ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಸ್ಥೆಯ ಆಗರವಾದ ಅಳ್ನಾವರ ಬಸ್ ನಿಲ್ದಾಣ

Last Updated 25 ಮೇ 2017, 8:57 IST
ಅಕ್ಷರ ಗಾತ್ರ

ಅಳ್ನಾವರ: ನೂತನ ತಾಲ್ಲೂಕು ಕೇಂದ್ರವಾಗಿರುವ ಮಲೆನಾಡಿನ ಸೆರಗಿನ ಸುಂದರ ಪಟ್ಟಣದ ಬಸ್ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದ್ದು, ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಅವ್ಯವಸ್ಥೆ ಸರಿಪಡಿಸದಿದ್ದರೆ ಹೋರಾಟ ಮಾಡುವುದಾಗಿ ಸಾರ್ವಜನಿಕರು ಎಚ್ಚರಿಸಿದ್ದಾರೆ.

‘ಸ್ವಚ್ಛತೆ ಹಾಗೂ ಕುಡಿಯುವ ನೀರಿನ ಅಭಾವ, ಚಹಾ, ತಿಂಡಿಗೆ ಹೋಟೆಲ್‌ ಇಲ್ಲದಿರುವುದು ಸೇರದಂತೆ ಹತ್ತು ಹಲವು ಸೌಲಭ್ಯಗಳಿಂದ ನಿಲ್ದಾಣ ವಂಚಿತವಾಗಿದೆ’ ಎಂದು ಸ್ಥಳೀಯ ಪುಂಡಲಿಕ ಪಾರದಿ ಹೇಳುತ್ತಾರೆ.

‘ಸರಿಯಾದ ಸಮಯಕ್ಕೆ ಬಸ್‌ಗಳು ಬಾರದೆ, ಪ್ರಯಾಣಿಕರು  ಗಂಟೆಗಟ್ಟಲೆ ಕಾಯುವುದು ಇಲ್ಲಿ ಸಾಮಾನ್ಯ. ಹಳೆಯದಾದ ಬಸ್‌ಗಳನ್ನೇ ಈ ಭಾಗದಲ್ಲಿ ಓಡಿಸುತ್ತಾರೆ. ನಿಲ್ದಾಣದಲ್ಲಿ ಕುಡಿಯುವ ನೀರಿನ ಅಭಾವ ಕಾಡತೊಡಗಿದೆ. ಜತೆಗೆ ನೀರು ಇಲ್ಲದೆ ಶೌಚಾಲಯಗಳು ಗಬ್ಬು ನಾರುತ್ತಿವೆ. ಕೊಳವೆಬಾಯಿಯಲ್ಲಿ ನೀರು ಇಲ್ಲ. ನಿಲ್ದಾಣದ ಆವರಣ ತುಂಬ ಕಸ ಕಂಟೆಗಳದ್ದೇ ದರಬಾರು. ಜೊತೆಗೆ ಹಂದಿಗಳ ಹಾವಳಿ ಕೂಡಾ ವಿಪರೀತವಾಗಿದೆ’ ಎಂದು ಹಲವಾರು ಪ್ರಯಾಣಿಕರು ದೂರುತ್ತಾರೆ.

‘ರಾತ್ರಿ ವೇಳೆ ಗೋವಾದಿಂದ ಬರುವ ಬಸ್‌ಗಳು ಪ್ರಯಾಣಿಕರನ್ನು ದೂರದ ಕಡಬಗಟ್ಟಿ ಕ್ರಾಸ್‌ ಬಳಿ ಇಳಿಸುವುದರಿಂದ ಜನರಿಗೆ ತೊಂದರೆಯಾಗಿವೆ. ವಿಶೇಷವಾಗಿ ಮಹಿಳೆಯರು, ಮಕ್ಕಳು ರಾತ್ರಿ ಸಮಯದಲ್ಲಿ ನಡೆದು ಬರುವ ಅನಿವಾರ್ಯತೆ ಎದುರಾಗಿದೆ.

ರಾತ್ರಿ ಬಸ್‌ಗಳು ಕಡ್ಡಾಯವಾಗಿ ಒಳಗಡೆ ಬರಬೇಕು ಎಂಬ ಇಲಾಖೆಯ ನಿರ್ದೇಶನ ಇದ್ದರೂ ಚಾಲಕರು ಹಾಗೂ ನಿರ್ವಾಹಕರ ಬೇಜವಾಬ್ದಾರಿ ವರ್ತನೆಯಿಂದ ಜನರು ಗೋಳಾಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಚಂದ್ರಶೇಖರ ಹೇಳುತ್ತಾರೆ.

‘ಹಿಂದೆ ಈ ನಿಲ್ದಾಣ ಶಿರ್ಶಿ ವಿಭಾಗಕ್ಕೆ ಒಳಪಟ್ಟಿದ್ದಾಗ ನಿಯಮಿತವಾಗಿ ಅಧಿಕಾರಿಗಳು ಆಗಮಿಸಿ ನಿಲ್ದಾಣದ ಕುಂದು ಕೊರತೆ ಕೇಳಿ, ಸೂಕ್ತ ಕ್ರಮ ಕೈಗೊಳ್ಳುತ್ತಿದ್ದರು. ಇದೀಗ ಧಾರವಾಡ ವ್ಯಾಪ್ತಿಗೆ ಒಳಪಟ್ಟ ನಂತರ ಅವ್ಯವಸ್ಥೆ ತಾರಕ್ಕೇರಿದೆ. ಸಾರಿಗೆ ಸಂಸ್ಥೆಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಇಲಾಖೆ ಅವ್ಯವಸ್ಥೆಯನ್ನು ನಿವಾರಿಸದಿದ್ದರೆ ಹೋರಾಟದ ಹಾದಿ ಅನಿವಾರ್ಯ’ ಎಂದು ಪಾರದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT