ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗೆ ನೀರು, ರಸ್ತೆಗಳ ಅಭಿವೃದ್ಧಿ

Last Updated 26 ಮೇ 2017, 7:38 IST
ಅಕ್ಷರ ಗಾತ್ರ

ಕಲಬುರ್ಗಿ:‘ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಕೆರೆಗಳನ್ನು ಅಭಿವೃದ್ಧಿ ಪಡಿಸಿ, ಅವುಗಳಿಗೆ ನೀರು ತುಂಬಿಸಲು ಹಾಗೂ ನಾಲೆಗಳ ನಿರ್ವಹಣೆಗೆ ನಿರ್ಧರಿಸಲಾಗಿದೆ’ ಎಂದು ಮಂಡಳಿಯ ಅಧ್ಯಕ್ಷ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.

ಗುರುವಾರ ಇಲ್ಲಿ ನಡೆದ ಪ್ರಸಕ್ತ ಆರ್ಥಿಕ ವರ್ಷದ ಮಂಡಳಿಯ ಪ್ರಥಮ ಸಭೆಯ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ‘ಸ್ಥಳೀಯ ನಿವಾಸಿಗಳು ಬಯಸಿದರೆ ನಗರ ಮತ್ತು ಪಟ್ಟಣಗಳಲ್ಲಿಯ ಇಕ್ಕಟ್ಟಾದ ರಸ್ತೆಗಳನ್ನು ಅಗಲೀಕರಣಗೊಳಿಸಲಾಗುವುದು. ತಾಲ್ಲೂಕು, ಜಿಲ್ಲಾ ಕೇಂದ್ರಗಳಿಗೆ ರಿಂಗ್‌ ರಸ್ತೆ ನಿರ್ಮಿಸಲಾಗುವುದು.

ಪ್ರತಿ ಗ್ರಾಮ, ತಾಂಡಾ ಮತ್ತು ಹಟ್ಟಿಗಳಿಗೆ ಪಕ್ಕಾ ರಸ್ತೆ ನಿರ್ಮಿಸಲಾಗುವುದು. ನಮ್ಮ ಹೊಲ– ನಮ್ಮ ರಸ್ತೆ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗುವುದು’ ಎಂದರು.

‘ನಗರ–ಪಟ್ಟಣಗಳಲ್ಲಿ ಕೆಲ ರಸ್ತೆಗಳು ಬಹಳ ಇಕ್ಕಟ್ಟಾಗಿವೆ. ಅವುಗಳ ಅಗಲೀಕರಣ ಮಾಡಬೇಕು ಎಂಬ ಬೇಡಿಕೆಯೂ ಇದೆ. ರಿಂಗ್ ರಸ್ತೆಗಳ ನಿರ್ಮಾಣಕ್ಕೆ ರೈತರು ಜಮೀನು ನೀಡುವುದು ಅಗತ್ಯವಿದೆ. ರಸ್ತೆ ಅಗಲೀಕರಣಕ್ಕೆ ಸ್ಥಳ ಹಾಗೂ ರಿಂಗ್ ರಸ್ತೆ ನಿರ್ಮಾಣಕ್ಕೆ ಜಮೀನು ನೀಡುವವರಿಗೆ ಕೆಲ ಸೌಲಭ್ಯ ಕಲ್ಪಿಸಿಕೊಡುವ ಚಿಂತನೆಯೂ ಇದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಪೌರಾಡಳಿತ ಖಾತೆ ರಾಜ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

‘ಅಭಿವೃದ್ಧಿ ಸೂಚ್ಯಂಕ ಆಧರಿಸಿ ಈ ವರ್ಷದ ಅನುದಾನವನ್ನು ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗುವುದು. ಈ ವರ್ಷದ ಕ್ರಿಯಾ ಯೋಜನೆಯಲ್ಲಿ ಈ ಎಲ್ಲ ಅಂಶಗಳನ್ನು ಅಳವಡಿಸಿಕೊಳ್ಳಲಾಗುವುದು. ಈಗಾಗಲೇ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು’ ಎಂದು ಡಾ.ಶರಣಪ್ರಕಾಶ ತಿಳಿಸಿದರು.

‘ಉದ್ಯೋಗ ಮೇಳ, ಕೈಗಾರಿಕಾ ಮೇಳ ಹಾಗೂ ರಾಷ್ಟ್ರಕೂಟ ಅಥವಾ ಬಹಮನಿ ಉತ್ಸವಗಳಂತಹ ಸಾಂಸ್ಕೃತಿಕ ಉತ್ಸವ ಆಯೋಜಿಸುವ ಉದ್ದೇಶವೂ ಇದೆ’ ಎಂದು ಅವರು ಹೇಳಿದರು.

ಸಚಿವರಾದ ಬಸವರಾಜ ರಾಯರಡ್ಡಿ, ಸಂಸದ ಬಿ.ವಿ. ನಾಯಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಶಾಸಕ ರಾದ ರಹೀಂ ಖಾನ, ಅಶೋಕ ಖೇಣಿ, ಮಂಡಳಿಯ ಕಾರ್ಯದರ್ಶಿ ಹರ್ಷ ಗುಪ್ತ, ಜಂಟಿ ನಿರ್ದೇಶಕ ಎಸ್‌. ಬಸವ ರಾಜ, ಉಪ ಕಾರ್ಯದರ್ಶಿ ಗಂಗೂ ಬಾಯಿ ಮಾನಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT