ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸಮಾಜ ನಿರ್ಮಾಣದವರೆಗೂ ಮೀಸಲಾತಿ

ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ದಸಂಸ ಮುಖಂಡ ಭದ್ರಾವತಿ ಸತ್ಯ ಪ್ರತಿಪಾದನೆ
Last Updated 25 ಮೇ 2017, 5:56 IST
ಅಕ್ಷರ ಗಾತ್ರ

ಶಿವಮೊಗ್ಗ: ದೇಶದಲ್ಲಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ತಳಹದಿಯ ಸಮ ಸಮಾಜ ನಿರ್ಮಾಣವಾಗುವ ತನಕ ಜಾತಿ ಆಧಾರಿತ ಮೀಸಲಾತಿ ಅಗತ್ಯವಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಭದ್ರಾವತಿ ಸತ್ಯ ಪ್ರತಿಪಾದಿಸಿದರು.

ಅಂಬೇಡ್ಕರ್ ಭವನದಲ್ಲಿ ಬುಧವಾರ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 126ನೇ  ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಜಾತಿವ್ಯವಸ್ಥೆ ಇರುವವರೆಗೆ ಮೀಸಲಾತಿ ಇರಬೇಕು. ಎಲ್ಲಾ ಕ್ಷೇತ್ರಗಳಲ್ಲೂ ಸಮಾನತೆ ನಿರ್ಮಾಣವಾದ ನಂತರ ಮೀಸಲಾತಿ ವಾಪಸ್‌ ಪಡೆಯಬಹುದು’ ಎಂದು ಸಲಹೆ ನೀಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೀಸಲಾತಿ ಕುರಿತು ಸಾಕಷ್ಟು ಚರ್ಚೆ ನಡೆಸುತ್ತಿವೆ. ಸ್ವಾತಂತ್ರ್ಯಾ ನಂತರ ರಚಿಸಿದ ಮಂಡಲ್‌ ಆಯೋಗ ಸೇರಿದಂತೆ  ವಿವಿಧ ಆಯೋಗಗಳು ನೀಡಿದ ವರದಿ ಜಾರಿಗೊಳಿಸಿದ್ದರೂ ಸಮಸಮಾಜ ನಿರ್ಮಾಣ ಸಾಧ್ಯವಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಭಾರತ ಬುದ್ಧನ ತತ್ವ ಅನುಸರಿಸಿದ್ದರೆ, ಆದರ್ಶ ಮಾರ್ಗ ಹಿಡಿದಿದ್ದರೆ ಬೇರೆ ರಾಷ್ಟ್ರಗಳನ್ನೂ ಮೀರಿ ಅಭಿವೃದ್ಧಿ ಸಾಧಿಸಬಹುದಿತ್ತು. ಬುದ್ಧನ ಸಮಸಮಾಜದ ನಿರ್ಮಾಣ ಸಾಕಾರವಾಗುತ್ತಿತ್ತು ಎಂದರು.

ರಾಜ್ಯದಲ್ಲಿ ದಲಿತ ಸಮುದಾಯ ದವರು  ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆ ಸಮುದಾಯದ ಎಲ್ಲರೂ ಕೀಳರಿಮೆ ಪರಿಣಾಮ ಒಂದುಗೂಡಲು ಸಾಧ್ಯ ಆಗುತ್ತಿಲ್ಲ. ರಾಜ್ಯ ಸರ್ಕಾರ ತಕ್ಷಣವೇ ನಿವೃತ್ತ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಅಧಿವೇಶನ ದಲ್ಲಿ ಮಂಡಿಸಿಬೇಕು. ನಂತರ  ವರದಿಯ ಸಾಧಕ-ಬಾಧಕ ಕುರಿತು ಚರ್ಚಿಸಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ಮೇಯರ್ ಏಳುಮಲೈ ಮಾತನಾಡಿ, ‘ಅಂಬೇಡ್ಕರ್ ನೀಡಿದ ಮೀಸಲಾತಿ ದಲಿತ ಸಮುದಾಯಕ್ಕೆ ನೆಮ್ಮದಿಯ ಬದುಕು ನೀಡಿದೆ. ಈ ಮೀಸಲಾತಿ ಸೌಲಭ್ಯ ಬಳಸಿಕೊಂಡು ದಲಿತ ಸಮುದಾಯದ ಎಲ್ಲರೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಎಲ್ಲಾ ರಂಗಗಳಲ್ಲೂ ದಲಿತರು ಇಂದು ಸ್ವಲ್ಪಮಟ್ಟಿನ ಬೆಳವಣಿಗೆ ಕಾಣುತ್ತಿದ್ದಾರೆ. ಉನ್ನತ ಶಿಕ್ಷಣ ಪಡೆಯುವ ಮೂಲಕ ಇನ್ನಷ್ಟು ಎತ್ತರಕ್ಕೆ ಏರಬೇಕು ಎಂದು ಕರೆ ನೀಡಿದರು.

ವಕೀಲ ಕೆ.ಎನ್.ಹರ್ಷ ಮಾತನಾಡಿ, ‘ಬುದ್ಧ, ಬಸವಣ್ಣ, ಅಂಬೇಡ್ಕರ್ ಇಲ್ಲದೇ ದೇಶದ ಅಸ್ತಿತ್ವ ಊಹಿಸಲು ಸಾಧ್ಯವಿಲ್ಲ. ಅವರ ವಿಚಾರಧಾರೆಗಳು ಸದಾ ದಾರಿದೀಪ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’  ಎಂದರು.

‘ಅಂಬೇಡ್ಕರ್‌ ಅವರು ವ್ಯಾಸಂಗ ಮಾಡುವ ಸಮಯದಲ್ಲಿ ಮೀಸಲಾತಿ  ಸೌಲಭ್ಯ ಇರಲಿಲ್ಲ. ಯಾವುದೇ ಮೀಸಲಾತಿ ಇಲ್ಲದೆ ಅವರು ಮೇರು ಸಾಧನೆ ಮಾಡಿದ್ದಾರೆ. ತಮ್ಮ ಸಮುದಾಯದ ಜನರು ನನ್ನಂತೆ ಕಷ್ಟ ಪಡಬಾರದು ಎಂದು  ಹಲವು ಅನುಕೂಲ ಕಲ್ಪಿಸಿದ್ದಾರೆ. ಎಲ್ಲ ಸೌಲಭ್ಯ ಉಪಯೋಗಿಸಿಕೊಂಡು ಉನ್ನತ ಶಿಕ್ಷಣ ಪಡೆಯಬೇಕು. ಸಾಧನೆ ಮೂಲಕ ಇತರರಿಗೆ ಮಾರ್ಗದರ್ಶನ ನೀಡಬೇಕು’ ಎಂದರು.

ಎಎಸ್‌ಪಿ ಮುತ್ತುರಾಜ್, ಸಮಿತಿಯ ಜಿಲ್ಲಾ ಸಂಚಾಲಕ ಚಿನ್ನಯ್ಯ, ಡಾ.ಎಚ್. ಶಿವಲಿಂಗಪ್ಪ, ರಾಜೇಂದ್ರ ಬಂದಗದ್ದೆ, ಡಿ.ಸಿ.ಮಾಯಣ್ಣ, ಪ್ರಕಾಶ್ ಲಿಗಾಡಿ, ಕೆ.ಎ.ರಾಜಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT