ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮಹಾಭಾರತ'ದಲ್ಲಿ ಕರ್ಣನ ಪಾತ್ರಧಾರಿ ನಾಗಾರ್ಜುನ್?

Last Updated 25 ಮೇ 2017, 13:32 IST
ಅಕ್ಷರ ಗಾತ್ರ

ತಿರುವನಂತಪುರಂ: ₹1000 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 'ಮಹಾಭಾರತ' ಚಿತ್ರದಲ್ಲಿ ತೆಲುಗು ನಟ ಅಕ್ಕಿನೇನಿ ನಾಗಾರ್ಜುನ್ ಕರ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಎಂ.ಟಿ ವಾಸುದೇವನ್ ನಾಯರ್ ಅವರ 'ರಂಡಾಮೂಳಂ' ಕೃತಿಯನ್ನು ಆಧರಿಸಿದ ಮಹಾಭಾರತ ಚಿತ್ರವನ್ನು ಜಾಹೀರಾತು ಚಿತ್ರಗಳ ನಿರ್ದೇಶಕ ವಿ.ಎ.ಶ್ರೀಕುಮಾರ್ ಮೆನನ್ ನಿರ್ದೇಶಿಸುತ್ತಿದ್ದಾರೆ.

ಈ ಸಿನಿಮಾದಲ್ಲಿ ಭೀಮನ ಪಾತ್ರದಲ್ಲಿ ಮೋಹನ್ ಲಾಲ್ ಕಾಣಿಸಿಕೊಳ್ಳಲಿದ್ದಾರೆ. ಆದಾಗ್ಯೂ, ಇನ್ನಿತರ ಪಾತ್ರಗಳಲ್ಲಿ ಯಾವ ನಟರು ಕಾಣಿಸಿಕೊಳ್ಳಲಿದ್ದಾರೆ ಎಂಬುದರ ಬಗ್ಗೆ ಇಲ್ಲಿಯವರೆಗೆ ಮಾಹಿತಿ ಲಭಿಸಿಲ್ಲ.

ಈ ನಡುವೆಯೇ ಐಶ್ವರ್ಯಾ ರೈ, ಅಮಿತಾಬ್ ಬಚ್ಚನ್ ಮತ್ತು ಪ್ರಭಾಸ್ ಈ ಸಿನಿಮಾದಲ್ಲಿ ಪಾತ್ರ ವಹಿಸಲಿದ್ದಾರೆ ಎಂಬ ವದಂತಿಯೂ  ಹಬ್ಬಿದೆ.

ಬಲ್ಲಮೂಲಗಳ ಪ್ರಕಾರ ಕರ್ಣನ ಪಾತ್ರಕ್ಕೆ ನಾಗಾರ್ಜುನ ಅವರನ್ನು ಆಯ್ಕೆ ಮಾಡಲಾಗಿದ್ದು ಈ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ.

ನಾಗಾರ್ಜುನ ಅವರ ಪುತ್ರ ನಾಗ ಚೈತನ್ಯ ಅವರ ನೂತನ ಚಿತ್ರ 'ರಾರಾಂಡಾಯಿ ವೆದುಕ ಚುದ್ದಂ' ಪ್ರಚಾರ ಕಾರ್ಯಕ್ರಮದ ವೇಳೆ  ಮಹಾಭಾರತದ ಬಗ್ಗೆ ನಾಗಾರ್ಜುನ ಮಾತನಾಡಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ಎರಡು ವರ್ಷಗಳ ಹಿಂದೆ ಕರ್ಣನ ಪಾತ್ರವನ್ನು ಮಾಡುತ್ತೀರಾ? ಎಂದು ಎಂ.ಟಿ ಸರ್ ನನ್ನಲ್ಲಿ ಕೇಳಿದ್ದರು. ಮಹಾಭಾರತ ಸಿನಿಮಾಗಾಗಿ  ಶ್ರೀಕುಮಾರ್ ಅವರು ಕಳೆದ ನಾಲ್ಕು ವರ್ಷದಿಂದ ಪರಿಶ್ರಮ ಪಡುತ್ತಿದ್ದಾರೆ ಎಂಬುದು ನನಗೆ ಗೊತ್ತು. ಈ ನಡುವೆ ಎಂ.ಟಿ ಸರ್  ಮಹಾಭಾರತದ ಬಗ್ಗೆ ಮಾತನಾಡಿದ್ದಾರೆ. ನನ್ನ ಕಥಾಪಾತ್ರಕ್ಕೆ ಈ ಸಿನಿಮಾದಲ್ಲಿ ಪ್ರಾಧಾನ್ಯತೆ ಇರುವುದಾದರೆ ನಾನು ಅಭಿನಯಿಸುವೆ ಎಂದು ನಾನು ಒಪ್ಪಿದ್ದೇನೆ. ಈ ಪ್ರಾಜೆಕ್ಟ್  ಪ್ರಾಥಮಿಕ ಹಂತದಲ್ಲಿದೆ. ಹೆಚ್ಚಿನ ವಿವರಗಳನ್ನು ಬಹಿರಂಗ ಪಡಿಸಲಾಗುವುದಿಲ್ಲ ಎಂದು ನಾಗಾರ್ಜುನ ಹೇಳಿದ್ದಾರೆ.

ಅರಬ್‌ ಒಕ್ಕೂಟದಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಉದ್ಯಮಿ ಬಿ.ಆರ್.ಶೆಟ್ಟಿ ಈ ಚಲನಚಿತ್ರದ ನಿರ್ಮಾಪಕರು. ₹1000 ಕೋಟಿ ಬಜೆಟ್‍ ವೆಚ್ಚದಲ್ಲಿ ನಿರ್ಮಾಣವಾಗುವ 'ಮಹಾಭಾರತ' ಎರಡು ಭಾಗಗಳಲ್ಲಿ ತೆರೆ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT