ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಬಸವ ಜಯಂತಿ ಆಚರಣೆಗೆ ಸಿದ್ಧತೆ

ಲಿಂಗಾಯತ ಮುಖಂಡರಲ್ಲಿ ಭಿನ್ನ ನಿಲುವು, ಎರಡು ಬಣಗಳು ಸೃಷ್ಟಿ
Last Updated 25 ಮೇ 2017, 6:35 IST
ಅಕ್ಷರ ಗಾತ್ರ

ಔರಾದ್:  ಬಸವ ಜಯಂತಿ ಆಚರಣೆ ವಿಷಯದಲ್ಲಿ ಈ ಸಲ ಇಲ್ಲಿನ ಲಿಂಗಾಯತ ಮುಖಂಡರಲ್ಲಿ ಒಮ್ಮತ ಮೂಡದೆ ಭಿನ್ನ ನಿಲುವು ವ್ಯಕ್ತವಾಗಿದೆ.
ಕಳೆದ ಬಾರಿ ಶಾಸಕ ಪ್ರಭು ಚವಾಣ್ ಅವರನ್ನು ದೂರ ಇಟ್ಟು ಬಸವ ಜಯಂತಿ ಆಚರಿಸಲಾಗಿತ್ತು. ಆದರೆ ಈ ಬಾರಿ ಶಾಸಕರನ್ನು ಕರೆದು ಬಸವ ಜಯಂತಿ ಆಚರಿಸಲು ಒಂದು ಗುಂಪು ಒಪ್ಪಿದರೆ, ಮತ್ತೊಂದು ಗುಂಪು ಅದಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣ ಎರಡೂ ಗುಂಪುಗಳು ಪ್ರತ್ಯೇಕವಾಗಿ ಬಸವ ಜಯಂತಿ ಆಚರಿಸಲು ತೀರ್ಮಾನಿಸಿವೆ.

ಎರಡು ಬಣಗಳ ಈ ನಿರ್ಧಾರದಿಂದ ಬಸವ ಅಭಿಮಾನಿಗಳು ಹಾಗೂ ಲಿಂಗಾಯತ ಸಮಾಜದ ಜನರು ಗೊಂದಲಕ್ಕೀಡಾಗಿದ್ದಾರೆ. ಬಸವ ಜಯಂತಿ ಉತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಕಲ್ಲಪ್ಪ ಉಪ್ಪೆ ಮುಂದಾಳತ್ವದಲ್ಲಿ ಇದೇ 27ರಂದು ಸಂಜೆ 7 ಗಂಟೆಗೆ ಪಟ್ಟಣದಲ್ಲಿ ಬಸವ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಡಾ. ಉಪ್ಪೆ ಅವರು, ಕಾರ್ಯಕ್ರಮದಲ್ಲಿ ಶಾಸಕ ಪ್ರಭು ಚವಾಣ್ ಅವರು ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಉದ್ಘಾಟಿಸಲಿದ್ದು, ವಿಧಾನ ಪರಿಷತ್‌ ಸದಸ್ಯರಾದ ರಘುನಾಥರಾವ ಮಲ್ಕಾಪುರೆ, ಅಮರನಾಥ ಪಾಟೀಲ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಡಾ.ಶೈಲೇಂದ್ರ ಬೆಲ್ದಾಳೆ ಭಾಗವಹಿಸುವರು.

ಯಾವುದೇ ಜಾತಿ ಭೇದ ಇಲ್ಲದೆ ವಿವಿಧ ಸಮುದಾಯ ಮುಖಂಡರು, ಮಠಾಧೀಶರನ್ನು ಆಹ್ವಾನಿಸಿ ಕಾರ್ಯಕ್ರಮ ಆಯೋಜಿಸಲಾಗಿದೆ.  ಈ ಕಾರ್ಯಕ್ರಮದಲ್ಲಿ ಸುಮಾರು 15 ಸಾವಿರ ಜನ ಸೇರಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಬುಧವಾರ ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿದ ಬಸವ ಜಯಂತಿ ಉತ್ಸವದ ಸ್ವಾಗತ ಸಮಿತಿ(ಮತ್ತೊಂದು ಬಣ) ಅಧ್ಯಕ್ಷ ಪ್ರಕಾಶ ಘುಳೆ, ನಾವು ಕಳೆದ ವರ್ಷದಂತೆ ಈ ವರ್ಷವೂ ಬಸವ ಜಯಂತಿ ಆಚರಿಸುತ್ತಿದ್ದೇವೆ. ಬಸವ ಜಯಂತಿ ಮೂಲಕ ಲಿಂಗಾಯತ ಸಮಾಜ ಒಂಡೆಡೆ ಸೇರುವ ಉದ್ದೇಶದಿಂದ ಬೇರೆ ಸಮಾಜದವರನ್ನು ಆಹ್ವಾನಿಸಿಲ್ಲ. ಈ ಕಾರಣದಿಂದಾಗಿ ಶಾಸಕರನ್ನು ಕರೆದಿಲ್ಲ ಎಂದು ಘುಳೆ ಸ್ಪಷ್ಟಪಡಿಸಿದರು.

ಇದೇ 28ರಂದು ಸಂಜೆ 7 ಗಂಟೆಗೆ ಬಸವ ಜಯಂತಿ ಬಹಿರಂಗ ಸಭೆ ನಡೆಯಲಿದೆ. ಸಂಸದ ಭಗವಂತ ಖೂಬಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಭಾಲ್ಕಿ ಬಸವಲಿಂಗ ಪಟ್ಟದ್ದೇರುವ ಸಾನಿಧ್ಯ ವಹಿಸುವರು ಎಂದು ಅವರು ಹೇಳಿದರು.

‘ನಾವು ಒಂದು ತಿಂಗಳ ಹಿಂದೆಯೇ ಕಾರ್ಯಕ್ರಮದ ದಿನ ನಿಗದಿ ಮಾಡಿದ್ದೇವೆ. ನಂತರ ಕೆಲವರು ಸಮಾಜದಲ್ಲಿ ವಿನಾ ಕಾರಣ ಗೊಂದಲ ಮೂಡಿಸುವ ಸಲುವಾಗಿ ಪ್ರತ್ಯೇಕ ಬಸವ ಜಯಂತಿ ಆಚರಿಸುತ್ತಿದ್ದಾರೆ ಎಂದು ಪ್ರಕಾಶ ಘುಳೆ ಬಣದ ಶರಣಪ್ಪ ಪಂಚಾಕ್ಷರಿ ಅಸಮಾಧಾನ ವ್ಯಕ್ತಪಡಿಸಿದರು.

*
ಎರಡೆರಡು ಬಸವ ಜಯಂತಿ ಆಚರಣೆ ಮಾಡುವುದು ಶುದ್ಧ ತಪ್ಪು. ಇದು ಸಮಾಜ ಒಡೆಯುವ ಕೆಲಸ. ಈ ಎರಡೂ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಳ್ಳುವುದಿಲ್ಲ.
-ಚಂದ್ರಪ್ಪ ಪಾಟೀಲ,
ಲಿಂಗಾಯತ ಸಮಾಜದ ಹಿರಿಯ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT