ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಿಸಿ

‘ಸರ್ಕಾರಿ ಶಾಲೆಗಳ ಬಲವರ್ಧನೆ’ : ಸಮಾಲೋಚನಾ ಸಭೆ
Last Updated 25 ಮೇ 2017, 6:08 IST
ಅಕ್ಷರ ಗಾತ್ರ

ಚಿತ್ರದುರ್ಗ: ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಪ್ರಮಾಣ ಕುಸಿಯುತ್ತಿರುವುದಕ್ಕೆ ಕಾರಣಗಳನ್ನು ಪತ್ತೆ ಮಾಡಿ, ಮಕ್ಕಳ ಸಂಖ್ಯೆ ಹೆಚ್ಚಿಸಿ, ಶಾಲೆಗಳನ್ನು ಬಲವರ್ಧಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ.ಕೃಪಾ ಅಮರ್ ಆಳ್ವ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಡೆದ ‘ಸರ್ಕಾರಿ ಶಾಲೆಗಳ ಬಲವರ್ಧನೆ’ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆಗಿನ ಸಭೆಯಲ್ಲಿ ಅವರು ಮಾತನಾಡಿದರು.

‘ಸರ್ಕಾರಿ ಶಾಲೆಗಳ ಸ್ಥಿತಿ-ಗತಿ ಕುರಿತು ಮಾಹಿತಿ ಸಂಗ್ರಹಿಸುವುದಕ್ಕಾಗಿ ಆಯೋಗ ಜಿಲ್ಲೆಗೆ ಭೇಟಿ ನೀಡಿದೆ. ಯಾವ ಕಾರಣಕ್ಕಾಗಿ ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಾರೆ. ಸರ್ಕಾರಿ ಶಾಲೆಯ ಬೋಧನಾ ಕ್ರಮ, ಮೂಲಸೌಲಭ್ಯ ಸೇರಿದಂತೆ ಯಾವುದರಲ್ಲಿ ಕೊರತೆಯಿದೆ ಎಂಬ ಅಂಶಗಳನ್ನು ಪಟ್ಟಿ ಮಾಡಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ. ಇಂಥ ಶಾಲೆಗಳ ಬಲವರ್ಧನೆಗೆ ಏನು ಕ್ರಮ ಕೈಗೊಳ್ಳಬಹುದು ಎಂಬ ಸಲಹೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗುತ್ತದೆ’ ಎಂದು ವಿವರಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಂದ ಜಿಲ್ಲೆಯ ಶಾಲೆಗಳ ಸ್ಥಿತಿ-ಗತಿ ಕುರಿತು ಮಾಹಿತಿ ಪಡೆದ ಅಧ್ಯಕ್ಷೆ, ‘ಸರ್ಕಾರಿ ಶಾಲೆಗಳಲ್ಲಿ ಆಡಂಬರಕ್ಕಿಂತ ವಿದ್ಯಾರ್ಥಿಗಳಿಗೆ ಅಗತ್ಯವಾದ ಕುಳಿತುಕೊಳ್ಳಲು ಆಸನ, ಕುಡಿಯಲು ಶುದ್ಧ ನೀರು, ಶೌಚಾಲಯ ವ್ಯವಸ್ಥೆಯಂತಹ ಮೂಲಸೌಲಭ್ಯ ಕಲ್ಪಿಸಿ ಗುಣಮಟ್ಟದ ಶಿಕ್ಷಣ ನೀಡಿದರೆ ಸಾಕು’ ಎಂದು ಸಲಹೆ ನೀಡಿದರು.  

ಆಯೋಗದ ಸದಸ್ಯ ಕೆ.ಬಿ.ರೂಪಾನಾಯ್ಕ ಮಾತನಾಡಿ, ‘ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಆ ಶಾಲೆಗಳಲ್ಲಿ ಹಾಜರಿ ಪುಸ್ತಕದಲ್ಲಿರುವಷ್ಟು ಮಕ್ಕಳು ಭೌತಿಕವಾಗಿ ಇಲ್ಲದಿರುವುದನ್ನು ಗಮನಿಸಿದ್ದೇನೆ. ಮಕ್ಕಳ ಹಾಜರಾತಿ ಕೊರತೆಯಿಂದ ಶಾಲೆಗಳು ಸೊರಗುತ್ತಿವೆ.

ಪರಿಸ್ಥಿತಿ ಸುಧಾರಿಸಲು ಪ್ರತಿ ಶಾಲೆಗೆ ಆಂಗ್ಲ ಭಾಷಾ ಶಿಕ್ಷಕರನ್ನು ನೇಮಿಸಬೇಕು. ಪ್ರಯೋಗಾಲಯ, ಗ್ರಂಥಾಲಯ, ಆಟದ ಮೈದಾನ, ಕ್ರಾಫ್ಟ್, ಸಂಗೀತ ಮತ್ತು ದೈಹಿಕ ಶಿಕ್ಷಣ ವಿಭಾಗಕ್ಕೆ ಶಿಕ್ಷಕರನ್ನು ನಿಯೋಜಿಸಬೇಕು.

ಖಾಸಗಿ ಶಾಲೆಗಳಲ್ಲಿರುವಂತೆ ಶಾಲೆಗಳ ಪ್ರತಿ ಕೊಠಡಿಗೆ ಫ್ಯಾನ್, ಪ್ರತ್ಯೇಕ ಶೌಚಾಲಯ, ಕಾಂಪೌಂಡ್, ಗಣಕಯಂತ್ರಗಳನ್ನು ಪೂರೈಸಬೇಕು. ಮೂಲಸೌಲಭ್ಯಗಳು ಸಮರ್ಪಕವಾಗಿದ್ದರೆ ಮಕ್ಕಳ ಸಂಖ್ಯೆ ಹೆಚ್ಚುತ್ತದೆ, ಗುಣಮಟ್ಟದ ಶಿಕ್ಷಣವೂ ದೊರೆಯುತ್ತದೆ. ಫಲಿತಾಂಶವೂ ಸುಧಾರಿಸುತ್ತದೆ’ ಎಂದರು.

ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಪೂಜಾಶ್ರೀ, ಡಿ.ಅನ್ನಪೂರ್ಣ, ಒ. ನಯನಾ  ಹಾಗೂ ಎಸ್.ರಾಘವೇಂದ್ರ  ಅವರಿಗೆ ತಲಾ ₹ 10 ಸಾವಿರ ನಗದು ನೀಡಿ, ಶಾಲು ಹೊದಿಸಿ ಗೌರವಿಸಲಾಯಿತು.

‘ನಿಮ್ಮ ಮಕಳಂತೆ ಭಾವಿಸಿ’
ಶಿಕ್ಷಕರು ತಮ್ಮ ಮಕ್ಕಳಿಗೆ ಪಾಠ ಕಲಿಸುವಷ್ಟೇ ಆತ್ಮೀಯತೆಯಿಂದ ಸರ್ಕಾರಿ ಶಾಲೆಯ ಮಕ್ಕಳಿಗೂ ಶಿಕ್ಷಣ ನೀಡಬೇಕು. ಆ ಮೂಲಕ ಸಾಮಾನ್ಯ ಮಕ್ಕಳನ್ನು ಪ್ರತಿಭಾವಂತರನ್ನಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಸಲಹೆ ನೀಡಿದರು.

ಮೂಲ ಸೌಕರ್ಯಕ್ಕೆ ಅನುದಾನ
ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಯಡಿ, ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಮತ್ತು ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳಿಗೆ ಕುಡಿಯುವ ನೀರು, ಶೌಚಾಲಯ  ಹಾಗೂ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಿತೇಶ್ ಪಾಟೀಲ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT