ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಲಿಪ್ಪೀನ್ಸ್‌ ನಗರಕ್ಕೆ ಉಗ್ರರ ಮುತ್ತಿಗೆ

ವಿವಿಧೆಡೆ ಐ.ಎಸ್‌ನ ಕಪ್ಪು ಬಾವುಟ ಹಾರಾಟ
Last Updated 25 ಮೇ 2017, 19:30 IST
ಅಕ್ಷರ ಗಾತ್ರ

ಮರಾವಿ (ಎಪಿ): ದಕ್ಷಿಣ ಫಿಲಿಪ್ಪೀನ್ಸ್‌ನ ನಗರವಾದ ಮರಾವಿಯ ಮೇಲೆ ಮುತ್ತಿಗೆ ಹಾಕಿರುವ ಐ.ಎಸ್‌ ಬೆಂಬಲಿತ ಉಗ್ರರು, ವಿವಿಧೆಡೆ ಕಪ್ಪು ಬಾವುಟಗಳನ್ನು ಹಾರಿಸಿದ್ದಾರೆ. ಹಲವು ಕಟ್ಟಡಗಳಿಗೆ ಬೆಂಕಿಯಿಟ್ಟು,  ಹತ್ತಕ್ಕೂ ಹೆಚ್ಚು ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದಾರೆ.

ಇದಕ್ಕೆ ಉತ್ತರವಾಗಿ ಸೇನಾ ಟ್ಯಾಂಕರ್‌ಗಳು ನಗರಕ್ಕೆ ಧಾವಿಸಿದ್ದು, ಉಗ್ರ ಇಸ್ನಿಲನ್ ಹಪಿಲನ್‌ನ ಅಡಗುದಾಣಗಳ ಮೇಲೆ ದಾಳಿ ನಡೆಸಿವೆ. ಆದರೆ ಆತ ಅಡಗಿರುವ ತಾಣ ಸ್ಪಷ್ಟವಾಗದ ಕಾರಣ ಕಾರ್ಯಾಚರಣೆ ಸಫಲವಾಗಿಲ್ಲ. ಮಂಗಳವಾರ ತಡರಾತ್ರಿಯಿಂದಲೂ ನಡೆಯುತ್ತಿರುವ ಸೇನೆ ಮತ್ತು ಉಗ್ರರ ನಡುವಿನ  ಈ ಸಂಘರ್ಷ ಮುಂದುವರಿದಿದ್ದು, ಗುರುವಾರದ ವೇಳೆಗೆ ಕನಿಷ್ಠ 21 ಮಂದಿ ಸಾವನ್ನಪ್ಪಿದ್ದಾರೆ.

ದಾಳಿಯ ವಿವರಗಳು ಕ್ರಮೇಣ ಹೊರಬೀಳುತ್ತಿವೆ. ಇದರಿಂದ, ಏಷ್ಯಾದ ಈ ಬೃಹತ್‌ ರೋಮನ್‌ ಕ್ಯಾಥೊಲಿಕ್‌ ರಾಷ್ಟ್ರ ಸಹ, ಐ.ಎಸ್‌ ಹಿಡಿತ ಹೆಚ್ಚುತ್ತಿರುವ ದೇಶಗಳ ಪಟ್ಟಿಗೆ ಸೇರುವ ಆತಂಕ ವ್ಯಕ್ತವಾಗಿದೆ. ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿರುವ ಅಧ್ಯಕ್ಷ ರೋಡ್ರಿಗೊ ಡುತೆರ್ತೆ, ದೇಶದ ದಕ್ಷಿಣ ಭಾಗದಲ್ಲಿ ‘ಸೇನಾ ಆಡಳಿತ’ ಘೋಷಿಸಿದ್ದಾರೆ. ಅಗತ್ಯ ಬಿದ್ದರೆ ಇದನ್ನು ರಾಷ್ಟ್ರದಾದ್ಯಂತ ವಿಸ್ತರಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಐ.ಎಸ್ ಜೊತೆ ಸಂಪರ್ಕ ಹೊಂದಲು ಪ್ರಯತ್ನಿಸಿದ ಎಲ್ಲಾ ಗುಂಪುಗಳನ್ನೂ ನಾಶ ಮಾಡಲು ಅವರು ಆದೇಶಿಸಿದ್ದಾರೆ.

‘ನೀನು ಸಾಯಬೇಕು ಎಂದು ನಾನು ನಿರ್ಧರಿಸಿದರೆ ಖಂಡಿತ ಸಾಯುತ್ತೀಯೆ. ಇದಕ್ಕಾಗಿ ಹಲವು ನಾಗರಿಕರು ಬಲಿಯಾಗಬೇಕು ಎಂದಿದ್ದರೆ ಅದೂ ಆಗಿಬಿಡಲಿ’ ಎಂದು ರೋಡ್ರಿಗೊ ಬುಧವಾರ ಇಸ್ನಿಲನ್‌ಗೆ ಎಚ್ಚರಿಕೆ ನೀಡಿದ್ದಾರೆ. ಸಾವಿರಾರು ನಾಗರಿಕರು ಕಾರುಗಳಲ್ಲಿ ಅಗತ್ಯ ವಸ್ತುಗಳನ್ನು ತುಂಬಿಸಿಕೊಂಡು ನಗರ ತೊರೆಯುತ್ತಿದ್ದಾರೆ. ಇನ್ನು ಕೆಲವು ನಾಗರಿಕರು ಸಂಘರ್ಷದ ನಡುವೆ ಸಿಲುಕಿ ಅತಂತ್ರರಾಗಿದ್ದಾರೆ.

ಅಮೆರಿಕ ಹುಡುಕುತ್ತಿರುವ ಉಗ್ರರ ಪಟ್ಟಿಯಲ್ಲಿ ಅಬು ಸೈಯ್ಯಫ್‌ ಉಗ್ರರ ಗುಂಪಿನ ಕಮಾಂಡರ್ ಇಸ್ನಿಲನ್ ಕೂಡ ಒಬ್ಬ. ಆತನ ತಲೆಗೆ 50 ಲಕ್ಷ ಅಮೆರಿಕನ್ ಡಾಲರ್ (₹ 32 ಕೋಟಿ) ಬೆಲೆ ಕಟ್ಟಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT