ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಗಸೂಚಿ ಬದಲು

ಬದಲಾಗದ ‘ಹಿಂದುಳಿದ’ ತಾಲ್ಲೂಕು ಹಣೆಪಟ್ಟಿ
Last Updated 25 ಮೇ 2017, 19:33 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ 114 ಹಿಂದುಳಿದ ತಾಲ್ಲೂಕುಗಳಿಗೆ ಪ್ರತಿ ವರ್ಷ ಹಂಚಿಕೆ ಮಾಡುತ್ತಿರುವ ಅನುದಾನವನ್ನು ‘ಹಿಂದುಳಿದಿರುವಿಕೆ’ ಮಾನದಂಡ ಬದಿಗಿಟ್ಟು ಪ್ರಭಾವಿ ಶಾಸಕರು ತಮ್ಮ ತಾಲ್ಲೂಕುಗಳಿಗೆ ಬಳಸಿಕೊಳ್ಳುತ್ತಿರುವ ಅಂಶ ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆ.

‘ರಾಜ್ಯದಲ್ಲಿ ಶೇ 65ರಷ್ಟು ತಾಲ್ಲೂಕುಗಳು ಹಿಂದುಳಿದಿವೆ. ಆದರೆ, ಒದಗಿಸಲಾದ ಅನುದಾನ ಹಿಂದುಳಿದಿರುವಿಕೆಗೆ ಅನುಗುಣವಾಗಿ ಹಂಚಿಕೆ ಆಗಿಲ್ಲ. ವಿವಿಧ ಇಲಾಖೆಗಳು ಪರಿಣಾಮಕಾರಿಯಾಗಿ ಯೋಜನೆ ರೂಪಿಸಲು ವಿಫಲವಾಗಿವೆ. ಹೀಗಾಗಿ, 10 ವರ್ಷಗಳಿಂದ ಅನುದಾನ ಬಳಕೆ ಮಾಡುತ್ತಿದ್ದರೂ ಅತಿ ಹಾಗೂ ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಹೇಳಿಕೊಳ್ಳುವಂತಹ ಯಾವುದೇ ಬದಲಾವಣೆ ಆಗಿಲ್ಲ’ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಇದೀಗ ಸರ್ಕಾರ ಈ ಲೋಪ ಸರಿಪಡಿಸಲು ಮುಂದಾಗಿದೆ. ಅದಕ್ಕಾಗಿ ಹೊಸ ಮಾರ್ಗಸೂಚಿ ಸಿದ್ಧಪಡಿಸಿದೆ. ಈ ತಾಲ್ಲೂಕುಗಳಿಗೆ ‘ವಿಶೇಷ ಅಭಿವೃದ್ಧಿ ಯೋಜನೆ’ (ಎಸ್‌ಡಿಪಿ)  ಆಡಿ ಹಂಚಿಕೆಯಾಗುವ ಹಣವನ್ನು 2017–18ನೇ ಸಾಲಿನಿಂದ ಹೊಸ ಮಾರ್ಗಸೂಚಿ ಅನ್ವಯವೇ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆಗೆ ಯೋಜನಾ ಇಲಾಖೆಗೆ ಸಲ್ಲಿಸಬೇಕು ಎಂದು ಎಲ್ಲ ಇಲಾಖೆಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಇನ್ನು ಮುಂದೆ ಮೀಸಲಿಡುವ ಒಟ್ಟು ಹಣದಲ್ಲಿ ಶೇ 40ರಷ್ಟು ಕಲಬುರ್ಗಿ ವಿಭಾಗ, ಶೇ 20ರಷ್ಟು ಬೆಳಗಾವಿ, ಶೇ 25ರಷ್ಟು ಬೆಂಗಳೂರು, ಶೇ 15ರಷ್ಟು ಮೈಸೂರು ವಿಭಾಗಕ್ಕೆ ಕಡ್ಡಾಯವಾಗಿ  ಹಂಚಿಕೆ ಮಾಡಬೇಕು. ಅಲ್ಲದೆ, ಹೀಗೆ ಹಂಚಿಕೆ ಮಾಡಿದ ಅನುದಾನ ಮೊತ್ತವನ್ನು ಆಯಾ ವಿಭಾಗಗಳಲ್ಲಿ ಅತ್ಯಂತ ಹಿಂದುಳಿದ ತಾಲ್ಲೂಕುಗಳಿಗೆ  ಶೇ 50ರಷ್ಟು, ಅತಿ ಹಿಂದುಳಿದ ತಾಲ್ಲೂಕುಗಳಿಗೆ ಶೇ 30ರಷ್ಟು, ಹಿಂದುಳಿದ ತಾಲ್ಲೂಕುಗಳಿಗೆ ಶೇ 20ರಷ್ಟು ಹಂಚಿಕೆ ಮಾಡಬೇಕು ಎಂದೂ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ವಿಶೇಷ ಅಭಿವೃದ್ಧಿ ಯೋಜನೆಗಳಿಗೆ 2017–18ನೇ ಸಾಲಿನಲ್ಲಿ ₹ 3,000 ಕೋಟಿ ಮೀಸಲಿಡಲಾಗಿದೆ. ಅದರಲ್ಲಿ ಅತಿ ಹೆಚ್ಚು ಗ್ರಾಮೀಣಾಭಿವೃದ್ಧಿಗೆ ₹ 635 ಕೋಟಿ, ಬೃಹತ್‌ ನೀರಾವರಿಗೆ ₹ 535 ಕೋಟಿ, ವಸತಿ ಯೋಜನೆಗೆ ₹ 380 ಕೋಟಿ ಲೋಕೋಪಯೋಗಿ ಇಲಾಖೆಗೆ ₹ 300 ಕೋಟಿ. ಆರೋಗ್ಯಕ್ಕೆ ₹ 183 ಕೋಟಿ, ಶಿಕ್ಷಣಕ್ಕೆ ₹ 162 ಕೋಟಿ, ಇಂಧನ ಇಲಾಖೆಗೆ ₹ 150 ಕೋಟಿ ಹಂಚಿಕೆ ಮಾಡಲಾಗಿದೆ.



ಈ ಅನುದಾನವನ್ನು ವಿಶೇಷ ಅಭಿವೃದ್ಧಿ ಯೋಜನೆಗಳಿಗಷ್ಟೆ ಹಂಚಿಕೆ ಮಾಡಬೇಕು. ಸಹಾಯಧನ (ಸಬ್ಸಿಡಿ) ಯೋಜನೆಗಳು ಸೇರಿದಂತೆ ಇತರ ಯಾವುದೇ ಕಾರ್ಯಕ್ರಮಗಳಿಗೆ ಹಂಚಿಕೆ ಮಾಡಬಾರದು ಎಂದೂ ಸ್ಪಷ್ಟವಾಗಿ ತಿಳಿಸಲಾಗಿದೆ.

₹ 7,939.61 ಕೋಟಿ ಬಾಕಿ!: ಡಾ. ಡಿ.ಎಂ. ನಂಜುಂಡಪ್ಪ ಸಮಿತಿ ವರದಿ ಅನ್ವಯ ಹಿಂದುಳಿದ, ಅತಿ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ಎಂದು ಗುರುತಿಸಿ, ವರ್ಗೀಕರಿಸಿದ ತಾಲ್ಲೂಕುಗಳಿಗೆ ಎಸ್‌ಡಿಪಿ ಅನುಷ್ಠಾನಗೊಳಿಸಲು 2007ರಿಂದ 2017ರವರೆಗಿನ ಅವಧಿಯಲ್ಲಿ ಪ್ರತಿ ವರ್ಷ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅನುದಾನ  ತೆಗೆದಿಡುತ್ತಿದೆ. 10 ವರ್ಷಗಳಲ್ಲಿ ಸರ್ಕಾರ ಹಂಚಿಕೆ ಮಾಡಿದ ಒಟ್ಟು ₹25,438.61 ಕೋಟಿ ಅನುದಾನದಲ್ಲಿ ಬಳಕೆಯಾಗಿದ್ದು ಕೇವಲ ₹ 17,499 ಕೋಟಿ ಮಾತ್ರ. ಆದರೆ, ಈ ಹಣದಲ್ಲಿ ₹7,939.61 ಕೋಟಿ ವೆಚ್ಚವಾಗದೆ ಉಳಿದಿದೆ.

‘ಸೂಕ್ತ ಸಮಯದಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸಲು ಬಹುತೇಕ ಇಲಾಖೆಗಳು ವಿಫಲವಾಗಿದೆ. ಹೀಗಾಗಿ ಹಣ ಹಂಚಿಕೆ ಮಾಡಿದ್ದರೂ ಬಿಡುಗಡೆಯಾಗಿರುವುದು ₹19,016.06 ಕೋಟಿ. ಮೀಸಲಿಟ್ಟ ಹಣ ಅರ್ಹತೆಗೆ ಅನುಗುಣವಾಗಿ ಈ ತಾಲ್ಲೂಕುಗಳಿಗೆ ಸರಿಯಾಗಿ ತಲುಪಿಲ್ಲ ಎಂಬ ವಾಸ್ತವ ಅರಿವಿಗೆ ಬಂದಿದೆ’ ಎಂದೂ ಮೂಲಗಳು ತಿಳಿಸಿವೆ.



ಯೋಜನೆ ಮತ್ತು ಸಾಂಖ್ಯಿಕ ಸಚಿವ ಎಂ.ಆರ್‌. ಸೀತಾರಾಂ ಅಧ್ಯಕ್ಷತೆಯಲ್ಲಿ ನಡೆದ 2016–17ನೇ ಸಾಲಿನಲ್ಲಿ ಕೈಗೊಂಡ ವಿಶೇಷ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅನುದಾನ ವಿನಿಯೋಗ ಆಗದ ಕುರಿತು ಗಂಭೀರ ಚರ್ಚೆ ನಡೆದಿದೆ.

ಸರ್ಕಾರ ಹಣ ಹಂಚಿಕೆ ಮಾಡಿದರೂ ಬಳಸಿಕೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿರುವ ಇಲಾಖೆಗಳು ಮುಖ್ಯಸ್ಥರ ವಿರುದ್ಧ ಸಚಿವರು ಗರಂ ಆಗಿದ್ದಾರೆ. ಇನ್ನು ಮುಂದೆ ಹೊಸ ಮಾರ್ಗಸೂಚಿಯ ಪ್ರಕಾರವೇ ಹಣ ಹಂಚಿಕೆ  ಮಾಡಿ ಸಮರ್ಪಕವಾಗಿ ಬಳಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯ: ‘ವಿಶೇಷ ಅಭಿವೃದ್ಧಿ ಯೋಜನೆಯಡಿ ಪ್ರವಾಸೋದ್ಯಮ ಇಲಾಖೆಗೆ ಒದಗಿಸಿದ ಕೋಟ್ಯಂತರ ಹಣ ಬಳಕೆ ಆಗಿಲ್ಲ. 2016–17ನೇ ಸಾಲಿನಲ್ಲಿ ₹ 125 ಕೋಟಿ ಈ ಇಲಾಖೆಗೆ ಮಂಜೂರು ಮಾಡಲಾಗಿದೆ. ಈ ಹಣ ವೆಚ್ಚ ಆಗಿರುವ ಕುರಿತು ಇಲಾಖೆ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡಿಲ್ಲ. ಹೀಗಾಗಿ ಪ್ರಸಕ್ತ ವರ್ಷ ಪ್ರವಾಸೋದ್ಯಮ ಇಲಾಖೆಗೆ ಎಸ್‌ಡಿಪಿ ಅಡಿ ಅನುದಾನವನ್ನೇ ಒದಗಿಸಿಲ್ಲ’ ಎಂದು ಯೋಜನಾ ಇಲಾಖೆ ಮೂಲಗಳು ತಿಳಿಸಿವೆ.
*
ಹಿಂದುಳಿದ ತಾಲ್ಲೂಕುಗಳಿಗೆ ರಾಜ್ಯ ಸರ್ಕಾರ ಮೀಸಲಿಟ್ಟ ಹಣವನ್ನು ಬಳಸಲು ಕ್ರಿಯಾ ಯೋಜನೆ ರೂಪಿಸುವಂತೆ ಎಲ್ಲ ಇಲಾಖೆಗಳಿಗೆ ಸೂಚಿಸಲಾಗಿದೆ.
ಎನ್‌. ವೈ. ಗೋಪಾಲಕೃಷ್ಣ,
ಅಧ್ಯಕ್ಷ,
ಡಾ.ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನದ ಉನ್ನಧಿಕಾರ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT