ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತವರಿಗೆ ವಾಪಸಾದ ಉಜ್ಮಾ

ಭಾರತದ ಮಹಿಳೆಯನ್ನು ಬೆದರಿಸಿ ಮದುವೆ ಆದ ಪಾಕಿಸ್ತಾನದ ಪ್ರಜೆ
Last Updated 25 ಮೇ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಬಂದೂಕು ತೋರಿಸಿ ಬೆದರಿಕೆ ಹಾಕಿ ಬಲಾತ್ಕಾರವಾಗಿ  ಮದುವೆ ಆಗಿದ್ದ ಪಾಕಿಸ್ತಾನದ ಪ್ರಜೆಯ ಹಿಡಿತದಿಂದ ಪಾರಾಗಿರುವ ಭಾರತದ ಯುವತಿ ಉಜ್ಮಾ ಅಹಮದ್ ದೇಶಕ್ಕೆ ಸುರಕ್ಷಿತವಾಗಿ ಮರಳಿದ್ದಾರೆ.

‘ಇಷ್ಟು ಬೇಗ ಮನೆಗೆ ಮರಳುತ್ತೇನೆ ಎಂದು ಭಾವಿಸಿರಲಿಲ್ಲ’ ಎಂದು ಅವರು ಅಮೃತಸರದ ಬಳಿಯ ವಾಘಾ ಗಡಿ ದಾಟಿದ ನಂತರ ತಿಳಿಸಿದ್ದಾರೆ.
ಇಸ್ಲಾಮಾಬಾದ್ ಹೈಕೋರ್ಟ್ ಉಜ್ಮಾ ಅವರಿಗೆ ಸ್ವದೇಶಕ್ಕೆ ಮರಳಲು ಅನುಮತಿ ನೀಡಿದ ನಂತರ ಪಾಕಿಸ್ತಾನ ದಲ್ಲಿಯ ಭಾರತದ ರಾಯಭಾರ ಕಚೇರಿಯ ಸಿಬ್ಬಂದಿ ಗಡಿ ದಾಟಲು ನೆರವು ನೀಡಿದರು.

20ರ ಹರೆಯದ ಉಜ್ಮಾ ಅವರು ದೆಹಲಿಯವರು. ಪಾಕ್‌ ಯುವಕನ ಜತೆ ಮದುವೆಯಾಗುವ ಮೊದಲೇ ಇವರಿಗೆ ಇನ್ನೊಂದು ಮದುವೆಯಾಗಿತ್ತು.   ಒಬ್ಬ ಮಗಳೂ ಇದ್ದಾಳೆ. ಈ ಮಧ್ಯೆ ಉಜ್ಮಾ ಅವರು ಮಲೇಷ್ಯಾದಲ್ಲಿ ಪಾಕಿಸ್ತಾನದ ಪ್ರಜೆ ತಾಹಿರ್ ಅಲಿ ಜತೆ ಪ್ರೇಮ ಸಂಬಂಧ ಹೊಂದಿದ್ದರು.

ಮೇ 3ರಂದು ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ಅಲಿ ಅವರು ಬಂದೂಕು ತೋರಿಸಿ ಮದುವೆ ಆಗುವಂತೆ ಬೆದರಿಕೆ ಹಾಕಿದರು ಮತ್ತು ವಲಸೆ ದಾಖಲೆ ಪತ್ರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಉಜ್ಮಾ  ಅವರು ಮೇ 12ರಂದು  ಹೈಕೋರ್ಟ್‌ಗೆ ದೂರು ನೀಡಿದ್ದರು.
ಮೊದಲಿನ ಮದುವೆಯಿಂದ ಜನಿಸಿರುವ ಮಗಳಿಗೆ ರಕ್ತಕ್ಕೆ ಸಂಬಂಧಿಸಿದ ತೀವ್ರವಾದ ಕಾಯಿಲೆ ಇರುವುದರಿಂದ ಭಾರತಕ್ಕೆ ಮರಳಲು ಅನುಮತಿ ನೀಡುವಂತೆ ಅವರು ಮನವಿ ಮಾಡಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌, ವಲಸೆ ದಾಖಲೆಗಳನ್ನು ಉಜ್ಮಾ ಅವರಿಗೆ ವಾಪಸ್ ಮಾಡಲು ಅಲಿ ಅವರಿಗೆ ಆದೇಶಿಸಿ ಸ್ವದೇಶಕ್ಕೆ ಮರಳಲು ಅನುಮತಿ ನೀಡಿತ್ತು. ಇದಾದ ನಂತರ ಉಜ್ಮಾ  ಅವರು ಪಾಕಿಸ್ತಾನದಲ್ಲಿಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಭಾರತಕ್ಕೆ ಮರಳಲು ಸಹಾಯ ಮಾಡುವಂತೆ ಕೋರಿದ್ದರು.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ದೆಹಲಿಯಲ್ಲಿ ಇರುವ ಉಜ್ಮಾ ಅವರ ಕುಟುಂಬದ ಸದಸ್ಯರಿಗೆ ಫೋನ್ ಮಾಡಿ ಉಜ್ಮಾ  ಭಾರತಕ್ಕೆ ಮರಳುತ್ತಿರುವ ವಿಚಾರ ತಿಳಿಸಿದಾಗಲೇ  ಕುಟುಂಬ ದವರಿಗೆ ವಿಷಯ ಗೊತ್ತಾಗಿದೆ. ಉಜ್ಮಾ ಅವರ ಸಹೋದರ ವಾಸಿಂ ಅಹಮದ್ ಅವರು ನೆರವು ನೀಡಿದ ಭಾರತ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

‘ಸ್ವದೇಶಕ್ಕೆ ವಾಪಸ್ ಆಗಿರುವ ಭಾರತದ ಮಗಳಿಗೆ ಸ್ವಾಗತ, ನಿಮಗೆ ಆಗಿರುವ ತೊಂದರೆಗೆ ವಿಷಾದಿಸುತ್ತೇನೆ’ ಎಂದು ಸಚಿವೆ ಸುಷ್ಮಾ ಅವರು ಟ್ವೀಟ್ ಮಾಡಿದ್ದಾರೆ. ‘ಉಜ್ಮಾ ಪರ ನ್ಯಾಯಾಲಯದಲ್ಲಿ ತಂದೆಯಂತೆ ಹೋರಾಡಿದ ವಕೀಲ ಷಾನವಾಜ್‌ ನೂನ್‌ ಅವರಲ್ಲದೆ ಪಾಕಿಸ್ತಾನದ ವಿದೇಶಾಂಗ ಸಚಿವಾಲಯಕ್ಕೂ ನಾನು  ಕೃತಜ್ಞತೆ ಸಲ್ಲಿಸಲೇಬೇಕು’ ಎಂದು ಅವರು ಹೇಳಿದ್ದಾರೆ.

ಸುದ್ದಿಗಾರರಿಗೆ ಘಟನೆಯನ್ನು  ವಿವರಿಸುವಾಗ ಉಜ್ಮಾ ಅತ್ತರು. ‘ನಾನು ಅನಾಥೆ. ನನ್ನ ಜೀವ ಮೌಲ್ಯಯುತವಾದದು ಎಂದು ಮೊದಲ ಬಾರಿಗೆ ನನಗೆ ಅನ್ನಿಸಿತು. ಭಾರತಕ್ಕೆ ವಾಪಸಾಗಿರುವುದರಿಂದ ನನಗೆ ಸಂತೋಷವಾಗಿದೆ’ ಎಂದರು. ‘ಅದೊಂದು ವಿಚಿತ್ರ ಗ್ರಾಮ. ಹಿಂದೆ ಅಲ್ಲಿ ತಾಲಿಬಾನ್‌ಗಳು ಇದ್ದರು. ಗ್ರಾಮದ ಪ್ರತಿಯೊಬ್ಬರಿಗೂ ಒಬ್ಬರಿಗಿಂತ ಹೆಚ್ಚು ಪತ್ನಿಯರಿದ್ದಾರೆ. ಎಲ್ಲರ ಮನೆಯಲ್ಲಿ ಬಂದೂಕುಗಳಿದ್ದವು. ಅಲ್ಲಿಂದ ಹೊರ ಬರುವುದು ಬಹಳ ಕಷ್ಟವಾಯಿತು’ ಎಂದೂ ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT