ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇರಾ ಬಂದರೆ ರೇಟು ಹೆಚ್ಚುತ್ತಾ?

Last Updated 25 ಮೇ 2017, 19:30 IST
ಅಕ್ಷರ ಗಾತ್ರ

ಹಲವು ರಾಜ್ಯಗಳಲ್ಲಿ ಈಗಾಗಲೇ ರೇರಾ ಕಾಯ್ದೆ ಅನುಷ್ಠಾನದಲ್ಲಿದೆ. ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಕ್ಷೇತ್ರ ಇನ್ನೂ ಅದಕ್ಕೆ ಸಿದ್ಧವಾಗಿಲ್ಲ. ಹಾಗಂತ ಇದರಿಂದ ತಪ್ಪಿಸಿಕೊಳ್ಳುವಂತೆಯೂ ಇಲ್ಲ. ಬೀಸುವ ದೊಣ್ಣೆಯಿಂದ ಪಾರಾಗುವುದು ಶಾಶ್ವತ ಪರಿಹಾರವಲ್ಲ. ಇವತ್ತಲ್ಲ ನಾಳೆ ಈ ಕಾಯ್ದೆಗೆ ಕರ್ನಾಟಕ ಸಜ್ಜಾಗಬೇಕು. ಮುಂದೇನು?

ಹೊಸ ಯೋಜನೆಗಳಷ್ಟೇ ಅಲ್ಲ, ಈಗಾಗಲೇ ಪ್ರಗತಿಯ ಹಂತದಲ್ಲಿರುವ ಯೋಜನೆಗಳೂ ರೇರಾ ಕಾಯ್ದೆಯ ಮೂಗುದಾರ ಹಾಕಿಕೊಳ್ಳಬೇಕಾಗುತ್ತದೆ. ಹಾಗಾದರೆ ಮುಂದಿನ ಯೋಜನೆಗಳ ದರದಲ್ಲಿ ವ್ಯತ್ಯಾಸ ಉಂಟಾಗಲಿದೆಯೇ? ನೋಟು ಅಮಾನ್ಯೀಕರಣದ ನಂತರ ಬಹುತೇಕ ಕುಸಿದೇ ಹೋಗಿದ್ದ ವಸತಿ ಯೋಜನೆಗಳ ದರ ಮತ್ತೆ ಏರುಮುಖವಾಗುತ್ತದೆಯೇ?

ಉತ್ತರ ಅಷ್ಟು ಸ್ಪಷ್ಟವಾಗಿಲ್ಲ. ಆದಾಗ್ಯೂ ರಿಯಲ್ ಎಸ್ಟೇಟ್ ಬೆಲೆಗಳು, ವಿಶೇಷವಾಗಿ ಹೊಸ ಯೋಜನೆಗಳ ಬೆಲೆಗಳು ಹೆಚ್ಚುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ರಿಯಲ್ ಎಸ್ಟೇಟ್ ಉದ್ಯಮದ ತಜ್ಞರು ಹೇಳುವ ಪ್ರಕಾರ, ರೇರಾ ಕಾಯ್ದೆಯ ನಿರ್ದಿಷ್ಟ ಅನುಸರಣೆ ಮತ್ತು ನಿಬಂಧನೆಗಳ ಕಾರಣದಿಂದ ಹೊಸ ಯೋಜನೆಗಳು ಮೊದಲಿನಂತೆ ಸುಲಭವಾಗಿ ಸಾಗಲಾರವು. ಅಂದರೆ ಹೊಸ ಯೋಜನೆಗಳು ಈಗಿನ ಗತಿಯನ್ನು ಕಾಪಾಡಿಕೊಳ್ಳಲಾರವು. ಈ ಬದಲಾವಣೆಯು ಮಾರುಕಟ್ಟೆಯಲ್ಲಿನ ಬೇಡಿಕೆ ಮತ್ತು ಪೂರೈಕೆಯ ಗತಿಯಲ್ಲಿ ಅಂತರವನ್ನು ಸೃಷ್ಟಿಸುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಬೆಲೆ ಹೆಚ್ಚುವ ಎಲ್ಲಾ ಸಾಧ್ಯತೆಗಳೂ ಇವೆ.

ಬೆಲೆ ಏರಿಕೆ ಹೇಗೆ: ಪ್ರಸ್ತುತ ಪ್ರಗತಿಯಲ್ಲಿರುವ ಯೋಜನೆಗಳು, ಮುಂಬರುವ 12 ತಿಂಗಳ ಒಳಗೆ ಪೂರ್ಣಗೊಳ್ಳಬೇಕಿರುವ ಬಹುತೇಕ ಯೋಜನೆ
ಗಳನ್ನೂ ರೇರಾ ಕಾಯ್ದೆಗೆ ಒಳಪಡಿಸಬೇಕಾಗುತ್ತದೆ ಹಾಗೂ  ಹೊಸ ನಿಯಮಗಳನ್ನು ಅನುಸರಿಸಬೇಕಾಗುತ್ತದೆ.

ಈಗಿನ ಮಾರುಕಟ್ಟೆಯ ಟ್ರೆಂಡ್‌ನ ಪ್ರಕಾರ ಈವರೆಗೂ ಮನೆಗಳನ್ನು ‘ಬಿಲ್ಟ್‌ ಅಪ್‌ ಏರಿಯಾ’ ಆಧಾರದ ಮೇಲೆ ಮಾರಾಟ ಮಾಡಲಾಗುತ್ತಿತ್ತು. ಆದರೆ ಈ ಕಾಯ್ದೆಯನ್ವಯ ‘ಕಾರ್ಪೆಟ್‌ ಏರಿಯಾ’ ವನ್ನು ಪರಿಗಣಿಸಬೇಕಾಗುತ್ತದೆ.  ಇದರಿಂದಾಗಿ ಬೆಲೆಯಲ್ಲಿ ಖಂಡಿತವಾಗಿಯೂ ವ್ಯತ್ಯಾಸ ಉಂಟಾಗುತ್ತದೆ. ಈ ಬೆಳವಣಿಗೆಯಿಂದ ಪ್ರತಿ ಚದರ ಅಡಿಯ ಬೆಲೆಯಲ್ಲಿ ವ್ಯತ್ಯಾಸ ಉಂಟಾಗುವುದರಿಂದ ಮನೆಯ ಒಟ್ಟಾರೆ ಬೆಲೆಯ ಮೇಲೆ ಅದು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ನೋಡಬೇಕು.

ಉದಾಹರಣೆಗೆ ಹೇಳುವುದಾದರೆ–
ಒಬ್ಬ ಬಿಲ್ಡರ್‌ 1000 ಚದರ ಅಡಿ (super built-up area) ಮನೆಯನ್ನು ₹ 5,000 ಪ್ರತಿ ಚದರ ಅಡಿಯ ಬೆಲೆಯಲ್ಲಿ ಕೊಡುತ್ತಿದ್ದಾರೆ  ಎಂದುಕೊಳ್ಳೋಣ. ಆಗ ಮನೆಯ ಬೆಲೆ ₹ 50 ಲಕ್ಷ ಆಗುತ್ತದೆ. ಈ ಕಾಯ್ದೆಗೆ ಒಳಪಟ್ಟ ಮೇಲೆ ಬಿಲ್ಡರ್‌ ಕಾರ್ಪೆಟ್ ಪ್ರದೇಶದ ಆಧಾರದ ಮೇಲೆಯೇ ಮನೆಯನ್ನು ಮಾರಬೇಕಾಗುತ್ತದೆ, ಆದರೆ ಅದರ ಜೊತೆಗೆ ಬೆಲೆಯನ್ನು ನಿಭಾಯಿಸಬೇಕು.

ಆಗ ಆತ ಪ್ರತಿ ಚದರ ಅಡಿಗೆ ಶೇ 10ರಿಂದ 15ರಷ್ಟು ಬೆಲೆಯನ್ನು ಹೆಚ್ಚಿಸಬೇಕಾಗುತ್ತದೆ. ಬಿಲ್ಟ್‌ ಅಪ್‌ ಪ್ರದೇಶದ ಬದಲು ಕಾರ್ಪೆಟ್‌ ಪ್ರದೇಶದ ಆಧಾರದ ಮೇಲೆ ವಹಿವಾಟು ನಡೆಸಲು ಹಾಗೂ ತನ್ನ ಮೂಲ ಲಾಭವನ್ನು ಕಾಯ್ದುಕೊಳ್ಳಲು ರೇರಾ ಕಾಯ್ದೆಯಡಿಯಲ್ಲಿಯೇ ಬೆಲೆಯನ್ನೂ ಮಾರ್ಪಡಿಸಿಕೊಳ್ಳಬೇಕಾಗುತ್ತದೆ. ಆಗ ಆತ ತನ್ನ ಮೇಲೆ ಬೀಳುವ ಹೆಚ್ಚುವರಿ ಹೊರೆಯನ್ನೂ ಸೇರಿಸಿಯೇ ಬೆಲೆಯನ್ನು ಮಾರ್ಪಡಿಸುತ್ತಾನೆ. ಆದರೆ ಇದರಿಂದ ಗ್ರಾಹಕರ ಮೇಲೆ ಎಷ್ಟು ಪ್ರಮಾಣದ ಹೊರೆ ಬೀಳುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ಹೇಳಲಾಗದು.

ಹೊಸ ಯೋಜನೆಗಳೇಕೆ ದುಬಾರಿ
ಈ ಕಾಯ್ದೆಗೆ ಒಳಪಟ್ಟ ನಂತರ ಹೊಸ ಯೋಜನೆಗಳೇಕೆ ದುಬಾರಿಯಾಗಬಹುದು ಎಂಬ ಬಗ್ಗೆ ಮಾರುಕಟ್ಟೆ ತಜ್ಞರ ವಿಶ್ಲೇಷಣೆ ಹೀಗಿದೆ–
ಹಿಂದೆ ಒಂದು ನಿರ್ದಿಷ್ಟ ಅವಧಿಗೆ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ಹೇಳುವ ಬಿಲ್ಡರ್‌ಗಳು ಸರ್ಕಾರಿ ಕೆಲಸ ಕಾರ್ಯಗಳು ಮತ್ತು ಕಾರ್ಮಿಕರು ಹಾಗೂ ಗುತ್ತಿಗೆದಾರರ ಕಾರಣದಿಂದ ಯೋಜನೆಯನ್ನು ಪೂರ್ಣಗೊಳಿಸುವ ಅವಧಿಯಲ್ಲಿ ವ್ಯತ್ಯಾಸ ಮಾಡುತ್ತಿದ್ದರು. ಕೆಲವೊಮ್ಮೆ ಈ ಅವಧಿ ಎರಡು ಪಟ್ಟು ವಿಳಂಬವಾಗುವ ಸಾಧ್ಯತೆಯೂ ಇತ್ತು.

ಆದರೆ ಈ ಕಾಯ್ದೆಯ ಅನ್ವಯ ಈ ವಿಳಂಬಕ್ಕೆ ಅವಕಾಶವಿಲ್ಲ. ಹಾಗೊಂದು ವೇಳೆ ವಿಳಂಬ ಮಾಡಿದಲ್ಲಿ ಅವರು ಅದಕ್ಕೆ ದಂಡ ತೆರಬೇಕಾಗುತ್ತದೆ. ಅವರು ಈ ಒತ್ತಡವನ್ನು ಗುತ್ತಿಗೆದಾರರ ಮೇಲೆ ಹಾಕಬೇಕಾಗುತ್ತದೆ. ಆಗ ಗುತ್ತಿಗೆದಾರರು ನಿರ್ಮಾಣಕ್ಕೆ ಹೆಚ್ಚಿನ ದರದ ಬೇಡಿಕೆ ಇಡುವ ಸಾಧ್ಯತೆ ಇದೆ. ಈ ಬೆಳವಣಿಗೆ
ಯೂ ಸಹ ಬೆಲೆ ಹೆಚ್ಚಳಕ್ಕೆ ಕಾರಣವಾಗಬಹುದು.

ಸಂಕ್ಷಿಪ್ತವಾಗಿ ಹೇಳುವುದಾದರೆ, ರೇರಾ ಕಾಯ್ದೆಗೆ ಒಳಪಡುವ ನಿಟ್ಟಿನಲ್ಲಿ ಬಿಲ್ಡರ್‌ಗಳ ಮೇಲೆ ಪರೋಕ್ಷವಾಗಿ ಹೆಚ್ಚಿನ ಹೊರೆಯಂತೂ ಬೀಳುತ್ತದೆ. ಆದರೆ ಈ ಹೊರೆಯನ್ನು ಅವರು ಗ್ರಾಹಕರಿಗೆ ವರ್ಗಾಯಿಸುತ್ತಾರೆ. ಹೀಗಾಗಿ ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸವಂತೂ ಆಗುತ್ತದೆ.

**

ಲಾಭದ ಪ್ರಕ್ರಿಯೆಗೆ ತೆರೆ
ರೇರಾ ಕಾಯ್ದೆಯಿಂದ ಬಿಲ್ಡರ್‌ಗಳ ಮೇಲೆ ಒತ್ತಡವಂತೂ ಬೀಳುತ್ತದೆ. ಹೊಸ ಕಾಯ್ದೆಗಳನ್ನು ಅನುಸರಿಸುವ ನಿಟ್ಟಿನಲ್ಲಿ ಅವರು ಸಾಕಷ್ಟು ತಯಾರಿಗಳನ್ನು ಮಾಡಿ
ಕೊಳ್ಳಬೇಕಾಗುತ್ತದೆ. ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ನಿರ್ದಿಷ್ಟ ಅವಧಿಯಲ್ಲಿ ಯೋಜನೆಯನ್ನು ಮುಗಿಸಿ ಕೊಡಲೇಬೇಕು.

ಮುಖ್ಯವಾಗಿ ಒಂದು ಯೋಜನೆಯ ಹಣವನ್ನು ಬೇರೆಕಡೆ ವರ್ಗಾಯಿಸಿ ಲಾಭ ಮಾಡಿಕೊಳ್ಳುವ ಪ್ರಕ್ರಿಯೆಗೆ ಸಂಪೂರ್ಣ ತೆರೆ ಬೀಳುತ್ತದೆ. ಬದಲಿಗೆ ಹೊಸ ಯೋಜನೆಗಳಿಗೆ ಸ್ವತಃ ಅವರೇ ಹಣ ಹೂಡಬೇಕಾದ ಅಗತ್ಯವೂ ಬೀಳುತ್ತದೆ. ಈ ಬೆಳವಣಿಗೆಯೂ ಸಹ ಬೆಲೆ ಹೆಚ್ಚಳಕ್ಕೆ ಕಾರಣವಾಗಬಹುದು.
–ಸುರೇಶ್‌ ಹರಿ,  ಕ್ರೆಡಾಯ್ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT