ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೆಯ ಕೈಕರಣ, ನಟನೆಯ ವ್ಯಾಕರಣ

ಅಕ್ಷರ ಗಾತ್ರ

‘ನಟನೆ ಗ್ರಾಮರ್‌ನಂತೆ. ಮೊದಲು ಕಷ್ಟ. ಒಮ್ಮೆ ಅದರ ಹಿಡಿತ ಸಿಕ್ಕಿಬಿಟ್ಟರೆ, ಕಲಿಯುವ ಹುಮ್ಮಸ್ಸು ಕೊನೆಯಾಗೋದೇ ಇಲ್ಲ...’ – ಹೀಗೆ ನಟನೆಯನ್ನು ವ್ಯಾಕರಣಕ್ಕೆ ಹೋಲಿಸಿ ಮಾತನಾಡಿದ್ದು ಚಂದನ್ ಆಚಾರ್.

‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ಕಾಲೇಜಿನ ತರಲೆ ಹುಡುಗನಾಗಿ ಕಾಣಿಸಿಕೊಂಡಿದ್ದ ಇವರು ಮೈಸೂರಿನವರು. ಕೆ.ಆರ್. ನಗರ ಓದಿ ಬೆಳೆದ ಊರು.

ಶಾಲಾ–ಕಾಲೇಜಿನಲ್ಲಿ ಸಾಂಸ್ಕೃತಿಕ ಉತ್ಸವ ಬಂದರೆ ಸಾಕು, ನಾಟಕ, ನೃತ್ಯ ಎಲ್ಲದರಲ್ಲೂ ತಾಮುಂದು ಎಂದು  ನಿಲ್ಲುತ್ತಿದ್ದವರು ಚಂದನ್. ಅದೇ ಅವರ ನಟನಾ ಕಲೆಗೆ ತಳಪಾಯ ಹಾಕಿಕೊಟ್ಟಿದ್ದು.

ಒಂಬತ್ತನೇ ತರಗತಿಯಲ್ಲಿದ್ದಾಗ ಒಮ್ಮೆ ಅಂತರ್‌ಶಾಲಾ ಸ್ಪರ್ಧೆಗೆಂದು ಅಧ್ಯಾಪಕರೊಂದಿಗೆ ಮೈಸೂರಿಗೆ ಹೋಗಿದ್ದರು ಚಂದನ್. ಅಲ್ಲಿನ ಸುತ್ತೂರು ಜಾತ್ರೆಯಲ್ಲಿ ಕಲಾವಿದ ಮಂಡ್ಯ ರಮೇಶ್ ಅವರ ತಂಡದ ಮಕ್ಕಳು ‘ಅಲಿಬಾಬಾ ಮತ್ತು ನಲವತ್ತು ಕಳ್ಳರು’ ನಾಟಕ  ಪ್ರದರ್ಶಿಸುತ್ತಿದ್ದರು. ಆ ನಾಟಕವನ್ನು ಕಣ್ಣರಳಿಸಿಕೊಂಡು ನೋಡಿದ ಇವರಲ್ಲಿ, ಹೀಗೆ ಎಲ್ಲರೂ ನೋಡಿ ಮೆಚ್ಚುವಂತೆ, ನಾಟಕದ ಪಾತ್ರಕ್ಕೆ ಬಣ್ಣ ಹಚ್ಚಬೇಕೆಂಬ ಆಸೆ ಹುಟ್ಟಿಕೊಂಡಿತ್ತು. ಮೊದಲ ಬಾರಿ ನೋಡಿದ ಬೆಳಕು, ವಸ್ತ್ರವಿನ್ಯಾಸ, ವೇದಿಕೆ ಎಲ್ಲವೂ ಮನಸ್ಸಿನಲ್ಲಿ ಹೊಸ ಲೋಕವನ್ನೇ ಸೃಷ್ಟಿಮಾಡಿತ್ತು.

ಹತ್ತನೇ ತರಗತಿ ಮುಗಿದು ಕಾಲೇಜು ಮೆಟ್ಟಿಲು ತುಳಿದ ಚಂದನ್, ಆಗಲೇ ‘ನಟನಾ’ ತಂಡಕ್ಕೂ ಸೇರಿದರು. ಪಾಠದೊಂದಿಗೆ ರಂಗಭೂಮಿಯ ಪಾಠ ಶುರುವಾಗಿದ್ದು ಅಲ್ಲಿ. ತೆರೆಯ ಹಿಂದಿನ ರಂಗತಯಾರಿ, ಬರವಣಿಗೆ, ರಂಗಸಂಗೀತ ಎಲ್ಲದರ ಮೂಲವನ್ನು ಎಳೆಎಳೆಯಾಗಿ ಅರಿತುಕೊಂಡರು. ‘ಸಂಕ್ರಾಂತಿ’ ಇವರ ಮೊದಲ ನಾಟಕ. ಸಾಹಿತ್ಯದೊಂದಿಗಿನ ನಂಟು ರಂಗಭೂಮಿಯನ್ನು ಇನ್ನಷ್ಟು ಹತ್ತಿರಕ್ಕೆ ತಂದಿತ್ತು.

ಪಿಯುಸಿಯಲ್ಲಿದ್ದಾಗ ‘ಮಲೆಗಳಲ್ಲಿ ಮದುಮಗಳು’ ನಾಟಕಕ್ಕೆ ಬಣ್ಣ ಹಚ್ಚಿದರು. ‘ನಿರಂತರ’, ‘ರಂಗಾಯಣ’ದಲ್ಲಿ ಕೆಲಸ ಮಾಡಿದರು. ಕಾಲ ಸರಿದಂತೆ ಮೈಸೂರಿನ ಎಲ್ಲಾ ನಾಟಕ ತಂಡಗಳಲ್ಲೂ ಗುರುತಿಸಿಕೊಳ್ಳಲು ಸಾಧ್ಯವಾಯಿತು.

‘ನಟನಾಗೆ ಬಂದ ನಂತರ ‘ನಾಟಕ ನೋಡಬೇಕಿರುವುದು ಹೇಗೆ ಎಂಬುದನ್ನು ಮೊದಲು ಕಲಿತುಕೊಂಡೆ. ಕಲಿಯುತ್ತಾ ಕಲಿಯುತ್ತಾ ಹವ್ಯಾಸಿ, ವೃತ್ತಿಪರ ತಂಡಗಳು, ಅದರ ವ್ಯಾಪ್ತಿ, ನಿರೀಕ್ಷೆಗಳು, ನೋಡುಗರು, ಹೀಗೆ ಹಲವು ಆಯಾಮಗಳಲ್ಲಿ ರಂಗಭೂಮಿಯನ್ನು ನೋಡಲು ಕಲಿತುಕೊಂಡೆ. ಆ ಕೌತುಕಗಳ ನಡುವೆಯೇ ನನ್ನ ಆಸಕ್ತಿಯನ್ನು ಪೋಷಿಸುತ್ತಾ ಬಂದೆ’  ಎಂದು ತಮ್ಮ ಪಯಣದ ಆರಂಭವನ್ನು ನೆನಪಿಸಿಕೊಂಡರು.

ವಯೋಸಹಜ ಗೊಂದಲಗಳು ಚಂದನ್ ಅವರಿಗೂ ಇದ್ದವು. ಜೀವನ ನಿರ್ವಹಣೆಗೆ ಏನು ಮಾಡಬೇಕು, ಯಾವ ದಾರಿ ಆರಿಸಿಕೊಳ್ಳಬೇಕು ಎಂಬ ಆಲೋಚನೆಯ ತಕ್ಕಡಿ ಒಮ್ಮೊಮ್ಮೆ ಒಂದೊಂದು ಕಡೆ ತೂಗಿದ್ದೂ ಇದೆ. ಮನೆಯಲ್ಲಿ ‘ನಾಟಕ ಮಾಡ್ತೀನಿ’ ಅಂದಾಗ ಸಲೀಸಾಗಿ ಒಪ್ಪಿಕೊಳ್ಳುವ ವಾತಾವರಣವೇನೂ ಇರಲಿಲ್ಲ. ಜೀವನನಿರ್ವಹಣೆಗಾಗಿ ವಿದ್ಯೆ ಕಲಿಯಬೇಕೆಂದು ಪದವಿಯಲ್ಲಿ ಪತ್ರಿಕೋದ್ಯಮ ವಿಷಯ ಆರಿಸಿಕೊಂಡರು. ಅಲ್ಲಿ ಕಿರುಚಿತ್ರಗಳು, ಡಾಕ್ಯುಮೆಂಟರಿಗಳು, ಸಿನಿಮಾ ಬಗ್ಗೆ ಪಠ್ಯಗಳು ಇವರ ಆಸಕ್ತಿಗೆ ನೀರೆರೆದವು. ಸಿನಿಮಾದ ಕೆಲವು ತಾಂತ್ರಿಕ ವಿಷಯಗಳ ಪರಿಚಯವಾಯಿತು. ಮೈಸೂರು ಆಕಾಶವಾಣಿಯಲ್ಲಿ ‘ಬಿ’ ಗ್ರೇಡ್ ಆರ್ಟಿಸ್ಟ್, ರೆಡ್ ಎಫ್‌ಎಂನಲ್ಲಿ ಗಾಯಕ, ಉದ್ಘೋಷಕ – ಹೀಗೆ ಚಿಕ್ಕ ಪುಟ್ಟ ರೋಲ್‌ಗಳು ಜೀವನದಲ್ಲಿ ಬಂದುಹೋದವು.

ಪದವಿ ನಂತರ ಚಂದನ್ ಸೀದಾ ಮುಖ ಮಾಡಿದ್ದು ಹೆಗ್ಗೋಡಿನ ನೀನಾಸಮ್‌ ರಂಗಶಿಕ್ಷಣ ಕೇಂದ್ರದ ಕಡೆಗೆ. ಅಲ್ಲಿ ಅವರಿಗೆ ಇನ್ನಷ್ಟು ಅನುಭವಗಳನ್ನು ಬಗಲಿಗೆ ಹಾಕಿದ್ದು ‘ತಿರುಗಾಟ’. ಅಲ್ಲಿನ ‘ಗುಣಮುಖ’, ‘ತಾರ್ತೂಪ್‌’ ಎರಡು ನಾಟಕಗಳನ್ನು ರಾಜ್ಯವಿಡೀ ತಿರುಗಾಟ ಮಾಡಿ ಪ್ರದರ್ಶಿಸಿದರು. ‘ತಿರುಗಾಟ ರಂಗಭೂಮಿಯ ಹಲವು ಆಯಾಮಗಳನ್ನು ತಿಳಿಸಿಕೊಟ್ಟಿತು. ರಂಗಭೂಮಿ ಮಾತ್ರವಲ್ಲ, ‘ಮಿನಿಮಲಿಸಂ’ನ ಪಾಠವನ್ನೂ ಕಲಿಸಿತು’ ಎಂದು ಪಾಠಗಳನ್ನು ಮೆಲುಕು ಹಾಕುತ್ತಾರೆ ಚಂದನ್‌.

ಈ ಎಲ್ಲಾ ಓಡಾಟಗಳು ಅವರನ್ನು ತಂದು ನಿಲ್ಲಿಸಿದ್ದು ಬೆಂಗಳೂರಿಗೆ. ಹಲವು ನಾಟಕಗಳಲ್ಲಿ ಅಭಿನಯಿಸಿದ ನಂತರ ಸೇತುರಾಂ ಅವರ ಬಳಿ ಕೆಲಸ ಮಾಡುವ ಹಂಬಲ ಅವರನ್ನು ಬೆಂಗಳೂರಿಗೆ  ಕರೆತಂದಿತ್ತು. ಅವರ ‘ಅತೀತ’ ನಾಟಕದಲ್ಲಿ ಅಭಿನಯಿಸಿದರು. ಅಲ್ಲಿಂದ ಹಾದಿ ತೆರಳಿದ್ದು ಸಿನಿಮಾ ಕಡೆಗೆ. ‘ಕಿರಿಕ್ ಪಾರ್ಟಿ’ ಆಡಿಷನ್ ಇದೆ ಎಂದು ಗೊತ್ತಾದಾಗ, ಒಂದು ಕಲ್ಲು ಎಸೆದರಾಯಿತು ಎಂದುಕೊಂಡೇ ಆಡಿಷನ್ ಎದುರಿಸಿದರು. ‘ಮೂರು ಸಾವಿರ ಜನರಲ್ಲಿ ನಾನು ಆಯ್ಕೆಯಾಗಿದ್ದು ವಿಪರ್ಯಾಸವೇ’ ಎಂದು ನಗುತ್ತಾರೆ ಅವರು.

ನಿರ್ದೇಶಕ ಯೋಗರಾಜ್ ಭಟ್ ಅವರ ಬಳಿ ಕೆಲಸ ಮಾಡಬೇಕು ಎಂಬ ಆಸೆ ಈಗ ‘ಮುಗುಳು ನಗೆ’ ಮೂಲಕ ಕೈಗೂಡಿದೆ. ‘ದಯವಿಟ್ಟು ಗಮನಿಸಿ’ ಸಿನಿಮಾವೂ ಜೊತೆಗಿದೆ. ಎರಡು ಮೂರು ಸಿನಿಮಾಗಳು ಸದ್ಯಕ್ಕೆ ಚರ್ಚೆಯಲ್ಲಿವೆ. ‘ಚಿಕ್ಕವನಿದ್ದಾಗ ಏನೂ ತಿಳಿಯದೇ ನಟ ಆಗಬೇಕೆಂದುಕೊಳ್ಳುತ್ತಿದ್ದೆ. ಈಗ ಗಂಭೀರವಾಗಿ ಅನ್ನಿಸುತ್ತಿದೆ. ಅಡುಗೆಗೆ ಎಲ್ಲಾ ಪದಾರ್ಥಗಳು ಇದ್ದರೆ ರುಚಿ ತಾನೇ? ಹಾಗೇ ನಟನಾಗಲು ಏನೇನು ಕೌಶಲ ಬೇಕೋ ಅದನ್ನು ಕಲಿಯುತ್ತಿದ್ದೇನೆ. ಕಲಾವಿದ ಎನ್ನಿಸಿಕೊಳ್ಳುವ ಹಾದಿಯಲ್ಲಿ ಹುಡುಕಾಟ ಸಾಗಿದೆ. ಅದರಲ್ಲಿ ನನ್ನನ್ನು ನಾನೂ  ಹುಡುಕುತ್ತಿದ್ದೇನೆ’ ಎಂದು ನಟನೆಯ ಬಗ್ಗೆ ಪ್ರಬುದ್ಧವಾಗಿ ಮಾತನಾಡುತ್ತಾರೆ ಚಂದನ್‌.

**

ಹಾಡೊಂದು ಹಾಡಬೇಕು!
‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ‘ಲಾಸ್ಟ್‌ಬೆಂಚ್ ಪಾರ್ಟಿ’ ಹಾಡನ್ನು ಹಾಡಿದ್ದಾರೆ ಚಂದನ್. ಹಾಡೋದೂ ನನಗಿಷ್ಟ ಎಂದು ಹೇಳಿಕೊಳ್ಳುವ ಅವರ ಆಸಕ್ತಿಗಳ ಪಟ್ಟಿಯಲ್ಲಿ ಸಂಗೀತವೂ ಸೇರಿದೆ. ಪಿಯುಸಿ ನಂತರ ಮೈಸೂರಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು, ಸುಗಮ ಸಂಗೀತವನ್ನೂ ಕಲಿತಿದ್ದಾರೆ. ಬಿ.ಜಯಶ್ರಿ ಅವರೊಂದಿಗೆ ಹಾಡುಗಾರರಾಗಿಯೂ ಕೆಲಕಾಲ ಕೆಲಸ ಮಾಡಿದ್ದರು. ಇನ್ನಷ್ಟು ಕಲಿತು ಹಾಡುವುದನ್ನು ಮುಂದುವರೆಸುವ ಆಸೆ ಅವರಲ್ಲಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT