ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಕಾರ್ಯಕರ್ತರಿಂದ ಬ್ಯಾಂಕ್‌ ಮುತ್ತಿಗೆ

Last Updated 26 ಮೇ 2017, 9:04 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದ್ವಿತೀಯ ಪಿಯುಸಿ ಪರೀಕ್ಷೆಯ ಮರು ಮೌಲ್ಯಮಾಪನಕ್ಕೆ ಭರಿಸಲಾಗಿದ್ದ ಶುಲ್ಕ ಪದವಿಪೂರ್ವ ಶಿಕ್ಷಣ ಮಂಡಳಿಗೆ ತಲುಪಿಲ್ಲ. ಇದರಿಂದ ವಿದ್ಯಾರ್ಥಿನಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಜೆಡಿಎಸ್‌ ಶಹರ ಘಟಕ ಕಾರ್ಯಕರ್ತರು ಸಿಂಡಿಕೇಟ್‌ ಬ್ಯಾಂಕ್‌ ದುರ್ಗದ ಬೈಲ್‌ ಶಾಖೆಗೆ ಗುರುವಾರ ಮುತ್ತಿಗೆ ಹಾಕಿದರು.

‘ಅಂಜುಮನ್‌ ನೆಹರೂ ಕಾಲೇಜಿನ ಸುಬಿಯಾ ಶೇಖ್‌ ಎಂಬ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ವಿಜ್ಞಾನ ವಿಷಯಗಳಾದ ಇಂಗ್ಲಿಷ್‌, ಭೌತವಿಜ್ಞಾನ, ಗಣಿತ ವಿಜ್ಞಾನ ಮತ್ತು ರಸಾಯನ ವಿಜ್ಞಾನ ವಿಷಯಗಳಲ್ಲಿ ಕಡಿಮೆ ಅಂಕ ಬಂದಿದ್ದವು. ಮರು ಮೌಲ್ಯಮಾಪನಕ್ಕೆ ₹1,610 ಶುಲ್ಕವನ್ನು ಇದೇ 18ರಂದು ಬ್ಯಾಂಕಿಗೆ ತುಂಬಿದ್ದರು. 19 ಕೊನೆ ದಿನ ಆಗಿದ್ದರೂ, ಶುಲ್ಕದ ಚಲನ್‌ ಪದವಿ ಪೂರ್ವ ಶಿಕ್ಷಣ ಮಂಡಳಿಗೆ ತಲುಪಿಲ್ಲ’ ಎಂದು ವಿದ್ಯಾರ್ಥಿನಿಯ ಸಹೋದರ ನಹೀಮ್‌ ಹರಿಹರ ಆರೋಪಿಸಿದರು.

‘ಈ ಸಂಬಂಧ ನಹೀಮ್ ಬೆಳಿಗ್ಗೆ ಸಿಂಡಿಕೇಟ್‌ ಬ್ಯಾಂಕ್‌ ವ್ಯವಸ್ಥಾಪಕರನ್ನು ಭೇಟಿಯಾಗಿ ಕಾರಣ ಕೇಳಿದಾಗ ಅಧಿಕಾರಿಗಳು ಉಡಾಫೆಯಿಂದ ನಡೆದುಕೊಂಡಿದ್ದಾರೆ. ಬ್ಯಾಂಕ್‌ನವರು ತಮ್ಮ ಬಳಿ ಇದ್ದ ಚಲನ್‌ ಪ್ರತಿಯನ್ನು ಕಳೆದುಕೊಂಡಿದ್ದರಿಂದ ಮಂಡಳಿಗೆ ಮುಟ್ಟಿಲ್ಲ’ ಎಂದು ಜೆಡಿಎಸ್‌ ಶಹರ ಘಟಕ ಅಧ್ಯಕ್ಷ ವಿಜಯ ಅಳಗುಂಡಗಿ ಆರೋಪಿಸಿದರು.

ಈಗಾಗಲೇ ಮರುಮೌಲ್ಯಮಾಪನಕ್ಕೆ ಶುಲ್ಕ ಭರಿಸಲು ಕೊನೆ ದಿನ ಮುಗಿದಿದೆ. ಇದರಿಂದ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನ ಆಗುವುದು ಕಷ್ಟ. ಇದರಿಂದ ವಿದ್ಯಾರ್ಥಿನಿಗೆ ಆಗಿರುವ ಲೋಪ ಸರಿಪಡಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಮೇಲಿನ ಅಧಿಕಾರಿಗಳೊಂದಿಗೆ ಮಾತನಾಡಿದ ಬ್ಯಾಂಕಿನ ವ್ಯವಸ್ಥಾಪಕ ಗೋವಿಂದ ನಾಯ್ಕ ಅವರು ‘ಪದವಿಪೂರ್ವ ಮಂಡಳಿಗೆ ಶುಲ್ಕ ಭರಿಸಿದ ಚಲನ್‌ ಮುಟ್ಟಿಸುವ ವ್ಯವಸ್ಥೆ ಮಾಡಲಾಗುವುದು. ಆಗಿರುವ ಅನ್ಯಾಯ ಶುಕ್ರವಾರವೇ ಸರಿಪಡಿಸಲಾಗುವುದು’ ಎಂದು ಭರವಸೆ ನೀಡಿದ ಬಳಿಕ ಕಾರ್ಯಕರ್ತರು ಮುತ್ತಿಗೆ ಕೈಬಿಟ್ಟರು. ಅಬ್ದುಲ್‌ ಧಾರವಾಡಕರ, ನಿಂಗಪ್ಪ ಅಂಬಿಗೇರ, ಫಾರೂಖ್‌ ಶೇಖ್‌, ಶ್ರೀಕಾಂತ ಮಗಜಿಕೊಂಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT