘ಶಾಸಕ ಎಚ್.ವೈ. ಮೇಟಿ  ಅವರನ್ನು ಬ್ಲಾಕ್‌ಮೇಲ್‌ ಮಾಡಿದ್ದೇನೆ ಎನ್ನುವುದು  ಸತ್ಯಕ್ಕೆ ದೂರವಾದ ಸಂಗತಿ’ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಪ್ರತಿಕ್ರಿಯಿಸಿದರು.

‘20 ವರ್ಷಗಳಿಂದಲೂ ನಾನು ಮುಧೋಳದಲ್ಲಿ ಡಿಸ್ಟಿಲರಿ ನಡೆಸುತ್ತಿದ್ದೇನೆ. ಪ್ರತಿ ವರ್ಷ ಅದರ ಲೈಸೆನ್ಸ್ ನವೀಕರಣ ಇರುತ್ತದೆಯೇ ಹೊರತು ಹೊಸದಾಗಿ ಲೈಸೆನ್ಸ್ ಪಡೆಯುವ ಅವಶ್ಯಕತೆ ಇರುವುದಿಲ್ಲ. ಹಾಗಿದ್ದಾಗ ಅಬಕಾರಿ ಸಚಿವರನ್ನು ಬ್ಲ್ಯಾಕ್‌ಮೇಲ್ ಮಾಡಲು ನಾನೇಕೆ ಮುಂದಾಗಲಿ’ ಎಂದು ನಿರಾಣಿ ಪ್ರಶ್ನಿಸಿದರು.

ಮತ್ತೊಬ್ಬ ಶಾಸಕರ ವಿರುದ್ಧವೂ ಸಂಚು
‘ಈ ಜಾಲವು ಮೇಟಿ ವಿರುದ್ಧ ಸಂಚು ರೂಪಿಸಿದಂತೆಯೇ ಮತ್ತೊಬ್ಬ ಕಾಂಗ್ರೆಸ್ ಶಾಸಕರಿಗೂ ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿತ್ತು. ಆ ಶಾಸಕರಿಗೆ ಸಂಬಂಧಿಸಿದ್ದು ಎನ್ನಲಾದ ಲೈಂಗಿಕ ಹಗರಣದ ಸಿ.ಡಿ ಮುಂದಿಟ್ಟುಕೊಂಡು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಆರೋಪಿಗಳು ಓಡಾಡಿದ್ದರು  ಎಂಬ ಮಾತುಗಳು ವಿಚಾರಣೆ ಹಂತದಲ್ಲಿ ಕೇಳಿ ಬಂದವು. ಆದರೆ, ಶಾಸಕರು ತನಿಖೆಗೆ ಸಹಕರಿಸದ ಕಾರಣ ಆ ನಿಟ್ಟಿನಲ್ಲಿ ವಿಚಾರಣೆ ಮುಂದುವರಿಸಲು ಹೋಗಲಿಲ್ಲ’ ಎಂದು ಸಿಐಡಿ ಮೂಲಗಳು ತಿಳಿಸಿವೆ.
*
ಯಾರು ಏನೇ ಷಡ್ಯಂತ್ರ ಮಾಡಿದರೂ ದೇವರು ನನ್ನ ಪರವಾಗಿ ಇದ್ದಾನೆ ಎಂಬುದು ಇಂದು ಸಾಬೀತಾಗಿದೆ. ನನಗೆ ನೆಮ್ಮದಿ ತಂದಿದೆ.
ಎಚ್.ವೈ.ಮೇಟಿ,
ಶಾಸಕ
*
ರಾಜಕೀಯದ ಹೊರಗೆ ಶಾಸಕ ಎಚ್.ವೈ. ಮೇಟಿ ಹಾಗೂ ನಾನು ಒಳ್ಳೆ ಸ್ನೇಹಿತರು. ಅವರನ್ನು ಬ್ಲ್ಯಾಕ್‌ಮೇಲ್‌ ಮಾಡಿ ಕೆಲಸ ಸಾಧಿಸಿಕೊಳ್ಳುವ ಅಗತ್ಯವೇ ಇಲ್ಲ.
ಮುರುಗೇಶ ನಿರಾಣಿ,
ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT