ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾ.ಪಂ. ಉಪಾಧ್ಯಕ್ಷೆ ವಿರುದ್ಧ ದೂರು

ಅಂಗವಿಕಲರ ಸಹಾಯಧನ ದುರುಪಯೋಗ ಆರೋಪ
Last Updated 25 ಮೇ 2017, 5:50 IST
ಅಕ್ಷರ ಗಾತ್ರ

ಕೊಪ್ಪ: ತಾಲ್ಲೂಕಿನ ಮೆಣಸಿನಹಾಡ್ಯದಲ್ಲಿ ಅಡಿಕೆ ಮರದಿಂದ ಬಿದ್ದ ಪರಿಣಾಮ ಅಂಗವಿಕಲನಾದ ಕೃಷ್ಣಪ್ಪ ಎಂಬ ಗಿರಿಜನ ಯುವಕನಿಗೆ ತಾಲ್ಲೂಕು ಪಂಚಾಯಿತಿ ವತಿಯಿಂದ ಮಂಜೂರಿ ಮಾಡಿದ್ದ ಸಹಾಯಧನವನ್ನು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರು ಹಿಂಪಡೆ ದಿದ್ದಾರೆ ಎಂದು ಯುವಕನ ತಾಯಿ ಸುಬ್ಬಮ್ಮ ಮೇಲಧಿಕಾರಿಗಳಿಗೆ ದೂರಿದ್ದಾರೆ.

ಈ ಕುರಿತು ಮಾಹಿತಿ ಪಡೆಯಲು ಮಂಗಳವಾರ ಮೆಣಸಿನಹಾಡ್ಯದ ತಮ್ಮ ಮನೆಗೆ ಬಂದಿದ್ದ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ‘ಒಂದು ವರ್ಷದ ಹಿಂದೆ ನನ್ನ ಮಗ ಅಡಿಕೆ ಮರಕ್ಕೆ ಔಷಧಿ ಸಿಂಪಡಿಸುವ ವೇಳೆ ಬಿದ್ದು, ಬೆನ್ನುಮೂಳೆ ಮುರಿತದಿಂದ ಶಾಶ್ವತ ಅಂಗವೈಕಲ್ಯಕ್ಕೆ ಈಡಾಗಿದ್ದು ಕೆಲಸ ಮಾಡಲಾಗದೆ ಸಾವು ಬದು ಕಿನ ನಡುವೆ ಹೋರಾಡುತ್ತಿದ್ದಾನೆ.

ಇನ್ನೊಬ್ಬ ಮಗನೂ ಅಂಗವೈಕಲ್ಯದಿಂದ ಬಳಲುತ್ತಿದ್ದಾನೆ. ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದೇವೆ. ನನಗೂ ವಯಸ್ಸಾಗಿದ್ದು, ಒಂದು ವರ್ಷದ ಹಿಂದೆ ಗಂಡ ಕ್ಯಾನ್ಸರ್ ಖಾಯಿಲೆಯಿಂದ ತೀರಿಕೊಂಡಿದ್ದಾರೆ. ಅನಾಥ ರಾದ ನಮ್ಮನ್ನು ನೋಡಿಕೊಳ್ಳುವವರು ಯಾರೂ ಇಲ್ಲದೆ ಬದುಕು ಕಷ್ಟವಾಗಿದೆ’ ಎಂದು ಅಳಲು ತೋಡಿಕೊಂಡರು.

‘ಮಗನ ಚಿಕಿತ್ಸೆಗೆ ನೆರವು ಕೋರಿ ಅತ್ತಿಕೊಡಿಗೆ ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಯವರ ಮೊರೆ ಹೋಗಿದ್ದೆ. ನಮ್ಮ ಕಷ್ಟಕ್ಕೆ ಸ್ಪಂದಿಸಿದ ಗ್ರಾಮ ಪಂಚಾಯಿತಿ ₹ 10 ಸಾವಿರ, ತಾಲ್ಲೂಕು ಪಂಚಾಯಿತಿಯಿಂದ ₹ 25 ಸಾವಿರ ಸಹಾಯಧನದ ಚೆಕ್ ನೀಡಿ ದ್ದಾರೆ. ಈ ಪೈಕಿ ಗ್ರಾಮ ಪಂಚಾಯಿತಿ ಹಣ ನಮಗೆ ಸಂಪೂರ್ಣ ಸಂದಾಯವಾಗಿದೆ.

ತಾಲ್ಲೂಕು ಪಂಚಾಯಿತಿಯಿಂದ ಬಂದ ಹಣದಲ್ಲಿ ಉಪಾಧ್ಯಕ್ಷೆ ಜೆ.ಎಸ್. ಲಲಿತಾ ಅವರು ‘ಇಷ್ಟು ಹಣ ನಿಮ್ಮದಲ್ಲ, ₹5 ಸಾವಿರ ಮಾತ್ರ ನಿಮ್ಮದು, ಉಳಿದ ಹಣವನ್ನು ಡಾಕ್ಟರ್ ಮತ್ತು ಅಧಿಕಾರಿಗಳಿಗೆ ಕೊಡಬೇಕು’ ಎಂದು ಹೇಳಿ ನನ್ನ ಮಗ ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ ನನ್ನ ಮಗಳ ಮೂಲಕ ಮಗನ ಎಟಿಎಂ ಬಳಸಿ ₹20 ಸಾವಿರ ಹಣ ವಾಪಸು ಪಡೆದುಕೊಂಡಿದ್ದಾರೆ’ ಎಂದು ದೂರಿದರು.

ಮಗನ ಚಿಕಿತ್ಸೆಗಾಗಿ ಕೈಸಾಲ ಮಾಡಿಕೊಂಡಿದ್ದು, ಅದರ ಸಾಲ ತಿರಿಸುವುದಕ್ಕೆ ಈ ಹಣ ನನಗೆ ಸಹಾಯವಾಗುತ್ತದೆ. ಅಧಿಕಾರಿಗಳು ನಮ್ಮ ಗೋಳಿಗೆ ಸ್ಪಂದನೆ ನೀಡಬೇಕು ಎಂದು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಗೋಪಾಲಕೃಷ್ಣ ’ಈ ಕುಟುಂಬದ ಕಷ್ಟಕ್ಕೆ ಸ್ಪಂದಿಸಿ ಗ್ರಾಮ ಪಂಚಾಯಿತಿಯಿಂದ ನೀಡಲಾಗಿರುವ ದುರುಪಯೋಗ ಮಾಡಿಕೊಂಡಿರುವುದು ಸರಿಯಾದ ಕ್ರಮವಲ್ಲ. ಕೂಡಲೇ ಹಣ ವಾಪಸ್‌ ನೀಡಬೇಕು’ ಎಂದು ಒತ್ತಾಯಿಸಿದರು.

ಉಪಾಧ್ಯಕ್ಷೆ ಸ್ಪಷ್ಟನೆ : ‘ಕುಟುಂಬದ ಕಷ್ಟಕ್ಕೆ ಸ್ಪಂದಿಸಿ ತಾಲ್ಲೂಕು ಪಂಚಾ ಯಿತಿಯಿಂದ ₹ 25 ಸಾವಿರ ಸಹಾಯ ಧನ ಕೊಡಿಸಿದ್ದೇನೆ. ಹಣವು ಚೆಕ್ ಮೂಲಕ ಪಾವತಿಯಾಗಿದೆ. ನಾನು ಯಾವುದೇ ಹಣ ಪಡೆದಿಲ್ಲ. ರಾಜಕೀಯ ಪಿತೂರಿ ನಡೆಸಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಜೆ.ಎಸ್. ಲಲಿತ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT