ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಾತನ ಕೆರೆಗೆ ಗ್ರಾಮಸ್ಥರಿಂದ ಮರುಜೀವ

ತ್ಯಾವಣಿಗೆ ಗ್ರಾಮಸ್ಥರ ಶ್ರಮ ಜಲಮೂಲಕ್ಕೆ ಕಾಯಕಲ್ಪ
Last Updated 25 ಮೇ 2017, 6:03 IST
ಅಕ್ಷರ ಗಾತ್ರ

ತ್ಯಾವಣಿಗೆ: ಗ್ರಾಮದ ಪುರಾತನ ಕೆರೆಗೆ ಕೊನೆಗೂ ಕಾಯಕಲ್ಪದ ‘ಭಾಗ್ಯ’ ಸಿಕ್ಕಿದೆ. ಸರ್ಕಾರದ ನೆರವಿಗೆ ಕಾಯದೇ ಗ್ರಾಮಸ್ಥರು ಹಾಗೂ ರೈತರು ಸ್ವಂತ ಖರ್ಚಿನಲ್ಲಿ ಹೂಳು ತೆಗೆಸಿ ಅಭಿವೃದ್ಧಿ ಪಡಿಸುತ್ತಿದ್ದಾರೆ.

ಕೆರೆಯು ಎರಡು ಭಾಗವಾಗಿದೆ. ಸುಮಾರು ನಾಲ್ಕು ಎಕರೆ ವಿಸ್ತೀರ್ಣವುಳ್ಳ ಒಂದು ಭಾಗವನ್ನು ಎರಡು ಹಿಟಾಚಿ, ಎರಡು ಜೆಸಿಬಿ ಯಂತ್ರಗಳ ಮೂಲಕ ಸ್ವಚ್ಛಗೊಳಿಸಲಾಗುತ್ತಿದೆ. ಹೂಳನ್ನು ತೆಗೆದು ರೈತರು ಸ್ವಂತ ಟ್ರ್ಯಾಕ್ಟರ್‌ಗಳ ಮೂಲಕ ಹೊಲಗಳಿಗೆ, ಕಣಗಳಿಗೆ ಹಾಗೂ ತಗ್ಗು ಪ್ರದೇಶಗಳಿಗೆ ಸಾಗಿಸುತ್ತಿದ್ದಾರೆ.

ಕಾಲುವೆಯಿಂದ ನೀರು: ಕೆರೆ ತುಂಬಿಸಲು ಭದ್ರಾ ಕಾಲುವೆಯ ಉಪ ಕಾಲುವೆಯಿದೆ. ನೀರು ಕಲ್ಮಶಗೊಳ್ಳದಂತೆ ಆಗಾಗ ಹೊರ ಹರಿಸಲು ಟ್ಯೂಬ್ (ಗೇಟ್) ವ್ಯವಸ್ಥೆ ಮಾಡಬೇಕು. ಪುನಃ ಕಾಲುವೆಯಿಂದ ನೀರು ಹರಿಸುತ್ತಿದ್ದರೆ ಶುದ್ಧವಾಗಿರುತ್ತದೆ ಎನ್ನುತ್ತಾರೆ ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಚ್.ಹಾಲಪ್ಪ.

‘ಗ್ರಾಮದ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿಯುತ್ತಿದೆ. ಮಳೆಯ ಅಭಾವದಿಂದ ಭದ್ರಾ ಕಾಲುವೆಗಳಲ್ಲಿ ನೀರಿಲ್ಲ. ಜನ ಜಾನುವಾರಿಗೆ ಕುಡಿಯಲು, ದಿನಬಳಕೆಗೆ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ. ಜಲ ಸಂರಕ್ಷಣೆ ಮಾಡುವುದೊಂದೇ ಇದಕ್ಕೆ ಪರಿಹಾರ’ ಎನ್ನುತ್ತಾರೆ ಗ್ರಾಮಸ್ಥರು.

‘ಗ್ರಾಮದಲ್ಲಿ ನೀರು ಶೇಖರಿಸಲು ಇರುವುದು ಕೆರೆ ಮಾತ್ರ. ಹೀಗಾಗಿ ಕೆರೆಯ ಅಭಿವೃದ್ಧಿಗೆ ಮುಂದಾಗಿದ್ದೇವೆ’ ಎನ್ನುತ್ತಾರೆ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ಎಚ್.ಸಿ.ರಾಮಚಂದ್ರಪ್ಪ, ಶಿಕ್ಷಕ ಹೊನ್ನಪ್ಪ, ಗ್ರಾಮ ಪಂಚಾಯ್ತಿ ಸದಸ್ಯ ಪರಮೇಶ್ವರಾಧ್ಯ, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಲೋಕೇಶ್, ಶಿವಮೂರ್ತಿ, ಹಾಲಸಿದ್ದಪ್ಪ, ಶ್ಯಾಮಣ್ಣಗೌಡ, ಕರಿಯಪ್ಪ, ರಾಮಪ್ಪ.
– ರಾಜು ಆರ್.ತ್ಯಾವಣಿಗೆ.

‘ಒತ್ತುವರಿ ತೆರವು ಮಾಡಿ’
‘ಕೆರೆಯು ಒತ್ತುವರಿಯಾಗಿದ್ದು, ದಡದ ಸುತ್ತಲೂ ಗುಡಿಸಲು, ಚಿಕ್ಕ ಮನೆಗಳಲ್ಲಿ ಜನ ವಾಸಿಸುತ್ತಿದ್ದಾರೆ. ಅವರಿಗೆ ಸರ್ಕಾರದಿಂದ ಉಚಿತವಾಗಿ ನಿವೇಶನ ನೀಡಿ ಮನೆಗಳನ್ನು ಕಟ್ಟಿಸಿಕೊಡಬೇಕು. ಬಳಿಕ  ಒತ್ತುವರಿ ತೆರವು ಮಾಡಬೇಕು’ ಎನ್ನುವುದು ರೈತ ಸಂಘದ ಅಧ್ಯಕ್ಷ ಕರಿಬಸಪ್ಪ ಅವರ ಒತ್ತಾಯವಾಗಿದೆ.

600 ಲೋಡ್‌ ಹೂಳು ತೆರವು
ಸುಮಾರು 20 ದಿನಗಳಿಂದ 600 ಲೋಡ್‌ಗಳಷ್ಟು ಹೂಳನ್ನು ತೆಗೆಯಲಾಗಿದ್ದು, ಕೆರೆಯನ್ನು ಎಂಟು ಅಡಿ ಆಳ ಮಾಡಲಾಗಿದೆ. ಇನ್ನು ನಾಲ್ಕೈದು ದಿನಗಳಲ್ಲಿ ಹೂಳು ತೆಗೆಯುವ ಕಾರ್ಯ ಪೂರ್ಣಗೊಳ್ಳಲಿದೆ ಎನ್ನುತ್ತಾರೆ ರೈತರು.

‘ಜನಪ್ರತಿನಿಧಿಗಳು ಸಹಕರಿಸಲಿ’
‘ಜನ ಪ್ರತಿನಿಧಿಗಳು ನಮ್ಮೂರಿನ ಕೆರೆಗೆ ತಡೆಗೋಡೆ ನಿರ್ಮಾಣ, ಕೆರೆಯ ನೀರನ್ನು ಹೊರಹರಿಸಲು ಗೇಟ್ ವ್ಯವಸ್ಥೆ ಮಾಡಿಸಿಕೊಡಬೇಕು. ಜಲ ಸಂರಕ್ಷಣೆಗೆ, ಸದ್ಬಳಕೆಗೆ ಅವರು ಸಹಕರಿಸಲಿ’ ಎಂಬುದು ಗ್ರಾಮಸ್ಥರ ಆಗ್ರಹ.

* ಸರ್ಕಾರದ ಅನುದಾನ ನಿರೀಕ್ಷಿಸದೇ ಕಾಮಗಾರಿ * ಹೊಲಗಳಿಗೆ ಹೂಳು ಸಾಗಣೆ * ಮಳೆಗಾಲದಲ್ಲಿ ಕೆರೆ ಭರ್ತಿ ಆಗುವ ನಿರೀಕ್ಷೆ * ಐದು ದಿನಗಳಲ್ಲಿ ಸಂಪೂರ್ಣ ಸ್ವಚ್ಛ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT