ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗಿರಲಿ ಮಳೆಗಾಲದ ಕೈತೋಟ

Last Updated 25 ಮೇ 2017, 19:30 IST
ಅಕ್ಷರ ಗಾತ್ರ

ಇನ್ನೇನು ಮಳೆಗಾಲ ಆರಂಭವಾಗುತ್ತಿದೆ. ಇಷ್ಟು ದಿನ ಜತನದಿಂದ ಗಿಡಗಳನ್ನು ಆರೈಕೆ ಮಾಡುತ್ತಿದ್ದವರ ಜವಾಬ್ದಾರಿ ಮತ್ತಷ್ಟು ಹೆಚ್ಚಲಿದೆ. ಗಿಡ ನೆಟ್ಟಿರುವ ಕುಂಡಗಳಲ್ಲಿ ಹೆಚ್ಚು ನೀರು ಶೇಖರಣೆಯಾಗುವುದು ಹಲವು ಅಪಾಯಗಳಿಗೆ ಕಾರಣವಾಗುತ್ತದೆ. ಹೀಗಾಗಿ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಿಕೊಳ್ಳುವುದು ಅಗತ್ಯ. ಹಾಗಿದ್ದರೆ ಮಳೆಗಾಲದಲ್ಲಿ ಗಿಡಗಳ ರಕ್ಷಣೆ ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

* ಕುಂಡದಲ್ಲಿ ಹೆಚ್ಚು ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ನೀರು ಅತಿಯಾಗಿ ಶೇಖರಣೆಯಾಗುವುದರಿಂದ ಗಿಡದ ಬೇರು ಕೊಳೆಯುತ್ತದೆ. ಜೊತೆಗೆ ಸೊಳ್ಳೆಗಳ ಕಾಟವೂ ಹೆಚ್ಚುವ ಸಂಭವವಿರುತ್ತದೆ.

* ಹೊಸ ಸಸಿಯನ್ನು ನಾಟಿ ಮಾಡುತ್ತಿದ್ದರೆ ಮಳೆಗಾಲದ ತೇವಾಂಶಕ್ಕೆ ಅದು ಹೊಂದಿಕೊಳ್ಳುವುದೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಹೊಸ ಸಸಿಯ ಸಂರಕ್ಷಣೆ ಈ ಸಮಯದಲ್ಲಿ ಸ್ವಲ್ಪ ಕಷ್ಟ.

* ಈ ಸಮಯದಲ್ಲಿ  ಕಪ್ಪೆಗಳು ಹೆಚ್ಚಾಗಿ ಬರುತ್ತವೆ. ಅವುಗಳು ಬರಲು ಅನುವು ಮಾಡಿ. ಯಾಕೆಂದರೆ ಅವು ಕ್ರಿಮಿಕೀಟಗಳನ್ನು ತಿನ್ನುವುದರಿಂದ ಗಿಡಕ್ಕೆ ಒಳ್ಳೆಯದು.

* ಈ ಸಮಯದಲ್ಲಿ ಗಿಡಗಳಿಗೆ ಹೆಚ್ಚು ನೀರು ಹಾಕುವ ಅಗತ್ಯವಿರುವುದಿಲ್ಲ. ಬೆಳಿಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ನೀರನ್ನು ಸಿಂಪಡಿಸಿದರೆ ಸಾಕು.

* ಹಸಿಮೆಣಸು, ಬೆಳ್ಳುಳ್ಳಿ, ಆಲೊವೆರಾದಿಂದ ಮನೆಯಲ್ಲಿಯೇ ತಯಾರಿಸಿದ ಔಷಧಿಯನ್ನು ಸಿಂಪಡಿಸುವುದರಿಂದ ಕ್ರಿಮಿಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

* ಬೇವಿನ ಎಣ್ಣೆ, ಗೋಮೂತ್ರ, ಸ್ಪೆಡರ್‌ ಮಿಶ್ರಣವನ್ನು ಹಾಕಿ ಸಿಂಪಡಿಸಬಹುದು.

* ಕುಂಡದಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಕುಂಡದ ಕೆಳಗೆ ಎರಡು ಇಂಚು ಜೆಲ್ಲಿ ಅಥವಾ ದಪ್ಪ ಮರಳನ್ನು ಹಾಕುವುದರಿಂದ ನೀರು ಸರಾಗವಾಗಿ ಹರಿಯುತ್ತದೆ.

* ನಾಟಿ ಮಾಡಿದ ನಂತರ ಪ್ಲಾಸ್ಟಿಕ್‌ ಹೊರತಾಗಿ, ಒಣ ಎಲೆ, ರದ್ದಿ ಪೇಪರ್‌ ಅನ್ನು ಕಾಂಡದ ಸುತ್ತಲೂ ಹೊದಿಕೆ ಹಾಕಬೇಕು. ನೀರು ಬಿದ್ದರೂ ಅದು ತಡೆಯುತ್ತದೆ. ಇದರಿಂದ ಗಿಡವೂ ತಂಪಾಗಿರುತ್ತದೆ. ಗಿಡ ಚೆನ್ನಾಗಿ ಚಿಗುರುತ್ತದೆ.

* ಎಲ್ಲಾ ಋತುಗಳಲ್ಲಿ ಗಿಡಗಳ ತುದಿ ಕತ್ತರಿಸುವುದು (ಪ್ರೂನಿಂಗ್‌) ಅವಶ್ಯ. ಆದರೆ ಮುಂಗಾರು ಋತುವಿನ ಮುಂಚೆ ಗಿಡ ಕತ್ತರಿಸುವುದರಿಂದ ಸಸ್ಯಗಳು ವೇಗವಾಗಿ ಬೆಳೆಯಲು ಸಹಾಯವಾಗುತ್ತದೆ. ಸಾಕಷ್ಟು ಗಾಳಿ ಮತ್ತು ಸೂರ್ಯನ ಬೆಳಕು ಸಸ್ಯಗಳ ಪ್ರತಿಯೊಂದು ಭಾಗವನ್ನು ತಲುಪುತ್ತದೆ. ಇದರಿಂದ ಜೋರು ಗಾಳಿಯಿಂದ ಗಿಡ ಮುರಿದು ಬೀಳುವುದು ತಪ್ಪುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT