ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ನಂತರದ ಶಿಕ್ಷಣಕ್ಕೆ ಹಲವು ಆಯ್ಕೆ

ಜಿಲ್ಲೆಯಲ್ಲಿ ವಿಜ್ಞಾನ, ಕಲೆ, ವಾಣಿಜ್ಯ, ವೃತ್ತಿಪರ ಕೋರ್ಸ್‌ಗಳು ಲಭ್ಯ
Last Updated 25 ಮೇ 2017, 9:41 IST
ಅಕ್ಷರ ಗಾತ್ರ

ಬೆಳಗಾವಿ: ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವಾದ ಎಸ್ಸೆಸ್ಸೆಲ್ಸಿ ಮುಗಿದ ನಂತರ ತೆಗೆದುಕೊಳ್ಳುವ ಕೋರ್ಸ್‌ ಭವಿಷ್ಯವನ್ನೇ ಬದಲಾಯಿಸುತ್ತದೆ. ಆಯ್ಕೆಗಳ ಮಹಾಪೂರವನ್ನೇ ತೆರೆದಿಡುವ ಈ ಹೊತ್ತಿನಲ್ಲಿ ಹತ್ತಾರು ಕೋರ್ಸ್‌ಗಳು ಕಣ್ಮುಂದೆ ಬಂದು ನಿಲ್ಲುತ್ತವೆ. ಜಿಲ್ಲೆಯಲ್ಲೂ ಹಲವು ಅವಕಾಶಗಳಿವೆ.

ವಿದ್ಯಾರ್ಥಿಯ ಶೈಕ್ಷಣಿಕ ಜೀವನ ಎತ್ತ ಸಾಗಬೇಕು ಎನ್ನುವುದನ್ನು ನಿರ್ಧರಿಸುವ ಸಮಯವಿದು. ಹೀಗಾಗಿ, ಕೋರ್ಸ್‌ಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ಶಿಕ್ಷಣ ತಜ್ಞರ ಸಲಹೆ. ಜಿಲ್ಲೆಯಲ್ಲಿ ಲಭ್ಯವಿರುವ ಕೋರ್ಸ್‌ಗಳ ಸಂಕ್ತಿಪ್ತ ಪರಿಚಯ ಇಲ್ಲಿದೆ. ವಿದ್ಯಾರ್ಥಿಗಳು ಆಸಕ್ತಿಗೆ ತಕ್ಕ ಕೋರ್ಸ್‌ ಸೇರಬಹುದು.

ಜಿಲ್ಲೆಯ ಚಿತ್ರಣ: ಪಿಯುನಲ್ಲಿ ಕಲೆ, ವಿಜ್ಞಾನ, ವಾಣಿಜ್ಯ ಸಂಯೋಜನೆ ಆಯ್ಕೆ ಮಾಡಿಕೊಳ್ಳಬಹುದು. ಐಟಿಐ, ಡಿಪ್ಲೊಮಾ, ಸರ್ಟಿಫಿಕೆಟ್‌ ಕೋರ್ಸ್‌ಗಳಿವೆ (ವೃತ್ತಿಪರ). 62 ಸರ್ಕಾರಿ, 82 ಅನುದಾನಿತ ಹಾಗೂ 163 ಅನುದಾನರಹಿತ ಪಿಯು ಕಾಲೇಜುಗಳಿವೆ. ಬೆಳಗಾವಿ ಹಾಗೂ ಅಥಣಿಯಲ್ಲಿ 2 ಸರ್ಕಾರಿ ಪಾಲಿಟೆಕ್ನಿಕ್‌, 3 ಅನುದಾನಿತ ಕಾಲೇಜು, 17 ಖಾಸಗಿ ಪಾಲಿಟೆಕ್ನಿಕ್‌ಗಳಿವೆ. 14 ಸರ್ಕಾರಿ ಐಟಿಐಗಳಿದ್ದರೆ, 8 ಅನುದಾನಿತ ಹಾಗೂ 100ಕ್ಕೂ ಹೆಚ್ಚು ಖಾಸಗಿ ಐಟಿಐಗಳಿವೆ.

ಐಟಿಐ ಮಾಡುವವರಿಗೆ: ಜಿಲ್ಲೆಯಲ್ಲಿ ಹಲವು ಸರ್ಕಾರಿ ಹಾಗೂ ಅನುದಾನಿತ ಐಟಿಐ ಕಾಲೇಜುಗಳಲ್ಲಿ ಪ್ರವೇಶ ಅವಕಾಶವಿದೆ. ಬೆಳಗಾವಿ ನಗರ (ಬಾಲಕ/ ಬಾಲಕಿಯರು), ಖಾನಾಪುರ, ಯಮಕನಮರಡಿ, ನಿಪ್ಪಾಣಿ, ನೇಸರಗಿ, ರಾಮದುರ್ಗ, ಸವದತ್ತಿ, ಸದಲಗಾ, ಗೋಕಾಕ, ಕಿತ್ತೂರ, ಅಥಣಿ, ಚಿಕ್ಕೊಡಿ, ಅಕ್ಕೋಳದಲ್ಲಿ ಸರ್ಕಾರಿ ಐಟಿಐಗಳಿವೆ. 8 ಅನುದಾನಿತ (ಎಸ್.ಎಸ್.ಇ.ಟಿ, ಡಾ. ಶಿವಬಸವ, ಇಸ್ಲಾಮಿಯಾ, ಬಾಬುಕಾಕಾ, ಕೆ.ಡಿ. ಭರತೇಶ, ಅಲ್ಲಮಪ್ರಭು, ಮರಾಠ ಮಂಡಳ, ಎಸ್.ಎನ್.ವಿ.ಎಸ್.ಎಸ್) ಐಟಿಐಗಳಲ್ಲಿ ಪ್ರವೇಶ ಪಡೆಯಬಹುದು.

ಐಟಿಐ ಮಾಡಿದವರು ಡಿಪ್ಲೊಮಾ ಸೇರಬಹುದು, ಕೆಲಸಕ್ಕೆ ಪ್ರಯತ್ನಿಸುವುದಕ್ಕೂ ಅವಕಾಶವಿದೆ. ನಗರದ ಸರ್ಕಾರಿ ಐಟಿಐನಲ್ಲಿ 13 ಕೋರ್ಸ್‌ಗಳಿವೆ. ಎಲೆಕ್ಟ್ರಿಷಿಯನ್‌, ಫಿಟ್ಟರ್‌, ವೆಲ್ಡರ್‌, ಫೌಂಡ್ರಿಮನ್‌, ಆರ್ಕಿಟೆಕ್ಚರ್‌ ಶಾಖೆಗಳಿವೆ. ಮಾಹಿತಿಗೆ ಜಾಲತಾಣ www.emptrg.kar.nic.in ವೀಕ್ಷಿಸಬಹುದು. ಸಂಪರ್ಕ: 0831– 2440375.

ಡಿಪ್ಲೊಮಾ ಓದಿಗೆ, ಉದ್ಯೋಗಕ್ಕೆ ಅವಕಾಶ: ಬಹಳ ವರ್ಷ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ಆರ್ಥಿಕ ಶಕ್ತಿ ಇಲ್ಲ. ಕುಟುಂಬ ನಿರ್ವಹಣೆ ಜವಾಬ್ದಾರಿ ನಿರ್ವಹಿಸಲು ಉದ್ಯೋಗಕ್ಕೆ ಸೇರಬೇಕು ಎಂದುಕೊಳ್ಳುವವರಿಗೆ ಡಿಪ್ಲೊಮಾ ಕೋರ್ಸ್‌ ಆಶಾಕಿರಣವಾಗಿದೆ.

ಡಿಪ್ಲೊಮಾ ನಂತರ ಎಂಜಿನಿಯರಿಂಗ್‌ 3ನೇ ಸೆಮಿಸ್ಟರ್‌ಗೆ ಪ್ರವೇಶ ಪಡೆಯಲೂ ಅವಕಾಶವಿದೆ. ಜಿಲ್ಲೆಯಲ್ಲಿ ಬೆಳಗಾವಿ ನಗರ ಹಾಗೂ ಅಥಣಿಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌­ಗಳಿವೆ. ಸಿವಿಲ್‌, ಮೆಕ್ಯಾನಿಕಲ್‌, ಎಲೆಕ್ಟ್ರಿಕಲ್‌, ಆಟೊಮೊಬೈಲ್‌, ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಷನ್‌, ಕಮರ್ಷಿಯಲ್‌ ಪ್ರಾಕ್ಟೀಸ್‌ ವಿಭಾಗಗಳಿವೆ.

ಪ್ರತಿ ವಿಭಾಗದಲ್ಲೂ ತಲಾ 63 ಸೀಟುಗಳು ಲಭ್ಯವಿದೆ. ಪ್ರತಿ ವಿಭಾಗದಲ್ಲೂ ತಲಾ 3 ಸೂಪರ್‌ ನ್ಯೂಮರಿ ಕೋಟಾದಡಿ ಪ್ರವೇಶ ನೀಡಲಾಗುತ್ತಿದೆ. ಇದರಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ.

ಅಥಣಿ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಸಿವಿಲ್‌, ಕಂಪ್ಯೂಟರ್‌ ಸೈನ್ಸ್‌, ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಷನ್‌ ಹಾಗೂ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ (ಜನರಲ್‌) ವಿಭಾಗಗಳಿದ್ದು, ತಲಾ 60 ಸೀಟುಗಳಿವೆ.

ಸಂಪರ್ಕ: 0831– 2460486 ಬೆಳಗಾವಿ ಕೃಷಿ ವಿಜ್ಞಾನಕ್ಕೊಂದು ಡಿಪ್ಲೊಮಾ ಕೃಷಿ ವಿಷಯದಲ್ಲಿ ಆಸಕ್ತಿ ಇರುವವರು ಎಸ್ಸೆಸ್ಸೆಲ್ಸಿ ನಂತರ ಇಲ್ಲಿನ ಕೆಎಲ್‌ಇ ಸಂಸ್ಥೆಯಲ್ಲಿ ಡಿಪ್ಲೊಮಾ ಇನ್‌ ಅಗ್ರಿಕಲ್ಚರ್‌ ಸೈನ್ಸ್‌ಗೆ ಪ್ರವೇಶ ಪಡೆಯಬಹುದು.

2 ವರ್ಷದ ಅವಧಿಯ ಈ ಕೋರ್ಸ್‌ಗೆ 60 ಮಂದಿಗೆ ಅವಕಾಶವಿದೆ. ಕೃಷಿಗೆ ಸಂಬಂಧಿಸಿದ ವಿಷಯಗಳನ್ನು ಇಲ್ಲಿ ಕಲಿಸಲಾಗುವುದು. ಈ ಕೋರ್ಸ್‌ ಮಾಡಿದವರು ರಸಗೊಬ್ಬರ, ಬಿತ್ತನೆಬೀಜ, ಸಕ್ಕರೆ ಕಾರ್ಖಾನೆಗಳಲ್ಲಿ ಉದ್ಯೋಗದ ಅವಕಾಶ ಕಂಡುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT