ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಳೆಯರ ದಾಳಿಗೆ ಮಳೆ–ಗಾಳಿ!

Last Updated 25 ಮೇ 2017, 19:30 IST
ಅಕ್ಷರ ಗಾತ್ರ

‘ಏ ಸೇಠೂ, ಬರೀ ದೊಡ್ಡ ದೊಡ್ಡ ಹೀರೊಗಳಿಗೆ ಮಾತ್ರ ಗಾಳಿ–ಮಳೆ ಬರಿಸೋಕೆ ಬರೋದಲ್ಲ, ನಮ್ಗೂ ಬರತ್ತೆ...’

ಹೀಗೆಂದು ಪುಟಾಣಿ ಅಚಿಂತ್ಯ ಕಾಲೆತ್ತಿ ನೆಲಕ್ಕೆ ಅಪ್ಪಳಿಸಿದ ಕೂಡಲೇ ದೂಳು ಮೇಲೆದ್ದು ತೆರೆಯ ತುಂಬ ಆವರಿಸಿಕೊಂಡಿತು. ಮರುಕ್ಷಣದಲ್ಲಿಯೇ ಧಾರಾಕಾರ ಮಳೆ!

ಪುಟಾಣಿಯ ಮುಗ್ಧತೆಯನ್ನೂ ಹೀರೊಯಿಸಮ್‌ನ ವ್ಯಂಗ್ಯವನ್ನೂ ಒಟ್ಟೊಟ್ಟಿಗೇ ವ್ಯಕ್ತಪಡಿಸುವ ಈ ದೃಶ್ಯ ‘ಎಳೆಯರು ನಾವು ಗೆಳೆಯರು’ ಸಿನಿಮಾದ್ದು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಡ್ರಾಮಾ ಜ್ಯೂನಿಯರ್ಸ್’ನ ಹತ್ತು ಮಕ್ಕಳನ್ನು ಇಟ್ಟುಕೊಂಡು ಈ ಸಿನಿಮಾವನ್ನು ಕಟ್ಟಿದ್ದಾರೆ ವಿಕ್ರಮ್‌ ಸೂರಿ .

ಜೂನ್‌ 2ರಂದು ರಾಜ್ಯದಾದ್ಯಂತ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ವಿತರಣೆಯ ಜವಾಬ್ದಾರಿಯನ್ನು ಜಾಕ್‌ ಮಂಜು ಹೊತ್ತುಕೊಂಡಿದ್ದಾರೆ. ಈ ಸಂಗತಿಯನ್ನು ಹಂಚಿಕೊಳ್ಳಲಿಕ್ಕಾಗಿಯೇ ತಂಡ ಪತ್ರಿಕಾಗೋಷ್ಠಿ ಕರೆದಿತ್ತು. ನಿರ್ದೇಶಕ ವಿಕ್ರಮ್‌ ಸೂರಿ ಅನುಪಸ್ಥಿತಿಯಲ್ಲಿ ನಿರ್ಮಾಪಕ ನಾಗರಾಜ್‌ ಗೋಪಾಲ್‌ ಚಿತ್ರದ ಕುರಿತು ಮಾಹಿತಿ ನೀಡಿದರು.

(ರಿಚರ್ಡ್‌ ಲೂಯಿಸ್‌)

‘ಕನ್ನಡದಲ್ಲಿ ಮಕ್ಕಳ ಕಥಾವಸ್ತುವನ್ನು ಇಟ್ಟುಕೊಂಡು ಮುಖ್ಯವಾಹಿನಿಯಲ್ಲಿ ಒಂದು ಸಿನಿಮಾ ಬಿಡುಗಡೆಯಾಗಿ ದಶಕಗಳೇ ಕಳೆದಿವೆ. ಈ ಚಿತ್ರದ ಕಥೆ ಮತ್ತು ಈ ಮಕ್ಕಳ ಪ್ರತಿಭೆಯ ಮೇಲೆ ನಂಬಿಕೆ ಇಟ್ಟುಕೊಂಡು ಚಿತ್ರನಿರ್ಮಾಣಕ್ಕೆ ಮುಂದಾಗಿದ್ದೇನೆ’ ಎಂದರು ನಾಗರಾಜ್‌. ‘ಯಾವುದೇ ಭಾಷೆಯ ಚಿತ್ರರಂಗದವರಾದರೂ ನಮ್ಮ ಕಡೆಗೆ ತಿರುಗಿ ನೋಡಬೇಕು. ಅಂಥ ಸಿನಿಮಾ ಮಾಡಿದ್ದೇವೆ’ ಎಂಬ ವಿಶ್ವಾಸವೂ ಅವರಿಗಿದೆ.  ‘ಶಿಕ್ಷಣದ ಜತೆಗೆ ಕೌಶಲವೂ ಮುಖ್ಯ’ ಎಂಬ ಅವರ ನಂಬಿಕೆಯನ್ನೇ ಈ ಸಿನಿಮಾವೂ ಪ್ರತಿಪಾದಿಸುತ್ತದಂತೆ.

ವಿತರಕ ಜಾಕ್‌ ಮಂಜು ಮಾತನಾಡಿ, ‘ಈ ಮಕ್ಕಳು ಮಾಡಿದ ಡ್ರಾಮಾ ಜ್ಯೂನಿಯರ್ಸ್‌ನ ಎಲ್ಲ ಸಂಚಿಕೆಗಳನ್ನೂ ನೋಡಿದ್ದೇನೆ. ಯಾವ ಸ್ಟಾರ್‌ ನಟರ ಜತೆಗೂ ಸಿಗದ ಖುಷಿ ಈ ಮಕ್ಕಳ ಜತೆ ವೇದಿಕೆ ಹಂಚಿಕೊಳ್ಳುವುದರಲ್ಲಿದೆ’ ಎಂದರು.

ಈ ಎಳೆಯರಿಗೆ ರಿಚರ್ಡ್‌ ಲೂಯಿಸ್‌ ಚಿತ್ರಕಥೆ ಬರೆದಿದ್ದಾರೆ. ಈ ಕೆಲಸ ಅವರಿಗೆ ಎಷ್ಟು ಖುಷಿಕೊಟ್ಟಿದೆಯೋ ಅಷ್ಟೇ ಸವಾಲಿನದೂ ಆಗಿತ್ತಂತೆ. ಸಿನಿಮಾದ ಅನುಭವ ಹಂಚಿಕೊಳ್ಳುವುದರ ಜತೆಗೆ ‘ಪತ್ರಕರ್ತರು ಸಿನಿಮಾವನ್ನೂ ಅತಿಯಾಗಿ ಹೊಗಳಬೇಕಿಲ್ಲ. ಆದರೆ ಕೆಟ್ಟದಾಗಿದ್ದಾಗ ಅತಿಯಾಗಿ ಟೀಕಿಸಬಾರದು. ಪರವಾಗಿಲ್ಲ ಒಮ್ಮೆ ನೋಡಬಹುದು ಎಂದು ಬರೆಯಬೇಕು’ ಎಂಬ ಉಪದೇಶವನ್ನೂ ನೀಡಿದರು.

ಈ ಚಿತ್ರವನ್ನು ಸಂಕಲನ ಮಾಡಿದ ಕೆಂಪರಾಜು ಅವರಿಗೂ ಕೆಲಸ ಖುಷಿಕೊಟ್ಟಿದೆಯಂತೆ. ಚಿತ್ರದಲ್ಲಿ ನಟಿಸಿರುವ ಹತ್ತು ಮಕ್ಕಳಲ್ಲಿ ಮಹತಿ, ಕೆಂಪರಾಜು, ತೇಜಸ್ವಿನಿ ಈ ಮೂವರು ಮಾತ್ರ ಕಾರ್ಯಕ್ರಮದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT