ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರದ ವಿರುದ್ಧ ಸಿಪಿಐಎಂ ಪ್ರತಿಭಟನೆ

Last Updated 26 ಮೇ 2017, 9:38 IST
ಅಕ್ಷರ ಗಾತ್ರ

ಕಾರವಾರ: ಚುನಾವಣಾ ಸಂದರ್ಭದಲ್ಲಿ ಜನರಿಗೆ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಭಾರತ ಕಮ್ಯುನಿಸ್ಟ್‌ ಪಕ್ಷದ (ಮಾರ್ಕ್ಸ್‌ವಾದಿ) ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನಾ ರ್‍್ಯಾಲಿ ನಡೆಸಿದರು.

‘ಅಧಿಕಾರಕ್ಕೆ ಬಂದ 100 ದಿನದ ಒಳಗೆ ವಿದೇಶದಲ್ಲಿರುವ ಕಪ್ಪು ಹಣವನ್ನು ಹೊರತೆಗೆದು ಎಲ್ಲರ ಬ್ಯಾಂಕ್ ಖಾತೆಗೆ ₹15 ಲಕ್ಷ ಜಮಾ ಮಾಡುತ್ತೇವೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಮಾತಾಗಿಯೇ ಉಳಿದಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರು ಜೀವನ ನಡೆಸದಂತೆ ಮಾಡಿದೆ’ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಯಮುನಾ ಗಾಂವಕರ ದೂರಿದರು.

‘ಜಿಲ್ಲೆಯಲ್ಲಿ ಹಲವು ದಶಕಗಳಿಂದ ನನೆಗುದಿಗೆ ಬಿದ್ದ ಅರಣ್ಯ ಅತಿಕ್ರಮಣ ಭೂಮಿ ಹಾಗೂ ಕುಂಬ್ರಿ ಜಮೀನು ಸಕ್ರಮ ಕಾರ್ಯವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೂಡಲೇ ಮಾಡಬೇಕು. ಇಲ್ಲಿನ ಜನತೆಯ ಹಕ್ಕು ಕಸಿಯುವ ಕಸ್ತೂರಿ ರಂಗನ್ ವರದಿ ಹಾಗೂ ಪರಿಸರ ಸೂಕ್ಷ್ಮ ವಲಯ ಘೋಷಣೆಯನ್ನು ಸರ್ಕಾರ ಕೈಬಿಡಬೇಕು’ ಎಂದು ಆಗ್ರಹಿಸಿದರು. 

‘ಜಿಲ್ಲೆಯಲ್ಲಿ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ಕಾಯ್ದೆ ಹೆಸರಿನಲ್ಲಿ ಸಾರ್ವಜನಿಕರ ಮೇಲಿನ ದಬ್ಬಾಳಿಕೆಯನ್ನು ನಡೆಸಲಾಗುತ್ತಿದೆ. ಅಲ್ಲದೇ ಜಿಲ್ಲೆಗೆ ಬಂದ ಹಲವು ಯೋಜನೆಗಳಿಂದ ನಿರಾಶ್ರಿತರಾದ ಕುಟುಂಬಗಳಿಗೆ ಯೋಗ್ಯ ಪುನರ್ವಸತಿ ಹಾಗೂ ಪರಿಹಾರವು ಈವರೆಗೂ ವಿತರಣೆಯಾಗಿಲ್ಲ.

ಹಾಲಕ್ಕಿ, ಕುಣಬಿ ಹಾಗೂ ಗೌಳಿ ಸಮುದಾಯವನ್ನು ಅನುಸೂಚಿತ ಬುಡಕಟ್ಟು ಸಮುದಾಯ ಎಂಬ ಸಂವಿಧಾನ ಬದ್ಧ ಸ್ಥಾನಮಾನ ನೀಡಬೇಕು ಹಾಗೂ ಕೈಗಾದಲ್ಲಿ 5, 6ನೇ ಅಣುಸ್ಥಾವರ ಘಟಕ ವಿಸ್ತರಣೆ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಡೆ ಜಿಲ್ಲೆಯ ಜನರ ವಿರೋಧಿಯಾಗಿದೆ’ ಎಂದು ಹೇಳಿದರು.

‘ಕೇಂದ್ರ ಸರ್ಕಾರ ಆಹಾರ ಭದ್ರತೆ ಹಕ್ಕನ್ನು ಸಮಗ್ರವಾಗಿ ಜಾರಿ ಮಾಡುವಲ್ಲಿ ವಿಫಲವಾಗಿದೆ. ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ಎಲ್ಲ ಜನ ವಿರೋಧಿ ನೀತಿಗಳನ್ನು ಬಿಟ್ಟು ಸಾರ್ವಜನಿಕರಿಗೆ ಉಪಯೋಗ ವಾಗುವಂಥ ಯೋಜನೆ ಗಳನ್ನು ಜಾರಿಗೊಳಿಸಬೇಕು.

ಉದ್ಯೋಗಾಧಾರಿತ ಅಭಿವೃದ್ಧಿ ಕಾರ್ಯವನ್ನು ಚುರುಕುಗೊಳಿಸಿ, ಪರಿಸರ ಪೂರಕ ಕೃಷಿ ಮತ್ತು ಅರಣ್ಯ ಆಧಾರಿತ ಕೈಗಾರಿಕೆಯನ್ನು ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು. ಮುಖಂಡರಾದ ಸುಭಾಷ್ ಕೊಪ್ಪೇಕರ್, ಶಾಂತಾರಾಮ ನಾಯಕ, ಗಂಗಾ ನಾಯ್ಕ, ಗೌರೀಶ ನಾಯಕ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT