ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ರೇಷ್ಮೆ ಆಮದು– ಬೆಲೆ ಕುಸಿತ

ರೇಷ್ಮೆ ಕೃಷಿಕರಲ್ಲದೆ ನೂಲು ಬಿಚ್ಚಾಣಿಕೆದಾರರಿಗೂ ತೊಂದರೆ– ಸರ್ಕಾರದ ಪ್ರವೇಶಕ್ಕೆ ಒತ್ತಾಯ
Last Updated 25 ಮೇ 2017, 7:45 IST
ಅಕ್ಷರ ಗಾತ್ರ

ವಿಜಯಪುರ: ಚೀನಾ ರೇಷ್ಮೆ ಆಮದು ಪ್ರಮಾಣ ಹೆಚ್ಚಾದ ಪರಿಣಾಮ ಸ್ಥಳೀಯ ರೇಷ್ಮೆ ಬೆಲೆ ಡಿಢೀರ್ ಕುಸಿದಿದೆ. ಸುಮಾರು ₹500ಕ್ಕೂ ಹೆಚ್ಚಿನ ಬೆಲೆಗೆ  ಮಾರಾಟವಾಗುತ್ತಿದ್ದ ಒಂದು ಕೆ.ಜಿ. ಗೂಡಿನ ಬೆಲೆ ₹100 ರಿಂದ 150ರಷ್ಟು ಕಡಿಮೆಯಾಗಿದೆ. ಇದರಿಂದ ರೈತರು, ಹಾಗೂ ರೀಲರುಗಳು ಸಂಕಷ್ಟ ಎದುರಿಸುವಂತಾಗಿದೆ.

ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ‘ಭಾರತ್ ಸಿಲ್ಕ್ ರೀಲರ್ಸ್ ಅಸೋಸಿಯೇಷನ್’ ಕಾರ್ಯದರ್ಶಿ ಸಾದಿಕ್ ಪಾಷ ಒತ್ತಾಯಿಸಿದ್ದಾರೆ.

ಮೂರ್ನಾಲ್ಕು ತಿಂಗಳುಗಳಿಂದ ₹450 ರಿಂದ ₹500 ಕ್ಕೆ  ಮಾರಾಟವಾಗುತ್ತಿದ್ದ ಒಂದು ಕೆ.ಜಿ. ರೇಷ್ಮೆಗೂಡಿನ ಬೆಲೆ ಈಗ ಸರಾಸರಿ ₹360 ರಿಂದ ₹ 380ಕ್ಕೆ  ಇಳಿದಿದೆ. ಇದರಿಂದ ರೇಷ್ಮೆ ಕೃಷಿಕರಲ್ಲದೆ ನೂಲು ಬಿಚ್ಚಾಣಿಕೆದಾರರು ತೊಂದರೆ ಅನುಭವಿಸುವಂತಾಗಿದೆ.

ಒಂದು ಕೆ.ಜಿ.ಚೀನಾ ರೇಷ್ಮೆ ನೂಲು ಸುಮಾರು ₹3500ರಿಂದ ₹ 3600ಕ್ಕೆ ಸಿಗುತ್ತಿದೆ. ಸ್ಥಳೀಯ ರೇಷ್ಮೆನೂಲು ₹3100ರಿಂದ 3200ಕ್ಕೆ ಮಾರಾಟವಾಗುತ್ತಿದೆ. ಒಂದು ಕೆ.ಜಿ. ರೇಷ್ಮೆನೂಲಿನಲ್ಲಿ ₹400 ನಷ್ಟ ಅನುಭವಿಸುತ್ತಿದ್ದೇವೆ ಎಂದು ರೀಲರ್ ಮುನಿನಾರಾಯಣಪ್ಪ ತಿಳಿಸಿದ್ದಾರೆ.

ಸ್ಥಳೀಯ ರೇಷ್ಮೆಯ ನೂಲು ಒಂದು ಕೆ.ಜಿ. ಖರೀದಿ ಮಾಡಿ, ಬಟ್ಟೆ ತಯಾರಿಸುವವರು, ಬಣ್ಣ ಲೇಪಿತ ರಾಸಾಯನಿಕ ಮಿಶ್ರಣ ಮಾಡಿದರೆ, ಒಂದು ಕೆ.ಜಿ.ಗೆ 180 ರಿಂದ 200 ಗ್ರಾಂನಷ್ಟು ಮಾತ್ರವೇ ಪ್ರಯೋಜನಕ್ಕೆ ಬಾರದಂತಾಗುತ್ತದೆ. ಆದರೆ, ಚೀನಾದಿಂದ ಖರೀದಿ ಮಾಡುವ ರೇಷ್ಮೆಯಲ್ಲಿ ಪ್ರಯೋಜನಕ್ಕೆ ಬಾರದ  ಅಂಶ ಕಡಿಮೆಯಿರುತ್ತದೆ ಎನ್ನುವ ಕಾರಣಕ್ಕೆ ಅಲ್ಲಿನ ರೇಷ್ಮೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ  ಎಂದು ಕೆಲ ರೀಲರುಗಳು ಅಭಿಪ್ರಾಯಪಟ್ಟಿದ್ದಾರೆ.

ಈಚೆಗೆ  ಮಳೆ ಬೀಳುತ್ತಿದ್ದು, ಮಾರುಕಟ್ಟೆಗೆ ಎರಡು ದಿನಗಳ ಕಾಲ ಶೇ 5 ರಷ್ಟು ಗೂಡಿನ ಪ್ರಮಾಣ ಹೆಚ್ಚಾಗಿತ್ತು. ಪುನಃ ಗೂಡು ಕಡಿಮೆಯಾಗಿದೆ. ಗೂಡಿನ ಪ್ರಮಾಣ ಹೆಚ್ಚಾಗಿದ್ದಾಗ, ರೀಲರುಗಳ ಸಂಖ್ಯೆ ಹೆಚ್ಚಾಗಿ, ಗೂಡಿನ ಪ್ರಮಾಣ ಕಡಿಮೆಯಾಗಿದ್ದರಿಂದ ಹರಾಜಿನಲ್ಲಿ ಗೂಡಿಗೂ ಒಳ್ಳೆಯ ಬೆಲೆ ಸಿಕ್ಕಿತ್ತು. ಆದರೆ, ನೂಲಿನ ಬೆಲೆ ಕೆ.ಜಿ.ಗೆ ₹500 ಕಡಿಮೆಯಾಗಿತ್ತು. ಈ ಬಗ್ಗೆ ಇಲಾಖೆಯ ಅಧಿಕಾರಿಗಳು, ಸರ್ಕಾರ ಗಮನ ಹರಿಸಿಲ್ಲವೆಂದು ಆಯಾಜ್ ಪಾಷ, ಅಕ್ರಂ ಪಾಷ, ಕಲೀಂಮುಲ್ಲಾ, ತಿಳಿಸಿದ್ದಾರೆ.

ಬಿಳಿಹಾಳೆಯಲ್ಲಿ ಲೆಕ್ಕಾಚಾರ: ನೂಲು ಬಿಚ್ಚಾಣಿಕೆದಾರರು ನೂಲು ಮಾರಾಟ ಮಾಡಿದರೆ, ಹಣಕ್ಕಾಗಿ ಹಲವು ದಿನಗಳ ಕಾಲ ಕಾಯಬೇಕು. ಮಾರಾಟ ಮಾಡಿದಾಗ ಒಂದು ಬಿಳಿಚೀಟಿಯಲ್ಲಿ ಬರೆದುಕೊಡುತ್ತಾರೆ. ಈ ಚೀಟಿಗಳು ಕಳೆದುಹೋದರೆ ಕೆಲವು ವ್ಯಾಪಾರಿಗಳು ಹಣ ಕೊಡದೆ ಇರುವ ಪ್ರಸಂಗಗಳು ನಡೆದಿವೆ. ಕೆಲವರು ರೀಲರುಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವವರೆಗೂ ಕಾಯಬೇಕಾದಂತಹ ಅನಿವಾರ್ಯತೆ ಇದ್ದು ಮತ್ತೆ ಮಾರುಕಟ್ಟೆಯಲ್ಲಿ ಗೂಡು ಖರೀದಿ ಮಾಡಬೇಕಾದರೆ ಸಾಲ ಮಾಡಬೇಕಾದಂತಹ ಸ್ಥಿತಿ ರೀಲರುಗಳದ್ದು ಎಂದು ಅಪ್ಜಲ್ ಪಾಷ, ವಿ.ದೇವರಾಜ್, ಮಂಜುನಾಥ್, ಗೋವಪ್ಪ ತಿಳಿಸಿದ್ದಾರೆ.

ರೇಷ್ಮೆ ನೂಲಿಗೆ ಸೂಕ್ತವಾದ ಬೆಲೆ ಕೊಡಬೇಕು, ಕೆಎಸ್ಎಂಬಿಯಿಂದ (ಕರ್ನಾಟಕ ರಾಜ್ಯ ರೇಷ್ಮೆ ಮಂಡಳಿ) ಖರೀದಿ ಮಾಡುವ ವ್ಯವಸ್ಥೆಯಾಗಬೇಕು. ಚೀನಾದಿಂದ   ಬಿಲ್ ಇಲ್ಲದೆ ಅನಧಿಕೃತವಾಗಿ ಬರುತ್ತಿರುವ ಚೀನಾ ರೇಷ್ಮೆ ಬಗ್ಗೆ ಗಮನ ಹರಿಸಬೇಕು.  ರೈತರು, ಹಾಗೂ ರೀಲರುಗಳ ಹಿತ ಕಾಯುವಲ್ಲಿ ಸರ್ಕಾರ ಬದ್ಧತೆ ತೋರಿಸಬೇಕು ಎಂದು ಒತ್ತಾಯಿಸಿದ್ದಾರೆ.

ರೇಷ್ಮೆನೂಲಿನ ಬೆಲೆ ಕುಸಿತಕ್ಕೆ ಕಾರಣ
ಚೀನಾ ರೇಷ್ಮೆನೂಲು ಹೆಚ್ಚಿನ ಪ್ರಮಾಣದಲ್ಲಿ ಲಗ್ಗೆ ಇಟ್ಟಿದೆ. ಇದಕ್ಕೆ ಉತ್ಪಾದಕರು ಮಾರು ಹೋಗಿರುವ ಕಾರಣ, ಸ್ಥಳೀಯ ರೇಷ್ಮೆಗೆ ಬೇಡಿಕೆ ಕಡಿಮೆಯಾಗಿದೆ ಎಂದು ರೀಲರುಗಳಾದ ಎಚ್.ಎಂ.ಕೃಷ್ಣಪ್ಪ, ದೇವರಾಜ್, ಜಮೀರ್ ಮುಂತಾದವರು ತಿಳಿಸಿದ್ದಾರೆ.

ಇದರ ಜೊತೆಗೆ ₹500, 1000 ಮುಖಬೆಲೆಯ ನೋಟು ಚಲಾವಣೆ ರದ್ದು ಮಾಡಿದ ವೇಳೆ ಎದುರಾಗಿದ್ದ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗಿಲ್ಲ. ಇದು ಬೆಲೆ ಕುಸಿತಕ್ಕೆ ಮತ್ತೊಂದು ಕಾರಣ ಎಂದು ಅವರು ಹೇಳಿದ್ದಾರೆ.

*
ಉತ್ತಮ ಗುಣಮಟ್ಟದಿಂದ ಕೂಡಿರುವ ಇಲ್ಲಿನ ರೇಷ್ಮೆ ಬೆಲೆ ಕುಸಿದಿದೆ. ಇದರಿಂದ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ
-ಮುನಿನಾರಾಯಣಪ್ಪ,
ರೀಲರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT