ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದಲ್ಲೂ ಹಳ್ಳಿಗೆ ಬಾರದ ಅಧಿಕಾರಿಗಳು

ಜಗಳೂರು ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ
Last Updated 25 ಮೇ 2017, 5:59 IST
ಅಕ್ಷರ ಗಾತ್ರ

ಜಗಳೂರು: ತಾಲ್ಲೂಕಿನಲ್ಲಿ ತೀವ್ರ ಬರದಿಂದ ಜನರು ತತ್ತರಿಸಿದ್ದಾರೆ. ಗ್ರಾಮ ಪಂಚಾಯ್ತಿ ಹಂತದಲ್ಲಿ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ಸಮರ್ಪಕ
ವಾಗಿ ಕಾರ್ಯನಿರ್ವಹಿಸದ ಕಾರಣ ಜನಸಾಮಾನ್ಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಪಟ್ಟಣದಲ್ಲಿ ಬುಧವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ
ಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ಹಳ್ಳಿಗಳತ್ತ ಮುಖ ಮಾಡುತ್ತಿಲ್ಲ. ಒಂದು ಶೌಚಾಲಯದ ಜಿಪಿಎಸ್‌ ಮಾಡಲು ವರ್ಷಗಟ್ಟಲೆ ಕಾಲಹರಣ ಮಾಡುತ್ತಿದ್ದಾರೆ. ಈಗಾಗಲೇ ಶೌಚಾಲಯ ನಿರ್ಮಿಸಿರುವ ಫಲಾನುಭವಿಗಳಿಗೆ  ಮೂರು ವರ್ಷಗಳಿಂದ ಹಣ ಕೊಟ್ಟಿಲ್ಲ. ಗ್ರಾಮೀಣ ಭಾಗದಲ್ಲಿ ಜನರು ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ. ತಾಲ್ಲೂಕು ಆಡಳಿತ ಹದಗೆಟ್ಟಿದೆ ಎಂದು ಸದಸ್ಯ ಗಡಿಮಾಕುಂಟೆ ಸಿದ್ದೇಶ್‌ ಆರೋಪಿಸಿದರು.

ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಪತಿ ಪ್ರತಿಕ್ರಿಯಿಸಿ, ‘ಸರಿಯಾಗಿ ಕೆಲಸ ಮಾಡದ ಪಿಡಿಒಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದಲ್ಲಿ ನನ್ನ ಮೇಲೆ ವಿಪರೀತ ಒತ್ತಡ ಹೇರುತ್ತಾರೆ. ಪರ ವಿರೋಧ ಗುಂಪುಗಾರಿಕೆ ನಡೆಯುತ್ತದೆ. ಅಧಿಕಾರಿಯಾಗಿ ನಾನು ಇಲ್ಲಿ ಅಸಹಾಯಕನಾಗಿದ್ದೇನೆ’ ಎಂದು ಕೈಚೆಲ್ಲಿದರು.

‘ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿ ಒಂದೂವರೆ ವರ್ಷದಿಂದ ತಾಲ್ಲೂಕು ಪಂಚಾಯ್ತಿಯ ಒಂದೂ ಸಭೆಗೆ ಹಾಜರಾಗಿಲ್ಲ. ಹಿಂದಿನ ಎಲ್ಲಾ ಸಭೆ
ಗಳಲ್ಲಿ ಗೈರು ಹಾಜರಾದ ಬಗ್ಗೆ ಷೋ ಕಾಸ್‌ ನೋಟಿಸ್‌ ಜಾರಿ ಮಾಡಿದ್ದರೂ ಇಂದಿನ ಸಭೆಗೆ ಹಾಜರಾಗದೆ ಕರ್ತವ್ಯ ಲೋಪ ಎಸಗಿದ್ದಾರೆ’ ಎಂದು ಸದಸ್ಯರು ಹರಿಹಾಯ್ದರು.

ಅರಣ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯ್ತಿ ಹಾಗೂ ಸರ್ಕಾರಕ್ಕೆ ಒತ್ತಾಯಿಸಿ ಸಭೆಯಲ್ಲಿ ಒಕ್ಕೊರಲ ನಿರ್ಣಯ ಕೈಗೊಳ್ಳಲಾಯಿತು.
ಸದಸ್ಯ ಶಂಕ್ರನಾಯ್ಕ ಮಾತನಾಡಿ, ‘ಸಹ ಸದಸ್ಯ ತಿಮ್ಮಾಭೋವಿ ಅವರು ಅರಣ್ಯ ಇಲಾಖೆ ಅಧಿಕಾರಿ ರಾಮಮೂರ್ತಿ ಅವರಿಗೆ ಇಲಾಖೆಯ ಯೋಜನೆಗಳ ಬಗ್ಗೆ ಸದಸ್ಯರಾದ ನಮ್ಮ ಸಮ್ಮುಖದಲ್ಲೇ ದೂರವಾಣಿ ಮೂಲಕ ಮಾಹಿತಿ ಕೇಳಿದ್ದರು.

ಆದರೆ, ಆ ಅಧಿಕಾರಿ,  ಸದಸ್ಯರು ತಮಗೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ಸುಳ್ಳು ದೂರು ನೀಡಿದ್ದಾರೆ. ಅವರು ಸಭೆಗಳಿಗೂ ಹಾಜರಾಗುವುದಿಲ್ಲ. ಕಚೇರಿಯಲ್ಲೂ ಸಿಗುವುದಿಲ್ಲ. ಹೀಗಾದರೆ ಜನಪ್ರತಿನಿಧಿಗಳಾದ ನಾವು ಜನರಿಗೆ ನ್ಯಾಯ ಒದಗಿಸುವುದು ಹೇಗೆ’ ಎಂದು ಪ್ರಶ್ನಿಸಿದರು.

ಭರಮಸಮುದ್ರ ಕೆರೆಯಲ್ಲಿ ಈಚೆಗೆ ‘ನರೇಗಾ’ ಯೋಜನೆಯಡಿ ಹೂಳು ತೆಗೆಯುವ ಕಾಮಗಾರಿಯಲ್ಲಿ ಕೆಲಸ ಮಾಡಿದ ಕೂಲಿಕಾರರಿಗೆ ಹಣ ಪಾವತಿಯಾಗದೆ, ಬೇರೆಯವರ ಖಾತೆಗಳಿಗೆ ಪಾವತಿಯಾಗಿದೆ. ಈ ಲೋಪವನ್ನು ಸರಿಪಡಿಸಿ ಎಂದು ಸದಸ್ಯ ಶಿಲ್ಪಾ ಮಂಜಣ್ಣ ಆಗ್ರಹಿಸಿದರು.

ಸದಸ್ಯ ಮರೇನಹಳ್ಳಿ ಬಸವರಾಜ್‌, ತಿಮ್ಮಾಭೋವಿ, ತಾಲ್ಲೂಕು ಪಂಚಾಯ್ತಿ ವಾಣಿಜ್ಯ ಮಳಿಗೆಗಳ ಬಾಡಿಗೆದಾರರು ಹಲವು ವರ್ಷಗಳಿಂದ ಬಾಡಿಗೆ ಪಾವತಿ
ಸಿಲ್ಲ. ಹಲವು ಬಾರಿ ನೋಟಿಸ್‌ ನೀಡಿದ್ದರೂ ಸ್ಪಂದಿಸಿಲ್ಲ. ತಿಂಗಳ ನಂತರ ಮರು ಹರಾಜು ಮಾಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಎಂ.ಬಸವರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪೇಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT