ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂದುಳಿದವರು’ ಪದ ತೊಲಗಿಸಲು ಪಣತೊಡಿ

ರಾಜ್ಯ ಮಟ್ಟದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಅಭ್ಯಾಸವರ್ಗದಲ್ಲಿ ನಿಜಾನಂದ ಸ್ವಾಮೀಜಿ ಸಲಹೆ
Last Updated 25 ಮೇ 2017, 6:53 IST
ಅಕ್ಷರ ಗಾತ್ರ

ರಾಯಚೂರು: ‘ಯಾವುದೇ ವ್ಯಕ್ತಿ ವಿದ್ಯೆ, ಬುದ್ಧಿಯಿಂದಾಗಿ ಸ್ಥಾನಮಾನ ಪಡೆಯುತ್ತಾನೆ. ರಾಷ್ಟ್ರಪತಿಯಾಗಿದ್ದ ಎ.ಪಿ.ಜೆ.ಅಬ್ದುಲ್‌ ಕಲಾಂ ಅವರೆ ಇದಕ್ಕೆ ಮಾದರಿ’ ಎಂದು ಮಿಟ್ಟಿಮಲ್ಕಾಪುರ ಶಾಂತಾಶ್ರಮದ ನಿಜಾನಂದ ಸ್ವಾಮೀಜಿ ಹೇಳಿದರು.

ನಗರದ ಹೊರವಲಯ ಹರ್ಷಿತಾ ಗಾರ್ಡನ್‌ ಕಲ್ಯಾಣ ಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ ಸಂಗೊಳ್ಳಿ ರಾಯಣ್ಣ  ಬ್ರಿಗೇಡ್‌ ರಾಜ್ಯ ಮಟ್ಟದ ಅಭ್ಯಾಸ ವರ್ಗದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘ಹಿಂದುಳಿದ ವರ್ಗಗಳು ಶೈಕ್ಷಣಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಸಬಲರಾಗಲು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡಬೇಕು. ಹಿಂದುಳಿದವರು ಎನ್ನುವ ಪದವನ್ನು ತೊಲಗಿಸಲು ಪಣತೊಡಬೇಕು. ಮಕ್ಕಳ ಭವಿಷ್ಯಕ್ಕಾಗಿ ಸಂಸ್ಕಾರಯುತ ಶಿಕ್ಷಣ ಕೊಡಿಸಬೇಕು’ ಎಂದು ತಿಳಿಸಿದರು.

ಕಾಗಿನೆಲೆ ಮಹಾಸಂಸ್ಥಾನದ ಸಿದ್ದರಾಮಾನಂದ ಪುರಿ ಸ್ವಾಮೀಜಿ ಮಾತನಾಡಿ, ‘ಬ್ರಿಗೇಡ್‌ ವಿಚಾರಧಾರೆ ಬಗ್ಗೆ ಇತ್ತೀಚೆಗೆ ಸ್ಪಷ್ಟ ಸ್ವರೂಪ ಸಮಾಜಕ್ಕೆ ಗೊತ್ತಾಗುತ್ತಿದೆ. ಯಾವುದೋ ಪಕ್ಷದ ವಿರೋಧಕ್ಕಾಗಿ ಬ್ರಿಗೇಡ್‌ ಹುಟ್ಟಿಕೊಂಡಿದೆ ಎನ್ನುವ ತಪ್ಪು ಸಂದೇಶ ರವಾನೆಯಾಗಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಮತ್ತು ಪ್ರಭುಗಳು ಇದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಲು ಬೌದ್ಧಿಕ ಕಸರತ್ತು ಬಹಳ ಮುಖ್ಯ. ಇದಕ್ಕಾಗಿ ಅಭ್ಯಾಸವರ್ಗದ ಆಯೋಜನೆ ಶ್ಲಾಘನೀಯ’ ಎಂದು ತಿಳಿಸಿದರು.

‘ಸರ್ಕಾರಗಳು ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸಂವಿಧಾನಕ್ಕೆ ಕತ್ತರಿ ಹಾಕುವ ಕೆಲಸಗಳನ್ನು ಮಾಡುತ್ತಿವೆ. ಸಂವಿಧಾನದ ಮೂಲ ಆಶಯ ಕಾಪಾಡುವ ಕೆಲಸವನ್ನು ಯಾರೂ ಮಾಡುತ್ತಿಲ್ಲ. ಈ ವ್ಯವಸ್ಥಿತ ಪಿತೂರಿಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ವ್ಯಕ್ತಿಯ ಆಶಯ ಪ್ರಧಾನವಾಗಿಟ್ಟುಕೊಂಡು ಬ್ರಿಗೇಡ್‌ ಹುಟ್ಟಿಕೊಂಡಿಲ್ಲ. ಸಂವಿಧಾನ ಉಳಿಸುವ ಕೆಲಸವನ್ನು ಬ್ರಿಗೇಡ್‌ ಮಾಡಲಿದೆ’ ಎಂದರು.

ರಾಯಣ್ಣ ಬ್ರಿಗೇಡ್‌ನ ಕಾರ್ಯಾಧ್ಯಕ್ಷ ಕೆ.ಮುಕುಡಪ್ಪ ಮಾತನಾಡಿ, ‘ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಗೆಲುವು ಸಾಧಿಸಲಾಗುತ್ತದೆ ಎನ್ನುವ ಭ್ರಮೆ ಕೈಬಿಡಬೇಕು. ಜನಸಂಖ್ಯೆಯನ್ನಾಧರಿಸಿ ರಾಜಕೀಯ ಪ್ರಾತಿನಿಧ್ಯ ನೀಡುವ ಕಾರ್ಯಕ್ಕೆ ಬಿಜೆಪಿ ಮುಂದಾಗಬೇಕಾಗಿದೆ’ ಎಂದು ಹೇಳಿದರು.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಪ್ರಧಾನ ಕಾರ್ಯದರ್ಶಿ ಅಶೋಕ ಗಸ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಸಮುದಾಯದ ಅಭಿವೃದ್ಧಿಗೆ ಕಿಂಚಿತ್ತು ಗಮನಹರಿಸುತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಕುಟುಂಬ ರಾಜಕೀಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿದೆ’ ಎಂದು ದೂರಿದರು.

‘ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಎಲ್ಲಾ ಸಮುದಾಯವೂ ಅಭಿವೃದ್ಧಿ ಹೊಂದಬೇಕಿತ್ತು. ಆದರೆ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಅವರ ಆಶಯಕ್ಕೆ ಧಕ್ಕೆ ಉಂಟಾಗುತ್ತಿದೆ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಹೋರಾಟ ನಡೆಸಿದ್ದ ಸಂಗೊಳ್ಳಿ ರಾಯಣ್ಣ ಅವರ ಹೆಸರಿನಲ್ಲಿ ಬ್ರಿಗೇಡ್ ಸ್ಥಾಪಿಸಿ ದಲಿತ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕಾಂತೇಶ, ಮುಖಂಡರಾದ ಪುಟ್ಟಸ್ವಾಮಿ,ಭೋಜರಾಜ್, ವೆಂಕಟೇಶ ಮೂರ್ತಿ, ಸತೀಶ್, ವೀರೇಶ, ಕಾಶಿನಾಥ, ಸೋಮಶೇಖರ, ಬಸವರಾಜ, ಕೊಟ್ರೇಶ, ತ್ಯಾಗರಾಜ, ಪ್ರದೀಪ್, ಮಂಜುನಾಥ, ಆನಂದ ಸೇಠ್, ಮಹೇಶ ಇದ್ದರು.

ಹಿಂದುಳಿದ ವರ್ಗದ ಅಭಿವೃದ್ಧಿಗೆ ಸಂಬಂಧಿಸಿದಂತೆ ‘ಹಿಂದುಳಿದ ವರ್ಗಗಳ ಆಯೋಗವು ನೀಡಿರುವ ಶಿಫಾರಸುಗಳು ಮತ್ತು ಅವುಗಳ ಅನುಷ್ಠಾನ ಹೇಗಾಗಿದೆ’ ಮತ್ತು ‘ಸಂವಿಧಾನದ ಮೂಲ ಆಶಯ’ ಎನ್ನುವ ಗೋಷ್ಠಿಗಳು ನಡೆದವು.

ಅಭ್ಯಾಸ ವರ್ಗದಲ್ಲಿ ‘ಭಾರತ್‌ ಮಾತಾ ಕೀ ಜೈ’
ರಾಯಚೂರು:
ನಗರದಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ರಾಜ್ಯಮಟ್ಟದ ಅಭ್ಯಾಸ ವರ್ಗವನ್ನು ಬಿಜೆಪಿ ಕಾರ್ಯಕ್ರಮದ ರೀತಿಯಲ್ಲೆ ಏರ್ಪಾಡು ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಆಗಾಗ ‘ಭಾರತ ಮಾತಾ ಕೀ ಜೈ’ ಘೋಷಣೆಗಳನ್ನು ಕೂಗಲಾಯಿತು.

ಹರ್ಷಿತಾ ಗಾರ್ಡನ್‌ ಕಲ್ಯಾಣಮಂಟಪದಲ್ಲಿ ಕಾರ್ಯಕರ್ತರು ಕುಳಿತುಕೊಳ್ಳುವುದಕ್ಕೆ ಪ್ರತಿ ಜಿಲ್ಲೆಯ ಹೆಸರಿನ ಫಲಕವನ್ನು ಪ್ರತ್ಯೇಕವಾಗಿ ನೇತು ಹಾಕಲಾಗಿತ್ತು. ಕಾರ್ಯಕರ್ತರ ನೋಂದಣಿ ಮಾಡಿಕೊಂಡು ಬರೆದುಕೊಳ್ಳುವುದಕ್ಕೆ ಒಂದು ನೋಟ್‌ಬುಕ್‌ ಮತ್ತು ಪೆನ್‌ ವಿತರಿಸಲಾಯಿತು.

‘ಎಷ್ಟೇ ದೊಡ್ಡ ಪದಾಧಿಕಾರಿಯಾಗಿದ್ದರೂ ವೇದಿಕೆಯ ಎದುರಿನ ಕುರ್ಚಿಗಳಲ್ಲಿ ಆಸೀನರಾಗಬೇಕು. ಗೋಷ್ಠಿಯಲ್ಲಿ ಮಾತನಾಡುವವರು ಮಾತ್ರ ವೇದಿಕೆಯಲ್ಲಿ ಇರುತ್ತಾರೆ’ ಎನ್ನುವ ಸೂಚನೆಯನ್ನು ನಿರೂಪಕರು ಮನವರಿಕೆ ಮಾಡಿದರು.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಕಾರ್ಯಾಧ್ಯಕ್ಷ ಮುಕುಡಪ್ಪ, ಅಧ್ಯಕ್ಷ ವಿರೂಪಕ್ಷಪ್ಪ, ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಇ. ಕಾಂತೇಶ ಸೇರಿದಂತೆ ಎಲ್ಲರೂ ವೇದಿಕೆ ಎದುರಿನಲ್ಲಿ ಕುಳಿತು ಗೋಷ್ಠಿಗಳನ್ನು ಆಲಿಸಿದರು.

ಪ್ರತಿಯೊಬ್ಬರೂ ಹಳದಿ ವರ್ಣದ ಪಟ್ಟಿಯೊಂದನ್ನು ಧರಿಸಿದ್ದರು. ಪರಿವಾರ ಸಂಘಟನೆಗಳು ಏರ್ಪಡಿಸುವ ಕಾರ್ಯಕ್ರಮಗಳ ರೀತಿಯಲ್ಲೆ ಬ್ರಿಗೇಡ್‌ ಅಭ್ಯಾಸವರ್ಗವನ್ನು ಆಯೋಜಿಸಿದ್ದು ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT