ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನರ್ವಸತಿ ಕ್ಯಾಂಪ್‌ಗಳಲ್ಲಿ ಗರಿಗೆದರಿದ ಕನಸು

ಬಂಗಾಲಿಗಳಿಗೆ ಮೀಸಲಾತಿ ಭಾಗ್ಯ?
Last Updated 25 ಮೇ 2017, 6:49 IST
ಅಕ್ಷರ ಗಾತ್ರ

ಸಿಂಧನೂರು: ಬಾಂಗ್ಲಾದೇಶದಿಂದ ನಿರಾಶ್ರಿತರಾಗಿ ಭಾರತಕ್ಕೆ ಬಂದ ಬಂಗಾಲಿಗಳು  40 ವರ್ಷಗಳಿಂದ ಪೌರತ್ವ ಮತ್ತು ಸಂವಿಧಾನಬದ್ಧವಾಗಿ ಸಿಗಬೇಕಾದ ಪರಿಶಿಷ್ಟ ಜಾತಿ ಸೌಲಭ್ಯಕ್ಕಾಗಿ ಎದುರು ನೋಡುತ್ತಿದ್ದಾರೆ.

ಈಚೆಗೆ ರಾಜ್ಯ ಸರ್ಕಾರ ನಮಶೂದ್ರ ಜನಾಂಗಕ್ಕೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವ ಕಾರಣ ತಮಗೆ ಮೀಸಲಾತಿಯ ಭಾಗ್ಯ ಸಿಗುವುದೇ ಎಂಬ ಭರವಸೆಯಲಿದ್ದಾರೆ.

1969 ರಲ್ಲಿ ಬಾಂಗ್ಲಾ ದೇಶದಲ್ಲಿ ನಡೆದ ಜನಾಂಗೀಯ ಘರ್ಷಣೆಯಿಂದ ನಿರಾಶ್ರಿತರಾದ ಬಂಗಾಲಿಗಳನ್ನು 1970 ರಲ್ಲಿ ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಲ್ಲಿ ಭೂಮಿ ಮತ್ತು ವಸತಿ ನೀಡಿ ಆಶ್ರಯ ಕಲ್ಪಿಸಿದೆ. ಅದರಂತೆ ಸಿಂಧನೂರಿನಲ್ಲಿ ಐದು ಕ್ಯಾಂಪ್‌ಗಳನ್ನು ಹೊಸದಾಗಿ ನಿರ್ಮಿಸಿದ್ದು, ಅದರಲ್ಲಿ ನಾಲ್ಕು ಕ್ಯಾಂಪ್‌ಗಳಲ್ಲಿ ಬಂಗಾಲಿ ನಿವಾಸಿಗಳೇ ವಾಸಿಸುತ್ತಿದ್ದಾರೆ.

ಒಟ್ಟು 20 ಸಾವಿರ ನಿರಾಶ್ರಿತರಲ್ಲಿ ನಮಶೂದ್ರರು 8024, ಫೋಡ್ ಅಥವಾ ಪೌಂಡರ್ ಜನಾಂಗಕ್ಕೆ ಸೇರಿದ 118, ಕ್ಷತ್ರೀಯ ಸಮಾಜದ 2444,  ರಾಜವಂತಿ ಜನಾಂಗದ 101 ಕುಟುಂಬಗಳು ಮತ್ತು ಇತರ ಸಮುದಾಯದವರು ವಾಸಿಸುತ್ತಿದ್ದಾರೆ. ಕಳೆದ ವರ್ಷ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯಿಸಿ ದೇಶದ ವಿವಿಧ ರಾಜ್ಯದಲ್ಲಿ ನೆಲೆಸಿರುವ ಬಂಗಾಲಿಗಳು  ಕೇಂದ್ರ ಸರ್ಕಾರದ ಗಮನ ಸೆಳೆದಿದ್ದರು.

2012 ರಲ್ಲಿ ತಮಗೆ ಜಾತಿ ಪ್ರಮಾಣ ಪತ್ರ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿ ನಿಖಿಲ ಭಾರತ ಬಂಗಾಲಿ ನಿರಾಶ್ರಿತರ ಸಮನ್ವಯ ಸಮಿತಿ ತನ್ನ ಹೋರಾಟ ಪ್ರಾರಂಭಿಸಿತ್ತು.

‘ರಾಜ್ಯದಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಉನ್ನತ ಸಮಿತಿ ರಚಿಸಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಉಮೇಶ ಅಧ್ಯಕ್ಷತೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಎಸ್.ಎನ್.ಜಯರಾಂ, ದಕ್ಷಿಣ ಕನ್ನಡ ಜಿಲ್ಲೆಯ ಉಪವಿಭಾಗಾಧಿಕಾರಿ ಡಾ.ಆರ್.ಪ್ರಶಾಂತ, ಮಂಗಳೂರು ಸಮಾಜ ಕಲ್ಯಾಣ ಅಧಿಕಾರಿ ಸಂತೋಷಕುಮಾರ ಒಳಗೊಂಡ ಸಮಿತಿ ರಚನೆ ಮಾಡಿದ್ದರು’ ಎಂದು ಸ್ಮರಿಸುತ್ತಾರೆ ನಿಖಿಲ ಭಾರತ ಬಂಗಾಲಿ ನಿರಾಶ್ರಿತರ ಸಮನ್ವಯ ಸಮಿತಿ ಅಧ್ಯಕ್ಷ ಸುನಿಲ ಮೇಸ್ತ್ರಿ .

ನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಮಿತಿ ನಿರಂತರ ಒತ್ತಡ ಹಾಕಿದ ಪರಿಣಾಮ ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧಾರ ಕೈಗೊಂಡಿದೆ.

ಪುನರ್ವಸತಿ ಕ್ಯಾಂಪ್‌ಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ನಮಶೂದ್ರರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ದೊರೆತರೆ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ಎಲ್ಲ ಹಂತದ ಚುನಾವಣೆಗೆ ಸ್ಪರ್ಧಿಸುವ ಅವಕಾಶ ದೊರೆಯಲಿದೆ. ಅಲ್ಲದೆ ಶೈಕ್ಷಣಿಕ, ಆರ್ಥಿಕ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ. ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸಮಿತಿ ಹರ್ಷ ವ್ಯಕ್ತಪಡಿಸಿದೆ.
-ಡಿ.ಎಚ್‍.ಕಂಬಳಿ

*
ನಮಶೂದ್ರರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡುವಂತೆ ಸರ್ಕಾರದ ಗಮನ ಸೆಳೆಯಲು ನನ್ನನ್ನು ಒತ್ತಾಯಿಸುತ್ತಾ ಬಂದಿದ್ದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನನ್ನ ಬೇಡಿಕೆಗೆ ಮನ್ನಣೆ ನೀಡಿದೆ.
-ಹಂಪನಗೌಡ ಬಾದರ್ಲಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT