ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲ ಮೀನು ಇಳುವರಿ ಕುಸಿತ

ಮಂಜುಗಡ್ಡೆ, ಮೀನೆಣ್ಣೆ ತಯಾರಿಕೆ ಉದ್ಯಮಕ್ಕೆ ಪೆಟ್ಟು, ಸಿಗಡಿ ಕೂಡ ಹೆಚ್ಚು ಸಿಗುತ್ತಿಲ್ಲ
Last Updated 25 ಮೇ 2017, 9:53 IST
ಅಕ್ಷರ ಗಾತ್ರ

ಕಾರವಾರ: ಕಳೆದ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಪಾಲಿಗೆ ಬಂಪರ್‌ ಎನಿಸಿದ್ದ ಕಡಲ ಮೀನು ಇಳುವರಿ ಈ ಬಾರಿ ಇಳಿಕೆ ಕಂಡಿದೆ.

ಕಳೆದ ವರ್ಷಕ್ಕಿಂತ ಈ ಬಾರಿ 5,438 ಟನ್‌ ಮೀನು ಕಡಿಮೆಯಾಗಿದೆ. ಮೀನುಗಾರಿಕೆ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಸೆಪ್ಟೆಂಬರ್‌ನಿಂದ ಫೆಬ್ರುವರಿವರೆಗೆ ಮೀನು ಶಿಕಾರಿ ಸ್ವಲ್ಪ ಉತ್ತಮವಾಗಿದ್ದು, ಉಳಿದ ತಿಂಗಳಲ್ಲಿ ಮೀನುಗಾರಿಕೆ ಚಟುವಟಿಕೆ ಕುಸಿದಿದೆ.

ಸಿಗಡಿ ಬೇಟೆಯೂ ಕುಸಿತ: ಕಡಲಲ್ಲಿ ಈ ಬಾರಿ ಸಿಗಡಿ ಬೇಟೆ ಕೂಡ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಹೆಚ್ಚು ಲಾಭದಾಯಕವಾಗಿರುವ ಸಿಗಡಿಯೂ ಅರ್ಧಕರ್ಧ ಕಡಿಮೆಯಾಗಿದ್ದು, ಮೀನುಗಾರರನ್ನು ಕಂಗಾಲು ಮಾಡಿದೆ. 2015–16ರಲ್ಲಿ 9,851 ಟನ್‌ ಸಿಗಡಿ ದೊರೆತು ₹105 ಕೋಟಿ ವಹಿವಾಟು ನಡೆದಿತ್ತು. 2016–17ರ ಸಾಲಿನಲ್ಲಿ 4,720 ಟನ್‌ ದೊರೆತಿದ್ದು, ₹48.16 ಕೋಟಿ ವಹಿವಾಟು ನಡೆದಿದೆ.

ಪರ್ಸಿನ್‌ ದೋಣಿಗಳು ಲಂಗರು: ಕಡಲಲ್ಲಿ ಮತ್ಸ್ಯಕ್ಷಾಮ ಇರುವುದರಿಂದ ಪರ್ಸಿನ್‌ ದೋಣಿಗಳು ಎರಡು ತಿಂಗಳಿನಿಂದ ಮೀನು ಶಿಕಾರಿಗೆ ಇಳಿದಿಲ್ಲ. ಹೀಗಾಗಿ ಮೀನುಗಾರಿಕೆ ಚಟುವಟಿಕೆ ಸ್ತಬ್ಧವಾಗಿದ್ದು, ಕಾರವಾರದ ಬೈತಕೋಲ್‌ ಬಂದರು ಪ್ರದೇಶ ಭಣಗುಡುತ್ತಿವೆ.

‘ಲೈಟ್‌ ಫಿಶಿಂಗ್‌ ಮಾಡುವುದಕ್ಕೆ ಬೇರೆ ರಾಜ್ಯಗಳಲ್ಲಿ ಅನುಮತಿ ಇದೆ. ಆದರೆ ನಮ್ಮ ರಾಜ್ಯ ಸರ್ಕಾರ ಅದನ್ನು ನಿಷೇಧ ಮಾಡಿದೆ. ಅಲ್ಲದೇ ಕಡಲಲ್ಲಿ ಮೀನು ಸಿಗುತ್ತಿಲ್ಲವಾದ್ದರಿಂದ ಪರ್ಸಿನ್‌ ದೋಣಿಗಳು ಬಂದರಿನಲ್ಲೇ ಲಂಗರು ಹಾಕಿವೆ’ ಎನ್ನುತ್ತಾರೆ ಪರ್ಸಿನ್‌ ಬೋಟ್‌ ಯೂನಿಯನ್‌ ಅಧ್ಯಕ್ಷ ಮೋಹನ್‌ ಬೋಳಶೆಟ್ಟಿಕರ.

ಮಂಜುಗಡ್ಡೆ, ಮೀನೆಣ್ಣೆ ಘಟಕಕ್ಕೂ ಪೆಟ್ಟು ಮೀನುಗಾರಿಕೆಯನ್ನು ಅವಲಂಬಿಸಿದ ಮಂಜುಗಡ್ಡೆ ಹಾಗೂ ಮೀನೆಣ್ಣೆ ತಯಾರಿಕಾ ಉದ್ಯಮಕ್ಕೂ ಪೆಟ್ಟು ಬಿದ್ದಿದೆ. ಅಲ್ಲದೇ ಬಂದರು ಪ್ರದೇಶದಲ್ಲಿ ವಾಹನಗಳಿಗೆ ಮೀನು ತುಂಬುತ್ತಿದ್ದ ಕಾರ್ಮಿಕರ ಕೈಗೂ ಕೆಲಸ ಇಲ್ಲದಂತಾಗಿದೆ.

‘ಭೂತಾಯಿ (ತಾರ್‍ಲೆ) ಮೀನಿನ ಪೂರೈಕೆ ನಿಂತಿದೆ. ಹೀಗಾಗಿ ಮುದಗಾ ಮೀನೆಣ್ಣೆ ಘಟಕಕ್ಕೆ ಫೆಬ್ರುವರಿ ತಿಂಗಳಲ್ಲಿ ಬೀಗ ಬಿದ್ದಿದೆ. ಡಿಸೆಂಬರ್‌, ಜನವರಿಯಲ್ಲಿ ಮೀನು ಅಧಿಕವಾಗಿ ಪೂರೈಕೆಯಾಗಿತ್ತು. ಆನಂತರ ಸಂಪೂರ್ಣ ನಿಂತಿದೆ’ ಎನ್ನುತ್ತಾರೆ ಅನ್‌ಪಾಲ್‌ ಮರೈನ್‌ ಪ್ರಾಡಕ್ಟ್‌  ಸಂಸ್ಥೆಯ ಅಚ್ಯುತ ಕಾಮತ್‌.

*
ಅವೈಜ್ಞಾನಿಕ ಮೀನುಗಾರಿಕೆ ಪದ್ಧತಿಗೆ ರಾಜ್ಯ ಸರ್ಕಾರ ಕಡಿ ವಾಣ ಹಾಕಿದೆ. ಇದರಿಂದಾಗಿ ಬರುವ ದಿನಗಳಲ್ಲಿ ಕಡಲ ಮೀನುಗಾರಿಕೆ ಉತ್ತಮಗೊಳ್ಳುವ ನಿರೀಕ್ಷೆ ಇದೆ.
-ಎಂ.ಎಲ್‌.ದೊಡ್ಡಮನಿ,
ಉಪನಿರ್ದೇಶಕರು, ಮೀನುಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT