ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪಿಯನ್ಸ್‌ ಟ್ರೋಫಿ ಬಳಿಕ ಕುಂಬ್ಳೆ ನಿರ್ಗಮನ: ಮುಖ್ಯ ಕೋಚ್‌ ಹುದ್ದೆಗೆ ಬಿಸಿಸಿಐನಿಂದ ಅರ್ಜಿ ಆಹ್ವಾನ

Last Updated 25 ಮೇ 2017, 11:38 IST
ಅಕ್ಷರ ಗಾತ್ರ

ಮುಂಬೈ: ಭಾರತ ಪುರುಷರ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಅರ್ಜಿ ಆಹ್ವಾನಿಸಿದೆ.

ಸದ್ಯ ತಂಡದ ಕೋಚ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಅವರ ಜತೆಗಿನ ಒಪ್ಪಂದ ಚಾಂಪಿಯನ್ಸ್‌ ಟ್ರೋಫಿ ಬಳಿಕ ಮುಕ್ತಾಯವಾಗಲಿದ್ದು, ಅವರ ನಿರ್ಗಮನದ ಬಳಿಕ ತೆರವಾಗಲಿರುವ ಸ್ಥಾನವನ್ನು ಭರ್ತಿ ಮಾಡಲು ಬಿಸಿಸಿಐ ಅರ್ಜಿ ಆಹ್ವಾನಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಕಾರ್ಯದರ್ಶಿ ಅಮಿತಾಬ್‌ ಚೌಧರಿ, ‘ಭಾರತ ಕ್ರಿಕೆಟ್‌ ತಂಡದ(ಪುರುಷರ) ಮುಖ್ಯ ಕೋಚ್‌ ಸ್ಥಾನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಹುದ್ದೆ ಅಲಂಕರಿಸಲು ಇಚ್ಛಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು’ ಎಂದು ತಿಳಿಸಿದ್ದಾರೆ.

ಆಯ್ಕೆ ಪ್ರಕ್ರಿಯೆಯಲ್ಲಿ ಸದ್ಯ ಕೋಚ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಕುಂಬ್ಳೆ ಅವರಿಗೆ ನೇರ ಪ್ರವೇಶ ನೀಡಲಾಗಿದೆ. ಸುಪ್ರೀಂ ಕೋರ್ಟ್‌ ನಿಯೋಜಿಸಿರುವ ನಿರ್ವಾಹಕರ ಸಮಿತಿ(ಸಿಒಎ) ಮತ್ತು ಕ್ರಿಕೆಟ್‌ ಸಲಹಾ ಸಮಿತಿಗಳು ಒಟ್ಟಾಗಿ ಆಯ್ಕೆ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಲಿದ್ದು, ಸಂಪೂರ್ಣ ಪಾರದರ್ಶಕ ಮತ್ತು ನ್ಯಾಯ ಸಮ್ಮತವಾಗಿರಲಿದೆ.

ಬಿಸಿಸಿಐನ ತ್ರಿ ಸದಸ್ಯ ಕ್ರಿಕೆಟ್‌ ಸಲಹಾ ಮಂಡಳಿಯ ಸದಸ್ಯರಾಗಿರುವ ಸಚಿನ್‌ ತೆಂಡುಲ್ಕರ್‌, ಸೌರವ್‌ ಗಂಗೂಲಿ ಹಾಗೂ ವಿವಿಎಸ್‌ ಲಕ್ಷ್ಮಣ್‌ ಅವರು ಅಭ್ಯರ್ಥಿಗಳ ಸಂದರ್ಶನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅರ್ಜಿ ಸಲ್ಲಿಸಲು 2017, ಮೇ 31 ಕೊನೆಯ ದಿನವಾಗಿದ್ದು, ನಿಗದಿತ ದಿನಾಂಕದೊಳಗೆ ಇ–ಮೇಲ್‌ ಮೂಲಕ ಅಥವಾ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಕುಂಬ್ಳೆ ಅವರು 2016ರಲ್ಲಿ ಭಾರತ ತಂಡದ ಮುಖ್ಯ ಕೋಚ್‌ ಆಗಿ ನೇಮಕವಾಗಿದ್ದರು. ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ವೆಸ್ಟ್‌ಇಂಡೀಸ್‌, ನ್ಯೂಜಿಲ್ಯಾಂಡ್‌, ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಗಳಲ್ಲಿ ಉತ್ತಮ ಪ್ರದರ್ಶನ ತೋರಿ ಜಯದ ಸಂಭ್ರಮ ಆಚರಿಸಿತ್ತು. ಜತೆಗೆ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯವನ್ನೂ ಜಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT