ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತಿಯ ಹೊಸ ಎತ್ತರದತ್ತ ಭಾರತ

ಭ್ರಷ್ಟಾಚಾರಮುಕ್ತ ಆಡಳಿತ, ನಿರ್ಣಾಯಕ ನೇತೃತ್ವ- ಮೂರು ವರ್ಷಗಳ ಎನ್‌ಡಿಎ ಆಡಳಿತದ ಹೆಗ್ಗುರುತುಗಳು
Last Updated 25 ಮೇ 2017, 19:30 IST
ಅಕ್ಷರ ಗಾತ್ರ
ಮೂರು ವರ್ಷಗಳ ಹಿಂದೆ ಕೇಂದ್ರದಲ್ಲಿ ಎನ್‌ಡಿಎ-2 ರಾಜ್ಯಭಾರ ಆರಂಭ ಆದಾಗಿನಿಂದ ಜೀವದುಂಬಿ ಮಿಡಿಯುವ ನವಆಶೋತ್ತರಗಳ ಹೊಸ ಭಾರತ ಉದಯಿಸಿ ಉನ್ನತಿಯ ಪಯಣದಲ್ಲಿ ಗಟ್ಟಿ ಹೆಜ್ಜೆಗಳನ್ನು ಇರಿಸತೊಡಗಿದೆ. ಜಡ್ಡುಗಟ್ಟಿದ ವ್ಯವಸ್ಥೆಯನ್ನು ಕದಲಿಸಿ ಬದಲಿಸುವ ಹತ್ತು ಹಲವು ಭ್ರಷ್ಟಾಚಾರಮುಕ್ತ ಪ್ರವರ್ತಕ ನೀತಿ ನಿರ್ಧಾರಗಳೇ ಈ ಹೊಸ ಭಾರತದ ಉದಯದ ಕೇಂದ್ರ ಬಿಂದುಗಳು.   
 
ಹಗರಣಗಳಲ್ಲಿ ಹೂತು ಹೋಗಿದ್ದ ಯುಪಿಎ-2 ಸರ್ಕಾರವನ್ನು ಇತಿಹಾಸದ ತಿಪ್ಪೆಗೆಸೆದ ಜನ, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಬಹುಮತದಿಂದ ಸ್ಥಾಪಿಸಿದ 2014ರ ಮೇ ತಿಂಗಳು ಭಾರತದ ಪಾಲಿಗೆ ಹೊಸ ಬೆಳಗು. 30 ವರ್ಷಗಳ ಸಮ್ಮಿಶ್ರ ಸರ್ಕಾರಗಳ ಶಕೆಯನ್ನು ಬದಿಗೆ ಸರಿಸಿ ಬಿಜೆಪಿಗೆ ಬಹುಮತ ನೀಡಿದ ಜನಾದೇಶ ಐತಿಹಾಸಿಕ.
 
 ಬೆಲೆ ಏರಿಕೆ ಮತ್ತು ಹಗರಣಗಳ ಸರಣಿಯಡಿ ಜನರು ಕುಸಿದು ಕಂಗಾಲಾಗಿದ್ದರು. ಭಾರತದ ಜಾಗತಿಕ ವರ್ಚಸ್ಸಿಗೆ ಬಲವಾದ ಏಟು ಬಿದ್ದಿತ್ತು.  ಅಧಿಕಾರ ವಹಿಸಿಕೊಂಡ ಎನ್‌ಡಿಎ ಕೈಗೆ ಬಂದದ್ದು ಛಿದ್ರವಾಗಿ ನೆಲಕಚ್ಚಿದ್ದ ಅರ್ಥಸ್ಥಿತಿ. ಜಾಗತಿಕ ವರ್ಚಸ್ಸು ಮತ್ತು ಕುಸಿದಿದ್ದ ಅರ್ಥಸ್ಥಿತಿಯನ್ನು ಹಿಡಿದೆತ್ತಿ ನಿಲ್ಲಿಸಲು ಪ್ರಧಾನಿ ಮೋದಿ ಬಿಡುವಿಲ್ಲದೆ ದುಡಿದರು. ತಮ್ಮ ಎಲ್ಲ ಶಕ್ತಿ ಸಾಮರ್ಥ್ಯಗಳನ್ನು ಹೂಡಿದರು.
 
ಮೂರು ವರ್ಷಗಳ ಮೋದಿ ಸರ್ಕಾರದ ಕಣ್ಣು ಕುಕ್ಕುವ ಬಹುದೊಡ್ಡ ಸಾಧನೆಯೆಂದರೆ ಸರ್ಕಾರದ ಉನ್ನತ ಹಂತದಲ್ಲಿ ಭ್ರಷ್ಟಾಚಾರದ ಸಂಪೂರ್ಣ ನಿವಾರಣೆ. ಹತ್ತು ವರ್ಷಗಳ ಕಾಲ ನೆಲದ ಕಾನೂನನ್ನೇ ಅವಮಾನಿಸಿ ಹಂಗಿಸಿದ ಭ್ರಷ್ಟ ಯುಪಿಎ ರಾಜ್ಯಭಾರದ ನಂತರ ಒಡೆದು ಮೂಡಿರುವ ಹೊಸ ಚಿತ್ರವಿದು.
 
ತೂಗಾಡಿ ತಡವರಿಸಿ ಯಂತ್ರದೋಪಾದಿ ನಡೆಯತೊಡಗಿದ್ದ ಅಧಿಕಾರಶಾಹಿಯ ಮೇಲೆ ಚಾವಟಿ ಬೀಸಿದ ಪ್ರಧಾನಿ, ಅದನ್ನು ಪಾರದರ್ಶಕ, ಉತ್ತರದಾಯಿ ಹಾಗೂ ಕಾರ್ಯದಕ್ಷ ಆಗಿಸಿದ್ದಾರೆ. ಆಡಳಿತ ಪದ್ಧತಿಯಲ್ಲಿ ಹೊಸ ಪರಿವರ್ತನೆ ತಂದಿದ್ದಾರೆ. ಪ್ರತಿಯೊಬ್ಬ ಭಾರತೀಯನ ಬದುಕಿನಲ್ಲಿ ಬದಲಾವಣೆ ತರುವ ಗುರಿ ಅವರದು. ಹಳ್ಳಿ-ರೈತ-ಬಡವ-ಮಹಿಳೆ ಹಾಗೂ ಯುವಜನರ ಕಲ್ಯಾಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ.
 
ದಣಿವರಿಯದೆ ಶ್ರಮಿಸಿ, ಅಮೆರಿಕದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ, ಜಪಾನಿನ ಪ್ರಧಾನಿ ಶಿಂಜೋ ಅಬೆ ಸೇರಿದಂತೆ ಗಣ್ಯ ಜಾಗತಿಕ ನಾಯಕರ ಜೊತೆ ಮೋದಿ ಬೆಸೆದ ವ್ಯಕ್ತಿಗತ ಸ್ನೇಹಸೇತುವು ಪರಮಾಣು ಸರಬರಾಜುದಾರರ ಕೂಟಕ್ಕೆ  (ಎನ್‌ಎಸ್‌ಜಿ) ಭಾರತದ ಪ್ರವೇಶದ ಸಾಧ್ಯತೆಯನ್ನು ಆಶಾದಾಯಕವಾಗಿಸಿದೆ.
 
ಅಗತ್ಯ ಬಿದ್ದಾಗಲೆಲ್ಲ ಆಕ್ರಮಣಕಾರಿ ಕೂಟನೀತಿಯನ್ನು ಅನುಸರಿಸುವ ಮೋದಿ ಸರ್ಕಾರದ ದೃಢ ಸಂಕಲ್ಪಕ್ಕೆ ಕುಲಭೂಷಣ್ ಜಾಧವ್ ಅವರ ಬಿಡುಗಡೆಗಾಗಿ ಅಂತರರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲು ಹತ್ತಿದ ಬೆಳವಣಿಗೆ ನಿಚ್ಚಳ ನಿದರ್ಶನ.
 
ಸಮಾಜವಾದಿ ಯುಗದ ಪಳೆಯುಳಿಕೆಯಾದ ಯೋಜನಾ ಆಯೋಗವನ್ನು ರದ್ದು ಮಾಡಿದ ಕ್ರಮವು ಆಡಳಿತಪದ್ಧತಿಯ ಕ್ರಾಂತಿಕಾರಕ ಬದಲಾವಣೆಯ ದಿಟ್ಟ ದ್ಯೋತಕ. ಭವಿಷ್ಯದ ನೀತಿ ನಿರ್ಧಾರಗಳು ಮತ್ತು ದಿಕ್ಕು ದೆಸೆಗಳ ಕುರಿತು ಸಲಹೆ ಸೂಚನೆ ನೀಡುವ ಭಾರತ ಸರ್ಕಾರದ ‘ಚಿಂತನ ಚಾವಡಿ’ಯಾದ ನೀತಿ ಆಯೋಗ ಈಗಾಗಲೇ ಮೂರು, ಏಳು  ಹಾಗೂ ಹದಿನೈದು ವರ್ಷಗಳ ಕಾರ್ಯಯೋಜನೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ.
 
ಫೆಬ್ರುವರಿ 28ರಂದು ಕೇಂದ್ರ ಬಜೆಟ್ ಮಂಡನೆ, ದಶಕಗಳಷ್ಟು ಹಳೆಯದಾದ ಬ್ರಿಟಿಷ್ ಬಳುವಳಿ. ಈ ರೂಢಿಯನ್ನು ರದ್ದು ಮಾಡಿ ಫೆಬ್ರುವರಿ ಒಂದರ ತೇದಿಯನ್ನು ಗೊತ್ತು ಮಾಡಿರುವುದೂ ಈ ಸರ್ಕಾರದ ಮತ್ತೊಂದು ಬಹುಮುಖ್ಯ ನಿರ್ಧಾರ. ವರ್ಷದ  ಮಳೆ–ಬೆಳೆ ದೃಷ್ಟಿಯಲ್ಲಿ ಇಟ್ಟುಕೊಂಡು ಹೊಸ ವರ್ಷದ ಸರ್ಕಾರಿ ವೆಚ್ಚವೂ ಮೊದಲಾಗಬೇಕು ಎಂಬ ಚಿಂತನೆಯೇ ಈ ತೀರ್ಮಾನದ ಮೂಲ ಉದ್ದೇಶ. 
 
ಅಂತೆಯೇ ಪ್ರತ್ಯೇಕ ರೈಲ್ವೆ ಬಜೆಟ್  ರೂಢಿಯನ್ನೂ ರದ್ದು ಮಾಡಿ ಮುಖ್ಯ ಬಜೆಟ್‌ನೊಂದಿಗೆ ವಿಲೀನಗೊಳಿಸಲಾಗಿದೆ. ಯೋಜನೆ ಮತ್ತು ಯೋಜನೇತರ ನಿಧಿಯ ತಾರತಮ್ಯವನ್ನೂ ನಿವಾರಿಸಲಾಗಿದೆ. ಪರಿಣಾಮವಾಗಿ ಎಲ್ಲ ಬಜೆಟ್ ಹಂಚಿಕೆಗಳ ಮೊತ್ತಗಳ ಉತ್ಪಾದಕ ಮತ್ತು ಪರಿಣಾಮಕಾರಿ ವಿನಿಯೋಗ ಸಾಧ್ಯವಾಗಲಿದೆ. ವಿನಿಯೋಗಕ್ಕೆ ಹೊಂದಾಣಿಕೆಯ ಗುಣವೂ ಲಭಿಸಲಿದೆ. 
 
‘ಟೀಂ ಇಂಡಿಯಾ’ ಸ್ಫೂರ್ತಿ ಮತ್ತು ಸಹಕಾರಿ ಒಕ್ಕೂಟ ತತ್ವದಲ್ಲಿ ಗಟ್ಟಿ ವಿಶ್ವಾಸ ಇರಿಸಿರುವ ಸರ್ಕಾರ ನರೇಂದ್ರ ಮೋದಿಯವರದು. ಕೇಂದ್ರೀಯ ತೆರಿಗೆಗಳ ಆದಾಯದ ಶೇ 42ರಷ್ಟು ಪಾಲನ್ನು ರಾಜ್ಯ ಸರ್ಕಾರಗಳಿಗೆ ಮತ್ತು ಶೇ 5ರಷ್ಟನ್ನು ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೊಡಬೇಕೆಂಬ 14ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಒಪ್ಪಿ ಜಾರಿಗೊಳಿಸಿದ್ದು ‘ಟೀಂ ಇಂಡಿಯಾ’ ತತ್ವದ ಶಿಖರಪ್ರಾಯ ನಡೆ.
 
‘ವಿಐಪಿ’ ವಾಹನಗಳ ಮೇಲಿನ ಕೆಂಪು ದೀಪಗಳನ್ನು ತೆಗೆಸಿದ್ದು ಮತ್ತೊಂದು ದಿಟ್ಟ ನಿರ್ಧಾರ. ಅಧಿಕಾರಯಂತ್ರ, ಸಾರ್ವಜನಿಕರು ಹಾಗೂ ರಾಜಕಾರಣಿಗಳೂ ಸೇರಿದಂತೆ ಸಮಾಜದ ಎಲ್ಲ ವರ್ಗಗಳಲ್ಲಿ ನೆಲೆಯೂರಿದ್ದ ಪಳೆಯುಳಿಕೆ ಮನಸ್ಥಿತಿಯನ್ನು ತೊಲಗಿಸಲು ಹತ್ತು ಹಲವು ಕ್ರಮಗಳನ್ನು ಈ ಸರ್ಕಾರ ಜರುಗಿಸಿದೆ. ಸುಧಾರಿಸು- ಸಾಧಿಸು- ಬದಲಾಯಿಸು ಎಂಬುದೇ ಈ ಸರ್ಕಾರದ ಮೂಲಮಂತ್ರ. 
 
ಅತ್ಯುತ್ತಮ ಅಭಿವೃದ್ಧಿ ದರ, ₹ 3.90 ಲಕ್ಷ ಕೋಟಿಯಷ್ಟು ದಾಖಲೆ ಪ್ರಮಾಣದ ವಿದೇಶಿ ಬಂಡವಾಳದ ಒಳಹರಿವು, ತಗ್ಗಿದ ವಿತ್ತೀಯ ಕೊರತೆ, ಚಾಲ್ತಿ ಖಾತೆಯ ಕೊರತೆಯು ಶೂನ್ಯ ಪ್ರಮಾಣಕ್ಕೆ ತಗ್ಗಿದ್ದು ಹಾಗೂ ಹಣದುಬ್ಬರ-ರೂಪಾಯಿ ವಿನಿಮಯ ದರಗಳು ಹದ್ದುಬಸ್ತಿನಲ್ಲಿರುವುದು ದೇಶದ ಅರ್ಥವ್ಯವಸ್ಥೆಯ ಆರೋಗ್ಯಕ್ಕೆ ಹಿಡಿದ ಕನ್ನಡಿ. ಪ್ರತಿಯೊಬ್ಬ ಭಾರತೀಯ ಹೆಮ್ಮೆಪಡಬಹುದಾದ ವಿದ್ಯಮಾನ.
 
ನೋಟು ರದ್ದು ಕ್ರಮದ ವಿರುದ್ಧ ನಡೆದ ಅಪಪ್ರಚಾರದ ನಂತರವೂ ದೇಶದ ಅಭಿವೃದ್ಧಿ ದರ 2017-18ರ ಸಾಲಿನಲ್ಲಿ ಶೇ 7.40 ಆರೋಗ್ಯಕರ ಅಂದಾಜನ್ನು ಮುಟ್ಟಿದ್ದು ದೊಡ್ಡ ಸಾಧನೆ. ಈ ಎಲ್ಲ ಅಂಶಗಳು ಜನಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಹಣವನ್ನು ಹರಿಸುವುದಲ್ಲದೆ, ಉದ್ಯೋಗಾವಕಾಶಗಳ ಹೊಸ ಬಾಗಿಲುಗಳನ್ನು ತೆರೆಯಲಿವೆ.
 
ಅಮೆರಿಕ ಮತ್ತು ಚೀನಾ ದೇಶಗಳ ಅರ್ಥವ್ಯವಸ್ಥೆಗಳ ಅಭಿವೃದ್ಧಿ ದರಗಳು ಮಂದಗತಿ ಹಿಡಿದಿರುವ ಹಿನ್ನೆಲೆಯಲ್ಲಿ ಜಾಗತಿಕ ಬಂಡವಾಳ ಹೂಡಿಕೆಗೆ ಭಾರತವೇ ಪ್ರಶಸ್ತ ಎಂಬ ಸ್ಥಿತಿಯನ್ನು ನಿರ್ಮಿಸಿದೆ. 2013ರಲ್ಲಿ ₹ 17.81 ಲಕ್ಷ ಕೋಟಿಗೆ ಕುಸಿದಿದ್ದ ವಿದೇಶಿ ವಿನಿಮಯ ಮೀಸಲು ನಿಧಿ ಇದೇ ತಿಂಗಳ ಮೊದಲ ಭಾಗದಲ್ಲಿ ₹ 24.37 ಲಕ್ಷ  ಕೋಟಿ ಮೊತ್ತ ಮುಟ್ಟಿದೆ.
 
ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಯುಗದ ಆರಂಭದೊಂದಿಗೆ ಹಿಂದೆಂದೂ ಕಾಣದ ಭಾರೀ ತೆರಿಗೆ ಸುಧಾರಣೆಗೆ ದೇಶ ಮುಂಬರುವ ಜುಲೈ ಒಂದರಿಂದ ಸಾಕ್ಷಿಯಾಗಲಿದೆ. ದೇಶದ ಉದ್ದಗಲಕ್ಕೆ ಜಾರಿಗೆ ಬರಲಿರುವ ಸಮಾನ ತೆರಿಗೆ ವ್ಯವಸ್ಥೆಯು ಹಣದುಬ್ಬರವನ್ನು ತಗ್ಗಿಸಿ, ಹಲವಾರು ಸರಕುಗಳ ದರಗಳು ಇಳಿಯಲು ಕಾರಣ ಆಗಲಿದೆ. ದೂರ ಭವಿಷ್ಯದಲ್ಲಿ ಗ್ರಾಹಕ ಮತ್ತು ವರ್ತಕ ಇಬ್ಬರಿಗೂ ಲಾಭವಾಗಲಿದೆ. ಜನಸಾಮಾನ್ಯರ ಕಿಸೆಗಳ ಮೇಲಿನ ಹೊರೆ ಹಗುರಾಗಲಿದೆ.
 
ದೊಡ್ಡ ನೋಟುಗಳನ್ನು ರದ್ದು ಮಾಡಿದ ಕ್ರಮದ ಪರಿಣಾಮವಾಗಿ ಕಪ್ಪು ಹಣ ಮತ್ತು ಭ್ರಷ್ಟಾಚಾರವನ್ನು ಸದೆಬಡಿಯುವ ಕ್ರಾಂತಿಕಾರಿ ಕೆಲಸ ಮೊದಲಾಗಿದೆ. ನೋಟು ರದ್ದು ಕ್ರಮದ ನಂತರ ಹೊಸದಾಗಿ 91 ಲಕ್ಷ ಮಂದಿ ತೆರಿಗೆ ಜಾಲಕ್ಕೆ ಸೇರ್ಪಡೆಯಾಗಿದ್ದಾರೆ. ಹೆಚ್ಚು ತೆರಿಗೆ ಆದಾಯವು ಅಭಿವೃದ್ಧಿ ಚಟುವಟಿಕೆಗಳಿಗೆ ಹೆಚ್ಚಿನ ಹಣ ಒದಗಿಸಲಿದೆ. ಖೋಟಾ ನೋಟು ಜಾಲಕ್ಕೆ ಮಾರಣಾಂತಿಕ ಹೊಡೆತ ಬಿದ್ದಿದೆ.
 
ಪರ್ಯಾಯ ಅರ್ಥವ್ಯವಸ್ಥೆಯ ಬೆನ್ನೆಲುಬು ಮುರಿದಿದೆ. ನೋಟು ರದ್ದು ಕ್ರಮದಿಂದಾಗಿ ಪ್ರತಿಯೊಂದು ರೂಪಾಯಿಯ ವೆಚ್ಚದ ಮೇಲೂ ಹದ್ದುಗಣ್ಣು ಬಿದ್ದಿದೆ. ವೆಚ್ಚವಾಗುತ್ತಿರುವುದು ಕಪ್ಪು ಹಣವೇ ಅಥವಾ ಅದಕ್ಕೆ ತೆರಿಗೆ ಸಂದಾಯ ಆಗಿದೆಯೇ ಎಂಬುದನ್ನು ಒರೆಗೆ ಹಚ್ಚಿ ನೋಡಲಾಗುತ್ತಿದೆ. ವಿದೇಶಗಳಲ್ಲಿನ ಕಪ್ಪುಹಣವನ್ನು ವಾಪಸು ತರುವ ಕ್ರಮಗಳು ಜರುಗಿವೆ.
 
ಬಡವರು, ಅತಿ ದುರ್ಬಲರು, ಆದಿವಾಸಿಗಳು, ದಲಿತರು, ಮಹಿಳೆಯರು, ರೈತರು, ಕಾರ್ಮಿಕರು, ಅಲ್ಪಸಂಖ್ಯಾತರಿಗೆ ಶಕ್ತಿ ತುಂಬುವ ಅಭಿವೃದ್ಧಿ ಕಾರ್ಯಗಳು ಜಾರಿಯಲ್ಲಿವೆ. 28.56 ಕೋಟಿ ಹೊಸ ಫಲಾನುಭವಿಗಳನ್ನು ಬ್ಯಾಂಕಿಂಗ್ ವ್ಯವಸ್ಥೆಯಡಿ ತರಲಾಗಿದ್ದು ಅವರ ಖಾತೆಗಳಲ್ಲಿ ₹  64,682 ಕೋಟಿ  ಜಮೆಯಾಗಿದೆ.
 
ಮೂಲಸೌಲಭ್ಯಗಳ ವಲಯ ಭಾರೀ ಹೂಡಿಕೆ ಕಂಡಿದೆ. ರೈಲ್ವೆಗೆ ಎಂಟು ಲಕ್ಷ ಕೋಟಿ ರೂಪಾಯಿ, ರಸ್ತೆ ವಲಯಕ್ಕೆ ಮೂರು ಲಕ್ಷ ಕೋಟಿ ರೂಪಾಯಿ ಹೂಡಿಕೆಯಾಗಿದೆ. ಬಡವರ ಮನೆಗಳಿಗೆ ಅಡುಗೆ ಅನಿಲ ಪೂರೈಕೆ ಕ್ರಾಂತಿಕಾರಿ ಉಪಕ್ರಮ.
 
2022ರ ವೇಳೆಗೆ ಸರ್ವರಿಗೂ ವಸತಿ ಕಲ್ಪಿಸುವ ಗುರಿಯತ್ತ ದಾಪುಗಾಲು ಇರಿಸಲಾಗಿದೆ. ಕೃಷಿ ವಲಯಕ್ಕೆ ಹೊಸ ಕಾಯಕಲ್ಪ ದೊರೆತಿದೆ. ಹೊಸ ಸರ್ಕಾರ ಸಾಧಿಸಿರುವ ಅಭಿವೃದ್ಧಿಯ ಎಲ್ಲ ಮೈಲುಗಲ್ಲುಗಳನ್ನು ಸ್ಥಳಾಭಾವದ ಕೊರತೆಯಿಂದ ಇಲ್ಲಿ ಗುರುತಿಸಲಾಗುತ್ತಿಲ್ಲ. ಮೋದಿಯವರ ದಾರ್ಶನಿಕ ಆಡಳಿತದಡಿ ಹೊಸ ಭಾರತ ಕಟ್ಟುವ ಕೆಲಸ ಇಷ್ಟೇ ಚುರುಕು ಗತಿಯಿಂದ ಮುಂದೆಯೂ ಜರುಗುವುದು ನಿಶ್ಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT