ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಷ್ಠಿತ ಕಾಲೇಜು ಎಂಬ ಕನ್ನಡಿಯೊಳಗಿನ ಗಂಟು

ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುನ್ನತ ಅಂಕ ಪಡೆದ ವಿದ್ಯಾರ್ಥಿಗಳಿಗಷ್ಟೇ ಮಣೆ
Last Updated 25 ಮೇ 2017, 6:15 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಗಳು ಶೇ 84ರಷ್ಟು ಅಂಕ ಪಡೆದಿದ್ದಾಳೆ. ಯಾವ ಪತ್ರಿಷ್ಠಿತ ಕಾಲೇಜಿನಲ್ಲೂ ಸೀಟು ಸಿಗುತ್ತಿಲ್ಲ. ಸ್ವಲ್ಪ ಸಹಾಯ ಮಾಡ್ತೀರಾ?’ –ಪರೀಕ್ಷಾ ಫಲಿತಾಂಶ ಪ್ರಕಟವಾದ ನಂತರ ಹಲವು ಪೋಷಕರು ಹೀಗೆ ಅವರಿವರ ಬಳಿ ಸಹಾಯಕೋರಿ ಅಲವತ್ತುಕೊಳ್ಳುತ್ತಿದ್ದಾರೆ.

ಮಕ್ಕಳು ಪ್ರತಿಷ್ಠಿತ ಕಾಲೇಜಿನಲ್ಲಿ ಓದಿದರೆ ಮಾತ್ರ ಸುಂದರ ಭವಿಷ್ಯ ಕಟ್ಟಿಕೊಳ್ಳುತ್ತಾರೆ ಎಂಬ ವಿಶ್ವಾಸ ಪೋಷಕರ ಮನದಲ್ಲಿ ನೆಲೆಯೂರಿದೆ. ಅದಕ್ಕಾಗಿ ಫಲಿತಾಂಶ ಬಂದ ತಕ್ಷಣ ಅಂತಹ ಕಾಲೇಜುಗಳಲ್ಲಿ ಸೀಟು ಗಿಟ್ಟಿಸಲು ಪ್ರಭಾವಿಗಳ ಬಳಿ ಎಡತಾಕುತ್ತಾರೆ.

ಶೇ 95ರ ಸುತ್ತ ಖಾಸಗಿ ಕಾಲೇಜುಗಳ ಚಿತ್ತ: ಫಲಿತಾಂಶ ಪ್ರಕಟವಾದ ತಕ್ಷಣ ಈ ಪ್ರತಿಷ್ಠಿತ ಕಾಲೇಜುಗಳು ಶೇ 95ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಮನೆ ಬಾಗಿಲಿಗೇ ಎಡತಾಕುತ್ತವೆ. ಉಚಿತ ಶಿಕ್ಷಣ ನೀಡುವ ಭರವಸೆ ನೀಡುತ್ತವೆ.

ಪ್ರವೇಶ ಆರಂಭಕ್ಕೂ ಮೊದಲೇ ಸೀಟು ತುಂಬಿಕೊಳ್ಳುತ್ತವೆ. ಶೇ 95ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದರೆ ಮಾತ್ರ ಅರ್ಜಿ ಆಹ್ವಾನಿಸಿ ಮೆರಿಟ್‌ ಆಧಾರದ ಮೇಲೆ ಸೀಟು ತುಂಬಿಸಿಕೊಳ್ಳಲಾಗುತ್ತದೆ. ಶುಲ್ಕ ನಿಗದಿಯೂ ಅಂಕಗಳ ಆಧಾರದ ಮೇಲೆ ಅವಲಂಬಿತ ವಾಗಿರುತ್ತದೆ. ಹೆಚ್ಚು ಅಂಕ ಪಡೆದವರಿಗೆ ಕಡಿಮೆ ಶುಲ್ಕ, ಕಡಿಮೆ ಅಂಕ ಪಡೆದವರಿಗೆ ಹೆಚ್ಚು ಶುಲ್ಕ ನಿಗದಿ ಮಾಡಲಾಗುತ್ತದೆ.

‘ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ, ಪಿಯುನಲ್ಲಿ ಅತಿ ಹೆಚ್ಚು ಫಲಿತಾಂಶ ಪಡೆದಿದ್ದೇವೆ ಎಂದು ಪ್ರತಿಷ್ಠಿತ ಕಾಲೇಜುಗಳು ಬೀಗುತ್ತವೆ. ಎಲ್ಲ ಪ್ರತಿಷ್ಠಿತ ಕಾಲೇಜುಗಳ ಪ್ರವೇಶ ಭರ್ತಿಯಾದ ನಂತರ ತೃತೀಯ ದರ್ಜೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನೂ ಸೇರಿಸಿಕೊಂಡು ಸರ್ಕಾರಿ ಕಾಲೇಜುಗಳು ಉತ್ತಮ ಫಲಿತಾಂಶ ಪಡೆಯುತ್ತಿವೆ. ಇದು ನಿಜವಾದ ಸಾಧನೆ’ ಎನ್ನುವುದು ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರ ವಾದ.

ಅವಧಿ ಮುನ್ನ ಪ್ರವೇಶ ಭರ್ತಿ
ಈ ಬಾರಿಯ ಪ್ರತಿಷ್ಠಿತ ಕಾಲೇಜುಗಳು ಶೇ 98ರವರೆಗೆ ಫಲಿತಾಂಶ ಪಡೆದರೆ, ಸರ್ಕಾರಿ ಕಾಲೇಜುಗಳು ಶೇ 85ರವರೆಗೆ ಫಲಿತಾಂಶ ಪಡೆದಿವೆ. ಒಂದು ಖಾಸಗಿ ಕಾಲೇಜು ಶೂನ್ಯ ಫಲಿತಾಂಶ ಪಡೆದಿದೆ. ಎಲ್ಲ ಸರ್ಕಾರಿ ಕಾಲೇಜುಗಳೂ ಶೇ 20ಕ್ಕಿಂತ ಹೆಚ್ಚು ಫಲಿತಾಂಶ ಪಡೆದಿವೆ.

ಸೀಟು ಭರ್ತಿ; ಪ್ರವೇಶ ಸ್ಥಗಿತ
ಪಿಯು ಪ್ರವೇಶಕ್ಕೆ ಜೂನ್‌ 12ರವರೆಗೂ, ದಂಡ ಶುಲ್ಕ ಸಹಿತ ಪ್ರವೇಶಕ್ಕೆ ಜುಲೈ 5ರವರೆಗೂ ಕಾಲಾವಕಾಶವಿದೆ. ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಫಲಿತಾಂಶ ಪ್ರಕಟವಾದ ನಂತರ 7 ದಿನದ ಒಳಗೆ ಪ್ರವೇಶ ಪಡೆಯಬಹುದು. ಆದರೆ, ಬಹುತೇಕ ಖಾಸಗಿ ಕಾಲೇಜುಗಳು ಸೀಟು ಭರ್ತಿ ಮಾಡಿಕೊಂಡು ಪ್ರವೇಶ ಪ್ರಕ್ರಿಯೆ ಸ್ಥಗಿತಗೊಳಿಸಿವೆ.

ಸಿಬಿಎಸ್‌ಇ ವಿದ್ಯಾರ್ಥಿಗಳ ಪರದಾಟ
ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳು ಈಗಾಗಲೇ ಪಿಯುಗೆ ಪ್ರವೇಶ ಪಡೆಯುತ್ತಿದ್ದಾರೆ. ಆದರೆ, ಸಿಬಿಎಸ್‌ಸಿ,  ಐಸಿಎಸ್‌ಇ ಫಲಿತಾಂಶ ಬಂದಿಲ್ಲ. ಜಿಲ್ಲೆಯಲ್ಲಿ 12 ಸಿಬಿಎಸ್‌ಸಿ, 2 ಐಸಿಎಸ್‌ಇ ಪಠ್ಯಕ್ರಮದ ಶಾಲೆಗಳಿವೆ. ಆ ವಿದ್ಯಾರ್ಥಿಗಳು ಫಲಿತಾಂಶ ಎದುರು ನೋಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT