ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಶಾಲೆ ಶುರು ಮನೆಮನೆಗಳಲ್ಲಿ ಉದಯರಾಗ

ಅಕ್ಷರ ಗಾತ್ರ

ಶಾಲೆ ಆರಂಭವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ.  ಶಾಲೆ ಆರಂಭವಾಗುತ್ತಿದ್ದಂತೆಯೇ ಅಮ್ಮಂದಿರ ದಿನಚರಿ ಮತ್ತೆ ಹಳೆಯ ಹಳಿಮೇಲೆ ಬಂದು ನಿಲ್ಲುತ್ತದೆ. ಸುಮಾರು ಎರಡು ತಿಂಗಳ ಬೇಸಿಗೆ ರಜೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಕೌಟುಂಬಿಕ ವೇಳಾಪಟ್ಟಿ, ಜೂನ್‌ ಬಂತೆಂದರೆ ಮಿಲಿಟರಿ ಪಥಸಂಚಲನದ ರೀತಿ ಕಡಕ್ಕಾಗಿ ಬಿಡುತ್ತದೆ. ಅಪ್ಪ–ಅಮ್ಮಂದಿರ ಯಾವುದೇ ಕೆಲಸ ಕಾರ್ಯಗಳು ಮಗುವಿನ ದಿನಚರಿಯನ್ನು ಆಧರಿಸಿಯೇ ನಿಗದಿಯಾಗುತ್ತದೆ.

ಅವಿಭಕ್ತ ಕುಟುಂಬ ಇದ್ದಾಗ ಮನೆಯಲ್ಲಿ ಮಕ್ಕಳು ಶಾಲೆಗೆ ಹೊರಡುವುದು ಹೆಚ್ಚೇನೂ ಕಷ್ಟವಾಗುವುದಿಲ್ಲ. ಮಕ್ಕಳ ಮೇಲೆ ನಿಗಾ ಇಡಬಲ್ಲ ಅಜ್ಜ ಅಜ್ಜಿ ಇದ್ದರೂ ಮಕ್ಕಳ ಓಡಾಟ, ಶಾಲೆ, ತಂಟೆ ತಕರಾರುಗಳನ್ನು ಒಂದು ಸೂತ್ರದಲ್ಲಿ ಬಂಧಿಸುವುದು ಸಾಧ್ಯವೇನೋ. ಆದರೆ  ಒಂದೇ ಮಗುವಿರುವ, ಎರಡು ಮಕ್ಕಳಿರುವ ಚಿಕ್ಕ ಕುಟುಂಬಗಳಲ್ಲಂತೂ ಮಕ್ಕಳ ತಂಟೆ ತಕರಾರು ಸುಧಾರಿಸುವದು ಕಷ್ಟ. ಅವರಿಗೆ ತಂಟೆ ಮಾಡಲು ಹೆಚ್ಚು ಅವಕಾಶವೂ ಇರುವುದಿಲ್ಲ.  ಅಪ್ಪ ಅಮ್ಮ ಇಬ್ಬರೂ ದುಡಿಯುವವರಾಗಿದ್ದರೆ, ಮಗು ಜವಾಬ್ದಾರಿಯುತವಾಗಿ ವರ್ತಿಸಲಿ ಎಂದೇ  ಇಬ್ಬರೂ ಭಾರೀ ನಿರೀಕ್ಷೆಯಲ್ಲಿರುತ್ತಾರೆ.

ಬೆಳ್ಳಂಬೆಳಗ್ಗೆ ಆರಂಭವಾಗುವ ಶಾಲೆಗೆ ಮಕ್ಕಳನ್ನು ಸಿದ್ಧಪಡಿಸುವುದು ದುಡಿಯುವ ಮಹಿಳೆಗಂತೂ ಸವಾಲೇ ಸರಿ. ಕೆಲಸ ಕಾರ್ಯಗಳನ್ನು ಆದಷ್ಟು ಚುರುಕಾಗಿ ಮಾಡುತ್ತಿದ್ದರೂ, ಯಾಕೋ ಏನೋ ಸರಿಯಾದ ಸಮಯಕ್ಕೇ ಪುಟಾಣಿ ಮಗು ಸಿದ್ಧವಾಗದೇ, ಕೊನೆ ಘಳಿಗೆಯಲ್ಲಿ ಮನಸ್ಸೆಲ್ಲ ಅಸ್ತವ್ಯಸ್ತ ಆಗುವುದುಂಟು. ಕೈಗೇ ಸಿಕ್ಕದ ಸಾಕ್ಸ್‌, ಏನನ್ನೂ ತಿನ್ನಲು ಒಲ್ಲದ ಮಗು, ಅಕ್ಕರೆ ಸಕ್ಕರೆ ಮಾತುಗಳಿಗೆ ಬಗ್ಗದ ಮಗು ಮನಸ್ಸು, ಕ್ಷಣಗಳು ಉರುಳಿದಂತೆ ತಾಳ್ಮೆಯ ಬೇಲಿಯನ್ನು ದಾಟಿ ಬಿಡುವ ಅಮ್ಮ... ಕೊನೆಗೆ ಮಗು ವಾಹನ ಹತ್ತಿ ಟಾಟಾ ಮಾಡುವಾಗ ಅಮ್ಮನ ಕಣ್ಣಲ್ಲಿ ಎರಡು ಹನಿ ನೀರು. ತಾನು ಎಲ್ಲವನ್ನೂ ಸರಿಯಾಗಿ ನಿಭಾಯಿಸಲಿಲ್ಲ ಎಂಬ ಸ್ವಯಂ ಸಹಾನುಭೂತಿಯಲ್ಲಿ ದಿನವಿಡೀ ಎದೆ ಭಾರ.

ದುಡಿಯುವ ಅಮ್ಮಂದಿರ ಈ ಗೋಳು ನೋಡಿಯೇ ಮಾರುಕಟ್ಟೆಯಲ್ಲಿ ಅಮ್ಮಂದಿರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಹಲವು ಸಿದ್ಧ ಆಹಾರಗಳು ಬಂದಿವೆ. ಮಗುವನ್ನು ರಮಿಸುವುದಕ್ಕೆ ಬೇಕಾದ ಹಲವು ಸಲಕರಣೆಗಳೂ ಇವೆ. ಆದರೆ ಹೆಚ್ಚಿನ ಸಂದರ್ಭದಲ್ಲಿ ಅಂಗಡಿಯ ಸಿದ್ಧ ಆಹಾರವನ್ನು ಕೊಡುವಾಗಲೂ ಮನಸ್ಸು ನೋಯುತ್ತದೆ. ಉತ್ತಮ ಆಹಾರ ಕೊಡುವುದು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಕಾಡುತ್ತದೆ. ಹಾಗಾಗಿ ಮಕ್ಕಳನ್ನು ಶಾಲೆಗೆ ಬೇಗ ಸಿದ್ಧಪಡಿಸುವುದಕ್ಕೆ ಇರುವ ಏಕೈಕ ದಾರಿಯೆಂದರೆ ಉತ್ತಮವಾದ ಪ್ಲಾನ್‌, ಸರಳವಾದ ಅಡುಗೆ ಮತ್ತು ಬೆಳಿಗ್ಗೆ ಆದಷ್ಟು ಬೇಗನೇ ಏಳುವುದು.

ಬೆಳಗ್ಗಿನ ತಿಂಡಿ
ಎಲ್ಲ ಮನೆಗಳಲ್ಲಿಯೂ ಬೆಳಗ್ಗಿನ ತಿಂಡಿ ಏನಪ್ಪಾ ಎಂಬ ಚಿಂತೆ ಇದ್ದೇ ಇರುತ್ತದೆ. ಅದು ಮಕ್ಕಳಿಗೆ ಮೆಚ್ಚಿಗೆಯಾಗಬೇಕು. ಆರೋಗ್ಯಕರವಾಗಿರಬೇಕು. ಮಧ್ಯಾಹ್ನದ ಡಬ್ಬಿಗೂ ಕೆಲವೊಮ್ಮೆ ಅದನ್ನೇ ಹಾಕಿಕೊಡಬೇಕಾಗುತ್ತದೆ. ಆದ್ದರಿಂದ ತಿಂಡಿಯ ನಿರ್ಧಾರ ಸಂಜೆಯೇ ಆಗಬೇಕು. ಅಮ್ಮಂದಿರು ಮಾಡುವ ತಿಂಡಿಯನ್ನು ಮಕ್ಕಳು ಮೆಚ್ಚಿಕೊಳ್ಳಬೇಕಾದರೆ, ತಿಂಗಳ ಮನೆಸಾಮಾನುಗಳನ್ನು ಅಂಗಡಿಯಿಂದ ತರುವಾಗ, ಹಾಗೂ ಮನೆಗೆ ಆಗೀಗ ತರಕಾರಿ ತರುವಾಗ ಮಕ್ಕಳನ್ನು ಜೊತೆಗೆ ಕರೆದೊಯ್ಯಬೇಕು. ಪ್ರತಿ ತಿಂಗಳು ದಿನಸಿ ಸಾಮಾನು ಖರೀದಿಸುವಾಗ, ಮಕ್ಕಳ ಅಭಿಪ್ರಾಯವೇ ಅಂತಿಮವಾಗಿದ್ದರೆ ಇನ್ನೂ ಒಳ್ಳೆಯದು. ಈ ಬಾರಿ ಬೆಳಗ್ಗಿನ ತಿಂಡಿಗೆ ಏನೆಲ್ಲ ತರೋಣ... ಎಂಬ ಪ್ರಶ್ನೆಗೆ ಮಗು ತುಂಬಾ ಹೊತ್ತು ಯೋಚಿಸುತ್ತದೆ. ‘ಅವಲಕ್ಕಿ, ಶ್ಯಾವಿಗೆ, ಉಪ್ಪಿಟ್ಟು, ಚಿತ್ರಾನ್ನ, ಕೆಲವು ದಿನಗಳು ಇಡ್ಲಿ,  ಮತ್ತೆ ಕೆಲವು ದಿನಗಳು ಕುಚ್ಚಲಕ್ಕಿ ಗಂಜಿ, ಪಲಾವ್‌, ಬಿಸಿಬೇಳೆ ಬಾತ್‌’ ಎಂದೆಲ್ಲ ಒಂದು ಪಟ್ಟಿ ಯನ್ನು ತಯಾರಿಸುವಂತೆ ಮಗುವಿಗೆ ತಿಳಿಸಬಹುದು. ಆ ಪಟ್ಟಿಯ ಪ್ರಕಾರ, ಬೇಕಾದ ಸಾಮಾನುಗಳನ್ನು ಮತ್ತೊಂದು ಪಟ್ಟಿಯಲ್ಲಿ ಬರೆದಿಡಬಹುದು. ಒಂದು ಕೆಜಿ ದಪ್ಪ ಅವಲಕ್ಕಿ, ಅರ್ಧ ಕೆಜಿ ಶ್ಯಾವಿಗೆ, ಪಲಾವ್‌ ಮಿಕ್ಸ್‌, ಇಡ್ಲಿರವೆ...ಹೀಗೆ ಮಕ್ಕಳೇ ಈ ಪಟ್ಟಿಯನ್ನು ತಯಾರಿಸುವುದಲ್ಲದೆ, ಅಂಗಡಿಯಲ್ಲಿ ಖರೀದಿಸುವಾಗಲೂ ಅವರು ಆ ಪ್ಯಾಕೆಟ್‌ಗಳನ್ನು ಗಮನಿಸಿ, ಸರಿಯಿದೆಯೇ ಎಂದು ಪರಿಶೀಲಿಸುವಂತೆ ತಿಳಿಸುವುದು ಒಳ್ಳೆಯದು.

ಬೇಳೆ, ಕಾಳುಗಳನ್ನು ಆಯ್ಕೆ ಮಾಡಿಕೊಳ್ಳುವಾಗ, ಶಾಲೆಯಲ್ಲಿ ಮಾಡುವ ಪಾಠವನ್ನು ಅವರಿಗೆ ನೆನಪಿಸಬಹುದು. ಮೊಳಕೆಕಾಳುಗಳ ತಯಾರಿಕೆಯನ್ನು ಅವರ ಕೈಯಲ್ಲೇ ಮಾಡಿಸುವುದು ಒಳ್ಳೆಯದು. ನೆನೆದ ಹೆಸರುಕಾಳು, ಬಳಿಕ ಮೊಳಕೆಯೊಡೆವ ವಿಸ್ಮಯ ಅವರಿಗೆ ಪಾಠವೂ ಹೌದು. ‘ಒಳ್ಳೆಯ ಆಹಾರ’ ಎಂಬುದಾಗಿ ಟೀಚರ್‌ ತಿಳಿಸಿದ  ತರಕಾರಿಗಳನ್ನು ಅಂಗಡಿಯಲ್ಲಿ ಗುರುತಿಸುವಂತೆ ಹೇಳಬಹುದು. ತರಗತಿಯಲ್ಲಿ ಕಲಿತ ವಿಚಾರವನ್ನು ಜೀವನದಲ್ಲಿ ಹೇಗೆ ಅನ್ವಯಿಸಿಕೊಳ್ಳಬೇಕು ಎಂದು ಸರಳವಾಗಿ ಮಗುವಿಗೆ ತಿಳಿಸಿಕೊಡಲು ಇದೊಂದು ಅವಕಾಶವೂ ಹೌದು. ಹಾಗಾಗಿ ಮನೆಗೆ ದಿನಸಿಪದಾರ್ಥಗಳನ್ನು  ಖರೀದಿಸುವಾಗ ಮಕ್ಕಳು ಸಕ್ರಿಯವಾಗಿ ಭಾಗವಹಿಸಿದರೆ, ಮಾಡುವ ಅಡುಗೆಯ ಬಗ್ಗೆಯೂ ಅವರಲ್ಲಿ ಜವಾಬ್ದಾರಿ ಇರುತ್ತದೆ. ಬೆಳಿಗ್ಗೆ ಗಡಿಬಿಡಿಯಲ್ಲಿ ಮಾಡುವ ಶ್ಯಾವಿಗ್‌ ಭಾತ್‌ ಅನ್ನು ಅವರು ತಿರಸ್ಕರಿಸುವ ಸಂಭವ ಕಡಿಮೆ. ಬೆಳಿಗ್ಗೆ ಉಪಾಹಾರ ತಯಾರಿಸುವ ಚಿಂತೆಯನ್ನು ಹೀಗೆ ತುಸು ಮಟ್ಟಿಗೆ ಹಗುರ ಮಾಡಿಕೊಳ್ಳಬಹುದೇನೋ.

ರಾತ್ರಿಯೇ ತಯಾರಿ
ಮಕ್ಕಳು ರಾತ್ರಿ ಬೇಗನೇ ಮಲಗಿದರೆ ಅದರಿಂದ ಅಮ್ಮಂದಿರಿಗೆ ಲಾಭ ಹೆಚ್ಚು. ಮಕ್ಕಳು ಮಲಗಿದ ಬಳಿಕ ಬೆಳಗಿನ ಅಡುಗೆಯ ತಯಾರಿ ಮಾಡಿಕೊಳ್ಳಬಹುದು. ಬಟ್ಟೆಗಳನ್ನು ಜೋಡಿಸಿಟ್ಟುಕೊಂಡು ಇಸ್ತ್ರಿ ಮಾಡುವುದು ಸುಲಭ. ಹೋಮ್‌ವರ್ಕ್‌ ಮುಗಸಿದ ಮಗು, ಎಲ್ಲ ವಸ್ತುಗಳನ್ನು ಬ್ಯಾಗ್‌ನಲ್ಲಿ ಜೋಪಾನ ಇರಿಸಿಕೊಂಡಾಗಿದೆಯೇ ಎಂದು ಒಮ್ಮೆ ತಪಾಸಣೆ ಮಾಡುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಶಾಲೆಯ ಡೈರಿಯಲ್ಲಿ ಮತ್ತೊಂದು ರಿಮಾರ್ಕ್‌ ಬರೆಸಿಕೊಳ್ಳುವುದನ್ನು ತಪ್ಪಿಸಿದಂತಾಗುತ್ತದೆ.

ಕಳೆದು ಹೋಗದಂತೆ...
ಸಾಕ್ಸ್‌, ಪೆನ್ಸಿಲ್‌, ರಬ್ಬರ್‌, ಬೆಲ್ಟ್‌, ಐಡಿ ಕಾರ್ಡ್‌... ಮುಂತಾದ ವಸ್ತುಗಳು ಕಳೆದು ಹೋಗುವುದು ಸಾಮಾನ್ಯ. ಕೆಲವು ಮನೆಗಳಲ್ಲಿ ಒಂದು ಪೆನ್ಸಿಲ್‌ ಡಬ್ಬ, ರಬ್ಬರ್‌ ಡಬ್ಬ, ನಾಲ್ಕೈದು ಟೈಗಳನ್ನು ಸಿದ್ಧಪಡಿಸಿಟ್ಟುಕೊಳ್ಳುವುದುಂಟು. ಆದರೆ ಇದು ಒಳ್ಳೆಯ ಅಭ್ಯಾಸವೂ ಅಲ್ಲ. ಏನೇ ಕಳೆದು ಹೋಗಲಿ, ಮನೆಯಲ್ಲಿ ಬೇಕಾದಷ್ಟು ಇದೆಯಲ್ಲ ಎಂಬ ಲಘು ಧೋರಣೆಯೊಂದು ಮಗುವಿನ ಮನಸ್ಸಿನಲ್ಲಿ ಮೊಳೆಯುತ್ತದೆ. ಆದ್ದರಿಂದ ಮಗು ಶಾಲೆಯಿಂದ ಬಂದ ಕೂಡಲೇ ಸಾಕ್ಸ್‌, ಕರವಸ್ತ್ರ ಒಗೆದು ಒಣಹಾಕಿದರೆ, ಅದು ಅಲ್ಲಿಯೇ ಕೈಗೆ ಸಿಗುವಂತಿರುತ್ತದೆ. 

ಉಳಿದೆಲ್ಲ ಪುಟ್ಟ ಪುಟ್ಟ ವಸ್ತುಗಳನ್ನು ಒಂದೇ ಡಬ್ಬದಲ್ಲಿ ತುಂಬಿಡುವಂತೆ ಮಗುವಿನ ಕೈಗೆ ಸುಂದರವಾದ ಡಬ್ಬವೊಂದನ್ನು ಕೊಟ್ಟರೆ, ಉತ್ತಮ ಅಭ್ಯಾಸವನ್ನು ಮಗು ಬೇಗನೇ ರೂಢಿಸಿಕೊಳ್ಳಬಹುದು. ಪೆನ್ಸಿಲ್‌ ರಬ್ಬರ್‌ಗಳು ಕಳೆದು ಹೋದಾಗ ಮಕ್ಕಳು ಸ್ವಲ್ಪ ಹೊತ್ತಾದರೂ ಕಂಗಾಲಾಗುವುದೇ ಒಳ್ಳೆಯದು. ವಸ್ತುವಿನ ಮೌಲ್ಯ ಅರಿವಿಗೆ ಬಂದ ನಂತರವಷ್ಟೇ ಇನ್ನೊಂದನ್ನು ಕೊಡಿಸುವುದು ಕೂಡ ಶಿಕ್ಷಣದ ಒಂದು ಭಾಗ.

ರಿಮಾರ್ಕ್‌ಗಳು ಪ್ರೋತ್ಸಾಹಕಾರಿ
ಟೈ ಕಟ್ಟಿಲ್ಲವೆಂದೋ, ಶೂ ಪಾಲಿಶ್‌ ಆಗಿಲ್ಲವೆಂದೋ ಡೈರಿಯಲ್ಲಿ ರಿಮಾರ್ಕ್‌ ಇದ್ದಾಗ ಹೆಚ್ಚು ಗಾಬರಿ ಆಗಬೇಕೆಂದಿಲ್ಲ. ಮಗು ಸರಿಯಾದ ಶಿಸ್ತನ್ನು ಕಲಿಯಲಿ ಎಂಬುದಕ್ಕೆ ಈ ರಿಮಾರ್ಕ್‌ಗಳು ನೆರವಾಗಬೇಕಷ್ಟೆ. ರಿಮಾರ್ಕ್‌ಗಳನ್ನು ಕಂಡ ಕೂಡಲೇ ಆಕಾಶ ತಲೆಮೇಲೆ ಬಿದ್ದಂತೆ ಮಕ್ಕಳನ್ನು ಹೀಯಾಳಿಸುವುದು ಅಗತ್ಯವಿಲ್ಲ.
ಇನ್ನು ಮುಂದೆ ಹೀಗೆ ಮಾಡಬೇಡ.. ಎಂದು ಮಗುವನ್ನು ಹುರಿದುಂಬಿಸುವುದಕ್ಕೆ ರಿಮಾರ್ಕ್‌ಗಳು ಸಹಾಯಕವಾಗಿರಲಿ.

ಬೆಳಿಗ್ಗೆ ಮಾತಿಗಿಷ್ಟು ಸಮಯ ಇರಲಿ
ಬೆಳಿಗ್ಗೆ ಮಕ್ಕಳು ಎದ್ದಕೂಡಲೇ ಹಲ್ಲುಜ್ಜು, ನೀರು ಕುಡಿ, ಸ್ನಾನ ಮಾಡು, ತಿಂಡಿ ತಿನ್ನು ಎಂಬ ಅದೇ ರಾಗದಲ್ಲಿ ಸಾಗುವ ಬದಲಾಗಿ ಮಕ್ಕಳು ಏಳುವ ಮೊದಲೇ ಒಂದಿಷ್ಟು ಕೆಲಸ ಮುಗಿಸಿಕೊಂಡರೆ, ಅವರ ಕೆಲಸದ ಜೊತೆಗೆ ಒಂದೆರಡು ತಮಾಷೆಯ, ಖುಷಿಯ ಮಾತುಗಳಿಗೆ ಅವಕಾಶ ಸಿಗಬಹುದು. ಮುಂಜಾನೆ ಟೀವಿ ಆನ್‌ ಮಾಡುವುದಕ್ಕೆ ಬದಲಾಗಿ ರೇಡಿಯೊ ಆನ್‌ ಮಾಡಿಕೊಂಡರೆ, ಅದರಲ್ಲಿ ಬರುವ ಕಾರ್ಯಕ್ರಮಗಳು ಸಮಯದ ಓಟವನ್ನೂ ತಿಳಿಸುತ್ತವೆ, ಜೊತೆಗೆ ಮಾಹಿತಿಯನ್ನು ಕೊಡುತ್ತವೆ. ಎಫ್‌.ಎಂ. ಸ್ಟೇಷನ್‌ ಹಾಕುವ ಬದಲಾಗಿ ಆಕಾಶವಾಣಿ ಕೇಳಿದರೆ ಮಕ್ಕಳಿಗೂ ಮಾಹಿತಿ ಸಿಗುವುದು ಖಂಡಿತ. ಹಾಡುಗಳು, ರೈತರಿಗೆ ಸಲಹೆ, ಪ್ರಾದೇಶಿಕ ವಾರ್ತೆ, ಸಿನಿಮಾಗೀತೆ, ಮಾಹಿತಿ ಮತ್ತಿತರ ವಿಚಾರಗಳ ಬಗ್ಗೆ ಮಕ್ಕಳೊಡನೆ ಎರಡು ಸಾಲು ಮಾತನಾಡುವುದು ಒಳಿತು.  ಐದು ಹತ್ತು ನಿಮಿಷಗಳ ಕಾರ್ಯಕ್ರಮಗಳ ಮೇಲೆ ನಿಗಾ ಇಡುತ್ತಿರುವಾಗ ಕೆಲಸವೂ ಬೇಗನೇ ಮುಂದೆ ಸಾಗುತ್ತಿರುತ್ತದೆ.

ಸಾಮಾನ್ಯವಾಗಿ 7.45ಕ್ಕೆ ಶಾಲೆಯ ವ್ಯಾನ್‌ ಬರುವುದಾದರೆ 7.35ಕ್ಕೆ ಸಿದ್ಧವಾಗಿದ್ದರೆ, ಮಕ್ಕಳನ್ನು ಕಳುಹಿಸುವ ಕೊನೆ ಕ್ಷಣಗಳು ಸುಂದರವಾಗಿರುತ್ತವೆ. ‘ಚಂದ ಕಾಣ್ತಿ..ಮಗಾ..’ ಅಂತಲೋ, ಅಥವಾ ‘ಇವತ್‌ ನೀ ಫಟಾಫಟ್‌ ಸ್ನಾನ ಮಾಡಿದ್ದರಿಂದ ಕೆಲಸ ಬೇಗ ಮುಗಿಯಿತು’ ಎಂತಲೋ ಎರಡು ಒಳ್ಳೆಯ ಮಾತುಗಳು ಅಪ್ಪ–ಅಮ್ಮ ಮತ್ತು ಮಗುವಿನ ಮೂಡ್‌ ದಿನವಿಡೀ ಸುಂದರವಾಗಿರುತ್ತದೆ.

**

ನಾಳಿನ ಚಿಂತೆ ಇಂದೇ
ಪುಟಾಣಿ ಕಂದಮ್ಮ ಬೆಳಿಗ್ಗೆ ಬೇಗನೇ ಏಳಬೇಕಾದರೆ ರಾತ್ರಿ ಬೇಗನೇ ಮಲಗಬೇಕು. ಮಗುವಿಗೆ ಎಂಟು ಗಂಟೆ ನಿದ್ದೆ ದೊರೆಯುವಂತೆ ಲೆಕ್ಕಾಚಾರ ಇಟ್ಟುಕೊಂಡೇ ರಾತ್ರಿ ಬೇಗನೇ ಮಲಗಿಸುವುದರಿಂದ ಸುಂದರವಾದ ಬೆಳಗನ್ನು ಸಂತೋಷದಿಂದ ಕಳೆಯುವುದು ಸಾಧ್ಯವಾಗುತ್ತದೆ. ಅಂದರೆ ರಾತ್ರಿ ಮಗುವನ್ನು ರಮಿಸಿ ಬೇಗನೇ ನಿದ್ದೆ ಮಾಡಿಸಿದಲ್ಲಿ ಎಂಟು ತಾಸಿನ ಬಳಿಕ ಮಗು ಏಳುವುದಕ್ಕೆ ಹೆಚ್ಚು ತಗಾದೆ ಮಾಡುವುದಿಲ್ಲ. ಪ್ರತಿದಿನದ ನಿದ್ದೆಯೂ ಎಂಟು ಗಂಟೆಯ ಅವಧಿಗೇ ಸೀಮಿತವಾಗಿರಬೇಕು.

ರಜೆದಿನ ನಿದ್ದೆ ಹೆಚ್ಚು ವಿಲಂಬವಾಗುವುದು ಸರಿಯಲ್ಲ. ಕಣ್ತುಂಬ ನಿದ್ದೆ ಆಗಿದ್ದರೆ, ಮಕ್ಕಳನ್ನು ಎಬ್ಬಿಸುವುದೂ ಸುಲಭವಾಗುತ್ತದೆ. ಗಾಢವಾದ ನಿದ್ದೆಯಲ್ಲಿರುವ ಮಕ್ಕಳು ಅಲಾರ್ಮ್‌ ಸದ್ದಿಗೆ ಏಳುವುದು ಕಷ್ಟ. ಅಮ್ಮ ಅಥವಾ ಅಪ್ಪನ ಕರೆಯೇ ಅವರನ್ನು ಎಬ್ಬಿಸಬಲ್ಲುದು. ಆದರೆ ಯಾವುದೇ ಕಾರಣಕ್ಕೂ ಮಕ್ಕಳನ್ನು ಎಬ್ಬಿಸುವಾಗ ಒರಟುತನ, ಕೆಟ್ಟ ಮಾತುಗಳು, ಹಳಿಯುವಿಕೆ ಇರಲೇಬಾರದು. ತಮ್ಮನೋ ತಂಗಿಯೋ ಇದ್ದರೆ, ಅವರನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ನೆನಪಿಸಿದರೆ, ಮಕ್ಕಳ ಚಕ್ಕಂತ ಎದ್ದು ಬಿಡುವುದುಂಟು.  ತರಕಾರಿಗಳನ್ನು ರಾತ್ರಿಯೇ ಹೆಚ್ಚಿಡುವುದು, ರವೆ ಹುರಿದಿಡುವುದು, ಅಗತ್ಯ ವಸ್ತುಗಳನ್ನು ಕಣ್ಣೆದುರೇ ಸಿಗುವಂತೆ ಜೋಡಿಸಿಡುವ ಕೆಲಸವನ್ನು ರಾತ್ರಿಯೇ ಮಾಡಬಹುದು.

**

ಅಪ್ಪನ ಪಾಲಿರಲಿ


ಹೆಚ್ಚಿನ ಮನೆಗಳಲ್ಲಿ ಬೆಳಗಿನ ಧಾವಂತದಲ್ಲಿ ಅಪ್ಪನ ಪಾಲಿರುವುದಿಲ್ಲ. ಅಮ್ಮನ ಓಡಾಟ, ಬೈಗಳನ್ನು ಕೇಳುತ್ತ, ಮಲಗಿರುವ ಅಥವಾ ಪೇಪರ್‌ ಓದುತ್ತಾ ಕುಳಿತ ಅಪ್ಪನನ್ನು ನೋಡುತ್ತ ಬೆಳೆಯುವ ಮಕ್ಕಳಿಗೆ, ಈ ಅಮ್ಮನ ಬೈಗಳು ಬರೀ ವರಾತ ಎನ್ನಿಸುವುದುಂಟು. ಅದ್ದರಿಂದ ಅಡುಗೆ ಸಿದ್ಧಪಡಿಸುವ, ಅಥವಾ ಮಕ್ಕಳ ಸ್ನಾನ, ತಿಂಡಿಗೆ ಸಹಾಯ ಮಾಡುತ್ತ ಚುರುಕಾಗಿರುವ ಅಪ್ಪನನ್ನು ನೋಡುತ್ತ ಮಕ್ಕಳ ಮನಸ್ಸಿನಲ್ಲಿಯೂ ಸುರಕ್ಷಿತವಾದ ಭಾವನೆಯೊಂದು ಮೂಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT