ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ ಕೆಲಸದ ದಿನ ವಿಸ್ತರಣೆಗೆ ಒತ್ತಾಯ

Last Updated 26 ಮೇ 2017, 5:21 IST
ಅಕ್ಷರ ಗಾತ್ರ

ಕೋಲಾರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ) ಕಾರ್ಮಿಕರಿಗೆ ಕೆಲಸವನ್ನು 200 ದಿನಕ್ಕೆ ವಿಸ್ತರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಪಿಎಂ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.

ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದಿವೆ. ಆದರೆ, ಯಾವುದೇ ಮಹತ್ವದ ಸಾಧನೆ ಮಾಡಿಲ್ಲ. ಬಿಜೆಪಿ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳೆಲ್ಲಾ ಹುಸಿಯಾಗಿವೆ. ಕೇಂದ್ರ ಸರ್ಕಾರ ನರೇಗಾ ಯೋಜನೆಗೆ ಹೆಚ್ಚಿನ ಅನುದಾನ ನೀಡುತ್ತಿಲ್ಲ. ಇದರಿಂದ ಯೋಜನೆ ದುರ್ಬಲವಾಗಿದೆ ಎಂದು ಧರಣಿನಿರತರು ದೂರಿದರು.

ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ನಾರಾಯಣಸ್ವಾಮಿ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ಬಹುರಾಷ್ಟ್ರೀಯ ಕಂಪೆನಿಗಳ ಪರವಾದ ನೀತಿಗಳನ್ನು ಜಾರಿಗೆ ತಂದು ಜನಸಾಮಾನ್ಯರನ್ನು ಬೀದಿ ಪಾಲು ಮಾಡುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿ ಜನತೆಗೆ ಜೀವನ ನಿರ್ವಹಣೆ ಕಷ್ಟವಾಗಿದೆ’ ಎಂದರು.

ಗಂಭೀರವಾಗಿ ಪರಿಗಣಿಸಿಲ್ಲ: ಕೃಷಿ ವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರ ರೈತರ ಹಿತ ಕಾಯುವಲ್ಲಿ ವಿಫಲವಾಗಿದೆ. ಬರದಿಂದ ಬೆಳೆ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರು ಸಾಲು ಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬರ ಪರಿಹಾರ ಕಾಮಗಾರಿಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ.

ರೈತರು ಹಾಗೂ ಕೃಷಿ ಕಾರ್ಮಿಕರು ಕೆಲಸವಿಲ್ಲದೆ ಪಟ್ಟಣ ಪ್ರದೇಶಕ್ಕೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಸರ್ಕಾರ ರೈತರ ಆತ್ಮಹತ್ಯೆ ಮತ್ತು ಕೃಷಿ ಬಿಕ್ಕಟ್ಟನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಧರಣಿನಿರತರು ಆರೋಪಿಸಿದರು.

ನರೇಗಾ ಯೋಜನೆಯಡಿ ದಿನದ ಕೂಲಿಯನ್ನು ₹ 350ಕ್ಕೆ ಹೆಚ್ಚಿಸಬೇಕು. ನಗದು ವರ್ಗಾವಣೆ ನೀತಿ ಕೈಬಿಡಬೇಕು. ಎಲ್ಲಾ ಆಹಾರ ಪದಾರ್ಥಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಸಹಾಯಧನದ ಆಧಾರದ ಮೇಲೆ ಸಿಗುವಂತೆ ಮಾಡಬೇಕು. ಸಾರ್ವಜನಿಕ ರಂಗದ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು.

ಶಿಕ್ಷಣ ಮತ್ತು ಉದ್ಯೋಗಾವಕಾಶಗಳಲ್ಲಿ ಮೀಸಲಾತಿ ಒದಗಿಸಿ, ಬಡ್ತಿಯಲ್ಲೂ ಮೀಸಲಾತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜಿ.ಅರ್ಜುನನ್, ಪಿ.ಶ್ರೀನಿವಾಸ್‌, ಎ.ಆರ್‌.ಬಾಬು, ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ವಿ.ಗೀತಾ, ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಧರಣಿಯಲ್ಲಿ ಪಾಲ್ಗೊಂಡಿದ್ದರು.

* *

ಬಂಡವಾಳಶಾಹಿಗಳ ಓಲೈಕೆಗಾಗಿ ಕೇಂದ್ರ ಸರ್ಕಾರ ಕಾರ್ಮಿಕರು, ರೈತರು ಹಾಗೂ ಬಡವರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಸಾರ್ವಜನಿಕ ರಂಗವನ್ನು ದುರ್ಬಲಗೊಳಿಸಿ ಖಾಸಗೀಕರಣಕ್ಕೆ ಮಣೆ ಹಾಕುತ್ತಿದೆ.
ನಾರಾಯಣಸ್ವಾಮಿ, ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT