ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಾಠಿಯಲ್ಲಿ ದಾಖಲೆಪತ್ರ ನೀಡಲು ಪಟ್ಟು

Last Updated 26 ಮೇ 2017, 9:29 IST
ಅಕ್ಷರ ಗಾತ್ರ

ಬೆಳಗಾವಿ: ಸರ್ಕಾರದ ವರದಿ, ಆದೇಶ, ತಿಳಿವಳಿಕೆ ಪತ್ರ ಹಾಗೂ ಪ್ರಮಾಣ ಪತ್ರಗಳನ್ನು ಮರಾಠಿಯಲ್ಲೂ ನೀಡಬೇಕೆಂದು ಒತ್ತಾಯಿಸಿ ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಧರ್ಮವೀರ ಸಂಭಾಜಿ ವೃತ್ತದಿಂದ ಕಾಲೇಜು ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಮೆರವಣಿಗೆಯ ಮುಂಚೂಣಿಯಲ್ಲಿ ಘೋಷಣಾ ಫಲಕಗಳನ್ನು ಹಿಡಿದ ಮಕ್ಕಳನ್ನು ಬಳಸಲಾಗಿತ್ತು. ಸರ್ಕಾರಕ್ಕೆ ಸಲ್ಲಿಸಲಾದ ಮನವಿ ಪತ್ರದಲ್ಲಿ ಹಲವು ಬೇಡಿಕೆಗಳಿದ್ದರೂ ‘ಜೈ ಮಹಾರಾಷ್ಟ್ರ’ ಘೋಷಣೆಗೇ ಹೆಚ್ಚಿನ ಒಲವನ್ನು ಮುಖಂಡರು ತೋರಿದರು.

ಬೇಡಿಕೆಗಳೇನು?: ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳ ಫಲಕಗಳಲ್ಲಿ ಕನ್ನಡದೊಂದಿಗೆ ಮರಾಠಿ ಭಾಷೆಯನ್ನೂ ಬಳಸಬೇಕು. ಸರ್ಕಾರಿ ಬಸ್‌ಗಳ ಮಾರ್ಗಸೂಚಿ ಫಲಕಗಳನ್ನೂ ಮರಾಠಿಯಲ್ಲಿ ಬರೆಸ­ಬೇಕು. ಸರ್ಕಾರಿ ಕಚೇರಿಗಳಲ್ಲಿ ಮರಾಠಿ­­ ಯಲ್ಲಿಯೇ ವ್ಯವಹರಿಸಬೇಕು. ಪರಿಷ್ಕೃತ ಆಸ್ತಿ ತೆರಿಗೆ ಹಾಗೂ ನೀರಿನ ಕಂದಾಯದ ವ್ಯತ್ಯಾಸದ ಬಾಕಿಯನ್ನು ವಸೂಲಿ ಮಾಡಬಾರದು.

ನಗರದ ವಿವಿಧೆಡೆ ಮಾಸ್ಟರ್‌ಪ್ಲಾನ್‌ ಪ್ರಕಾರ ರಸ್ತೆ ವಿಸ್ತರಣೆ ಸಂದರ್ಭ ಆಸ್ತಿ ಕಳೆದುಕೊಂಡವರಿಗೆ ಪರಿಹಾರ ಕೊಡಬೇಕು. ಕಸ್ತೂರಿರಂಗನ್‌ ವರದಿ ಹಿಂಪಡೆಯಬೇಕು. ರೈತರ ಬೆಳೆಗಳಿಗೆ ವೈಜ್ಞಾನಿಕ ದರ ನಿಗದಿಪಡಿಸಬೇಕು. ಕೃಷಿ ಸಾಲ ಮನ್ನಾ ಮಾಡಬೇಕು. ಮುಂಗಾರು ಆರಂಭಕ್ಕೆ ಮುನ್ನವೇ ಬಳ್ಳಾರಿ ನಾಲೆಯ ಒತ್ತುವರಿ ತೆರವುಗೊಳಿಸಿ, ಹೂಳು ತೆಗೆಯಬೇಕು.

ಕಾಡಂಚಿನ ಪ್ರದೇಶಗಳಲ್ಲಿ ರೈತರು ಬೆಳೆಯುವ ಬೆಳೆಗಳನ್ನು ಕಾಡುಪ್ರಾಣಿ­ಗಳಿಂದ ರಕ್ಷಿಸಲು ಕ್ರಮ ಕೈಗೊಳ್ಳಬೇಕು. ತಾಲ್ಲೂಕಿನ ಹಲಗಾ ಗ್ರಾಮದ ಬಳಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಿಸುವ ಯೋಜನೆ ಕೈಬಿಡಬೇಕು. ಘಟಕ ಸ್ಥಾಪಿಸುವುದಕ್ಕಾಗಿ ತಾಲ್ಲೂಕಿನ ಅಲರವಾಡದಲ್ಲಿ ಭೂ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ನಂತರ ಅಲ್ಲಿ ಯೋಜನೆ ಕೈಬಿಟ್ಟ ಬಗ್ಗೆ ತನಿಖೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಎನ್‌. ಜಯರಾಮ್‌ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಹೋರಾಟ ಮುಂದುವರಿಕೆ: ಪತ್ರಕರ್ತರೊಂದಿಗೆ ಮಾತನಾಡಿದ ದಕ್ಷಿಣ ಮತಕ್ಷೇತ್ರದ ಎಂಇಎಸ್‌ ಬೆಂಬಲಿತ ಶಾಸಕ ಸಂಭಾಜಿ ಪಾಟೀಲ, ‘ನಾವು ನ್ಯಾಯಕ್ಕಾಗಿ 1956ರಿಂದಲೂ ಹೋರಾಟ ಮಾಡುತ್ತಿದ್ದೇವೆ. ನಮ್ಮ ಮಾತೃಭಾಷೆ ಮರಾಠಿ. ನಮ್ಮಲ್ಲಿ ಎಲ್ಲರಿಗೂ ಕನ್ನಡ ಗೊತ್ತಿಲ್ಲ. ಹೀಗಾಗಿ, ಮರಾಠಿಯಲ್ಲಿ ಸರ್ಕಾರಿ ದಾಖಲೆಗಳನ್ನು ಕೇಳುತ್ತಿದ್ದೇವೆ. ಶೇ 15ಕ್ಕೂ ಹೆಚ್ಚಿನ ಪ್ರಮಾಣದಲ್ಲಿರುವ ಭಾಷಾ ಅಲ್ಪಸಂಖ್ಯಾತರಾದ ನಮ್ಮ ಬೇಡಿಕೆ ಈಡೇರಿಸುವಲ್ಲಿ ಕರ್ನಾಟಕ ಸರ್ಕಾರ ವಿಫಲವಾಗಿದೆ’ ಎಂದು ಆರೋಪಿಸಿದರು.

‘ಗಡಿ ವಿಚಾರ ನ್ಯಾಯಾಲಯದಲ್ಲಿದೆ ನಿಜ. ನ್ಯಾಯಾಲಯ ಏನು ಆದೇಶ ನೀಡುತ್ತದೆಯೋ ಅದಕ್ಕೆ ನಾವು ಬದ್ಧವಿದ್ದೇವೆ. ಅಲ್ಲಿವರೆಗೂ ಶಾಂತಿಯುತವಾಗಿ ಹೋರಾಟ ನಡೆಸುತ್ತೇವೆ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎನ್ನುವ ಬೇಡಿಕೆ ಈಡೇರಿಕೆಗಾಗಿ ಹೋರಾಟ  ಮುಂದುವರಿಯುತ್ತದೆ’ ಎಂದು ಹೇಳಿದರು.

ಶಾಸಕ ಅರವಿಂದ ಪಾಟೀಲ, ಜಿಲ್ಲಾ ಪಂಚಾಯ್ತಿ ಸದಸ್ಯೆ ಸರಸ್ವತಿ ಪಾಟೀಲ, ನಗರಪಾಲಿಕೆ ಸದಸ್ಯೆ ಸರಿತಾ ಪಾಟೀಲ, ಎಂಇಎಸ್‌ ನಗರ ಘಟಕದ ಅಧ್ಯಕ್ಷ ದೀಪಕ ದಳವಿ, ಕಾರ್ಯಾಧ್ಯಕ್ಷ ಮನೋಹರ ಕೆ. ಕಿಣೇಕರ, ಪ್ರಧಾನ ಕಾರ್ಯದರ್ಶಿ ಮಾಲೋಜಿ ಎಸ್‌. ಅಸ್ಟೇಕರ, ಮುಖಂಡರಾದ ದಿಗಂಬರ ಪಾಟೀಲ, ಪ್ರಕಾಶ್‌ ಮರಗಾಲೆ, ನಿಂಗೋಜಿ ಹುದ್ದಾರ, ದೀಪಕ ರಾಜೂಕರ, ದಿಗಂಬರ ಕಾಮತ್‌ ಮೆರವಣಿಗೆಯ ನೇತೃತ್ವ ವಹಿಸಿದ್ದರು.

ಶಾಂತಿ, ಸುವ್ಯವಸ್ಥೆ ಹಾಳು ಮಾಡಿದವರ ವಿರುದ್ಧ ಕ್ರಮ’
ಬೆಳಗಾವಿ: ಸರ್ಕಾರಿ ದಾಖಲೆಗಳನ್ನು ಮರಾಠಿಯಲ್ಲಿಯೇ ನೀಡಬೇಕು ಎನ್ನುವುದು ಹೊರತುಪಡಿಸಿದರೆ ಜನಸಾಮಾನ್ಯರಿಗೆ ಸಂಬಂಧಿಸಿದ ಬೇಡಿಕೆ­ಗಳ ಈಡೇರಿಕೆಗಾಗಿ ಎಂಇಎಸ್‌ ಮುಖಂಡರು ಸಲ್ಲಿಸಿರುವ ಮನವಿ­ಯನ್ನು ಮುಂದಿನ ಕ್ರಮಕ್ಕಾಗಿ  ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಎನ್‌. ಜಯರಾಮ್‌ ತಿಳಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕೆಲವು ಮರಾಠಿ ಪತ್ರಿಕೆಗಳಲ್ಲಿ ಕನ್ನಡ ಹಾಗೂ ಮರಾಠಿ ಭಾಷೆ ವಿಚಾರದಲ್ಲಿ ಅತಿರೇಕದ ವರದಿಗಳನ್ನು ಮಾಡಲಾಗುತ್ತಿದೆ. ಇದರಿಂದ, ಶಾಂತಿ ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇರುತ್ತದೆ. ಪ್ರಸರಣ ಸಂಖ್ಯೆ ಹೆಚ್ಚಳ ಮಾಡಿಕೊಳ್ಳುವುದಕ್ಕಾಗಿ ಜನರ ಮಧ್ಯೆ ವೈಷಮ್ಯ ಬೆಳೆಸುವಂತಹ ವೈಭವೀಕ ರಿಸಿದ ವರದಿಗಳನ್ನು ಪ್ರಕಟಿಸುವುದು ಸರಿಯಲ್ಲ.

ಅಂತಹ ಪತ್ರಿಕೆಗಳ ವಿರುದ್ಧ ಕ್ರಮ ಕೈಗೊಳ್ಳ ಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು. ‘ಮೆರವಣಿಗೆಗೆ ಪೊಲೀಸರು ಷರತ್ತು ಬದ್ಧ ಅನುಮತಿ ನೀಡಿದ್ದಾರೆ. ಸೂಚನೆಗಳನ್ನು ಉಲ್ಲಂಘಿಸಿದಲ್ಲಿ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಆಯುಕ್ತರಿಗೆ ಸೂಚಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT