ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಪಾತಗಳಲ್ಲಿ ಸ್ವಚ್ಛತೆ, ಪ್ರವಾಸಿಗರ ಸುರಕ್ಷತೆಗೆ ಕ್ರಮ

Last Updated 26 ಮೇ 2017, 9:43 IST
ಅಕ್ಷರ ಗಾತ್ರ

ಕಾರವಾರ: ‘ಮಳೆಗಾಲದಲ್ಲಿ ಜಿಲ್ಲೆಯ ಜಲಪಾತಗಳ ವೀಕ್ಷಣೆಗೆ ಬರುವ ಪ್ರವಾಸಿಗರ ಸುರಕ್ಷತೆಗೆ ಹಾಗೂ ಜಲಪಾತಗಳ ಪರಿಸರದ ಸ್ವಚ್ಛತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು.

ಗುರುವಾರ ಜಿಲ್ಲೆಯ ಪ್ರಮುಖ ಜಲಪಾತಗಳಾದ ಸಾತೋಡಿ, ಮಾಗೋಡು, ಶಿರ್ಲೆ, ವಿಭೂತಿ ಜಲಪಾತಗಳಿಗೆ ಹಿರಿಯ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ, ಅಲ್ಲಿ ಲಭ್ಯವಿರುವ ಮೂಲಸೌಲಭ್ಯಗಳು, ಸುರಕ್ಷತಾ ಕ್ರಮಗಳು ಹಾಗೂ ಸ್ವಚ್ಛತೆಯ ಪರಿಶೀಲನೆ ನಡೆಸಿದರು.

‘ಮುಂಗಾರು ಮಳೆ ಆರಂಭ ವಾಗುತ್ತಿದ್ದಂತೆ ಜಿಲ್ಲೆಯ ರುದ್ರ ರಮಣೀಯ ಜಲಪಾತಗಳ ವೀಕ್ಷಣೆಗೆ ರಾಜ್ಯದ ಮೂಲೆಮೂಲೆಗಳಿಂದ ಸಾವಿ ರಾರು ಮಂದಿ ಪ್ರವಾಸಿಗರು ಬರುತ್ತಾರೆ. ಈ ಎಲ್ಲಾ ಪ್ರವಾಸಿಗರ ಸುರಕ್ಷತೆ ಮತ್ತು ಅವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು ಜಿಲ್ಲಾಡಳಿತದ ಆದ್ಯತೆಯಾಗಿದೆ. ಜಲಪಾತ ಪರಿಸರದ ಸ್ವಚ್ಛತೆಯನ್ನು ಕಾಪಾಡುವುದು ಗ್ರಾಮ ಅರಣ್ಯ ಸಮಿತಿಯದ್ದು ಮಾತ್ರವಲ್ಲದೇ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.

‘ಪ್ರವಾಸಿಗರಿಂದ ಅಭಿವೃದ್ಧಿ ಶುಲ್ಕ ಪಡೆಯುವ ಸಮಿತಿಗಳು ಅದನ್ನು ಪ್ರವಾಸಿಗರ ಸೌಲಭ್ಯಗಳ ಒದಗಿಸುವಿಕೆಗೆ ವೆಚ್ಚ ಮಾಡಬೇಕು. ಜಲಪಾತಗಳ ಪರಿಸರದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಈ ಕುರಿತು ಸಮಿತಿಗಳು ಪ್ರವಾಸಿಗರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಜಾರಿಗೊಳಿಸಬೇಕು ಎಂದರು.

ಜಲಪಾತಗಳ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ, ಸುಸಜ್ಜಿತ ಶೌಚಾಲಯ ಖಾತ್ರಿಪಡಿಸಬೇಕು. ಈ ಪರಿಸರದಲ್ಲಿ ಪ್ಲಾಸ್ಟಿಕ್ ನಿಷೇಧ ಕುರಿತು, ಪ್ರಾಣ ಹಾನಿ ಸಂಭವಿಸುವ ಕುರಿತು ಎಚ್ಚರಿಕೆ ಫಲಕಗಳನ್ನು ಹಾಕಬೇಕು. ಮೂಲಸೌಲಭ್ಯ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಬೇಕು’ ಎಂದು ಹೇಳಿದರು.

ಸಾತೋಡಿ ಜಲಪಾತ ಪರಿಸರದಲ್ಲಿ ಕಸದ ರಾಶಿ ಬಿದ್ದಿದ್ದು, ಸ್ವಚ್ಛತೆ ಕಾರ್ಯ ಕೈಗೊಳ್ಳದ ಗ್ರಾಮ ಅರಣ್ಯ ಸಮಿತಿ ಸದಸ್ಯರನ್ನು ನಕುಲ್‌ ಅವರು ಈ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡರು. ‘ಬೇಸಿಗೆ ಕೊನೆಯಲ್ಲಿ ಸಹ ಜಿಲ್ಲೆಯ ಜಲಪಾತಗಳಲ್ಲಿ ನೀರು ಹರಿಯುತ್ತಿದ್ದು, ರಾಜ್ಯದ ಬಹುತೇಕ ಕಡೆಗಳಲ್ಲಿ ಈ ವೇಳೆಗೆ ಜಲಪಾತಗಳು ಬತ್ತಿ ಹೋಗಿರುತ್ತವೆ.

ಮುಂದಿನ ದಿನಗಳಲ್ಲಿ ಜಿಲ್ಲೆಯ ಜಲಪಾತಗಳ ಕುರಿತು ಪ್ರವಾಸಿಗರಿಗೆ ಅನುಕೂಲವಾಗುವಂತೆ ಮಾಹಿತಿ ಪುಸ್ತಿಕೆ ಪ್ರಕಟಿಸಲಾಗುವುದು’ ಎಂದು ನಕುಲ್‌ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಅರಣ್ಯ ಇಲಾಖೆ ಅಧಿಕಾರಿಗಳು, ಸ್ಥಳೀಯ ಗ್ರಾಮ ಅರಣ್ಯ ಸಮಿತಿ ಸದಸ್ಯರು ಹಾಜರಿದ್ದರು.

* * 

ಪ್ರವಾಸಿಗರಿಗೆ ಉತ್ತಮ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಪರಿಶೀಲಿಸಲು ಪ್ರಮುಖ ಜಲಪಾತಗಳಿಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಲಾಗಿದೆ
ಎಸ್‌.ಎಸ್‌.ನಕುಲ್‌
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT