ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬೇಡಿಕೆ: ಸಂಘಟನೆಗಳ ಧರಣಿ

Last Updated 26 ಮೇ 2017, 7:34 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದಲ್ಲಿ ಗುರುವಾರ ವಿವಿಧ ಸಂಘಟನೆಗಳು ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದವು. ಸಿಪಿಎಂ: ಉದ್ಯೋಗ ಖಾತರಿ ಯೋಜನೆಯ ಕನಿಷ್ಠ ಕೂಲಿಯನ್ನು ₹ 350ಕ್ಕೆ ಏರಿಕೆ ಮಾಡುವಂತೆ ಒತ್ತಾಯಿಸಿ ಸಿಪಿಎಂ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ‘ಗ್ರಾಮಸ್ಥರು ಕೆಲಸ ಮಾಡಲು ಸಿದ್ಧರಿದ್ದು ಅವರಿಗೆ ಉದ್ಯೋಗ ನೀಡಲು ಜಿಲ್ಲಾಡಳಿತ ಮುಂದಾಗಬೇಕು. ಅವರಿಗೆ ನ್ಯಾಯಯುತ ಕೂಲಿ ನೀಡಬೇಕು’ ಎಂದರು.

‘ಸಾರ್ವಜನಿಕ ಕ್ಷೇತ್ರದ ಕೈಗಾರಿಕೆ ಮತ್ತು ಉದ್ದಿಮೆಗಳನ್ನು ಖಾಸಗೀಕರಣಗೊಳಿಸಬಾರದು. ರೈತರ ಸಾಲ ಮನ್ನಾಗೆ ಕ್ರಮ ಕೈಗೊಳ್ಳಬೇಕು, ರೈತರಿಂದ ತೊಗರಿ ಖರೀದಿ ಮುಂದುವರೆಸಬೇಕು. ₹ 7500 ಬೆಂಬಲ ಬೆಲೆ ನಿಗದಿಪಡಿಸಬೇಕು’ ಎಂದರು.

ಪಕ್ಷದ ಮುಖಂಡರಾದ ಸುಭಾಷ ಹೊಸಮನಿ, ವಿಂಡುರಂಗ ಮಾವಿನಕೆರೆ, ಸಿದ್ದರಾಮ,  ಪ್ರಕಾಶ, ನಾಗಯ್ಯಸ್ವಾಮಿ, ಕಲ್ಯಾಣಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪೌರಕಾರ್ಮಿಕರ ಮಹಾಸಂಘ: ಸ್ಥಳೀಯ ಸಂಘಸಂಸ್ಥೆಗಳಲ್ಲಿ ಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಮಾತನಾಡಿ, ‘ಗುತ್ತಿಗೆ ಪದ್ಧತಿಯಿಂದ ಕಾರ್ಮಿಕರು ನಿತ್ಯವೂ ಶೋಷಣೆ, ದೌರ್ಜನ್ಯಕ್ಕೆ ತುತ್ತಾಗುತ್ತಿರುವುದು ಬೇಸರದ ಸಂಗತಿ. ಗುತ್ತಿಗೆ ಪದ್ಧತಿ ರದ್ದುಗೊಳಿಸಿ, ಕಾರ್ಮಿ ಕರನ್ನು ಕಾಯಂಗೊಳಿಸಿ’ ಎಂದರು.

‘ಗುತ್ತಿಗೆ ಕಾರ್ಮಿಕರಿಗೆ ನೀಡಲಾದ ಭರವಸೆಗಳನ್ನು ಈಡೇರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು,  ನೀರು ಸರಬರಾಜುದಾರರು, ಚಾಲಕರು, ಚರಂಡಿ ಕಾರ್ಮಿಕರನ್ನು ಸಹ ಕಾಯಂಗೊಳಿಸಬೇಕು’ ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಆತನೂರ, ಉಪಾಧ್ಯಕ್ಷ ಶಿವಕುಮಾರ ಎಂ.ಮುಡ್ಡಿ, ಮುಖಂಡರಾದ ಆನಂದ, ಯಶ್ವಂತರೆಡ್ಡಿ, ವಿಜಯಕುಮಾರ, ಜೀವರಾಜ ದೇವನೂರ, ಜಿತೇಂದ್ರ ಇದ್ದರು.

ಅಂಗವಿಕಲರ ಧರಣಿ: ಅಂಗವಿಕಲರು ತಮ್ಮ ಬದುಕು ರೂಪಿಸಿಕೊಳ್ಳಲು ಸರ್ಕಾರವು ಉಚಿತವಾಗಿ 2 ಎಕರೆ ಕೃಷಿ ಭೂಮಿ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ನಿರುದ್ಯೋಗಿ ವಿಕಲಚೇತನರ ಸಂಘರ್ಷ ಸಮಿತಿ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ನಿವಾಸದ ಎದುರು ಪ್ರತಿಭಟನೆ ನಡೆಸಿದರು.

ಸಂಘದ ಸಂಸ್ಥಾಪಕ ಅಧ್ಯಕ್ಷ ಅಂಬಾಜಿ ಪಿ.ಮೇಟಿ ಮಾತನಾಡಿ, ‘ಬಾಕಿಯುಳಿದಿರುವ ಅಂಗವಿಕಲರ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀನದಲ್ಲಿರುವ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಪ್ರತ್ಯೇಕಗೊಳಿಸಬೇಕು.

ಸ್ವತಂತ್ರ ಸಚಿವಾಲಯ ಘೋಷಿಸಬೇಕು’ ಎಂದರು.\ಸಂಘದ ಮುಖಂಡರಾದ ವೈಜನಾಥ ಬಿರಾದಾರ, ಖಾಸಿಂಸಾಬ, ದತ್ತಾತ್ರೇಯ ಕುಡಕಿ,  ನಾಗರಾಜ ನಂದೂರ, ಅಬ್ದುಲ್ ಸಲಾಂ, ಮೌನೇಶ ಬಡಿಗೇರ, ಸಂಜೀವಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT