ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಯರ್ ಮೊದಲ ಸಭೆಯಲ್ಲೇ ಗದ್ದಲ

ತ್ಯಾಜ್ಯ ವಿಲೇವಾರಿ ಘಟಕ ಅಭಿವೃದ್ಧಿ ಕಾಮಗಾರಿ ಅಕ್ರಮ; ಆಯುಕ್ತರಿಂದ ತನಿಖೆಗೆ ಆದೇಶ
Last Updated 25 ಮೇ 2017, 5:06 IST
ಅಕ್ಷರ ಗಾತ್ರ

ತುಮಕೂರು: ನೂತನ ಮೇಯರ್ ಎಚ್.ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಮಹಾನಗರ ಪಾಲಿಕೆ ಮೊದಲ ಸಾಮಾನ್ಯ ಸಭೆಯು ಗದ್ದಲ, ಗೊಂದಲದ ಗೂಡಾಯಿತು.

ಒಳಚರಂಡಿ ದುರಸ್ತಿ ಮತ್ತು ನಿರ್ಮಾಣ ಕಾಮಗಾರಿಗೆ ಸಂಬಂಧಪಟ್ಟಂತೆ ನಡೆದ ಚರ್ಚೆಯಲ್ಲಿ ಸದಸ್ಯ ನಯಾಜ್ ಅಹಮ್ಮದ್, ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಈ ಸಂದರ್ಭದಲ್ಲಿ ಸದಸ್ಯ ವೆಂಕಟೇಶ್ ಅವರು ಮಾತನಾಡಲು ನಿಂತಾಗ ಅವರೊಂದಿಗೆ ನಯಾಜ್ ವಾಗ್ವಾದಕ್ಕಿಳಿದರು. ಒಳಚರಂಡಿ ವಿಷಯ ನೇಪಥ್ಯಕ್ಕೆ ಸರಿದು ವೈಯಕ್ತಿಕ ಆರೋಪ ಪ್ರತ್ಯಾರೋಪಗಳಿಗೆ ಕಲಾಪ ಸಾಕ್ಷಿಯಾಯಿತು.

ವೆಂಕಟೇಶ್ ಸಮಾಧಾನದಿಂದ ಮಾತನಾಡುತ್ತಿದ್ದರೆ, ನಯಾಜ್ ಅಹಮ್ಮದ್ ಅಬ್ಬರಿಸಿದರು. ಕುರ್ಚಿ, ಟೇಬಲ್ ಮೇಲೆ ಹತ್ತಿ ಕೂಗಾಡಿದರು. ಇತರ ಸದಸ್ಯರು ಇಬ್ಬರನ್ನು ಸಮಾಧಾನ ಪಡಿಸಲು 10 ನಿಮಿಷ ಪ್ರಯತ್ನಿಸಿದರೂ ತಣ್ಣಗಾಗಲಿಲ್ಲ. ಕೊನೆಗೆ ಮೇಯರ್ ರವಿಕುಮಾರ್ ಬಂದು ಇಬ್ಬರ ಗಲಾಟೆ ಬಿಡಿಸಿದರು.

ತಪ್ಪು ಹೆಜ್ಜೆ: ತ್ರಿಚಕ್ರವಾಹನ ವಿತರಣೆಯಲ್ಲಿ ಸಾರ್ವಜನಿಕ ಆರೋಗ್ಯ, ಶಿಕ್ಷಣ  ಮತ್ತು ಸಾಮಾಜಿಕ ಸ್ಥಾಯಿ ಸಮಿತಿ ತಪ್ಪು ಹೆಜ್ಜೆ ಇರಿಸಿದೆ. ತರಿಸಿದ ಹೀರೊ ಡ್ಯುಯಟ್ ವಾಹನ ಬದಲಾಗಿ ಫಲಾನುಭವಿಗಳಿಗೆ ಆ್ಯಕ್ಟಿವ್ ಹೋಂಡಾ ವಾಹನ ವಿತರಣೆ ಮಾಡಲಾಗುವುದು, ರಿಟೆಂಡರ್ ಮಾಡೋಣ ಎಂದು ಹೇಳಿದ್ದ ಮೇಯರ್ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಯೂಸೂಫ್‌ಖಾನ್ ಮಾತಿಗೆ ತಪ್ಪಿದ್ದಾರೆ.

ಸ್ಥಾಯಿ ಸಮಿತಿ ಸದಸ್ಯಳಾದ ನನಗೆ ಗೌರವ ಇಲ್ಲವೇ? ಹೇಳುವುದೊಂದು ಮಾಡುವುದೊಂದು ಮಾಡುತ್ತೀರಾ? ಸ್ಥಾಯಿ ಸಮಿತಿ ಸಭೆ ಮತ್ತು ಸಾಮಾನ್ಯ ಸಭೆ ತೀರ್ಮಾನಗಳ ಮಹತ್ವ ನಿಮಗೆ ಗೊತ್ತಿದೆಯೇ ಎಂದು ಸದಸ್ಯೆ ಧನಲಕ್ಷ್ಮಿ ಆಕ್ರೋಶ ವ್ಯಕ್ತಪಡಿಸಿದರು. 

ಶೂನ್ಯ ವೇಳೆಯಲ್ಲಿ ಈ ವಿಷಯ ಚರ್ಚೆ ಬೇಡ. ಅಜೆಂಡಾದಲ್ಲಿ ವಿಷಯ ಇದ್ದು, ವಿಷಯ ಬಂದಾಗ ಚರ್ಚೆ ಮಾಡೋಣ ಎಂದು ಮೇಯರ್  ಮಾಡಿದ ಮನವಿಯನ್ನು ಸದಸ್ಯೆ ಒಪ್ಪಲಿಲ್ಲ.

ನಾವು ಅಂದು ಸ್ಥಾಯಿ ಸಮಿತಿ ಸಭೆಯಲ್ಲಿ ನಡೆಸಿದ ಚರ್ಚೆಯೇ ಬೇರೆ. ಈಗ ನಾನು ನೋಡುತ್ತಿರುವ ನಿರ್ಣಯದ ಪ್ರತಿಯಲ್ಲಿನ ವಿಷಯವೇ ಬೇರೆಯಾಗಿದೆ ಎಂದು ಹೇಳಿದರು. ಸದಸ್ಯರ ಅಭಿಪ್ರಾಯಕ್ಕೆ ಬೆಲೆ ಇಲ್ಲದಾಗಿದೆ. ಸದಸ್ಯರಿಗೆ ನೀವು ಅಗೌರವ ತೋರಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜೀನಾಮೆ: ಸ್ಥಾಯಿ ಸಮಿತಿ ತಪ್ಪು ಹೆಜ್ಜೆ, ನಿರ್ಣಯ ಪ್ರತಿಭಟಿಸಿ ಆರೋಗ್ಯ, ಶಿಕ್ಷಣ, ಸಾಮಾಜಿಕ ನ್ಯಾಯ ಸಮಿತಿ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಅವರು ಘೋಷಿಸಿದರು.

ರಾಜೀನಾಮೆ ಪತ್ರ ಹಿಂದಕ್ಕೆ ಪಡೆಯಲು ಮೇಯರ್, ಸದಸ್ಯರು ಮಾಡಿದ ಮನವಿಗೆ ಒಪ್ಪಲಿಲ್ಲ. ಲೋಪವಾಗಿದೆ ಎಂದು ಒಪ್ಪಿ ಕ್ಷಮೆ ಕೇಳಿದರೆ ರಾಜೀನಾಮೆ ವಾಪಸ್ ಪಡೆಯುತ್ತೇನೆ ಎಂದು ಸದಸ್ಯ ಧನಲಕ್ಷ್ಮಿ ಮೇಯರ್ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಯೂಸೂಫ್‌ಖಾನ್ ಅವರಿಗೆ ಹೇಳಿದಾಗ ಚರ್ಚೆ ಅಷ್ಟಕ್ಕೆ ನಿಂತಿತು.

₹ 3 ಕೋಟಿ ಅವ್ಯವಹಾರ: ‘ಅಜಗೊಂಡನಹಳ್ಳಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ನಾನು ಭೇಟಿ ನೀಡಿದ್ದೆ. ಅಭಿವೃದ್ಧಿ ಕಾಮಗಾರಿಯಲ್ಲಿ ₹ 3 ಕೋಟಿ ಅವ್ಯವಹಾರ ಆಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದೀರಲ್ಲ. ಯಾವ್ಯಾವ ಕಾಮಗಾರಿಯಲ್ಲಿ ಅವ್ಯವಹಾರ ಆಗಿದೆ ಎಂಬುದನ್ನು ಸಭೆಗೆ ವಿವರಿಸಬೇಕು ಎಂದು ಸದಸ್ಯ ಮಹೇಶ್ ಅವರು ಮೇಯರ್ ರವಿಕುಮಾರ್ ಅವರಿಗೆ ಮನವಿ ಮಾಡಿದರು.

ಅವ್ಯವಹಾರ ಆಗಿರುವುದು ನಿಜ. ₹ 3, ₹ 30 ಸಾವಿರ, ₹ 3 ಕೋಟಿ  ಹೀಗೆ ಎಷ್ಟೋ ಅವ್ಯವಹಾರ ಆಗಿರಬಹುದು. ಸದಸ್ಯರಾದ ನೀವು ಯಾವ ತನಿಖೆ ಮಾಡಲು ಹೇಳುತ್ತಿರೋ ಆ ತನಿಖೆ ಮಾಡಿಸೋಣ ಎಂದು ಮೇಯರ್ ಹೇಳಿದರು.

ತನಿಖೆ ವಿಚಾರ ಆ ಮೇಲೆ ನೋಡೋಣ. ಮೊದಲು ಯಾವ್ಯಾವ ಕಾಮಗಾರಿಯಲ್ಲಿ ಅವ್ಯವಹಾರ ಆಗಿದೆ ಎಂಬುದನ್ನು ಸಭೆಗೆ ವಿವರಿಸಿ. ನಮಗೂ ಒಂದಿಷ್ಟು ತಿಳಿಯಲಿ. ವಿಷಯವೇ ತಿಳಿಯದೇ ಇದೇ ರೀತಿ ತನಿಖೆ ನಡೆಸಿ, ಇಂಥವರಿಗೆ ತನಿಖೆಗೆ ವಹಿಸಿ ಎಂದು ಹೇಳಲು ಹೇಗೆ ಸಾಧ್ಯ. ದಯವಿಟ್ಟು ವಿವರಿಸಬೇಕು ಎಂದು ಪಟ್ಟು ಹಿಡಿದರು. ಬಾಲಕೃಷ್ಣ, ಇಂದ್ರಕುಮಾರ್, ಬಾವಿಕಟ್ಟಿ ನಾಗಣ್ಣ ಸೇರಿ ಕೆಲ ಸದಸ್ಯರು ಧ್ವನಿಗೂಡಿಸಿದರು.

ಅವ್ಯವಹಾರದ ಬಗ್ಗೆ ಪಾಲಿಕೆ ಆಯುಕ್ತರಿಗೆ ತನಿಖೆ ನಡೆಸಿ ವರದಿ ಕೊಡಲು ಸೂಚಿಸಿದ್ದೇನೆ ಎಂದು ಮೇಯರ್ ಏಕಾಏಕಿ ಘೋಷಣೆ ಮಾಡಿದರು. ಇದ್ಹೇಗೆ ಸಾಧ್ಯ. ಸದಸ್ಯರಿಗೆ ಮಾಹಿತಿ ತಿಳಿಸದೇ ಆಯುಕ್ತರಿಂದ ತನಿಖೆ ನಡೆಸುವ ಘೋಷಣೆ ಮಾಡುವುದು ಗೌರವ ತರುವ ವಿಚಾರವಲ್ಲ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಸದಸ್ಯ ಬಾವಿಕಟ್ಟಿ ನಾಗಣ್ಣ ಮಾತನಾಡಿ,‘ಅಭಿವೃದ್ಧಿಗೆ ಕಾಮಗಾರಿಗೆ ಅನುದಾನ ಕೊಡುವಾಗ ಅದಕ್ಕೆ ಸಹಿ ಮಾಡುವವರು ಆಯುಕ್ತರೇ. ಈಗ ಅವರಿಂದಲೇ ತನಿಖೆ ಮಾಡಿಸುವುದು ಸರಿಯಲ್ಲ. ನಿಷ್ಪಕ್ಷಪಾತ ತನಿಖೆ ಆಗುವುದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ತನಿಖೆ ಹೊಣೆಯನ್ನು ಲೋಕಾಯುಕ್ತಕ್ಕೆ ವಹಿಸಬೇಕು’ ಎಂದು ಒತ್ತಾಯ ಮಾಡಿದರು. ಲೋಕಾಯುಕ್ತರಿಂದ ತನಿಖೆ ವಿಚಾರ ಪ್ರಸ್ತಾಪವಾಗುತ್ತಿದ್ದಂತೆಯೇ ಕೆಲ ಸದಸ್ಯರು ಚರ್ಚೆ ತಣ್ಣಗಾಗಿಸುವ ಪ್ರಯತ್ನ ಮಾಡಿದರು. ಹೊರಗಡೆಯವರಿಂದ ತನಿಖೆ ಆಗುವುದು ಬೇಡ. ನಿಷ್ಪಕ್ಷಪಾತ ತನಿಖೆ ನಮ್ಮವರಿಂದಲೇ ಮಾಡಿಸಿ ಎಂದು ಚರ್ಚೆಗೆ ಅಂತ್ಯ ಹಾಡಿದರು.

ಕೊನೆಗೆ ಮೇಯರ್  ಅವರು ಆಯುಕ್ತರಿಂದಲೇ ತನಿಖೆ ಮಾಡಿಸುತ್ತೇನೆ ಎಂದು ಹೇಳಿದಾಗ ಮಾಹಿತಿಗೆ ಪಟ್ಟು ಹಿಡಿದಿದ್ದ ಸದಸ್ಯರು ಸುಮ್ಮನಾದರು.

ನೀರು: ಜನರು ದಂಗೆ ಏಳುತ್ತಾರೆ
ನೀರಿನ ಬವಣೆ ಇದೆ. ಜನರು ದಂಗೆ ಏಳುತ್ತಾರೆ. ಪ್ರತಿ ವಾರ್ಡ್‌ಗೆ ಇನ್ನೂ ಒಂದು ಅಥವಾ ಎರಡು ಕೊಳವೆ ಬಾವಿ ಕೊಡಬೇಕು. ಕೊರೆದಿರುವ ಕೊಳವೆ ಬಾವಿಗೆ 15–20 ದಿನಕ್ಕೆ ಪಂಪ್‌ ಸೆಟ್ ಅಳವಡಿಸುವ ಬದಲು ಒಂದೆರಡು ದಿನದಲ್ಲಿ ಅಳವಡಿಸಿ ನೀರು ಪೂರೈಸುವ  ವ್ಯವಸ್ಥೆ ಮಾಡಬೇಕು. ಬೆಸ್ಕಾಂಗೆ ₹ 20 ಸಾವಿರ ಠೇವಣಿ ಕಟ್ಟಿದರೆ ತಕ್ಷಣ ಸಂಪರ್ಕ ಕಲ್ಪಿಸುತ್ತಾರೆ. ಈ ಕಾರ್ಯ ತ್ವರಿತವಾಗಿ ಮಾಡಬೇಕು ಎಂದು ಸದಸ್ಯ ನಾಗರಾಜ್ ಮೇಯರ್‌ಗೆ ಒತ್ತಾಯ ಮಾಡಿದರು.

ಎಲ್‌ಸಿಡಿ ಪರದೆ ವ್ಯವಸ್ಥೆ
ಇದೇ ಪ್ರಪ್ರಥಮ ಬಾರಿಗೆ ತುಮಕೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯನ್ನು ಪಾಲಿಕೆ ಆವರಣದಲ್ಲಿ ಎಲ್‌ಸಿಡಿ ಪರದೆ ಹಾಕಿ ಸಾರ್ವಜನಿಕರು ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿತ್ತು. ಸದಸ್ಯರ ಗದ್ದಲ, ಗಲಾಟೆ, ಆಕ್ರೋಶದ ದೃಶ್ಯಗಳನ್ನು ಜನರು ಎಲ್‌ಸಿಡಿ ಪರದೆಯಲ್ಲಿ ವೀಕ್ಷಿಸಿದರು.

ಉಪ ಮೇಯರ್ ಮುನಿಸು
ಪಾಲಿಕೆ ಸಾಮಾನ್ಯ ಸಭೆ ಆರಂಭಗೊಂಡು 15 ನಿಮಿಷವಾದರೂ ಉಪಮೇಯರ್ ವೇದಿಕೆಯಲ್ಲಿ ಕಾಣಲಿಲ್ಲ. ಬದಲಾಗಿ ಸದಸ್ಯರ ಸ್ಥಾನದಲ್ಲಿ ಕುಳಿತಿದ್ದರು. ಸಹ ಸದಸ್ಯರು ಗಮನಿಸಿ ಉಪಮೇಯರ್ ವೇದಿಕೆಗೆ ಬರಬೇಕು ಎಂದು ಮನವಿ ಮಾಡಿದರು.

ಮೇಯರ್ ರವಿಕುಮಾರ್ ಮತ್ತು ಆಯುಕ್ತರು ಮಾತನಾಡಿ,‘ ಉಪಮೇಯರ್ ಅವರಿಗೆ ಮನವಿ ಮಾಡಿದ್ದೇವೆ. ಆದರೂ ವೇದಿಕೆಗೆ ಬಂದಿಲ್ಲ’ ಎಂದರು.
ಹೇಗೆ ಬಂದು ನಾನು ಅಲ್ಲಿ ಕುಳಿತುಕೊಳ್ಳಲಿ. ಉಪಮೇಯರ್ ಎಂಬ ಗೌರವ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗೆ ಇಲ್ಲ. ನಾನು ಹೇಳುವ ಕೆಲಸ ಒಂದೂ ಮಾಡುವುದಿಲ್ಲ. ಉಪಮೇಯರ್ ಆಗಿ ವಾರ್ಡ್‌ ಕೆಲಸ ಮಾಡಲು ಆಗದೇ ಇದ್ದರೆ ಆ ಸ್ಥಾನಮಾನ ನನಗ್ಯಾಕೆ? ಎಂದು ಉಪಮೇಯರ್ ಫರ್ಜಾನಾ ಖಾನಂ ಆಕ್ರೋಶ ವ್ಯಕ್ತಪಡಿಸಿದರು.

ಈ ಕಾರಣಕ್ಕೆ ನಾನು ವೇದಿಕೆಗೆ ಬಂದಿಲ್ಲ ಎಂದು ಹೇಳಿದರು. ಏನೇ ಲೋಪವಾಗಿದ್ದರೂ ಸರಿಪಡಿಸುತ್ತೇವೆ. ದಯವಿಟ್ಟು ವೇದಿಕೆಗೆ ಬನ್ನಿ ಎಂದು ಮೇಯರ್ ಮನವಿ ಮಾಡಿದಾಗ ಉಪಮೇಯರ್ ವೇದಿಕೆ ಹತ್ತಿದರು.

ಸದಸ್ಯರಿಗೆ ತಲಾ 5 ಮನೆ ಕೊಡಿ!
ಆಶ್ರಯ ಯೋಜನೆಯಡಿ ತುಮಕೂರು ನಗರಕ್ಕೆ 1,200 ಮನೆ ಬಂದಿವೆ. ಪಾಲಿಕೆ ಸದಸ್ಯರಾದ ನಮಗೆ ತಲಾ 5 ಮನೆ ವಹಿಸಿಕೊಡಬೇಕು. ಇದರಿಂದ ವಾರ್ಡ್‌ನ ಅರ್ಹ ಫಲಾನುಭವಿಗಳಿಗೆ ಕೊಡಲು ಅನುಕೂಲವಾಗುತ್ತದೆ ಎಂದು ಸದಸ್ಯ ಕರುಣಾರಾಧ್ಯ ಮೇಯರ್‌ಗೆ ಮನವಿ ಮಾಡಿದರು.

‘ಪ್ರತಿ ಸದಸ್ಯರಿಗೆ ತಲಾ 5 ಮನೆ ಕೊಟ್ಟರೆ 200 ಮನೆಯಾಗುತ್ತದೆ. ಆಶ್ರಯ ಸಮಿತಿ ಸದಸ್ಯರಾದ ನೀವು ಶಾಸಕರಿಗೆ ಮನವರಿಕೆ ಮಾಡಿಕೊಡಬೇಕು’ ಎಂದು ಹೇಳಿದಾಗ, ಇತರ ಸದಸ್ಯರು ಧ್ವನಿಗೂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಆಶದ್‌ ಷರೀಫ್, ‘ನಿಮ್ಮ ಮನವಿಯಂತೆ ಆಶ್ರಯ ಮನೆ ಕೊಟ್ಟರೂ ಅರ್ಹ ಫಲಾನುಭವಿಗಳ ಆಯ್ಕೆಗೆ ಸ್ಥಳ ಪರಿಶೀಲನೆ, ಫಲಾನುಭವಿ ಸ್ಥಿತಿಗತಿ ಪರಿಶೀಲನೆ ನಡೆಸುತ್ತೇವೆ. ಬಳಿಕವೇ ಕೊಡಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT