ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಧಾನ್ಯ ಉತ್ಸವಕ್ಕೆ ಲಾಲ್‌ಬಾಗ್‌ ಸಜ್ಜು

Last Updated 25 ಮೇ 2017, 19:30 IST
ಅಕ್ಷರ ಗಾತ್ರ

‘ರಾಜ್ಯದಲ್ಲಿ ಐದು ವರ್ಷಗಳಿಂದ ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚಿದೆ. ಇದಕ್ಕೆ ಕಾರಣ, ಅದರಲ್ಲಿರುವ ಔಷಧೀಯ ಮಹತ್ವ ಮತ್ತು ಹಲವಾರು ರೋಗಗಳಿಗೆ ದಿವ್ಯೌಷಧ ಎಂಬುದು...’

ಹೀಗೆಂದು ಮಾತು ಆರಂಭಿಸಿದರು ‘ಗ್ರಾಮೀಣ ಕುಟುಂಬ’ದ ಸಂಸ್ಥಾಪಕ ಎಂ.ಎಚ್. ಶ್ರೀಧರಮೂರ್ತಿ.

ಚಂದ್ರಾ ಲೇಔಟ್‌ ಮುಖ್ಯರಸ್ತೆಯಲ್ಲಿ ಐದು ವರ್ಷಗಳಿಂದ 70 ಮಂದಿ ರೈತರ ಜತೆ ಸೇರಿ ‘ಗ್ರಾಮೀಣ ಕುಟುಂಬ’ ಕಟ್ಟಿರುವ ಅವರು, ನಗರವಾಸಿಗಳಿಗೆ ಕಡಿಮೆ ದರದಲ್ಲಿ ಸಿರಿಧಾನ್ಯ ಪೂರೈಕೆ ಮಾಡುವ ಜತೆಗೆ  ಸಿರಿಧಾನ್ಯ ಅಡುಗೆ ತಯಾರಿಸುವ ತರಬೇತಿಯನ್ನೂ ನೀಡುತ್ತಿದ್ದಾರೆ.

‘ಸಿರಿಧಾನ್ಯಗಳ ಕುರಿತು ನಗರವಾಸಿಗಳಲ್ಲಿ ಇತ್ತೀಚೆಗೆ ಜ್ಞಾನ ಹೆಚ್ಚುತ್ತಿದೆ. ಆದರೆ, ಅವುಗಳಿಂದ ಅಡುಗೆ ಮಾಡುವ ವಿಧಾನದ ಅರಿವಿಲ್ಲ. ಇನ್ನು ಕೆಲವರಿಗೆ ತಪ್ಪು ಮಾಹಿತಿಯೂ ಇದೆ. ಅಕ್ಕಿಯಿಂದ ಮಾಡಬಹುದಾದ ಎಲ್ಲಾ ರೀತಿಯ ಅಡುಗೆಗಳನ್ನು ಸಿರಿಧಾನ್ಯಗಳಲ್ಲಿ ಮಾಡಬಹುದು. ಚಿತ್ರಾನ್ನ, ಮೊಸರನ್ನ, ಪುಳಿಯೋಗರೆ,  ಸಿಹಿ ಪೊಂಗಲ್, ಕೇಸರಿಬಾತ್  ಹೀಗೆ...’ ಎನ್ನುತ್ತಾರೆ ಶ್ರೀಧರ್.

‘ನಗರವಾಸಿಗಳಲ್ಲಿ ದೈಹಿಕ ಶ್ರಮ ಕಡಿಮೆ. ಕುಳಿತೇ ಕೆಲಸ ಮಾಡುವವರಿಗೆ ನಾರಿನಾಂಶದ ಆಹಾರದ ಅಗತ್ಯವೂ ಇದೆ. ಪಿಜ್ಜಾ, ಬರ್ಗರ್‌ನಂತಹ ಆಹಾರ ಸೇವಿಸುವವರಲ್ಲಿ ಬೊಜ್ಜು, ಜೀರ್ಣಕ್ರಿಯೆ  ಮತ್ತು ಮಲಬದ್ಧತೆಯ ಸಮಸ್ಯೆ ಇದೆ. ಅಂಥವರಿಗೆ ಈ ಸಿರಿಧಾನ್ಯಗಳ ಆಹಾರ ವರ’ ಎಂಬುದು ಅವರ ಅಭಿಮತ.

‘ಈಗಂತೂ ಬಡಾವಣೆಗಳಲ್ಲೂ ಸಿರಿಧಾನ್ಯ ಮೇಳಗಳು ಆಗಾಗ ನಡೆಯುತ್ತಿವೆ. ಅದರ ಬಗ್ಗೆ ವಿವರವಾದ ಮಾಹಿತಿ, ರಿಯಾಯಿತಿ ದರದಲ್ಲಿ ಸಿರಿಧಾನ್ಯಗಳ ಮಾರಾಟ, ಅಡುಗೆ ಸ್ಪರ್ಧೆ ಮತ್ತು ಉಚಿತ ತರಬೇತಿ ನೀಡಲು ಸಿರಿಧಾನ್ಯ ಉತ್ಸವ ಆಯೋಜಿಸಲಾಗಿದೆ’ ಎಂದು ಮಾಹಿತಿ ನೀಡುತ್ತಾರೆ ಅವರು.

ಉತ್ಸವದಲ್ಲಿ ಸಿರಿಧಾನ್ಯ ಬೆಳೆಗಾರರಿಗೆ ಸನ್ಮಾನ, ಸಿರಿಧಾನ್ಯ ಬೆಳೆ, ಕಾಡುಕೃಷಿ ತರಬೇತಿ, ಅಡುಗೆ ಸ್ಪರ್ಧೆ, ತರಬೇತಿ ಹಾಗೂ ಸಿರಿಧಾನ್ಯ  ಮಹತ್ವದ ಕುರಿತು ಡಾ.ಖಾದರ್ ಅವರಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ. ಮೇಳದಲ್ಲಿ 30ಕ್ಕೂ ಹೆಚ್ಚಿನ ಬಗೆಯ ಸಿರಿಧಾನ್ಯ ಆಹಾರ ವೈವಿಧ್ಯ ಪ್ರದರ್ಶನ, ಮಾರಾಟ ಮತ್ತು ಪ್ರಾತ್ಯಕ್ಷಿಕೆ ಕೂಡಾ ಇರುತ್ತದೆ.

(ಎಂ.ಎಚ್. ಶ್ರೀಧರಮೂರ್ತಿ)

ಉತ್ಸವದಲ್ಲಿ  ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಸಿರಿಧಾನ್ಯ ದೊರೆಯಲಿದೆ. ಮಿಶ್ರ ಧಾನ್ಯಗಳ ಪ್ಯಾಕಿಂಗ್‌ ವ್ಯವಸ್ಥೆಯ ಜತೆಗೆ ಕಾಟನ್ ಬ್ಯಾಗ್ ಹಾಗೂ ಸಿರಿಧಾನ್ಯ ಅಡುಗೆ ಪುಸ್ತಕವನ್ನೂ ಉಚಿತವಾಗಿ ಗ್ರಾಹಕರಿಗೆ ನೀಡುತ್ತಿರುವುದು ಉತ್ಸವದ ವಿಶೇಷಗಳಲ್ಲೊಂದು. ಪಾರ್ಕಿಂಗ್, ಕ್ರೆಡಿಟ್ ಡೆಬಿಟ್‌ ಕಾರ್ಡ್ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ.

ಮಾಹಿತಿಗೆ: 99806 51786, 97384 49133.

**

ಸಿರಿಧಾನ್ಯ ಪುಸ್ತಕಗಳ ಬಿಡುಗಡೆ
ಸಿರಿಧಾನ್ಯ ಉತ್ಸವ, ಸಿರಿಧಾನ್ಯ ಪುಸ್ತಕಗಳ ಬಿಡುಗಡೆ (ಲೇ: ಎಂ.ಎಚ್.ಶ್ರೀಧರಮೂರ್ತಿ): ಉದ್ಘಾಟನೆ– ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಅತಿಥಿ–ಆ.ನ.ಯಲ್ಲಪ್ಪ ರೆಡ್ಡಿ, ಡಾ.ವಸುಂಧರಾ ಭೂಪತಿ, ಪ್ರಭಾಸ್‌ಚಂದ್ರ ರೇ, ವಿಲಾಸ್‌ ಎ. ಥೋಣವಿ, ಸಿ.ಬಸವಲಿಂಗಯ್ಯ, ಬಿ.ಎಂ. ಹನೀಫ್‌,  ಜಗದೀಶ್, ಎಂ.ಎಚ್‌. ಶ್ರೀಧರಮೂರ್ತಿ, ಎಂ.ಆರ್. ಚಂದ್ರಶೇಖರ್, ಎಂ.ಕುಪ್ಪುಸ್ವಾಮಿ, ಎಂ.ಎ.ರವಿಕುಮಾರ್, ಗ್ರಾಮೀಣ ಕುಟುಂಬ ಪ್ರಶಸ್ತಿ ಪ್ರದಾನ: ಪುರಸ್ಕೃತರು– ಶಿವಳ್ಳಿ ಬೋರೆಗೌಡ, ಬಿ.ನಾಗರಾಜು, ಚಂದ್ರಕಾಂತ ಸಂಗೂರು, ಎಲ್ಲಪ್ಪ ರಾಮೋಜಿ, ಮೈಸೂರು ನಂಜುಂಡಯ್ಯ ದಿನೇಶ್‌, ದೀಪನ್, ಟಿ.ಜಿ.ಹನುಮಂತರಾಜು, ಸಂಪತ್‌ಕುಮಾರ್ ಭಟ್‌, ಎಂ.ಬಿ.ನಂದಿನಿ, ಆಯೋಜನೆ–ಗ್ರಾಮೀಣ ಕುಟುಂಬ, ಸ್ಥಳ– ಡಾ.ಮರಿಗೌಡ ಸ್ಮಾರಕ ಭವನ, ಲಾಲ್‌ಬಾಗ್, ಡಬಲ್ ರೋಡ್ ಗೇಟ್, ಮೇ 26 (ಶುಕ್ರವಾರ) ಬೆಳಿಗ್ಗೆ 11, ಉತ್ಸವ ಮೇ 29ರ ತನಕ ನಡೆಯಲಿದೆ. ಪ್ರವೇಶ ಉಚಿತ.

**

ಉತ್ಸವದಲ್ಲಿ ಏನೇನು ಸಿಗುತ್ತೆ?
* ನೈಸರ್ಗಿಕ ಸಾವಯವ ಕೃಷಿ ಉತ್ಪನ್ನ
* ಸಾವಯವ ಆಹಾರ, ಬಟ್ಟೆ
* ಪರಿಸರಸ್ನೇಹಿ ಉತ್ಪನ್ನಗಳು
* ಗ್ಲುಟನ್‌ಮುಕ್ತ ಉತ್ಪನ್ನಗಳು
* ಕಾಡುಜೇನು, ಎಣ್ಣೆ, ಸಾವಯವ ಬೆಲ್ಲ, ಸಕ್ಕರೆ, ತಾಳೆ ಸಕ್ಕರೆ.
* ಟೀ, ಕಾಫಿ, ಮಸಾಲೆ ಪದಾರ್ಥಗಳು
* ಕುಂಬಾರಿಕೆ, ಸಿಹಿತಿನಿಸುಗಳು
* ಸೌಂದರ್ಯವರ್ಧಕಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT