ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರವಾನಗಿ ಹೊಂದುವವರ ಸಂಖ್ಯೆ ಹೆಚ್ಚಳ

ಜಿಲ್ಲೆಯಲ್ಲಿ ಸ್ವರಕ್ಷಣೆಗಾಗಿ ಬಂದೂಕು ಖರೀದಿಸಿದವರೇ ಅಧಿಕ: 18,225 ಮಂದಿಗೆ ಲೈಸೆನ್ಸ್‌
Last Updated 25 ಮೇ 2017, 9:38 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಸ್ವರಕ್ಷಣೆಗಾಗಿ ಶಸ್ತ್ರಾಸ್ತ ಹೊಂದುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಕ್ಷಮ ಪ್ರಾಧಿಕಾರದಿಂದ ಶಸ್ತ್ರಾಸ್ತ್ರ (ಗನ್‌, ರಿವಾಲ್ವಾರ್‌) ಪರವಾನಗಿ ಪಡೆಯುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿರುವುದು ಕಂಡುಬಂದಿದೆ.

2014ರ ಅಕ್ಟ್ರೋಬರ್‌ ವೇಳೆಗೆ 12,162 ಪರವಾನಗಿ ನೀಡಲಾಗಿತ್ತು. ಪ್ರಸ್ತುತ ಜಿಲ್ಲೆಯಲ್ಲಿ 18,225 ಮಂದಿ ಪರವಾನಗಿ ತೆಗೆದುಕೊಂಡಿದ್ದಾರೆ. ಸ್ವರಕ್ಷಣೆಗಾಗಿ 13,245 ಹಾಗೂ ಬೆಳೆ ಸಂರಕ್ಷಣೆಗೆಂದು ನಮೂದಿಸಿದ 4,980 ಜನರಿಗೆ ಅನುಮತಿ ನೀಡಲಾಗಿದೆ.

ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ವಾಸಿಸುವವರು ಬಂದೂಕು ಪರವಾನಗಿ ಪಡೆಯಲು ಪೈಪೋಟಿ ತೋರುತ್ತಿದ್ದರು. ಕಾಡು ಪ್ರಾಣಿಗಳಿಂದ ಬೆಳೆ ಹಾಗೂ ತಮ್ಮನ್ನು ಕಾಪಾಡಿಕೊಳ್ಳುವುದು ಅವರ ಉದ್ದೇಶವಾಗಿರುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಬಯಲುಸೀಮೆಗಳಲ್ಲೂ ಪರವಾ­ನಗಿ ಪಡೆಯುವವರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ ಎನ್ನುವುದನ್ನು ಅಂಕಿಅಂಶಗಳು ದೃಢೀಕರಿಸುತ್ತಿವೆ.

ಪ್ರತಿಷ್ಠೆಯ ಸಂಗತಿಯಾಗಿದೆ: ಹಿಂದೆ ಹಳ್ಳಿಗಳಲ್ಲಿ ಕಾರು, ಟ್ರ್ಯಾಕ್ಟರ್‌ ಖರೀದಿಸುವುದು ಪ್ರತಿ­ಷ್ಠೆಯ ವಿಷಯವಾಗಿತ್ತು. ಈಗ ಪರವಾನಗಿ ಪಡೆದು ಬಂದೂಕು ಖರೀದಿಸುವುದು ಪ್ರತಿಷ್ಠೆಯ ಸಂಗತಿಯೇ ಎನಿಸಿದೆ. ಪಿಸ್ತೂಲ್‌ಗೆ ₹ 80 ಸಾವಿರದಿಂದ ₹ 3.50 ಲಕ್ಷದವರೆಗೆ ಬೆಲೆ ಇದೆ.

ಪಿಸ್ತೂಲ್‌ಗೆ ಸರಾಸರಿ ₹ 1ಲಕ್ಷ ದರದಂತೆ ಲೆಕ್ಕ ಹಾಕಿದರೆ ಜಿಲ್ಲೆಯಲ್ಲಿ ಪಿಸ್ತೂಲು ಖರೀದಿಗೆಂದೇ ಜನರು ಲಕ್ಷಾಂತರ ರೂಪಾಯಿ ವ್ಯಯಿಸಿರುವುದನ್ನು ಗಮನಿಸಬಹುದು ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ. ಜಿಲ್ಲೆಯಲ್ಲಿ ನಿವೃತ್ತ ಸೈನಿಕರು ಬಹಳ ಸಂಖ್ಯೆಯಲ್ಲಿದ್ದಾರೆ.

ಅಂಥವರಲ್ಲಿ ಕೆಲವರನ್ನು ಬ್ಯಾಂಕ್‌, ಎಟಿಎಂ, ಕಾರ್ಖಾನೆ, ಕಚೇರಿಗಳು ಮೊದಲಾದ ಕಡೆಗಳಲ್ಲಿ ಭದ್ರತಾ ಸಿಬ್ಬಂದಿಯಾಗಿ ನಿಯೋಜಿಸಿ ಕೊಳ್ಳುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಹೀಗೆ ಭದ್ರತಾ ಕಾರ್ಯನಿರ್ವಹಿಸುವವರಿಗೆ ಶಸ್ತ್ರಾಸ್ತ್ರ ಬೇಕಾಗುತ್ತದೆ. ಸೆಕ್ಯುರಿಟಿ ಏಜೆನ್ಸಿಗಳವರು ನೇಮಿಸಿಕೊಳ್ಳುವ ಭದ್ರತಾ ಸಿಬ್ಬಂದಿಗೂ ಬಂದೂಕು ನೀಡಲಾಗುತ್ತಿದೆ. ಹೀಗೆ ಬಂದೂಕು ಬಳಸುವುದಕ್ಕೆ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ.

ಭದ್ರತಾ ಕಾರ್ಯನಿರ್ವಹಿಸುವವರು: ಜಿಲ್ಲೆಯಲ್ಲಿ ಶಸ್ತ್ರಾಸ್ತ್ರ ಪರವಾನಗಿ ಅಂಕಿಅಂಶ ಗಮನಿಸಿದರೆ ಸ್ವರಕ್ಷಣೆಗೆ ಬಳಸುವುದಕ್ಕೆ ಪರವಾನಗಿ ಪಡೆದವರ ಸಂಖ್ಯೆಯೇ (13,245) ಹೆಚ್ಚಿದೆ! ನಿಗದಿತ ದಿನಾಂಕದ ಒಳಗೆ ಪರವಾನಗಿ ನವೀಕರಿಸಿಕೊಳ್ಳಬೇಕಾಗುತ್ತದೆ.

‘ಪ್ರತಿಷ್ಠೆಗಾಗಿಯೇ ಬಂದೂಕು ಖರೀದಿಸುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಬಹುದು. ಬೆಳೆ ಸಂರಕ್ಷಣೆಗೂ ಶಸ್ತ್ರಾಸ್ತ್ರ ಪರವಾನಗಿ ಪಡೆಯುವವರಿದ್ದಾರೆ. ಪೊಲೀಸ್‌ ಇಲಾಖೆಯಿಂದ ಬಂದೂಕು ತರಬೇತಿ ಪಡೆದು ಪ್ರಮಾಣಪತ್ರ ಪ್ರಸ್ತುತಪಡಿಸಿದವರಿಗೆ ಸಂಬಂಧಿಸಿದ ಸಮಿತಿಯ ಸಭೆಯಲ್ಲಿ ಅನುಮೋದನೆ ಪಡೆದು, ಜಿಲ್ಲಾಡಳಿತದಿಂದ ಪರವಾನಗಿ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಸೇನೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದವರು ಬಹಳ ಸಂಖ್ಯೆಯಲ್ಲಿದ್ದಾರೆ. ಅವರೂ ಪರವಾನಗಿ ಪಡೆಯುತ್ತಿದ್ದಾರೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಪ್ರತಿಕ್ರಿಯಿಸಿದರು.

ಪರವಾನಗಿ ಪಡೆದು ಖರೀದಿಸಿದ ಅಸ್ತ್ರಗಳನ್ನು ಜೀವ­ರಕ್ಷಣೆಗಾಗಿ ಮಾತ್ರವೇ ಬಳಸಬೇಕು. ಸೇಡು ತೀರಿಸಿಕೊಳ್ಳಲು ಇನ್ನೊಬ್ಬರ ಮೇಲೆ ಪ್ರಯೋಗ ಮಾಡುವಂತಿಲ್ಲ ಎನ್ನುವುದು ಸೇರಿದಂತೆ ಹಲವು ಷರತ್ತು­ಗಳಿವೆ. ಅರ್ಜಿ ಸಲ್ಲಿಸುವವರ ಪೂರ್ವಾ­ಪರ ತಿಳಿದುಕೊಂಡೇ ಪರವಾನಗಿ ನೀಡು­ವು­ದರಿಂದ        ದುರುಪಯೋಗ ಕಡಿಮೆ.

ಪೊಲೀಸ್‌ ಇಲಾಖೆ ಶಿಫಾರಸಿನ ಮೇರೆಗೆ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ಕಮಿಷನರೇಟ್‌ ಇರುವೆಡೆ ಪೊಲೀಸ್‌ ಆಯುಕ್ತರು ಪರವಾನಗಿ ನೀಡು­ತ್ತಾರೆ. ಪರವಾನಗಿ ಪಡೆದವ­ರಷ್ಟೇ ಶಸ್ತ್ರಾಸ್ತ್ರ ಖರೀದಿಸಬಹುದು ಎನ್ನುತ್ತಾರೆ ಅಧಿಕಾರಿಗಳು.

ಶುಲ್ಕ ಭರಿಸಬೇಕು: ಆರಂಭದಲ್ಲಿ ವರ್ಷದ ಅವ­ಧಿಗೆ ಪರವಾನಗಿ ನೀಡಲಾಗುತ್ತದೆ. ನಂತರ ಪ್ರತಿ 3 ವರ್ಷಗಳಿಗೊಮ್ಮೆ ನವೀಕರಣ ಕಡ್ಡಾಯ. ಹೊಸ ಪರವಾನಗಿ ಮತ್ತು ನವೀಕರಣಕ್ಕೆ ಸಿಂಗಲ್‌ ಬ್ಯಾರೆಲ್‌ ಅಥವಾ ಡಬಲ್‌ ಬ್ಯಾರೆಲ್‌ ಬಂದೂಕಿಗೆ, ಪಿಸ್ತೂಲ್‌, ರಿವಾಲ್ವರ್‌ಗೆ ನಿಗದಿತ ಶುಲ್ಕ ಭರಿಸಬೇಕಾಗುತ್ತದೆ.

ಕೆಲ ಸೈನಿಕರು ಸೇವಾ ನಿವೃತ್ತಿ ಹೊಂದುವ ಮುನ್ನವೇ ರಕ್ಷಣಾ ಪಡೆಯಲ್ಲಿ ಬಂದೂಕು ಪರವಾ­ನಗಿ ಪಡೆದಿರುತ್ತಾರೆ. ಅಲ್ಲಿಯೇ ಪಿಸ್ತೂಲ್‌, ರಿವಾಲ್ವರ್‌ ಖರೀದಿಸಿರು­ತ್ತಾರೆ. ಸೇವಾ ನಿವೃತ್ತಿ ನಂತರ ಅವರವರ ಊರಿಗೆ ಪರವಾನಗಿ ವರ್ಗಾಯಿಸಿಕೊಳ್ಳುತ್ತಾರೆ.

ಜಿಲ್ಲಾ ಮತ್ತು ರಾಜ್ಯ ವ್ಯಾಪ್ತಿಗೆ ಒಳಪಟ್ಟು ಪರವಾನಗಿ ನೀಡುವ ಅಧಿಕಾರ ಜಿಲ್ಲಾ­ಧಿಕಾರಿಗಳಿಗಿದೆ. ಬಂದೂಕನ್ನು ಹೊರರಾಜ್ಯಗಳಿಗೆ  ತೆಗೆದು­ಕೊಂಡು ಹೋಗಲು  ಸೀಮಿತ ಅವಧಿಗೆ ಮಾತ್ರ (ಪರವಾನಗಿ ಹೊಂದಿರುವವರಿಗೆ) ಅನುಮತಿ ದೊರೆಯುತ್ತದೆ. ಹೊರರಾಜ್ಯಗಳ ವ್ಯಾಪ್ತಿ ಹೊಂದಿದ ಪರವಾನಗಿ ನೀಡು­ವು­ದನ್ನು ರಾಜ್ಯ ಗೃಹ ಸಚಿವಾಲಯ ನಿರ್ಧ­ರಿ­ಸುತ್ತದೆ. ಬಂದೂಕು ಅಥವಾ ರಿವಾ­ಲ್ವರ್‌ ಜತೆ ಪರವಾನಗಿ ಪ್ರತಿ ಇಟ್ಟು­ಕೊಳ್ಳು­ವುದು ಕಡ್ಡಾಯ.

ಪೊಲೀಸ್‌ ಇಲಾಖೆಯಿಂದ ಆಗಾಗ ನಾಗರಿಕ ಬಂದೂಕು ತರಬೇತಿ ಶಿಬಿರ ನಡೆಸಲಾಗುತ್ತದೆ. ಗನ್‌, ರಿವಾಲ್ವಾರ್‌ ಬಳಸುವುದು ಹೇಗೆ ಎನ್ನುವುದನ್ನು ಕಲಿಸಲಾಗುತ್ತದೆ. ಕೇವಲ ಅರ್ಜಿ ಸಲ್ಲಿಸಿದರೆ ಸಾಲದು, ಅದರೊಂದಿಗೆ ತರಬೇತಿ ಪಡೆದ ಪ್ರಮಾಣಪತ್ರವನ್ನೂ ಸಲ್ಲಿಸಬೇಕು. ಅಗತ್ಯ ದಾಖಲೆಗಳಿ ಲ್ಲದಿದ್ದಲ್ಲಿ ಅಂಥ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.

ಹಲವರು ತರಬೇತಿ ಪಡೆಯದೇ, ಪರವಾನಗಿ ನೀಡುವಂತೆ ಕೋರಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿರುವುದು ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.

ಅರ್ಹತೆ ಏನು?
*ಕನಿಷ್ಠ 21 ವರ್ಷ ವಯಸ್ಸಾಗಿರ­ಬೇಕು.
* ಪೊಲೀಸ್‌ ಇಲಾಖೆ/ ಕರ್ನಾಟಕ ರೈಫಲ್‌ ಸಂಸ್ಥೆಯಿಂದ ಶಸ್ತ್ರಾಸ್ತ್ರ ಬಳ­ಕೆ ತರ­ಬೇತಿ ಪಡೆದಿರಬೇಕು.
*ವಾಸ ದೃಢೀಕರಣ ಮತ್ತಿತರ   ದಾಖಲೆ ಕಡ್ಡಾಯ.
*ಪತಿ–ಪತ್ನಿ, ತಂದೆ–ಮಗ ಇಬ್ಬರೂ ಒಂದೇ ಬಂದೂಕು ಉಪಯೋಗಿಸುವ ಪರವಾನಗಿ ಪಡೆಯ ಬಹುದು. ಇದಕ್ಕಾಗಿ ಇಬ್ಬರೂ ಬಳಕೆಯ ತರಬೇತಿ ಪಡೆದಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT