ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೂಪಾಕ್ಷಯ್ಯರದು ವಿಶಿಷ್ಟ ಸಂಗೀತ ಪರಂಪರೆ

ಹಿರಿಯ ಸಂಗೀತಗಾರ ಎಸ್.ವಠಾರ ಅಭಿಮತ
Last Updated 25 ಮೇ 2017, 6:34 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಸಂಗೀತಗಾರರಾಗಿದ್ದ ದಿವಂಗತ ವಿರೂಪಾಕ್ಷಯ್ಯನ ಅವರು ವೇದಮಂತ್ರಗಳಿಗೆ ಸಂಗೀತ ಅಳವಡಿಸಿ ರುದ್ರಪೂಜೆ ನಡೆಸುವ ಮೂಲಕ ವಿಶಿಷ್ಟವಾದ ಸಂಗೀತ ಪರಂಪರೆಯನ್ನು ಪೋಷಿಸಿದರು’ ಎಂದು ಸಂಗೀತಗಾರ ಎ.ಎಸ್.ವಠಾರ ಹೇಳಿದರು.

ತಾಲ್ಲೂಕಿನ ಗೋರಟಾ(ಬಿ) ಗ್ರಾಮದಲ್ಲಿ ಸಂಗೀತ ರುದ್ರೇಶ್ವರ ಪ್ರತಿಷ್ಠಾನದಿಂದ ಬುಧವಾರ ಆಯೋಜಿಸಿದ್ದ ಸಂಗೀತಗಾರ ದಿವಂಗತ ವಿರೂಪಾಕ್ಷಯ್ಯ ಸ್ವಾಮಿ ಅವರ ಪುಣ್ಯಸ್ಮರಣೆ ಅಂಗವಾಗಿ ನಡೆದ ಸಂಗೀತ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಹನ್ನೊಂದನೇ ಶತಮಾನದಲ್ಲಿ ಗ್ರಾಮದಲ್ಲಿ ಸಂಗೀತ ವಿಶ್ವವಿದ್ಯಾಲಯ ಇತ್ತು. ಸಂಗೀತ ರುದ್ರೇಶ್ವರರಿಗೆ ನಿತ್ಯವೂ ರುದ್ರಪೂಜೆ ನಡೆಯುತ್ತಿತ್ತು. ಆ ಪದ್ಧತಿಗೆ ವಿರೂಪಾಕ್ಷಯ್ಯ ಮರುಜೀವ ನೀಡಿದರು.

ಅವರ ಮಕ್ಕಳು ಈಚೆಗೆ ಸಂಗೀತ ರುದ್ರೇಶ್ವರ ದೇವಸ್ಥಾನ ನಿರ್ಮಿಸಿದ್ದಾರೆ. ಈ ಸ್ಥಳ ಸಂಗೀತಗಾರರ ಪ್ರೇರಣಾ ಸ್ಥಳವನ್ನಾಗಿ ರೂಪಿಸಿದ್ದಾರೆ. ಸಂಗೀತ ರುದ್ರೇಶ್ವರರು ಸಂಗೀತಗಾರರಿಗೆ ಕುಲದೇವರು ಇದ್ದಂತೆ. ಇಲ್ಲಿ ಮೈಸೂರಿನಲ್ಲಿರುವ ಗಂಗೂಬಾಯಿ ಹಾನಗಲ್‌ ಸಂಗೀತ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಪ್ರಾದೇಶಿಕ ಸಂಗೀತ ಅಧ್ಯಯನ ಕೇಂದ್ರ ಆರಂಭ ಆಗುತ್ತಿರುವುದು ಕೂಡ ಸಂತಸದ ಸಂಗತಿ’ ಎಂದರು.

ನೇತೃತ್ವ ವಹಿಸಿದ್ದ ಬೆಮಳಖೇಡ ಡಾ.ರಾಜಶೇಖರ ಸ್ವಾಮೀಜಿ ಮಾತನಾಡಿ, ‘ಪ್ರಾದೇಶಿಕ ಸಂಗೀತ ಅಧ್ಯಯನ ಕೇಂದ್ರಕ್ಕೆ ಜಿಲ್ಲಾಡಳಿತ ಜಮೀನು ಒದಗಿಸಬೇಕು. ಕೇಂದ್ರಕ್ಕೆ ವಿಶ್ವವಿದ್ಯಾಲಯದ ಅನುಮತಿ ದೊರೆತು ಅನೇಕ ದಿನಗಳಾದರೂ ಜಾಗವಿಲ್ಲದೆ ಕಾರ್ಯಚಟುವಟಿಕೆ ನಡೆಯುತ್ತಿಲ್ಲ. ಸಂಗೀತ ರುದ್ರೇಶ್ವರ ದೇವಸ್ಥಾನವನ್ನು ಇನ್ನಷ್ಟು ಸುಂದರವಾಗಿ ನಿರ್ಮಿಸಲಾಗುವುದು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ ಪಾಟೀಲ, ಮಲ್ಲಪ್ಪ ಧಬಾಲೆ, ವೀರಣ್ಣ ಕಾರಬಾರಿ, ನಿವೃತ್ತ ಶಿಕ್ಷಣಾಧಿಕಾರಿ ಬಸವರಾಜ ಸ್ವಾಮಿ ಮಾತನಾಡಿದರು. ಎ.ಎಸ್.ವಠಾರ ಅವರಿಗೆ ಪಂಡಿತ್‌ ವಿರೂಪಾಕ್ಷ  ಸಮ್ಮಾನ್ ರಾಷ್ಟ್ರೀಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಅಲ್ಲದೆ ಈಚೆಗೆ ಪಿಎಚ್.ಡಿ. ಪದವಿ ಪಡೆದ ಸಂಗೀತಗಾರ ಸಿದ್ರಾಮಯ್ಯ ಅವರನ್ನು ಸನ್ಮಾನಿಸಲಾಯಿತು.

ಕರುಣಾದೇವಿ ಮಾತಾ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಶಿವರಾಜ ನರಶೆಟ್ಟಿ, ಹಿರಿಯ ಮುಖಂಡ ಕೇಶಪ್ಪ ಬಿರಾದಾರ, ಸಂಜೀವ ಗಾಯಕವಾಡ, ಪ್ರದೀಪ ವಾತಡೆ, ಸೋಮನಾಥ ಪಾಟೀಲ, ರುದ್ರೇಶ್ವರ, ರೇವಪ್ಪ ಮುದ್ದಾ ಪಾಲ್ಗೊಂಡಿದ್ದರು.

ನಂತರ ನಡೆದ ಸಂಗೀತ ಸಮ್ಮೇಳನದಲ್ಲಿ ಎ.ಎಸ್.ವಠಾರ, ಸಿದ್ರಾಮಯ್ಯ ಸ್ವಾಮಿ, ರಾಜಕುಮಾರ ಮದಕಟ್ಟಿ, ಜನಾರ್ದನ ವಾಘಮಾರೆ ಅವರಿಂದ ಸಂಗೀತ ಪ್ರಸ್ತುತಪಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT