ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿಣಿ ಮಳೆ ನಿರೀಕ್ಷೆಯಲ್ಲಿ ಕೃಷಿಕ

Last Updated 26 ಮೇ 2017, 9:36 IST
ಅಕ್ಷರ ಗಾತ್ರ

ಚಿಕ್ಕೋಡಿ: ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಮಳೆ ಸುರಿಯದೇ ಇದ್ದರೂ ಬಹುನಿರೀಕ್ಷೆಯ ‘ರೋಹಿಣಿ’ ಮಳೆಯ ಮೇಲೆ ಭಾರ ಹಾಕಿರುವ ಕೃಷಿಕರು ಮುಂಗಾರು ಬಿತ್ತನೆಗೆ ಭೂಮಿಯನ್ನು ಸಜ್ಜುಗೊಳಿಸುವಲ್ಲಿ ನಿರತರಾಗಿದ್ದಾರೆ.

ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಮಳೆಯಾಗಿದ್ದರೆ ಭೂಮಿಯನ್ನು ಹದ ಗೊಳಿಸಲು ರೈತರಿಗೆ ಅನುಕೂಲ ಆಗುತ್ತಿತ್ತು. ಆದರೆ, ನಿರೀಕ್ಷಿತ ಪ್ರಮಾಣ ದಲ್ಲಿ ಮಳೆಯಾಗದೇ ಇರುವುದರಿಂದ ಭೂಮಿಯನ್ನು ಊಳಲು, ಸ್ವಚ್ಛಗೊಳಿ ಸಲು ಕೃಷಿಕರಿಗೆ ಅನಾನುಕೂಲವಾಗುತ್ತಿದೆ. ಆದರೂ ಮಳೆಯ ನಿರೀಕ್ಷೆಯಲ್ಲಿ ರೈತರು ಭೂಮಿಯನ್ನು ಹದಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಕೃಷಿ ಇಲಾಖೆ ಸಜ್ಜು: ‘ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 91,401 ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ಬಿತ್ತನೆ ಯಾಗುವ ಗುರಿ ಹೊಂದಲಾಗಿದೆ. 12,750 ಹೆಕ್ಟೇರ್‌ನಲ್ಲಿ ಗೋವಿನ ಜೋಳ, 3500  ಹೆಕ್ಟೇರ್‌ನಲ್ಲಿ ಜೋಳ, 2,525 ಹೆಕ್ಟೇರ್‌ ದ್ವಿದಳ ಧಾನ್ಯಗಳು, 11,000 ಹೆಕ್ಟೇರ್‌ ಶೇಂಗಾ, 17,500 ಹೆಕ್ಟೇರ್‌ನಲ್ಲಿ ಸೋಯಾಬಿನ್‌ ಬಿತ್ತನೆ ಮತ್ತು 26,500 ಹೆಕ್ಟೇರ್‌ ಕಬ್ಬು ಹಾಗೂ 12,000  ಹೆಕ್ಟೇರ್‌ ತಂಬಾಕು ನಾಟಿ ಗುರಿ ಹೊಂದಲಾಗಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಜನಮಟ್ಟಿ ತಿಳಿಸಿದರು.

‘ಮುಂಗಾರು ಬಿತ್ತನೆಗಾಗಿ  ಕೃಷಿ ಇಲಾಖೆಯು ನಿಪ್ಪಾಣಿ, ಚಿಕ್ಕೋಡಿ, ನಾಗರಮುನ್ನೊಳಿ, ಸದಲಗಾ ಹೋಬಳಿ ಕೇಂದ್ರಗಳಲ್ಲಿ ಇರುವ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಕರೋಶಿ, ಕಬ್ಬೂರ, ಜಾಗನೂರ, ಕರಗಾಂವ, ಧುಳಗನವಾಡಿ, ಕುಪ್ಪಾನವಾಡಿ, ಕೇರೂರ, ಯಕ್ಸಂಬಾ (ಎರಡು ಕೇಂದ್ರ), ಭೋಜ, ಬೇನಾಡಿ ಮತ್ತು ಸೌಂದಲಗಾ ಗಳಲ್ಲಿ ರೈತರಿಗೆ ಬಿತ್ತನೆ ಬೀಜಗಳನ್ನು ರಿಯಾಯತಿ ದರದಲ್ಲಿ ವಿತರಣೆ ವ್ಯವಸ್ಥೆ ಮಾಡಲಾಗಿದೆ.

ತಾಲ್ಲೂಕಿನಲ್ಲಿ ಒಟ್ಟು 3000 ಕ್ವಿಂಟಲ್ ಸೋಯಾಬೀನ್,50 ಕ್ವಿಂಟಲ್ ಹೆಸರು, 50 ಕ್ವಿಂಟಲ್ ತೊಗರಿ, 30 ಕ್ವಿಂಟಲ್ ಉದ್ದಿನ ಬೀಜ ದಾಸ್ತಾನು ಮಾಡಲಾಗಿದೆ. ಸೋಯಾಬೀನ್ 30 ಕೆ.ಜಿ.ತೂಕದ ಪ್ಯಾಕೇಟ್‌ಗೆ ಸಬ್ಸಿಡಿ ಕಡಿತಗೊಳಿಸಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರಿಗೆ ₹558 ಹಾಗೂ ಸಾಮಾನ್ಯ ವರ್ಗದ ರೈತರಿಗೆ ₹858 ಗಳಿಗೆ ಮಾರಾಟ ಮಾಡಲಾಗುತ್ತಿದೆ.

ಸೊಯಾಬೀನ್‌ ಬೀಜದ ಜೊತೆಗೆ ಟೈಕೋಡ್ರಾಮಾ ಶಿಲೀಂಧ್ರ ನಾಶಕವನ್ನೂ ವಿತರಿಸಲಾಗುತ್ತಿದ್ದು, ರೈತರು ಕಡ್ಡಾಯ ವಾಗಿ ಟೈಕೋಡ್ರಾಮಾದೊಂದಿಗೆ ಬೀಜೋಪಚಾರ ಮಾಡಿಯೇ ಸೊಯಾಬೀನ್ ಬಿತ್ತನೆ ಮಾಡಬೇಕು’ ಎಂದು ಅವರು ಹೇಳಿದ್ದಾರೆ.

ಮುಂಗಾರು ಆಶಾದಾಯಕ: ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಪ್ರಸಕ್ತ ಮುಂಗಾರು ಶೇ 96ರಷ್ಟು ಮತ್ತು ಖಾಸಗಿ ಸಂಸ್ಥೆ ಸ್ಕೈಮೆಟ್‌ ಪ್ರಕಾರ ಮುಂಗಾರು ಶೇ 95ರಷ್ಟು ಮಳೆ ಆಗಲಿದೆ. ತಾಲ್ಲೂಕಿನಲ್ಲಿ 635.8 ಮಿ.ಮೀ ವಾಡಿಕೆ ಮಳೆ ಇದ್ದು ಈ ಹವಾಮಾನ ಸಂಸ್ಥೆಗಳ ವರದಿ ಪ್ರಕಾರ ತಾಲ್ಲೂಕಿನಲ್ಲಿ 610.3 ಮಿ.ಮೀ. ಆಗಲಿದೆ’ ಎಂದು ಅವರು ತಿಳಿಸಿದ್ದಾರೆ.

ಕೃಷಿ ಚಟುವಟಿಕೆ ಜೋರು: ‘ಈ ವರ್ಷ ಅಡ್ಡಮಳಿ ಛಲೋ ಆಗಲಿಲ್ರಿ, ರೋಣಿ ಮಳಿ ಮ್ಯಾಲ್ ಭಾರಾ ಹಾಕಿ ಭೂಮಿ ಸ್ವಚ್ಛ ಮಾಡಾಕತ್ತೇವಿ. ರೋಣಿ ಮಳಿ ಆದ್ರ ಜೂನ್ ಮೊದಲ ವಾರದೊಳಗ ಭೂಮಿ ಹದ ಮಾಡಾಕ ಅನುಕೂಲ ಆಕೈತಿ’ ಎಂದು ಕರೋಶಿಯ ರೈತ ವಿರೂಪಾಕ್ಷ ಕೋರೆ ಹೇಳುತ್ತಾರೆ.

ಕೃಷಿ ಚಟುವಟಿಕೆ
91,401 ಹೆಕ್ಟೇರ್‌ ತಾಲ್ಲೂಕಿನ ಬಿತ್ತನೆ ಗುರಿ

16 ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ

* * 

ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಶೇ96ರಷ್ಟು ಮಳೆ ಆಶಾದಾಯಕವಾಗಿದೆ. ರೈತರಿಗೆ ರಿಯಾಯತಿ ದರದಲ್ಲಿ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ
ಮಂಜುನಾಥ ಜನಮಟ್ಟಿ
ಸಹಾಯಕ ನಿರ್ದೇಶಕ, ಕೃಷಿ ಇಲಾಖೆ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT