ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡವಾದ ಸಂಯೋಜನಾ ವರದಿಗೆ ಆಕ್ಷೇಪ

ಮೈಸೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ‘ಸಿಡಿಸಿ’ ಕಾರ್ಯವೈಖರಿಗೆ ಅಸಮಾಧಾನ
Last Updated 25 ಮೇ 2017, 6:24 IST
ಅಕ್ಷರ ಗಾತ್ರ

ಮೈಸೂರು: ಸಂಯೋಜನಾ ವರದಿ ಮಂಡನೆಯು ಎರಡು ತಿಂಗಳಷ್ಟು ತಡವಾಗಿರುವುದಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿ ಸದಸ್ಯರು ಕಾಲೇಜು ಅಭಿವೃದ್ಧಿ ಮಂಡಳಿ (ಸಿಡಿಸಿ) ನಿರ್ದೇಶಕ ಶ್ರೀಕಂಠಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು.

ವಿ.ವಿ ಕ್ರಾಫರ್ಡ್ ಭವನದಲ್ಲಿ ಬುಧವಾರ ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಸದಸ್ಯರಾದ ಆಯೇಷಾ ಷರೀಫ್ ಸೇರಿದಂತೆ ಹಲವು ಮಂದಿ ಮಂಡಳಿಯು ಕಾಲೇಜುಗಳಿಗೆ ಭೇಟಿ ನೀಡಿದ ಕ್ರಮದ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.

‘ಸಂಯೋಜನೆ ಮುಂದುವರಿಸುವ ಸಂಬಂಧ ಕಾಲೇಜುಗಳಿಗೆ ಭೇಟಿ ನೀಡುವ ಹಿಂದಿನ ದಿನವಷ್ಟೇ ನೋಟಿಸ್ ಬಂದಿರುತ್ತದೆ. ಹಲವು ಬಾರಿ ಸಂಬಂಧಪಟ್ಟ ವಿಷಯದ ಡೀನ್‌ಗಳಿಗೆ ಗೊತ್ತಾಗುವುದಿಲ್ಲ. ಅವರ ಜಾಗದಲ್ಲಿ ಬೇರೊಬ್ಬರನ್ನು ಕರೆದುಕೊಂಡು ಹೋಗಿ ಪರಿಶೀಲನೆ ಮಾಡಿ ಬರುತ್ತಾರೆ. ಈ ಕ್ರಮದ ಹಿಂದಿನ ರಹಸ್ಯ ಏನು’ ಎಂದು ಆಯೇಷಾ ಷರೀಫ್ ಪ್ರಶ್ನಿಸಿದರು.

ಮಾರ್ಚ್ ಅಂತ್ಯಕ್ಕೆ ಸಲ್ಲಿಸಬೇಕಾಗಿದ್ದ ವರದಿಯನ್ನು ಮೇ ಅಂತ್ಯದಲ್ಲಿ ಸಲ್ಲಿಸಲಾಗುತ್ತಿದೆ. ಇದರಿಂದ ಶೈಕ್ಷಣಿಕ ಕಾರ್ಯಗಳಿಗೆ ಹಿನ್ನಡೆ ಉಂಟಾಗುತ್ತಿದೆ. ಇದಕ್ಕೆ ಕಾರಣರಾದವರಿಗೆ ನೋಟಿಸ್ ನೀಡಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಆನ್‌ಲೈನ್‌ ಸಮಸ್ಯೆ: ಆನ್‌ಲೈನ್‌ನಲ್ಲಿ ಸಮಸ್ಯೆ ಇದ್ದುದ್ದರಿಂದ ಸಂಯೋಜನೆ ಮುಂದುವರಿಕೆ ಅರ್ಜಿ ಸಲ್ಲಿಕೆ ನಿಧಾನವಾಯಿತು. ಇದರಿಂದ ವರದಿ ಸಲ್ಲಿಕೆ ತಡವಾಗಿದೆ. ಕಾಲೇಜುಗಳಿಗೆ ಪರಿಶೀಲನೆಗಾಗಿ ತೆರಳುವ ಕ್ರಮದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಶ್ರೀಕಂಠಸ್ವಾಮಿ ಸ್ಪಷ್ಟನೆ ನೀಡಿದರು.

ಪ್ರೊ.ಲಿಂಗರಾಜಗಾಂಧಿ ಮಾತನಾಡಿ, ‘ಸಂಯೋಜನೆ ಮುಂದುವರಿಕೆಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಯನ್ನು ಆರಂಭಿಸಿದ ಮೊದಲ ವಿ.ವಿ ನಮ್ಮದು. ಹಿಂದಿನ ಬಾರಿ ಈ ರೀತಿ ಸಮಸ್ಯೆಯಾದಾಗ ಆನ್‌ಲೈನ್‌ ಹಾಗೂ ಆಫ್‌ಲೈನ್‌ ಎರಡರಲ್ಲೂ ಅರ್ಜಿ ಸ್ವೀಕರಿಸಲಾಗಿತ್ತು’ ಎಂದು ಹೇಳಿದರು.

ಮುಂದೆ ಹೀಗಾಗಬಾರದು: ಇದಕ್ಕೆ ಪ್ರತಿಕ್ರಿಯಿಸಿದ ಹಂಗಾಮಿ ಕುಲಪತಿ ದಯಾನಂದ ಮಾನೆ, ‘ಈ ಬಾರಿ ತಡವಾದಂತೆ ಮುಂದಿನ ವರ್ಷ ತಡವಾದರೆ ಸಹಿಸುವುದಿಲ್ಲ. ಕಾಲೇಜುಗಳಿಗೆ ಪರಿಶೀಲನೆ ಹೋಗುವಾಗ ಆಯಾ ವಿಷಯಕ್ಕೆ ಸಂಬಂಧಿಸಿದ ಡೀನ್ ಇರಬೇಕು. ಒಂದು ವೇಳೆ ಅವರು ಲಭ್ಯವಿಲ್ಲ ಎಂದಾದಲ್ಲಿ ಮಾತ್ರ ಆಯಾ ವಿಷಯದ ಹಿರಿಯ ಪ್ರಾಧ್ಯಾಪಕರನ್ನು ಕರೆದುಕೊಂಡು ಹೋಗಬೇಕು ಎಂದು ಸೂಚಿಸಿದರು.

ವಿಷಯ ಬೋಧಕರು: ಸಾರ್ವಜನಿಕ ಆಡಳಿತ ವಿಷಯ ಕೇವಲ ಮೈಸೂರು ವಿ.ವಿಯಲ್ಲಿ ಮಾತ್ರ ಇದೆ. ಇಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಇದರಿಂದ ಪದವಿ ಹಾಗೂ ಸ್ನಾತಕೋತ್ತರ ವಿಭಾಗಗಳಲ್ಲಿ ಸಾರ್ವಜನಿಕ ಆಡಳಿತ ವಿಷಯದಲ್ಲಿ ಎಂಎ ಪದವಿ ಪಡೆದವರೇ ಬೋಧಿಸಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಸಭೆ ಒಪ್ಪಿಗೆ ಸೂಚಿಸಿತು.

ಬಿ.ಎ, ಬಿಎಸ್ಸಿ ಕೋರ್ಸ್‌ಗಳಿಗೆ ಏಕಪ್ರಕಾರವಾದ ಹಿಂದಿ ಪಠ್ಯಕ್ರಮವನ್ನು 2018–19ನೇ ಸಾಲಿನಿಂದ ಜಾರಿಗೊಳಿಸಲು ನಿರ್ಧರಿಸಲಾಯಿತು. ಮಹಾಜನ ಎಜುಕೇಷನ್ ಬೋರ್ಡ್‌ಗೆ ಕೈಗಾರಿಕಾ ರಸಾಯನಶಾಸ್ತ್ರದಲ್ಲಿ ಎಂಎಸ್ಸಿ ವಿಶೇಷ ಕೋರ್ಸ್‌ಗೆ ಅನುಮತಿ ನೀಡಲಾಯಿತು.

ಅತಿಥಿ ಉಪನ್ಯಾಸಕರ ನೇಮಕ್ಕೆ ಸಂದರ್ಶನ: ಈ ಸಾಲಿನಿಂದ ಅತಿಥಿ ಉಪನ್ಯಾಸಕರ ನೇಮಕಾತಿಗೆ ರೋಸ್ಟರ್‌ ಪದ್ಧತಿ ಅನುಸಾರ ಹೊಸ ಸಂದರ್ಶನ ನಡೆಸಬೇಕು. ಇದರಲ್ಲಿ ಪಿಎಚ್‌.ಡಿ, ಎಂ.ಫಿಎಲ್ ಪದವೀಧರರಿಗೆ ಆದ್ಯತೆ ನೀಡಬೇಕು ಎಂದು ದಯಾನಂದ ಮಾನೆ ಸೂಚಿಸಿದರು. ಮಂಡ್ಯದ ಕಾಲೇಜೊಂದರಲ್ಲಿನ ಅತಿಥಿ ಉಪನ್ಯಾಸಕರೆಲ್ಲ ಒಂದೇ ಜಾತಿಗೆ ಸೇರಿದವರಾಗಿದ್ದರು. ಈ ರೀತಿ ಆಗಬಾರದು ಎಂದು ಹೇಳಿದರು.

ಸಿಗದ ಹೆಚ್ಚುವರಿ ಪ್ರವೇಶ...
ಮೈಸೂರು:
‘ಸ್ನಾತಕೋತ್ತರ ಪದವಿಯಲ್ಲಿ ಹೆಚ್ಚುವರಿ ಪ್ರವೇಶಾತಿಗೆ ಸಮಿತಿ ನಿರಾಕರಿಸಿರುವ 7 ಕಾಲೇಜುಗಳ ಪೈಕಿ 6 ಸರ್ಕಾರಿ ಕಾಲೇಜುಗಳು.  ಸರ್ಕಾರಿ ಕಾಲೇಜಿನಲ್ಲಿ ಕಡಿಮೆ ಶುಲ್ಕದಲ್ಲಿ ಬಡವರು ಕಲಿಯಬಹುದು. ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಕೇಳಿದ್ದು ಕೇವಲ 5 ಹೆಚ್ಚುವರಿ ಪ್ರವೇಶಾತಿ. ಇದಕ್ಕೂ ಆಗಲ್ಲ ಎಂದರೆ ಹೇಗೆ’ ಎಂದು ಪ್ರೊ.ಲಿಂಗರಾಜಗಾಂಧಿ ಪ್ರಶ್ನಿಸಿದರು.

ಮುಂದಿನ ವರ್ಷ ಹೀಗಾಗದಂತೆ ಎಚ್ಚರ ವಹಿಸಬೇಕು ಎಂದು ಕಾಲೇಜು ಅಭಿವೃದ್ಧಿ ಮಂಡಳಿಗೆ ಪ್ರೊ.ದಯಾನಂದ ಮಾನೆ ಸೂಚಿಸಿದರು.

ಆಯೋಗ ಭೇಟಿ
‘ವಿಶ್ವವಿದ್ಯಾನಿಲಯ ಪುನರ್‌ ಪರಿಶೀಲನಾ ಆಯೋಗವು ವಿಶ್ರಾಂತ ಕುಲಪತಿ ಎನ್.ಆರ್.ಶೆಟ್ಟಿ ನೇತೃತ್ವ ದಲ್ಲಿ ಮೇ 26 ಮತ್ತು 27ರಂದು ಮೈಸೂರು ವಿ.ವಿಗೆ ಭೇಟಿ ನೀಡಲಿದೆ. ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳ ಜತೆಗೆ ಸಂವಾದ ನಡೆಸಲಿದೆ.

ಪಿಎಂಇಬಿ ನಿರ್ದೇಶಕ ಲಿಂಗರಾಜ ಗಾಂಧಿ ಆಯೋಗದ ಸದಸ್ಯರಿಗೆ ಮಾಹಿತಿ ನೀಡಲಿದ್ದಾರೆ. ರಾಜ್ಯಪಾಲರು ವಿ.ವಿಗೆ ಹೊಸ ಕುಲ ಪತಿ ನೇಮಕ ಮಾಡುವ ಸಂಬಂಧ ಜೂನ್ 2ರಂದು ಚರ್ಚಿ ಸಲು ನನ್ನನ್ನು ಆಹ್ವಾನಿಸಿದ್ದಾರೆ’ ಎಂದು ದಯಾನಂದ ಮಾನೆ ಹೇಳಿದರು.

ಹೊಸ ಕಾಲೇಜು
ಬಿಎಡ್‌: ರೀಜನಲ್ ಇನ್‌ಸ್ಟಿ ಟ್ಯೂಟ್ ಆಫ್ ಎಜುಕೇಷನ್, ಮೈಸೂರು
ಹೊಸ ಎಂಪಿಎಡ್‌ ಕಾಲೇಜು: ಶಂಭುಲಿಂಗೇಶ್ವರ ಕಾಲೇಜ್ ಆಫ್ ಫಿಸಿಕಲ್ ಎಜುಕೇಷನ್, ಪಾಂಡವಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT