ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚ್ ನೇಮಕಕ್ಕೆ ಅರ್ಜಿ ಆಹ್ವಾನ

ಅನಿಲ್ ಕುಂಬ್ಳೆ ನಿರ್ಗಮನ ಬಹುತೇಕ ಖಚಿತ
Last Updated 25 ಮೇ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ನೇಮಕ ಮಾಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅರ್ಜಿ ಆಹ್ವಾನಿಸಿದೆ.

ಇದರಿಂದಾಗಿ ಅನಿಲ್ ಕುಂಬ್ಳೆ ಅವರು ಮುಖ್ಯ ಕೋಚ್  ಸ್ಥಾನದಿಂದ ನಿರ್ಗಮಿಸುವುದು ಬಹುತೇಕ ಖಚಿತವಾಗಿದೆ. ಮುಂದಿನ ತಿಂಗಳು ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿ ಮುಗಿದ ನಂತರ ಕುಂಬ್ಳೆ ಅವರ  ಅವರ ಒಂದು ವರ್ಷದ  ಅವಧಿಯ ಒಪ್ಪಂದವು ಪೂರ್ಣಗೊಳ್ಳಲಿದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮೇ 31 ಕೊನೆಯ ದಿನವಾಗಿದೆ. 

ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿ.ವಿ.ಎಸ್. ಲಕ್ಷ್ಮಣ್  ಅವರು ಇರುವ ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿಯು (ಸಿಎಸಿ) ಅಭ್ಯರ್ಥಿಗಳ ಸಂದರ್ಶನ ನಡೆಸುವುದು. ಸಂದರ್ಶನದ ದಿನಾಂಕ ನಿಗದಿಯಾಗಿಲ್ಲ. ‘ಪಾರದರ್ಶಕವಾದ ಆಯ್ಕೆ ಪ್ರಕ್ರಿಯೆ ನಡೆಸಲು ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ನೇಮಕ ಮಾಡುವ ಅಧಿಕಾರಿಯು ಉಸ್ತುವಾರಿ ವಹಿಸಲಿದ್ದಾರೆ’ ಎಂದು ಬಿಸಿಸಿಐ ಉನ್ನತ ಮೂಲಗಳು ತಿಳಿಸಿವೆ.

ಕುಂಬ್ಳೆ ಅವರು ತಮ್ಮ ಹಾಗೂ ತಂಡದ ಆಟಗಾರರ ಸಂಭಾವನೆಯನ್ನು ಹೆಚ್ಚಳ ಮಾಡಬೇಕು ಎಂದು ಈಚೆಗೆ ಪ್ರಸ್ತಾವ ಸಲ್ಲಿಸಿದ್ದರು. ಇದರಿಂದಾಗಿ ಅವರು ಬಿಸಿಸಿಐ ಪದಾಧಿಕಾರಿಗಳ ಅಸಮಾಧಾನಕ್ಕೆ ಗುರಿಯಾಗಿದ್ದರು.  ಐಸಿಸಿ ನೂತನ ಆದಾಯ ಹಂಚಿಕೆಯನ್ನು ಪ್ರತಿಭಟಿಸಿದ್ದ ಬಿಸಿಸಿಐ ಭಾರತ ತಂಡವನ್ನು ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಕಳುಹಿಸದಿರಲು ಪ್ರಯತ್ನಿಸಿತ್ತು. ಆ ಸಂದರ್ಭದಲ್ಲಿ ಕುಂಬ್ಳೆ ಅವರು ತಂಡವನ್ನು ಕಳಿಸುವಂತೆ ಪತ್ರ ಬರೆದಿದ್ದು ಕೂಡ ಬಿಸಿಸಿಐ ಪದಾಧಿಕಾರಿಗಳ ಕಣ್ಣು ಕೆಂಪಗಾಗಿಸಿತ್ತು. ಅದರ ಪರಿಣಾಮವಾಗಿ ಅವರು ಕೋಚ್‌ ಹುದ್ದೆಯಿಂದ ನಿರ್ಗಮಿಸುವ ಸಾಧ್ಯತೆ ಹೆಚ್ಚಿದೆ.

ಹೋದ ವರ್ಷ ಜೂನ್‌ನಲ್ಲಿ ಅವರು ಮುಖ್ಯ ಕೋಚ್ ಆಗಿ ನೇಮಕವಾಗಿದ್ದರು.  ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ತಂಡವು ಸರಣಿ ಗೆದ್ದಿತ್ತು. ನಂತರ ತವರಿನಲ್ಲಿ ನಡೆದಿದ್ದ 13 ಟೆಸ್ಟ್‌ಗಳ ಪೈಕಿ 10ರಲ್ಲಿ  ಭಾರತ ತಂಡವು ಗೆದ್ದಿತ್ತು.  ಆಸ್ಟ್ರೇಲಿಯಾ ವಿರುದ್ಧ ಪುಣೆಯಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ತಂಡವು ಸೋತಿತ್ತು. ಉಳಿದ ಎರಡು ಪಂದ್ಯಗಳು ಡ್ರಾ ಆಗಿದ್ದವು. ಅಲ್ಲದೇ ಐಸಿಸಿ ಟೆಸ್ಟ್‌ ಶ್ರೇಯಾಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು.

‘ಆಯ್ಕೆ ಸಮಿತಿಯಲ್ಲಿಯೂ ಸ್ಥಾನಮಾನ ನೀಡಬೇಕು ಎಂದು  ಕುಂಬ್ಳೆ ಒತ್ತಾಯಿಸಿದ್ದರು. ಆದರೆ ಲೋಧಾ ಸಮಿತಿಯ ಶಿಫಾರಸುಗಳ ಪ್ರಕಾರ ಆಯ್ಕೆ ಸಮಿತಿಯಲ್ಲಿ ಮೂವರು ಮಾತ್ರ ಇರಬೇಕು. ಆಯ್ಕೆ ಸಭೆಯಲ್ಲಿ ತಂಡದ ನಾಯಕ ಅಥವಾ ಕೋಚ್ ಭಾಗವಹಿಸಲು ಅವಕಾಶವಿದೆ. ಆದರೆ ಅವರು ತಮ್ಮ ಮತ ಹಾಕಲು ಅವಕಾಶ ಇಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತ ತಂಡವು ಗುರುವಾರ ಇಂಗ್ಲೆಂಡ್‌ಗೆ ತೆರಳಿದೆ. ಇದೇ ಸಂದರ್ಭದಲ್ಲಿ ಕೋಚ್ ನೇಮಕಾತಿ ಕುರಿತ ಪ್ರಕಟಣೆ ಬಿಡುಗಡೆ ಮಾಡಿರುವುದನ್ನು ಕೆಲವರು ಆಕ್ಷೇಪಿಸಿದ್ದಾರೆ. ‘ಭಾರತ ತಂಡವು  ಹೋದ ಬಾರಿ ಪ್ರಶಸ್ತಿ ಗೆದ್ದಿತ್ತು.  ಈ ಸಲವೂ  ವಿಜಯಿಯಾಗುವ ನಿರೀಕ್ಷೆ ಇದೆ. ಈ ಬೆಳವಣಿಗೆಯು ತಂಡದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.  ಆದ್ದರಿಂದ ಟೂರ್ನಿ ಮುಗಿದ ನಂತರ ಅರ್ಜಿಗಳನ್ನು ಆಹ್ವಾನಿಸಬಹುದಾಗಿತ್ತು’ ಎಂದು ಹೆಸರು ಹೇಳಲು ಇಚ್ಛಿಸದ ಮೂಲಗಳು ಆಕ್ಷೇಪ ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT