ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರಣಿ: ನಾಲ್ವರು ಮಹಿಳೆಯರು ಅಸ್ವಸ್ಥ

ಅಬಕಾರಿ ಡಿವೈಎಸ್ಪಿ, ತಹಶೀಲ್ದಾರ್ ಅವರಿಗೆ ಪ್ರತಿಭಟನಾಕಾರರ ಘೇರಾವ್‌
Last Updated 25 ಮೇ 2017, 9:36 IST
ಅಕ್ಷರ ಗಾತ್ರ

ಮೂಡಲಗಿ: ಇಲ್ಲಿಗೆ ಸಮೀಪದ ಹಳ್ಳೂರ ಗ್ರಾಮದಲ್ಲಿ ಮದ್ಯದಂಗಡಿ ಶಾಶ್ವತವಾಗಿ ಬಂದ್‌ ಮಾಡಿ ಗ್ರಾಮದಿಂದ ತೆರವುಗೊಳಿಸಬೇಕು ಎಂದು ಆಮರಣ ಉಪವಾಸ ಸತ್ಯಾಗ್ರಹಕ್ಕೆ ಕುಳಿತ ಹೋರಾಟಗಾರರನ್ನು ಭೇಟಿ ಮಾಡಲು ಬಂದಿದ್ದ ಅಬಕಾರಿ ಡಿವೈಎಸ್ಪಿ ಅರುಣಕುಮಾರ್ ಮತ್ತು ಗೋಕಾಕ ತಹಶೀಲ್ದಾರ್‌ ಬಿ.ಎಸ್. ಮಾಳಗಿ ಅವರಿಗೆ ಘೇರಾವ್‌ ಹಾಕಲಾಯಿತು. 

ಉಪವಾಸ ಸತ್ಯಾಗ್ರಹದ ಎರಡನೇ ದಿನವಾದ ಬುಧವಾರದಂದು ಉಪವಾಸ ಕುಳಿತ ಕೆಲವು ಮಹಿಳೆಯರು ಅಸ್ವಸ್ಥರಾಗಿರುವುದನ್ನು ತಿಳಿದು ಅಧಿಕಾರಿಗಳು ಧರಣಿ ಕುಳಿತ ಸ್ಥಳಕ್ಕೆ ಭೇಟಿ ನೀಡಿ ಹೋರಾಟಗಾರೊಂದಿಗೆ ಚರ್ಚಿಸಿದರು.

‘ಒಂದು ತಿಂಗಳು ಅವಕಾಶ ನೀಡಿ, ಜುಲೈ 1ರಂದು ಗ್ರಾಮದಲ್ಲಿರುವ ಮದ್ಯದಂಗಡಿಯನ್ನು ಬಂದ್‌ ಮಾಡಿಸಿ ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಅರುಣ್‌ಕುಮಾರ್‌ ಹೋರಾಟಗಾರರಿಗೆ ಭರವಸೆ ನೀಡಿದರು.

ಆದರೆ ಇದಕ್ಕೆ ಒಪ್ಪದ ಹೋರಾಟ ಗಾರರು ‘ಸ್ಥಳೀಯ ಗ್ರಾಮ ಪಂಚಾಯ್ತಿಯಿಂದ 2012ರಲ್ಲಿ ಮದ್ಯದಂಗಡಿಯ ಸ್ಥಳದ ನಿರಪೇಕ್ಷಣಾ ಪ್ರಮಾಣಪತ್ರ (ಎನ್‌ಒಸಿ)ವನ್ನು ಪಡೆದುಕೊಂಡಿದ್ದು, ಆಮೇಲೆ ಈ ಅವರೆಗೆ ನವೀಕರಣಗೊಳಿಸಿದೆ ಕಾನೂನುಬಾಹಿರವಾಗಿ ನಡೆಸುತ್ತಿದ್ದಾರೆ. ಇವತ್ತೇ ಅದನ್ನು ಬಂದ್‌ ಮಾಡಿ ಇಲ್ಲವೆ ಹೋರಾಟಗಾರಿಗೆ ವಿಷ ಕೊಡಿ ಎಂದು ಪಟ್ಟು ಹಿಡಿದರು’. 

ಕೆಲವರು ಮಹಿಳೆಯರು ‘ಗಂಡಸರು ದಿನಾ ಕುಡಿಯುವುದರಿಂದ ನಮ್ಮ ಹೊಲಾ, ಮನೆಯೆಲ್ಲಾ ಹಾಳಾಗಿ ಕುಟುಂಬಗಳೆಲ್ಲ ಬೀದಿಗೆ ಬಂದಾವರ್ರೀ...’ ಎಂದು ಅಧಿಕಾರಿಗಳ ಮುಂದೆ ತಮ್ಮ ಅಳನ್ನು ತೋಡಿಕೊಂಡರು.

ಅಬಕಾರಿ ಅಧಿಕಾರಿಗಳು ಮತ್ತು ತಹಶೀಲ್ದಾರರು ಜಿಲ್ಲಾಧಿಕಾರಿ ಅನುಮತಿ ಪಡೆದು ಮುಂದಿನ ಕ್ರಮವನ್ನು ಜರುಗಿಸುವುದಾಗಿ ಪೊಲೀಸ್‌ ಬಂದೋಬಸ್ತ್‌ನಲ್ಲಿ ಅಲ್ಲಿಂದ ತೆರಳಿ ಬಹಳ ಹೊತ್ತಿನವರೆಗೆ ಅಧಿಕಾರಿಗಳಿಂದ ಯಾವುದೇ ತೀರ್ಮಾನ ಬಾರದ ಕಾರಣ ಹೋರಾಟಗಾರರು ಉಪವಾಸ ಸತ್ಯಾಗ್ರಹ ಮುಂದುವರಿಸಿದರು.

ಸತ್ಯಾಗ್ರಹಕ್ಕೆ ಕುಳಿತ ಹೋರಾಟಗಾರರಿಗೆ ಬುಧವಾರ ಬೆಳಿಗ್ಗೆಯಿಂದ ರೈತ ಸಂಘ, ಹಸಿರು ಸೇನೆ, ನೇಕಾರರ ಸಂಘ, ಕರ್ನಾಟಕ ನವನಿರ್ಮಾಣ ಸಂಘ ಮತ್ತು ಬಾಗಲಕೋಟ, ವಿಜಯಪುರ ಜಿಲ್ಲೆಗಳ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬೆಂಬಲ ನೀಡಿದರು.

ಏತನ್ಮಧ್ಯೆ ಗ್ರಾಮದಲ್ಲಿ ಮದ್ಯದಂಗಡಿ ಬೇಕು ಎಂದು ಮಹಿಳೆಯರು ಸೇರಿದಂತೆ ಕೆಲವರು ಇನ್ನೊಂದೆಡೆ ಪ್ರತಿಭಟನೆ ಮಾಡುತ್ತಿದ್ದು, ಅವರ ಅಹವಾಲನ್ನು ಅಬಕಾರಿ ಅಧಿಕಾರಿಗಳು ಗಮನಿಸಿದರು.

ಬೆಂಬಲ: ಮದ್ಯದಂಗಡಿ ತೆರವುಗೊಳಿಸಬೇಕು ಎಂದು ಕುಳಿತ ಹೋರಾಟಗಾರರನ್ನು ಭೇಟಿ ಮಾಡಿದ ಬಿಜೆಪಿ ಮುಖಂಡರಾದ ಈರಪ್ಪ ಕಡಾಡಿ ಮತ್ತು ಅಶೋಕ ಪೂಜೇರಿ ಅವರು ಬೆಂಬಲಿಸಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT