ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ವೈವಿಧ್ಯಗಳ ತಾಣ

Last Updated 26 ಮೇ 2017, 5:33 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ಅಗ್ರಹಾರ ಗ್ರಾಮದ ಸಮೀಪ ಕೆಲವು ಶತಮಾನಗಳಷ್ಟು ಹಳೆಯದಾದ ಬೃಹತ್ ಆಲದ ಮರ ಪ್ರಾಣಿ, ಪಕ್ಷಿಗಳಿಗೆ ಆಸರೆಯಾಗಿದೆ. ಮರದ ಕೊಂಬೆಗಳಲ್ಲಿನ ಕೆಂಬಣ್ಣದ ಹಣ್ಣುಗಳು ಹಲವು ಜಾತಿಯ ಪಕ್ಷಿಗಳ ಹಸಿವು ನೀಗಿಸುತ್ತಿವೆ. ಕೋತಿ, ಅಳಿಲು ಮುಂತಾದ ಪ್ರಾಣಿಗಳೂ ಸಹ ಹೊಟ್ಟೆ ತುಂಬಿಸಿಕೊಳ್ಳುತ್ತಿವೆ.

ಮುಖ್ಯವಾಗಿ ಹಗಲು ಹೊತ್ತಿನಲ್ಲಿ ಕೋಗಿಲೆ, ಗೊರವಂಕ ಅಲ್ಲದೆ ಹೆಸರು ಗೊತ್ತಿಲ್ಲದ ಅದೆಷ್ಟೋ ಜಾತಿಯ ಹಕ್ಕಿಗಳು ಹಣ್ಣಿನ ಆಕರ್ಷಣೆಯಿಂದ ಮರ ಸೇರುತ್ತಿವೆ. ರಾತ್ರಿ ಹೊತ್ತಿನಲ್ಲಿ ಬಾವಲಿಗಳು ಬಂದು ಹಣ್ಣನ್ನು ಸವಿಯುತ್ತವೆ.

ಗ್ರಾಮದ ಹಿರಿಯರು ನೆಟ್ಟ ಈ ಮರ ಹಲವು ಎಕರೆಗಳಷ್ಟು ವ್ಯವಸಾಯ ಭೂಮಿಯನ್ನು ಆಕ್ರಮಿಸಿಕೊಳ್ಳಲು ಆರಂಭಿಸಿದಾಗ ಕೆಲವು ಕೊಂಬೆಗಳನ್ನು ತೆಗೆಯಲಾಯಿತು. ಮರದ ಕೆಳಗೆ ರಸ್ತೆ ಇರುವುದರಿಂದ ಬಿಳಲು ಬೇರುಗಳು ರಸ್ತೆ ಮಧ್ಯ ಭಾಗಕ್ಕೆ ಬೆಳೆಯುವುದನ್ನು ತಪ್ಪಿಸಲು ಇನ್ನಷ್ಟು ಕೊಂಬೆಗಳನ್ನು ಕಡಿಯಲಾಯಿತು. ಇಷ್ಟಾದರೂ, ಮರದ ಗಾತ್ರ ಕಡಿಮೆಯಾಗಿಲ್ಲ.

ಹಚ್ಚ ಹಸಿರು ಎಲೆಗಳಿಂದ ಕಂಗೊಳಿಸುವ ಈ ಮರ ದೂರದಿಂದಲೇ ನೋಡುಗರ ಗಮನ ಸೆಳೆಯುತ್ತದೆ. ಹತ್ತಿರ ಹೋದಂತೆ ಹಕ್ಕಿಗಳ ಚಿಲಿಪಿಲಿ ಉಲಿ ಕಿವಿಗೆ ಬೀಳುತ್ತದೆ. ಅಳಿಲುಗಳು ಹಣ್ಣು ತಿನ್ನುತ್ತಾ ಮರದಲ್ಲಿ ಓಡಾಡುವ ದೃಶ್ಯ ಖುಷಿ ಕೊಡುತ್ತದೆ. ಮರಗಳನ್ನು ಕಡಿದು ಹಾಳು ಮಾಡುತ್ತಿರುವ ಈ ದಿನಗಳಲ್ಲಿ, ಇಷ್ಟು ದೊಡ್ಡ ಮರ ಇರುವುದೇ ಒಂದು ಆಶ್ಚರ್ಯ.

ವಿಶಾಲವಾಗಿ ಹಬ್ಬಿರುವ ಈ ಮರದ ನೆರಳಲ್ಲಿ ಜಾನುವಾರು ಕಟ್ಟುವುದು ರೂಢಿ. ನೆಲ ಮಟ್ಟದಲ್ಲಿ ನೇತಾಡುತ್ತಿರುವ ಬಿಳಲುಗಳನ್ನು ಹಿಡಿದು ಮಕ್ಕಳು ಆಟವಾಡುತ್ತಾರೆ. ಮರದ ತುಂಬಾ ದಟ್ಟವಾಗಿ ಬಿಳಲು ಬೇರು ಕಾಣಿಸಿಕೊಂಡು ನೆಲ ಮಟ್ಟದಲ್ಲಿ ನಿಂತಿದೆ. ಕೆಲವು ಕಡೆ ಬಿಳಲು ನೆಲಸೇರಿ ಮರಿ ಮರವಾಗಿ ಬೆಳೆದಿದೆ. ಈ ಆಲದ ಮರದ ಎಲೆಯನ್ನು ಬಿಡಿಸಿ ಊಟದ ಎಲೆ ಹೊಲೆದು ಮಾರುವ ಮಂದಿಯೂ ಇದ್ದಾರೆ. ಬರಗಾಲದಲ್ಲಿ ಜಾನುವಾರು ಮೇವಿಗೂ ಇದರ ಸೊಪ್ಪು ಉಪಯುಕ್ತ.

ಕಾಲ್ನಡಿಗೆಯಲ್ಲಿ ಸಾಗುವ ದಾರಿ ಹೋಕರು ಈ ಮರದ ನೆರಳಲ್ಲಿ ಸ್ವಲ್ಪಹೊತ್ತು ಕುಳಿತು ದಣಿವಾರಿಸಿಕೊಳ್ಳುತ್ತಾರೆ. ಬೇಸಿಗೆಯಲ್ಲಿ ಗ್ರಾಮದ ಹಿರಿಯ ವ್ಯಕ್ತಿಗಳು ಈ ಮರದ ಕೆಳಗೆ ಮಲಗಿ ಸುಖಾನುಭವ ಪಡೆಯುತ್ತಾರೆ. ಇಂಥ ಮರವೊಂದು ಇನ್ನೂ ಇದೆಯಲ್ಲ ಎಂಬುದು ನೆಮ್ಮದಿ ತರುವ ವಿಷಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT