ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ, ಪ್ರತಿಭಟನೆ

Last Updated 26 ಮೇ 2017, 5:36 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಅಕ್ಷರ ದಾಸೋಹ ನೌಕರರನ್ನು ‘ಡಿ’ ದರ್ಜೆ ನೌಕರರನ್ನಾಗಿ ಪರಿಗಣಿಸಿ ಕನಿಷ್ಟ ವೇತನ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾ ಗ್ರಂಥಾಲಯದಿಂದ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆಯಲ್ಲಿ ಸಾಗಿದ ನೂರಾರು ಅಕ್ಷರ ದಾಸೋಹ ನೌಕರರು ಭವನದ ಎದುರು ಪ್ರತಿಭಟನೆ ಕುಳಿತು ತಮ್ಮ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಿ.ಎನ್. ಮುನಿಕೃಷ್ಣಪ್ಪ ಮಾತನಾಡಿ, ‘ರಾಜ್ಯದಲ್ಲಿ ಸುಮಾರು 1.20 ಲಕ್ಷ ಮಹಿಳೆಯರು ಬಿಸಿಯೂಟ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಿತ್ಯ ಸುಮಾರು 63 ಲಕ್ಷ ಮಕ್ಕಳಿಗೆ ಅವರು ಅಡಿಗೆ ಸಿದ್ಧಪಡಿಸುತ್ತಿದ್ದಾರೆ. ಆದರೆ ಸರ್ಕಾರ ಇಸ್ಕಾನ್‌ನಂತಹ ಧಾರ್ಮಿಕ ಸಂಸ್ಥೆಗಳಿಗೆ ಕೆಲ ಜಿಲ್ಲೆಗಳಲ್ಲಿ ಊಟ ಪೂರೈಸಲು ಒಪ್ಪಂದ ಮಾಡಿಕೊಂಡಿರುವ ಕಾರಣ ಸುಮಾರು 15 ಸಾವಿರಕ್ಕೂ ಹೆಚ್ಚು ಮಹಿಳೆಯರು ಕೆಲಸ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ’ ಎಂದು ಆರೋಪಿಸಿದರು.

‘ಸರ್ಕಾರದ ಅನುದಾನ ಬಳಸಿಕೊಂಡು ಇಸ್ಕಾನ್ ಊಟ ನೀಡುವ ನೆಪದಲ್ಲಿ ಬೆಳ್ಳುಳ್ಳಿ, ಈರುಳ್ಳಿ ರಹಿತ ಆರೋಗ್ಯಯುತವಲ್ಲದ ಆಹಾರ ನೀಡುವ ಜತೆಗೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಧರ್ಮ, ಜಾತಿಯ ವಿಷ ಬೀಜ ಬಿತ್ತುತ್ತಿದೆ. ಇದೆಲ್ಲ ತಿಳಿದರೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್‌ಆರ್‌ಡಿ) ಈ ವರ್ಷವೂ ಕೇಂದ್ರೀಕೃತ ಅಡುಗೆ ಕೇಂದ್ರಗಳನ್ನು ತೆರೆಯಲು ಪ್ರಯತ್ನ ನಡೆಸಿದೆ’ ಎಂದು ಹೇಳಿದರು.

‘ಕೇಂದ್ರೀಕೃತ ಅಡುಗೆ ಕೇಂದ್ರಗಳನ್ನು ಸ್ಥಾಪಿಸಿದರೆ ಸಾವಿರಾರು ಮಹಿಳೆಯರು ಕೆಲಸ ಕಳೆದುಕೊಳ್ಳುವ ಅಪಾಯವಿದೆ. ಆದ್ದರಿಂದ ಆ ನಿರ್ಧಾರ ಕೈಬಿಡಬೇಕು. ಸದ್ಯ ಇರುವ ವ್ಯವಸ್ಥೆಯನ್ನೇ ಮುಂದುವರಿಸಬೇಕು. ಕೇಂದ್ರ ಸರ್ಕಾರ ಕಳೆದ ಸಾಲಿನ ಬಜೆಟ್‌ನಲ್ಲಿ ಅಕ್ಷರ ದಾಸೋಹ ಯೋಜನೆಯ ಅನುದಾನ ಕಡಿತಗೊಳಿಸಿದೆ. ಕೂಡಲೇ ಅನುದಾನ ಹೆಚ್ಚಿಸಬೇಕು. ನಿವೃತ್ತಿ ಹೊಂದುವ ನೌಕರರಿಗೆ ಪಿಂಚಣಿ ನೀಡಲು ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಸಿಐಟಿಯು ಮುಖಂಡ ಸಿದ್ಧಗಂಗಪ್ಪ ಮಾತನಾಡಿ, ‘ಕಡಿತ ಮಾಡಿರುವ ಅನುದಾನವನ್ನು ಕೇಂದ್ರ ಸರ್ಕಾರ ಪುನಃ ನೀಡಬೇಕು. ಬಿಸಿಯೂಟ ಯೋಜನೆಯ ಜವಾಬ್ದಾರಿಯನ್ನು ಯಾವುದೇ ಸಂಘ ಸಂಸ್ಥೆಗಳಿಗೆ ನೀಡಬಾರದು. ಬಿಸಿಯೂಟ ಯೋಜನೆಯಲ್ಲಿ ಉಳಿತಾಯವಾಗುವ ಅನುದಾನದಲ್ಲಿ ನಿವೃತ್ತ ನೌಕರರಿಗೆ ಪಿಂಚಣಿ ನೀಡಬೇಕು’ ಎಂದರು.

‘ಅಕ್ಷರ ದಾಸೋಹ ನೌಕರರನ್ನು ಹಾಜರಾತಿ ನೆಪವೊಡ್ಡಿ ಕೆಲಸದಿಂದ ತೆಗೆಯುವುದು ಕೈಬಿಡಬೇಕು. ಈ ನೌಕರರನ್ನು ಕೂಡ ಶಾಲೆ ಸಿಬ್ಬಂದಿ ಎಂದು ಪರಿಗಣಿಸಬೇಕು. ಬೇಸಿಗೆ ರಜಾ ವೇತನ ನೀಡಬೇಕು. ನಿಗದಿತ ದಿನ ವೇತನ ಪಾವತಿ ಮಾಡಬೇಕು. ಅಪಘಾತ ಪರಿಹಾರ ಮೊತ್ತವನ್ನು ಸಕಾಲಕ್ಕೆ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಸಿಐಟಿಯು ಮುಖಂಡ ಮುಸ್ತಾಫ್, ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಂ.ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಮುನಿಲಕ್ಷ್ಮಮ್ಮ, ಕಾರ್ಯದರ್ಶಿ ಕೆ.ಆರ್. ಮಂಜುಳಾ,  ರಾಜಮ್ಮ, ಪದಾಧಿಕಾರಿಗಳಾದ ನರಸಮ್ಮ, ಭಾಗ್ಯಮ್ಮ, ನಾರಾಯಣಮ್ಮ, ಗೀತಾ, ಭಾರತಿ, ಅಮರಾವತಿ, ರತ್ನಮ್ಮ, ವೆಂಕಟಲಕ್ಷ್ಮಮ್ಮ, ನೀಲಯ್ಯ, ನಾಗಮಣಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

* * 

ಬಿಸಿಯೂಟ ಯೋಜನೆ ಖಾಸಗೀಕರಣ ಮಾಡಿದರೆ ಲಕ್ಷಾಂತರ ಮಹಿಳೆಯರು ಬೀದಿಪಾಲಾಗುತ್ತಾರೆ. ಅಂತಹ ಕರಾಳ ನಿರ್ಣಯವನ್ನು ಸರ್ಕಾರಗಳು ಕೈಬಿಡಬೇಕು.
ಬಿ.ಎನ್. ಮುನಿಕೃಷ್ಣಪ್ಪ,
ಜಿಲ್ಲಾ ಘಟಕದ ಗೌರವಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT