ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರರ ವೇತನ ಹಿಂಬಾಕಿ ₹ 300 ಕೋಟಿ

ಸಾರಿಗೆ ಸಂಸ್ಥೆಗಳ ಬಳಿ ಹಣವಿಲ್ಲ l ಬಾಕಿ ಪಾವತಿಗೆ ಒತ್ತಾಯಿಸಿ ಹೋರಾಟ; ನೌಕರರ ಎಚ್ಚರಿಕೆ
ಅಕ್ಷರ ಗಾತ್ರ
ಬೆಂಗಳೂರು: ಸಾರಿಗೆ ನೌಕರರ ವೇತನ ಶೇ. 12.5ರಷ್ಟು ಹೆಚ್ಚಳವಾಗಿ ಏಳು ತಿಂಗಳು ಕಳೆದಿದೆ. ಆದರೆ, ಇದಕ್ಕೆ ಹಿಂದಿನ ಒಂಬತ್ತು ತಿಂಗಳ ಬಾಕಿ ಪಾವತಿಸಲು ಸಾರಿಗೆ ಸಂಸ್ಥೆಗಳಲ್ಲಿ ಹಣವಿಲ್ಲ. ಇದರಿಂದಾಗಿ ₹300 ಕೋಟಿ ಪಾವತಿಯಾಗಿಲ್ಲ.
 
2016ರ ಜುಲೈನಲ್ಲಿ ಸಾರಿಗೆ ಸಂಸ್ಥೆಗಳ ನೌಕರರು ಮುಷ್ಕರ ನಡೆಸಿದ ಬಳಿಕ ಸರ್ಕಾರ ವೇತನದಲ್ಲಿ ಶೇ 12.5ರಷ್ಟು ಹೆಚ್ಚಳ ಮಾಡಿದೆ. ಈ ಸಂಬಂಧ ಸೆಪ್ಟಂಬರ್‌ನಲ್ಲಿ ಆದೇಶ ಹೊರಡಿಸಿದೆ. ಕಳೆದ ವರ್ಷದ ಜನವರಿ 1ರಿಂದಲೇ ಪೂರ್ವಾನ್ವಯ ಆಗುವಂತೆ ವೇತನ ಹೆಚ್ಚಳ  ಜಾರಿಗೆ ಬಂದಿದೆ.
 
ಅಕ್ಟೋಬರ್ ತಿಂಗಳಲ್ಲಿ ಪರಿಷ್ಕೃತ ವೇತನ ಅನುಷ್ಠಾನಕ್ಕೆ ಬಂದಿದೆ. ಆದರೆ, ಇದಕ್ಕೂ ಹಿಂದಿನ ಒಂಬತ್ತು ತಿಂಗಳ ಹಿಂಬಾಕಿ ಬಿಡುಗಡೆ ಆಗಿಲ್ಲ. ನಾಲ್ಕೂ ನಿಗಮಗಳಿಂದ ಒಟ್ಟು ₹ 300 ಕೋಟಿ ಬಾಕಿ ನೌಕರರಿಗೆ ಬರಬೇಕಾಗಿದೆ.
 
 ಸಾರಿಗೆ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿರುವುದರಿಂದ ದೊಡ್ಡ ಮೊತ್ತದ ಹಿಂಬಾಕಿ ಪಾವತಿಗೆ ಹಣ ಇಲ್ಲ. ಇದರಿಂದಾಗಿ ಕೊಂಚ ವಿಳಂಬವಾಗಿದೆ ಎನ್ನುತ್ತಾರೆ ಸಂಸ್ಥೆಯ ಅಧಿಕಾರಿಗಳು.
 
ಒಂದು ತಿಂಗಳ ಗಡುವು: ‘ಒಂದೇ ಕಂತಿನಲ್ಲಿ ಹಿಂಬಾಕಿ ಪಾವತಿ ಸಾಧ್ಯವಾಗದಿದ್ದರೆ ಹಲವು ಕಂತುಗಳಲ್ಲಿ ಬಿಡುಗಡೆ  ಮಾಡಬಹುದು. ಜೂನ್‌ನಲ್ಲಿ ಮೊದಲ ಕಂತು ಬಿಡುಗಡೆ ಮಾಡಲು ಮನವಿ ಮಾಡಲಾಗಿದೆ. ಮಾಡದಿದ್ದರೆ ಮತ್ತೊಮ್ಮೆ ಹೋರಾಟ ನಡೆಸಲಾಗುವುದು’ ಎಂದು ಸಾರಿಗೆ ನೌಕರರ ಸಂಘದ ಕಾರ್ಯದರ್ಶಿ ಎಚ್.ವಿ. ಅನಂತಸುಬ್ಬರಾವ್ ಎಚ್ಚರಿಸಿದ್ದಾರೆ.
 
‘ಅಲ್ಲದೆ ಬೃಹತ್‌ ಬೆಂಗಳೂರು ಸಾರಿಗೆ ಸಂಸ್ಥೆಯಲ್ಲಿ (ಬಿಎಂಟಿಸಿ) ಬೋನಸ್‌, ತುಟ್ಟಿಭತ್ಯೆ ಸೇರಿ ಸುಮಾರು ₹300 ಕೋಟಿಯಷ್ಟು ನೌಕರರಿಗೆ ಪಾವತಿಯಾಗಬೇಕಾದ ಹಣ ಬಾಕಿ ಇದೆ’ ಎಂದೂ ಅವರು ಹೇಳಿದರು.
 
‘ಜೂನ್‌ನಲ್ಲಿ ನೌಕರರ ಸಂಘದ ರಾಷ್ಟ್ರಮಟ್ಟದ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ಬಾಕಿ ಪಾವತಿಗಾಗಿ ಹೋರಾಟ ರೂಪಿಸುವ ಬಗ್ಗೆ ಚರ್ಚೆ ನಡೆಸಲಾಗುವುದು’ ಎಂದರು.
 
ವರ್ಗಾವಣೆ ನಿಯಮಾವಳಿ ಸಿದ್ಧ: ‘ನೌಕರರ  ಒಂದು ಬಾರಿಯ ಅಂತರ ನಿಗಮ ವರ್ಗಾವಣೆಗೆ ನಿಯಮಾವಳಿ ರೂಪುಗೊಂಡಿದ್ದು, ಸದ್ಯ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ’ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
 
‘ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್‌.ಆರ್‌. ಉಮಾಶಂಕರ್  ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿ ನಿಯಮಾವಳಿ ಕರಡು ಅಂತಿಮಗೊಳಿಸಿದೆ. ಸರ್ಕಾರಕ್ಕೆ ಸಲ್ಲಿಸಿ ಕಾನೂನು ಇಲಾಖೆ ಅನುಮತಿ ಪಡೆಯುವುದಷ್ಟೇ ಬಾಕಿ ಇದೆ. ಸದ್ಯದಲ್ಲೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ’ ಎಂದು ಸಚಿವರು ‘ಪ್ರಜಾವಾಣಿ’ಗೆ ತಿಳಿಸಿದರು.
****
ಹಣಕಾಸು ಪರಿಸ್ಥಿತಿ ಉತ್ತಮವಾಗಿಲ್ಲದ ಕಾರಣ ವೇತನ ಹಿಂಬಾಕಿ ಉಳಿಸಿಕೊಳ್ಳಲಾಗಿದೆ. ಪಾವತಿಗೆ ಸದ್ಯದಲ್ಲೇ  ಕ್ರಮ ಕೈಗೊಳ್ಳಲಾಗುವುದು
ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT