ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗಾಗಿ ವಿಧಾನಸೌಧ ಮುತ್ತಿಗೆ

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಬೈಕ್‌ ರ್‍ಯಾಲಿ ಜೂನ್‌ 1ರಂದು
Last Updated 25 ಮೇ 2017, 5:18 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಸತತ ಬರಗಾಲದಿಂದ ತತ್ತರಿಸಿರುವ ಬಯಲು ಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆಗೆ ಶಾಶ್ವತ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿ ಜೂನ್‌ 1ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.

ವಿಧಾನಸೌಧ ಮುತ್ತಿಗೆಯ ಪೂರ್ವಭಾವಿಯಾಗಿ ಬುಧವಾರ ಪಟ್ಟಣದಲ್ಲಿ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಹಮ್ಮಿ ಕೊಂಡಿರುವ ಬೈಕ್‌ ರ್‍ಯಾಲಿಯಲ್ಲಿ ರೈತರು, ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಬಯಲು ಸೀಮೆಯ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳು ನಿರಂತರವಾಗಿ ಬರಗಾಲಕ್ಕೆ ತುತ್ತಾಗಿವೆ. ಈ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದೆ. ಲಭ್ಯವಿರುವ ನೀರಿನಲ್ಲಿ ಫ್ಲೋರೈಡ್ ಹಾಗೂ ವಿಷಯುಕ್ತ ಲವಣಾಂಶಗಳು ಹೆಚ್ಚಾಗಿದೆ.

ಇದೇ ನೀರು ಕುಡಿದು ಈ ಭಾಗದ ಜನರು ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇಪ್ಪತ್ತರ ಹದಿಯರೆಯದ ಯುವಕರೂ ಮುದುಕರಂತೆ ಕಾಣುತ್ತಿದ್ದಾರೆ, ತಾಯಿಯ ಎದೆ ಹಾಲಿನಲ್ಲಿಯೂ ಫ್ಲೋರೈಡ್‌ ಅಂಶ ಪತ್ತೆಯಾಗಿರುವುದು ಆತಂಕಕಾರಿ ಸಂಗತಿ ಎಂದು ಹೇಳಿದರು.

ಇಲ್ಲಿಂದ ದೇಶ ವಿದೇಶಗಳಿಗೆ ಹೂವು, ಹಣ್ಣು, ತರಕಾರಿ, ರೇಷ್ಮೆ, ಅಡಿಕೆ, ತೆಂಗು, ಹಾಲನ್ನು ರಫ್ತು ಮಾಡಲಾಗುತ್ತಿತ್ತು. ಈಗ ಇಲ್ಲಿ ನೀರಿಲ್ಲದೆ ಬೆಳೆ ಒಣಗಿದೆ. ರೈತರಿಗೆ ಆರ್ಥಿಕ ಮೂಲಗಳೇ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಎರಡು ದಶಕಗಳಿಂದ ಹೋರಾಟ ನಡೆಯುತ್ತಿದ್ದರೂ ಯಾವ ಸರ್ಕಾರವೂ ಸ್ಪಂದಿಸಿಲ್ಲ ಎಂದು ಆಪಾದಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಚದಲುಪುರ ಕ್ರಾಸ್‌ ಬಳಿ ನೀರಾವರಿ ಯೋಜನೆ ಜಾರಿಗಾಗಿ 169 ದಿನಗಳ ಕಾಲ ನಿರಂತರ ಧರಣಿ ನಡೆಸಲಾಯಿತು. ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಟ್ರಾಕ್ಟರ್‌ಗಳ ಮೂಲಕ ವಿಧಾನಸೌಧ ಮುತ್ತಿಗೆ ಹಾಕಲಾಯಿತು. ನೀರಾವರಿ ಯೋಜನೆಗಾಗಿ ತಜ್ಞರ ಸಮಿತಿ ನೇಮಕ ಮಾಡುವ ಸರ್ಕಾರದ ಭರವಸೆ ಈಡೇರಿಲ್ಲ. ಮಧ್ಯ ಕರ್ನಾಟಕ ನೀರಾವರಿ ಪ್ರಾಧಿಕಾರವನ್ನೂ ರಚಿಸಿಲ್ಲ ಎಂದು ಆರೋಪಿಸಿದರು.

ಸಭೆಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಳ್ಳಿ ಬೈರೇಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮಣರೆಡ್ಡಿ, ಕೋಲಾರ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸ್ವಾಮಿ, ಮುಖಂಡರಾದ ಮಂಜುನಾಥ ರೆಡ್ಡಿ, ಗಂಗಾಧರ, ನಾರಾಯಣಸ್ವಾಮಿ, ಸುರೇಶ್, ಪ್ರಭಾಕರ, ನರಸಿಂಹರೆಡ್ಡಿ, ಜಿ. ಗಂಗಾಧರ, ಶಂಕರ ಭಾಗವಹಿಸಿದ್ದರು.

ಭರವಸೆ ಈಡೇರಿಕೆಯಲ್ಲಿ ವಿಫಲ: ಆರೋಪ
ಶಿಡ್ಲಘಟ್ಟ:
ಬಯಲುಸೀಮೆ ಭಾಗಕ್ಕೆ ಕುಡಿಯಲು ಹಾಗೂ ಕೃಷಿಗೆ ನೀರು ಪೂರೈಸುವ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ವಿಫಲವಾಗಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು.

ಬುಧವಾರ ಇಲ್ಲಿ ಏರ್ಪಡಿಸಿದ್ದ ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಜಲ ಸಂಪನ್ಮೂಲಕ್ಕೆ ಕೊರತೆಯಿಲ್ಲ. ಆದರೆ ಅದನ್ನು ಸಮರ್ಪಕವಾಗಿ ಬಳಸಲು ಯೋಜನೆ ರೂಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಸರ್ಕಾರದ ತಪ್ಪು ಆರ್ಥಿಕ ನೀತಿಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಆಪಾದಿಸಿದರು.

ಬಯಲುಸೀಮೆ ಪ್ರದೇಶಕ್ಕೆ ಕೃಷಿ ಆಧಾರಿತ ನೀರಾವರಿ ಯೋಜನೆ ಜಾರಿಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ತರಲು ಜೂನ್‌ 1ರಂದು ಬೈಕ್‌ ರ್‍ಯಾಲಿ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು.

ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ರಾಜ್ಯ ಘಟಕದ ಕಾರ್ಯದರ್ಶಿ ಶಿವಪ್ಪ, ಕೋಲಾರ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರಸ್ವಾಮಿ, ತಾಲ್ಲೂಕು ಘಟಕದ ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ಮುಖಂಡರಾದ ಬಿ.ವಿ. ಮುನೇಗೌಡ, ಎಸ್.ಎಂ. ನಾರಾಯಣಸ್ವಾಮಿ, ಡಿ.ವಿ. ವೆಂಕಟೇಶ್, ಕೊಂಡಪ್ಪನವರ ವೇಣು, ದೇವರಾಜ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT