ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊನಗಳೇ ಇಲ್ಲದ ಕಲಾಕೃತಿಗಳ ಮಧ್ಯೆ...

Last Updated 25 ಮೇ 2017, 19:30 IST
ಅಕ್ಷರ ಗಾತ್ರ

ಆ ಗ್ಯಾಲರಿಯ ಒಂದು ಕಡೆ ವ್ಹೀಲ್‌ಚೇರ್‌ನಲ್ಲಿ ಕುಳಿತಿದ್ದ ರಾಮಕೃಷ್ಣನ್‌ ಅವರು ಹಸಿರು ಕಾನನದ ಚಿತ್ರ ಬಿಡಿಸುತ್ತಿದ್ದರು. ಎರಡು ನಿಮಿಷದ ಬಳಿಕ ಇತ್ತ ತಿರುಗಿದ ಅವರು ‘ಬಣ್ಣ ಇನ್ನೂ ಹಸಿಯಾಗಿದೆ’ ಎಂದು ಅಸ್ಪಷ್ಟ ಮಾತುಗಳಲ್ಲಿ ಹೇಳುತ್ತಾ ಅಕ್ಕ ವಿಜಯಾ ಬಳಿ ಬಂದರು.

ಕಲಾವಿದ ರಾಮಕೃಷ್ಣನ್‌ ನಾರಾಯಣಸ್ವಾಮಿ ಅವರಿಗೆ ದೈಹಿಕ ನ್ಯೂನತೆ ಇದೆ. ಆದರೆ ಮನೋಬಲವಿದ್ದರೆ ಸಾಧನೆ ಸಾಧ್ಯ ಎಂಬುದಕ್ಕೆ ಅವರು ಉತ್ತಮ ನಿದರ್ಶನ. ಅವರ ಕಲಾಕೃತಿಗಳು ಹಾಗೂ ಬಳಸಿದ ಬಣ್ಣಗಳಲ್ಲಿ ಅವರ ಜೀವನಪ್ರೀತಿಯ ಬಿಂಬವಿದೆ.

ಭಾರತೀಯ ವಿದ್ಯಾಭವನದ ಹನುಮಂತಪ್ಪ ಆರ್ಟ್‌ ಗ್ಯಾಲರಿಯಲ್ಲಿ  ನಡೆಯತ್ತಿರುವ ರಾಮಕೃಷ್ಣನ್‌ ಅವರ ಕಲಾಕೃತಿಗಳ ಪ್ರದರ್ಶನ ನೋಡಿದವರಿಗೆ ಹೀಗನ್ನಿಸುವುದು ಸಹಜ.

ಸೆರೆಬ್ರಲ್‌ ಪಾಲ್ಸಿ ಸಮಸ್ಯೆಯಿಂದಾಗಿ ಎರಡೂ ಕೈ ಮತ್ತು ಎಡಗಾಲಿನ ಸ್ವಾಧೀನ ಕಳೆದುಕೊಂಡಿರುವ ರಾಮಕೃಷ್ಣನ್‌ ಅವರು ಚಿತ್ರ ಬಿಡಿಸುವುದು ತಮ್ಮ ಬಲಗಾಲಿನಿಂದ.

ಹುಟ್ಟಿದ ಮೂರು ದಿನಕ್ಕೆ ಕಾಣಿಸಿಕೊಂಡ ಕಾಮಾಲೆ ರೋಗದಿಂದ ಮಿದುಳಿಗೆ ತೊಂದರೆಯಾಗಿತ್ತು. ಅಲ್ಲಿಂದೀಚೆ ರಾಮಕೃಷ್ಣನ್‌ ಅವರಿಗೆ ದೇಹದ ಶೇಕಡ 80ರಷ್ಟು ಭಾಗಗಳು ಸ್ವಾಧೀನದಲ್ಲಿಲ್ಲ. ಮಾತೂ ಅಸ್ಪಷ್ಟ. ತಮ್ಮ ದೈನಂದಿನ ಚಟುವಟಿಕೆಗಳಿಗೂ ಬೇರೆಯವರನ್ನು ಅವಲಂಬಿಸಬೇಕಾದ ಸ್ಥಿತಿ. ಆದರೆ ಇವರ ಕಲಾಕೃತಿಗಳಲ್ಲಿ ಯಾವ ಊನವೂ ಕಾಣಿಸದು!

ರಾಮಕೃಷ್ಣನ್‌ ತಮಿಳುನಾಡು ಮೂಲದವರು. ಹುಟ್ಟಿ ಬೆಳೆದಿದ್ದು ಎಲ್ಲಾ ಪುಣೆಯಲ್ಲಿ. ಅವರಿಗೆ ತಮ್ಮ ಏಳನೇ ವಯಸ್ಸಿನಲ್ಲಿ ತಮ್ಮ ಬಲಗಾಲಿಗೆ ಸ್ವಲ್ಪ ಶಕ್ತಿಯಿದೆ ಎಂದು ಅರಿವಿಗೆ ಬಂತು. ಆಗ ಅವರ ಮಾವ ಪೇಂಟಿಂಗ್‌ ಬಿಡಿಸುತ್ತಿದ್ದನ್ನು ನೋಡಿ, ಬಣ್ಣಗಳ ಬಗ್ಗೆ  ಆಸಕ್ತಿ ತೋರಿಸಿದರು. ಇದನ್ನು ಗಮನಿಸಿ ಅವರ ಮಾವ ಮೊಟ್ಟೆ ಮೇಲೆ ಪೇಂಟ್‌ ಮಾಡುವಂತೆ ತಿಳಿಸಿದರು. ಆಗ ಬಲಗಾಲಿನಲ್ಲಿಯೇ ಅದಕ್ಕೆ ಬಣ್ಣ ಹಚ್ಚಲು ಆರಂಭಿಸಿದರು. ಈ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶಿಸಿದ ರಾಮಕೃಷ್ಣನ್ ಅವರಿಗೆ ಬಳಿಕ ಕುಂಚವೇ ಜಗತ್ತಾಯಿತು.

ಆ ನಂತರ  ಲ್ಯಾಂಡ್‌ಸ್ಕೇಪ್‌, ಆಕ್ರಿಲಿಕ್‌ ಮಾಧ್ಯಮದಲ್ಲಿ ಚಿತ್ರಗಳನ್ನು ಬಿಡಿಸಲು ಆರಂಭಿಸಿದ ಅವರು ತಾವು ಸಿನಿಮಾದಲ್ಲಿ ನೋಡಿದ, ಓಡಾಡುವಾಗ ಕಂಡ ಪ್ರಕೃತಿಯ ಸೊಬಗನ್ನು ಕ್ಯಾನ್ವಾಸ್‌ ಮೇಲೆ ಬಿಡಿಸುತ್ತಾ ಹೋದರು.

‘ಪುಣೆಯಲ್ಲಿ ನಮ್ಮ ಮನೆ ಸಮುದ್ರ ತೀರದಲ್ಲಿತ್ತು. ಹೀಗಾಗಿ ಅಪ್ಪ–ಅಮ್ಮ, ನಾನು, ತಂಗಿ ಇವನನ್ನು ವಾರಕ್ಕೆ ಮೂರು ಬಾರಿಯಾದ್ರೂ ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೆವು. ಅಲ್ಲಿಂದ ಬಂದ ಬಳಿಕ ಚಿತ್ರ ಬಿಡಿಸುತ್ತಿದ್ದ. ಅಲ್ಲಿನ ಸುಂದರ ದೃಶ್ಯ ಅವನ ಚಿತ್ರದಲ್ಲಿರುತ್ತಿತ್ತು’ ಎಂದು ಅಕ್ಕ ವಿಜಯಾ ಅಚ್ಚರಿ ವ್ಯಕ್ತಪಡಿಸುತ್ತಾರೆ.

ರಾಮಕೃಷ್ಣನ್‌ ಅವರಿಗೆ ಲ್ಯಾಂಡ್‌ ಸ್ಕೇಪ್‌ ಚಿತ್ರಿಸುವುದು ತುಂಬಾ ಇಷ್ಟ. ಅವರ ಕಲಾಕೃತಿಗಳಲ್ಲೂ ಈ ಪ್ರೀತಿ ಎದ್ದು ಕಾಣುತ್ತದೆ. ಅವರ ಆಸಕ್ತಿಯನ್ನು ಗಮನಿಸಿ ಮನೆಯವರು ಬೇರೆ ಬೇರೆ ಪ್ರವಾಸಿ ತಾಣಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಇದು ಅವರ ಕಲಾ ವ್ಯಾಮೋಹಕ್ಕೆ ಪ್ರೇರಣೆಯಾಯಿತು. 

2016ರಲ್ಲಿ ರಾಮಕೃಷ್ಣನ್‌ ಅವರು ಅಕ್ಕನೊಂದಿಗೆ ಯುರೋಪ್, ಸ್ವಿಟ್ಜರ್‌ಲೆಂಡ್‌, ಆಸ್ಟ್ರಿಯಾಕ್ಕೆ ಹೋಗಿದ್ದಾಗ ಅಲ್ಲಿ ಬೆಟ್ಟದ ತುದಿ ತನಕ ಹೋಗಿ ಬಂದಿದ್ದಾರೆ. ಅಲ್ಲಿನ ಪ್ರಕೃತಿ ಸೌಂದರ್ಯ ಇವರ ಚಿತ್ರಗಳಲ್ಲಿ ಕಾಣಬಹುದು.

ಲಾಲ್‌ಬಾಗ್‌ನಲ್ಲಿ ತಾವು ಕಂಡ ಸಸ್ಯರಾಶಿಯ ಸೊಬಗನ್ನೂ ಚಿತ್ರಿಸಿದ್ದಾರೆ.

ಈಗ ರಾಮಕೃಷ್ಣ ಅವರಿಗೆ 47 ವರ್ಷ. ಇವರ ಕಲಾಕೃತಿಗಳು ತೈವಾನ್‌, ಸಿಂಗಪುರ, ಮುಂಬೈ, ಚೆನ್ನೈ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಪ್ರದರ್ಶನವಾಗಿವೆ.  ಇವರು ವಿಶ್ವದ ಪ್ರಸಿದ್ಧ ಮೌತ್‌ ಅಂಡ್‌ ಫೂಟ್‌ ಪೇಂಟಿಂಗ್‌ ಆರ್ಟಿಸ್ಟ್‌ ಅಸೋಸಿಯೇಶನ್‌ ಸಂಘದ ಸದಸ್ಯ.

‘ಅವನಿಗೆ ನೆನಪಿನ ಶಕ್ತಿ  ಅಗಾಧವಾಗಿದೆ. ಜೀವನದಲ್ಲಿ ಒಮ್ಮೆ ಭೇಟಿ ಮಾಡಿದ ವ್ಯಕ್ತಿಯನ್ನು ಮತ್ತೆ ಎಲ್ಲಿ ಕಂಡರೂ ಹೆಸರು ಸಮೇತ ನೆನಪು ಮಾಡಿಕೊಳ್ಳುತ್ತಾನೆ’ ಎಂದು ವಿಜಯಾ ಹೇಳುತ್ತಾರೆ.

ತಮಿಳು ಹಾಗೂ ಹಿಂದಿ ಭಾಷೆ ರಾಮಕೃಷ್ಣ ಅವರಿಗೆ ಗೊತ್ತಿದೆ. ಇಂಗ್ಲಿಷ್‌ನಲ್ಲಿ ವ್ಯವಹರಿಸಬಲ್ಲರು.

**

ಕಲಾವಿದರು: ರಾಮಕೃಷ್ಣನ್‌ ನಾರಾಯಣಸ್ವಾಮಿ
ಪ್ರಕಾರ: ಲ್ಯಾಂಡ್‌ಸ್ಕೇಪ್‌, ಆಕ್ರಿಲಿಕ್‌
ಸ್ಥಳ: ಹನುಮಂತಪ್ಪ ಆರ್ಟ್‌ ಗ್ಯಾಲರಿ, ಭಾರತೀಯ ವಿದ್ಯಾಭವನ, ರೇಸ್‌ ಕೋರ್ಸ್‌ ರಸ್ತೆ
ಸಮಯ: ಬೆಳಿಗ್ಗೆ 11ರಿಂದ ಸಂಜೆ 7.
ಕೊನೆಯ ದಿನಾಂಕ: ಮೇ 27

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT