ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾ ವಿಷಯಗಳ ಬೋಧನಾ ಅವಧಿ ಕಡಿತ

ಗುಲಬರ್ಗಾ ವಿಶ್ವವಿದ್ಯಾಲಯದ ಕ್ರಮಕ್ಕೆ ಪ್ರಾಧ್ಯಾಪಕರ ವ್ಯಾಪಕ ವಿರೋಧ
Last Updated 25 ಮೇ 2017, 6:33 IST
ಅಕ್ಷರ ಗಾತ್ರ

ಕಲಬುರ್ಗಿ: ಗುಲಬರ್ಗಾ ವಿಶ್ವವಿದ್ಯಾಲ­ಯವು 2017–18ರ ಶೈಕ್ಷಣಿಕ ವರ್ಷ­ದಿಂದ ಸ್ನಾತಕ ಹಂತದಲ್ಲಿ ಆಯ್ಕೆ ಆಧಾರಿತ ಗುಣಾಂಕ ಪದ್ಧತಿ (ಸಿಬಿಸಿಎಸ್‌)ಯನ್ನು ಜಾರಿಗೆ ತರಲು ಮುಂದಾಗಿದೆ. ಇದು ಒಂದೆಡೆ ಸಂತಸ ತಂದರೆ, ಇನ್ನೊಂದೆಡೆ ಅಧ್ಯಾಪಕರು ಕೆಲಸ ಕಳೆದುಕೊಳ್ಳುವ ಭೀತಿ ಹುಟ್ಟುಹಾಕಿದೆ.

‘ದೇಶದ ಎಲ್ಲ ವಿಶ್ವವಿದ್ಯಾಲಯಗಳ ಪದವಿ ಶಿಕ್ಷಣದಲ್ಲಿ ಸಿಬಿಸಿಎಸ್‌ ಅನುಷ್ಠಾನಗೊಳಿಸಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಕಲಿಕೆಯ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಹೆಚ್ಚಿನ ಸ್ವಾತಂತ್ರ್ಯ ನೀಡಿದಂತಾಗುತ್ತದೆ’ ಎಂದು ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ)ವು ಸೂಚಿಸಿದ ಕಾರಣ ಗುಲಬರ್ಗಾ ವಿಶ್ವವಿದ್ಯಾಲಯವು ಈ ಪದ್ಧತಿಯನ್ನು ಅಳವಡಿಸಿಕೊಳ್ಳಲು ಮುಂದಾಗಿದೆ.

ಏನಿದು ಸಿಬಿಸಿಎಸ್‌?: ವಿದ್ಯಾರ್ಥಿಯು ತಾನು ಆಯ್ಕೆ ಮಾಡಿಕೊಂಡ ವಿಷಯ ಗಳ ಜತೆಗೆ ಇತರೆ ವಿಭಾಗದ ಒಂದು ವಿಷಯವನ್ನು ಅಧ್ಯಯನ ಮಾಡಲು ಇದರಲ್ಲಿ ಅವಕಾಶವಿದೆ. ಇದನ್ನು ಬಹುಶಿಸ್ತೀಯ ಅಧ್ಯಯನ ಎಂದು ಹೇಳಲಾಗುತ್ತದೆ. ಕಲಾ ವಿಭಾಗದ ವಿದ್ಯಾರ್ಥಿಯು ವಾಣಿಜ್ಯ ಅಥವಾ ವಿಜ್ಞಾನ ವಿಭಾಗದ ಒಂದು ವಿಷಯ ವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ನಿರಂತರ ಮೌಲ್ಯಮಾಪನ ಮೂಲಕ ಅಂಕ ನೀಡಲಾಗುತ್ತದೆ. ಈ ಪದ್ಧತಿ ಅಳವಡಿಸಿಕೊಂಡಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಯುಜಿಸಿ ಹೇಳಿದೆ.

ಪ್ರಾಧ್ಯಾಪಕರಿಗೆ ಹೇಗೆ ತೊಂದರೆ?: ‘ಸಿಬಿಸಿಎಸ್‌ ಯೋಜನೆಯ ಅನುಸಾರ ಸ್ನಾತಕ ಹಂತದ ಎಲ್ಲಾ ತರಗತಿಗಳ ಭಾಷಾ ವಿಷಯಗಳ ಬೋಧನಾ ಅವಧಿ/ ಅಧ್ಯಾಪನ ಕಾರ್ಯಭಾರವನ್ನು ವಾರಕ್ಕೆ ಎರಡು ಗಂಟೆ ಕಡಿತಗೊಳಿಸಲಾಗುತ್ತಿದೆ. ಈಗಿರುವ ವ್ಯವಸ್ಥೆಯಲ್ಲಿ ಬಿ.ಎ, ಬಿ.ಎಸ್ಸಿ, ಬಿ.ಕಾಂ ಕೋರ್ಸ್‌ಗಳಲ್ಲಿ ನಾಲ್ಕನೇ ಸೆಮಿಸ್ಟರ್‌ವರೆಗೆ ಭಾಷಾ ವಿಷಯದ ಎರಡು ಪತ್ರಿಕೆಗಳಿವೆ.

ಸಿಬಿಸಿಎಸ್‌ ಜಾರಿಗೆ ತಂದಲ್ಲಿ ಇದನ್ನು ಎರಡು ಸೆಮಿಸ್ಟರ್‌ ಗಳಿಗೆ ಇಳಿಸಲಾಗುವುದು, ಅಲ್ಲದೆ ಇಂಗ್ಲಿಷ್ ಒಂದು ವಿಷಯವನ್ನು ಮಾತ್ರ ಕಡ್ಡಾಯಗೊಳಿಸಿ, ಉಳಿದ ವಿಷಯ ಗಳನ್ನು ಕೈಬಿಡಲಾಗುವುದು ಎಂದು ವಿಶ್ವವಿದ್ಯಾಲಯ ಹೇಳುತ್ತಿದೆ. ಹೀಗಾದಲ್ಲಿ ಭಾಷಾ ಅಧ್ಯಾಪಕರ ವೃತ್ತಿಗೆ ಸಂಚಕಾರ ತಂದಂತಾಗುತ್ತದೆ’ ಎಂದು ಪ್ರಾಧ್ಯಾಪ ಕರು ಅಳಲು ತೋಡಿಕೊಳ್ಳುತ್ತಾರೆ.

‘ಬಿಸಿಎ, ಬಿಬಿಎಂ, ಬಿಎಸ್‌ಡಬ್ಲ್ಯೂ, ಬಿ.ಮ್ಯೂಸಿಕ್, ಬಿ.ಡ್ರಾಯಿಂಗ್, ಪೇಂಟಿಂಗ್ ಕೋರ್ಸ್‌ಗಳಲ್ಲೂ ನಾಲ್ಕನೇ ಸೆಮಿಸ್ಟರ್‌ವರೆಗೆ ಭಾಷಾ ವಿಷಯದ ಎರಡು ಪತ್ರಿಕೆಗಳನ್ನು ನಿಗದಿಪಡಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಇದರಿಂದ ಇನ್ನಷ್ಟು ಉದ್ಯೋಗ ಸೃಷ್ಟಿಸಬ ಹುದಾಗಿದೆ.

ಈಗಿರುವ ಬೋಧನಾ ಅವಧಿ ಕಡಿತಗೊಳಿಸಿದರೆ ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ. ಒಂದೆಡೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉದ್ಯೋಗ ಸೃಷ್ಟಿಯ ಬಗ್ಗೆ ಹೇಳುತ್ತಿವೆ. ಆದರೆ ಸಿಬಿಸಿಎಸ್‌ ಜಾರಿಯಿಂದ ಪ್ರಾಧ್ಯಾಪಕರು ತೊಂದರೆ ಅನುಭವಿಸು ವಂತಾಗುತ್ತದೆ’ ಎಂದು ಹೆಸರು ಹೇಳಲು ಇಚ್ಛಿಸದ ಪ್ರಾಧ್ಯಾಪಕರೊಬ್ಬರು ಹೇಳುತ್ತಾರೆ.

4 ಗಂಟೆ ಬೋಧನೆಗೆ ಅವಕಾಶ: ಒತ್ತಾಯ
‘ವಿಶ್ವವಿದ್ಯಾಲಯದ ಸ್ನಾತಕ ಹಂತದ ಎಲ್ಲ ಕೋರ್ಸ್‌ಗಳಲ್ಲಿ ಭಾಷಾ ವಿಷಯಗಳ ಬೋಧನಾ ಅವಧಿಯನ್ನು ಯಾವುದೇ ಕಾರಣಕ್ಕೂ ನಾಲ್ಕು ಗಂಟೆಗಳಿಗಿಂತ ಕಡಿಮೆ ಮಾಡಬಾರದು. ಈಗಿರುವ ಪದ್ಧತಿಯಂತೆ ವಾರಕ್ಕೆ ಕನಿಷ್ಠ ನಾಲ್ಕು ಗಂಟೆಗಳ ಅಧ್ಯಾಪನ ಕಾರ್ಯಭಾರ ಮುಂದುವರಿಸಬೇಕು. ಪ್ರಾದೇಶಿಕ ಭಾಷೆಗಳಾದ ಕನ್ನಡ, ಹಿಂದಿ, ಉರ್ದು, ಮರಾಠಿ ಸೇರಿದಂತೆ ಇತರೆ ಭಾಷೆಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಪ್ರಾಧ್ಯಾಪಕರು ಒತ್ತಾಯಿಸಿದ್ದಾರೆ.

*
ಸ್ನಾತಕ ಹಂತದಲ್ಲಿ ‘ಸಿಬಿಸಿಎಸ್‌’ ಅಳವಡಿಕೆ ಸ್ವಾಗತಾರ್ಹ. ಆದರೆ ಭಾಷಾ ವಿಷಯಗಳ ಬೋಧನಾ ಅವಧಿ/ಅಧ್ಯಾಪನ ಕಾರ್ಯಭಾರಕ್ಕೆ ಧಕ್ಕೆಯಾಗದಂತೆ ಜಾರಿಗೊಳಿಸಬೇಕು.
-ಡಾ.ಕಲ್ಯಾಣರಾವ ಪಾಟೀಲ,
ಅಧ್ಯಕ್ಷ, ಗುಲಬರ್ಗಾ ವಿ.ವಿ ಕಾಲೇಜು ಕನ್ನಡ ಶಿಕ್ಷಕರ ಸಂಘ

*
ಪದವಿ ಹಂತದಲ್ಲಿ ನಾಲ್ಕು ಸೆಮಿಸ್ಟರ್‌ವರೆಗೆ ಎರಡು ಭಾಷೆಗಳ ಅಧ್ಯಯನಕ್ಕೆ ಅವಕಾಶ ಇರಬೇಕು. ಭಾಷೆಗಳ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ಮುಕ್ತವಾಗಿರಿಸಬೇಕು.
-ಡಾ.ವಿಕ್ರಮ್ ವಿಸಾಜಿ,
ಸಹಾಯಕ ಪ್ರಾಧ್ಯಾಪಕ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT