ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ, ಚರಂಡಿ ನಿರ್ಮಾಣಕ್ಕೆ ₹86 ಕೋಟಿ

Last Updated 26 ಮೇ 2017, 7:46 IST
ಅಕ್ಷರ ಗಾತ್ರ

ಕಲಬುರ್ಗಿ: ಮಹಾನಗರ ಪಾಲಿಕೆಯ 2017–18ನೇ ಸಾಲಿನ ಬಜೆಟ್‌ನಲ್ಲಿ ರಸ್ತೆಗಳ ಅಭಿವೃದ್ಧಿ, ಚರಂಡಿ ನಿರ್ಮಾಣ ಹಾಗೂ ಇತರೆ ಮೂಲಸೌಲಭ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಇದಕ್ಕೆ ಒಟ್ಟಾರೆ ₹86 ಕೋಟಿ ಅನುದಾನ ಮೀಸಲಿಡಲಾಗಿದೆ. ಆದರೆ, ನಗರ ಸೌಂದರ್ಯೀಕರಣ ಮತ್ತು ರಸ್ತೆಗಳ ವಿಸ್ತರಣೆಗೆ ಕೇವಲ ತಲಾ ₹1 ಕೋಟಿ ಒದಗಿಸಲಾಗಿದೆ.

ಗುರುವಾರ ಇಲ್ಲಿ ನಡೆದ ಮಹಾ­ನಗರ ಪಾಲಿಕೆಯ ವಿಶೇಷ ಸಭೆಯಲ್ಲಿ ಮೇಯರ್‌ ಶರಣಕುಮಾರ ಮೋದಿ ಅವರು ಬಜೆಟ್‌ ಮಂಡಿಸಿದರು. ₹110 ಕೋಟಿ ಉಳಿತಾಯ ಬಜೆಟ್‌ಗೆ ಸಭೆ ಅನುಮೋದನೆ ನೀಡಿತು. ಬೀದಿದೀಪಗಳ ವ್ಯವಸ್ಥೆ ಹಾಗೂ ಹೊಸದಾಗಿ ಬೀದಿದೀಪಗಳ ಅಳವಡಿ­ಕೆಗೆ ₹8.21 ಕೋಟಿ ಮೀಸಲಿಡಲಾಗಿದೆ.

ಸಂಚಾರ ವ್ಯವಸ್ಥೆ  ನಿರ್ವಹಣೆಗೆ ₹5 ಕೋಟಿ ಮೀಸಲಿಟ್ಟಿರುವ ಪಾಲಿಕೆ, ಶೌಚಾಲಯ ಮತ್ತು ಮೂತ್ರಾಲಯ ನಿರ್ಮಾಣ ಮತ್ತು ನಿರ್ವಹಣೆಗೆ ಕೇವಲ ₹85 ಲಕ್ಷ ಅನುದಾನ ಕಾಯ್ದಿರಿಸಿದೆ.

ಜಟಾಪಟಿ: ಸಭೆಯ ಆರಂಭದಲ್ಲಿ ಬಿಜೆಪಿ–ಕಾಂಗ್ರೆಸ್‌ ಸದಸ್ಯರ ಮಧ್ಯೆ ಜಟಾಪಟಿ ನಡೆಯಿತು. ‘ಅವೈಜ್ಞಾನಿಕ­ವಾಗಿ ಬಜೆಟ್‌ ಸಿದ್ಧಪಡಿಸಲಾಗಿದೆ’ ಎಂದು ಬಿಜೆಪಿಯ ಪರಶುರಾಮ ನಸಲವಾಯಿ ದೂರಿದರೆ, ‘ಪ್ರಚಾರಕ್ಕೆ ಹೀಗೆ ಆರೋಪಿಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಸದಸ್ಯರು ಟೀಕಿಸಿದರು. ‘ಜನ ರಿಗೆ ಒಳ್ಳೆಯದನ್ನು ಮಾಡಲು ಈ ಬಜೆಟ್‌ ಮಾಡಿದ್ದೇವೆ. ನೀವು ಬರೀ ಆರೋಪ ಮಾಡುತ್ತಿದ್ದೀರಿ’ ಎಂದು ಆಯುಕ್ತ ಪಿ.ಸುನೀಲ್‌ಕುಮಾರ ಹರಿಹಾಯ್ದರು.

ಸದಸ್ಯರ ಕೋರಿಕೆ: ‘ವಿದ್ಯುತ್‌ ಚಿತಾಗಾರ ಗಳ ನಿರ್ಮಾಣಕ್ಕೆ ಹಣ ಮೀಸಲಿ ಡಬೇಕು. ಹಸರೀಕರಣಕ್ಕೆ ಆದ್ಯತೆ ನೀಡಬೇಕು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ನೀರು ಪೂರೈಸಲು ಬೇಕಿರುವ ಕಾಮಗಾರಿಗೆ ಪಾಲಿಕೆಯಿಂದ ಅನುದಾನ ನೀಡಬೇಕು. ಹಂದಿ–ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ರಮೇಶ ಕಮಕನೂರ ಹೇಳಿದರು.

‘ಎಚ್‌ಕೆಆರ್‌ಡಿಬಿಯ ₹15 ಲಕ್ಷ ಅನುದಾನದಲ್ಲಿ 50 ಸಾವಿರ ಸಸಿಗಳನ್ನು ನಗರದಲ್ಲಿ ನೆಡಲಾಗುವುದು’ ಎಂದು ಆಯುಕ್ತರು ಉತ್ತರಿಸಿದರು. ‘ತೆರಿಗೆ ಸಂಗ್ರಹ ಹೆಚ್ಚಾಗಿದ್ದರೂ ಸದಸ್ಯರು ತಮ್ಮ ಕ್ಷೇತ್ರಗಳಲ್ಲಿ ₹5 ಲಕ್ಷ ಮೊತ್ತದ ಕೆಲಸವನ್ನೂ ಮಾಡಿಸಲು ಸಾಧ್ಯವಾಗುತ್ತಿಲ್ಲ. ಸದಸ್ಯರು ತಲಾ ₹10 ಲಕ್ಷ ಮೊತ್ತದ ತುರ್ತು ಕಾಮಗಾರಿ ಕೈಗೊಳ್ಳಲು ಅವಕಾಶ ನೀಡಿ’ ಎಂದು ಭೀಮರೆಡ್ಡಿ ಪಾಟೀಲ ಸಲಹೆ ನೀಡಿದರು.

‘ಆದಾಯದ ಜೊತೆಗೆ ಖರ್ಚೂ ಹೆಚ್ಚಿದೆ. ಪೌರಕಾರ್ಮಿಕರು ಮತ್ತು ಸ್ವಚ್ಛತೆಗೆ ಹೆಚ್ಚಿನ ಹಣ ವೆಚ್ಚವಾಗು ತ್ತಿರುವುದರಿಂದ ಸದಸ್ಯರಿಗೆ ತಲಾವಾರು ಅನುದಾನ ಹಂಚಿಕೆ ಅಸಾಧ್ಯ’ ಎಂದು ಆಯುಕ್ತರು ಹೇಳಿದರು. ‘ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುದಾನ ಮೀಸಲಿಡಬೇಕು’ ಎಂದು ಹುಲಿಗೆಪ್ಪ ಕನಕಗಿರಿ ಮನವಿ  ಮಾಡಿದರು.

‘ಮಳೆನೀರು ಸಂಗ್ರಹಕ್ಕೆ ಆದ್ಯತೆ ನೀಡಿ. ಕಟ್ಟಡಗಳ ಅತಿಕ್ರಮಣ ತೆರವು ಗಳಿಸಲಾಗುತ್ತಿದೆ. ಆದರೆ, 108 ಕಟ್ಟಡ ಗಳ ದಾಖಲೆಗಳೇ ಪಾಲಿಕೆಯಿಂದ ನಾಪತ್ತೆ ಆಗಿವೆ. ಆ ಬಗ್ಗೆ ತನಿಖೆ ನಡೆಸಿ’ ಎಂದು ಸೈಯದ್‌ ಅಹ್ಮದ್‌ ಆಗ್ರಹಿಸಿದರು.

ಬಿ ಖಾತಾ: ಈ ಹಿಂದೆಯೇ ಅಭಿವೃದ್ಧಿ ಯಾಗಿರುವ ಬಡಾವಣೆಗಳಲ್ಲಿ ನಿವೇಶನ ಖರೀದಿಸಿರುವವರಿಗೆ ಬಿ ಖಾತಾ ನೀಡಲು ಅವಕಾಶ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಸಭೆ ನಿರ್ಧರಿಸಿತು.ಉಪ ಮೇಯರ್‌ ಪುತಲಿ ಬೇಗಂ ಇದ್ದರು.

ಪ್ರಮುಖ ಆದಾಯ ನಿರೀಕ್ಷೆ
l ₹19.00 ಕೋಟಿ ಆಸ್ತಿ ತೆರಿಗೆ
l ₹6.50 ಕೋಟಿ ಕಟ್ಟಡ ನಿರ್ಮಾಣ ಶುಲ್ಕ
l ₹7 ಕೋಟಿ ಅಭಿವೃದ್ಧಿ ಕರ
l ₹57 ಲಕ್ಷ ಜಾಹೀರಾತು ತೆರಿಗೆ
l ₹3.05 ಕೋಟಿ ರಸ್ತೆ ಅಗೆತ ವೆಚ್ಚ
l ₹2.50 ಕೋಟಿ ಉದ್ದಿಮೆ ಪರವಾನಗಿ ಶುಲ್ಕ
l ₹8 ಕೋಟಿ ಖಾಲಿ ನಿವೇಶನಗಳ ಮಾರಾಟ
l ₹14.80 ಕೋಟಿ ಎಸ್‌ಎಫ್‌ಸಿ ವೇತನಾನುದಾನ
l ₹25 ಕೋಟಿ ಎಸ್‌ಎಫ್‌ಸಿ ಅನುದಾನ
l ₹19.20 ಹಣಕಾಸು ಯೋಜನೆ ಅನುದಾನ
l ₹70.50 ಕೋಟಿ ಎಚ್‌ಕೆಆರ್‌ಡಿಬಿ ಅನುದಾನ

ಪ್ರಮುಖ ವೆಚ್ಚದ ಅಂದಾಜು
l ₹50 ಕೋಟಿ ರಸ್ತೆಗಳ ನಿರ್ಮಾಣ
l ₹20 ಕೋಟಿ ರಸ್ತೆ, ವರ್ತುಲ ರಸ್ತೆ ಅಭಿವೃದ್ಧಿ,
l ₹25.50 ಕೋಟಿ ಘನತ್ಯಾಜ್ಯ ವಿಲೇವಾರಿ, ನೈರ್ಮಲ್ಯ
l ₹5.21 ಕೋಟಿ ಬೀದಿ ದೀಪಗಳ ನಿರ್ವಹಣೆ
l ₹3 ಕೋಟಿ ಬೀದಿದೀಪಗಳ ವಿಸ್ತರಣೆ
l ₹5 ಕೋಟಿ ದೊಡ್ಡ ಚರಂಡಿ ನಿರ್ಮಾಣ
l ₹10 ಕೋಟಿ ರಸ್ತೆಗಳ ಪಕ್ಕ ಚರಂಡಿ ನಿರ್ಮಾಣ
l ₹12 ಕೋಟಿ ವಾಣಿಜ್ಯ ಸಂಕೀರ್ಣಗಳ ನಿರ್ಮಾಣ
l ₹5 ಕೋಟಿ ಸಂಚಾರ ನಿರ್ವಹಣೆ
l ₹50 ಲಕ್ಷ ಸಂಚಾರಿ ಶೌಚಾಲಯ ಖರೀದಿ
l ₹50 ಲಕ್ಷ, ಪ್ರಾಣಿಗಳ ಜನನ ನಿಯಂತ್ರಣ

ಬಜೆಟ್ ಮುಖ್ಯಾಂಶ

₹113 ಆರಂಭಿಕ ಶುಲ್ಕ

₹320 ಆದಾಯ ನಿರೀಕ್ಷೆ

₹319 ವೆಚ್ಚದ ಅಂದಾಜು

* * 

ಪ್ರಸಕ್ತ ಸಾಲಿಗೆ ತೆರಿಗೆ ಪರಿಷ್ಕರಿಸಿದ್ದೇವೆ. ಒಂದೇ ತಿಂಗಳಲ್ಲಿ ₹9.21 ಕೋಟಿ ತೆರಿಗೆ ಸಂಗ್ರಹಿಸಿದ್ದು, ಇದು ಪಾಲಿಕೆಯ ಇತಿಹಾಸದಲ್ಲೇ ದಾಖಲೆ. ಜನರಿಗೆ ಸೌಲಭ್ಯ ಕಲ್ಪಿಸಲು ಒತ್ತು ನೀಡುತ್ತಿದ್ದೇವೆ.
ಪಿ.ಸುನೀಲ್‌ಕುಮಾರ್, ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT