ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಮಕಾತಿಯಲ್ಲಿ ಅಕ್ರಮ: ಆರೋಪ

Last Updated 26 ಮೇ 2017, 5:24 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಜೀವಿಕ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸದಸ್ಯರು ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ (ಡಿಡಿಪಿಐ) ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.

ಬಂಗಾರಪೇಟೆ ತಾಲ್ಲೂಕಿನಲ್ಲಿ ಕೆಲ ಅಭ್ಯರ್ಥಿಗಳು ಶಿಕ್ಷಣ ಇಲಾಖೆಗೆ ನಕಲಿ ಅಂಕಪಟ್ಟಿ ಸಲ್ಲಿಸಿ ಸಹ ಶಿಕ್ಷಕರ ಹುದ್ದೆಗೆ ಆಯ್ಕೆಯಾಗಿದ್ದಾರೆ. ಮತ್ತೆ ಕೆಲ ಅಭ್ಯರ್ಥಿಗಳು ಅಂಗವಿಕಲರ ಮೀಸಲಾತಿ ದುರ್ಬಳಕೆ ಮಾಡಿಕೊಂಡು ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಈ ಅಕ್ರಮದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ಧರಣಿ ನಿರತರು ಆರೋಪಿಸಿದರು.

ಸಂಸ್ಥೆಯ ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, ‘ಅಭ್ಯರ್ಥಿಗಳು ನಕಲಿ ಅಂಕಪಟ್ಟಿ ಸಲ್ಲಿಸಿ ಸಹ ಶಿಕ್ಷಕರ ಹುದ್ದೆಗೆ ಆಯ್ಕೆಯಾಗಿರುವ ಸಂಬಂಧ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದೇವೆ. ಆದರೆ, ಅಧಿಕಾರಿಗಳು ದೂರಿಗೆ ಸ್ಪಂದಿಸುತ್ತಿಲ್ಲ. ಅಕ್ರಮದ ಸಂಬಂಧ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ಹೇಳಿದರು.

ಶಿಕ್ಷಕರ ನೇಮಕಾತಿ ಅಕ್ರಮದಲ್ಲಿ ಡಿಡಿಪಿಐ ಕಚೇರಿಯ ಕೆಲ ಭ್ರಷ್ಟ ಅಧಿಕಾರಿಗಳ ಪಾತ್ರವಿದೆ. ಅಧಿಕಾರಿಗಳು ಲಂಚದಾಸೆಗೆ ಈ ಅಕ್ರಮ ಎಸಗಿದ್ದಾರೆ. ಅಲ್ಲದೇ, ಬಿಸಿಯೂಟ ಯೋಜನೆ, ಉಚಿತ ಕಡ್ಡಾಯ ಶಿಕ್ಷಣ ಯೋಜನೆಯಲ್ಲಿ ಅಧಿಕಾರಿಗಳು ಅವ್ಯವಹಾರ ನಡೆಸಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ವಂತಿಗೆ ಹಾವಳಿ ಮಿತಿ ಮೀರಿದ್ದು, ಇದಕ್ಕೆ ಕಡಿವಾಣ ಹಾಕುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಧರಣಿನಿರತರು ದೂರಿದರು.

ನಿಯಮಬಾಹಿರವಾಗಿ ಶಿಕ್ಷಕರ ಹುದ್ದೆಗಳಿಗೆ ಆಯ್ಕೆಯಾಗಿರುವವರನ್ನು ಸೇವೆಯಿಂದ ವಜಾಗೊಳಿಸಬೇಕು. ಜತೆಗೆ ಅವರು ಈವರೆಗೆ ಪಡೆದಿರುವ ವೇತನವನ್ನು ವಾಪಸ್ ಪಡೆದು ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಈ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಅಮಾನತು ಮಾಡಿ ಇಲಾಖಾ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಸಂಸ್ಥೆಯ ಕಾರ್ಯದರ್ಶಿ ಬಿ.ಮುನಿಯಪ್ಪ, ಜಿಲ್ಲಾ ಅಲ್ಪಸಂಖ್ಯಾತರ ಮಹಿಳಾ ಘಟಕದ ಅಧ್ಯಕ್ಷೆ ಶಬಾನಾ, ನಗರ ಘಟಕದ ಕಾರ್ಯದರ್ಶಿ ಶಬ್ಬೀರ್, ಪದಾಧಿಕಾರಿಗಳಾದ ಅಹಮ್ಮದ್‌ ಗೌಸ್, ತನ್ವೀರ್‌ ಅಹಮ್ಮದ್‌ ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT